ಕೃಷಿ ಕಸುಬು | ಬಯಲು ಸೀಮೆಯಲ್ಲಿ ಗಗನಕ್ಕೇರಿದ ತರಕಾರಿ ಬೆಲೆ, ಕಾರಣವೇನು?

Date:

Advertisements
ಪ್ರತಿ ಹಂಗಾಮಿನಲ್ಲೂ ಮಿಶ್ರ ಬೆಳೆಯನ್ನು ಕಡ್ಡಾಯಗೊಳಿಸಬೇಕು. ಆಗ ರೈತರಲ್ಲಿ ಅನಾರೋಗ್ಯಕರ ಪೈಪೋಟಿ ತಪ್ಪಿ, ಮಾರುಕಟ್ಟೆಯ ಬೇಡಿಕೆಗನುಗುಣವಾಗಿ ಆಹಾರ ಧಾನ್ಯಗಳು, ತರಕಾರಿಗಳು, ವಾಣಿಜ್ಯ ಬೆಳೆಗಳನ್ನು ಬೆಳೆಯಲು ಸಾಧ್ಯವಾಗುತ್ತದೆ. ಇಂತಹ ಪ್ರಕ್ರಿಯೆಯಿಂದ ಉತ್ಪಾದನೆ ಮತ್ತು ಬೇಡಿಕೆಯ ನಡುವೆ ಸಮತೋಲನ ಸೃಷ್ಟಿಯಾಗಿ, ರೈತ ಮತ್ತು ಗ್ರಾಹಕರಿಬ್ಬರ ಆರ್ಥಿಕ ಲಾಭ-ನಷ್ಟದಲ್ಲಿ ಸಮತೋಲನ ಸಾಧ್ಯವಾಗುತ್ತದೆ.

ನಗರ ಪ್ರದೇಶಗಳಲ್ಲಿ ತರಕಾರಿ ಬೆಲೆ ಕೊಂಚ ದುಬಾರಿಯಾದರೆ, ಗ್ರಾಮೀಣ ಪ್ರದೇಶಗಳಲ್ಲಿ ತರಕಾರಿ ಬೆಲೆ ಕೊಂಚ ಅಗ್ಗವಿರುವುದು ಸಹಜ ಸಂಗತಿ. ಕಾರಣ: ಗ್ರಾಮೀಣ ಭಾಗಗಳೇ ಈಗಲೂ ಕೃಷಿ ಯೋಗ್ಯ ಭೂಮಿಗಳನ್ನು ಹೊಂದಿದ್ದು, ನಗರ ಪ್ರದೇಶಗಳೆಲ್ಲ ವಾಣಿಜ್ಯ ಹಾಗೂ ವಸತಿ ಕಟ್ಟಡಗಳಿಂದ ಕಿಕ್ಕಿರಿದು ತುಂಬಿರುವುದರಿಂದ. ಆದರೆ, ಈ ಬಾರಿಯ ಬೇಸಿಗೆಯಿಂದ ಈ ಸ್ಥಿತಿ ತಿರುವುಮುರುವಾಗಿದೆ. ಮಹಾನಗರ ಬೆಂಗಳೂರಿನಲ್ಲಿ ತರಕಾರಿಗಳ ಬೆಲೆ ಕೊಂಚ ಅಗ್ಗವಿದ್ದರೆ, ಮೈಸೂರು, ಮಂಡ್ಯ, ಹಾಸನ, ತುಮಕೂರು, ಚಿತ್ರದುರ್ಗದಂಥ ಕೃಷಿ ಪ್ರದೇಶಗಳನ್ನು ಹೊಂದಿರುವ ಬಯಲು ಸೀಮೆ ಜಿಲ್ಲೆಗಳಲ್ಲಿ ತರಕಾರಿ ಬೆಲೆ ಕೊಂಚ ದುಬಾರಿಯೇ ಆಗಿಬಿಟ್ಟಿದೆ. ಇದಕ್ಕೆ ಕಾರಣ ಹುಡುಕುತ್ತಾ ಹೊರಟರೆ ಸಿಗುವ ಉತ್ತರ ವಾಣಿಜ್ಯ ಬೆಳೆಗಳ ಹಿಂದೆ ಬಿದ್ದು ಕೈಸುಟ್ಟುಕೊಳ್ಳುತ್ತಿರುವ ರೈತರು.

ಬಯಲು ಸೀಮೆಯ ಪ್ರದೇಶಗಳಲ್ಲಿ ಬಹುಪಾಲು ಮಳೆಯಾಶ್ರಿತ ಕೃಷಿ ಭೂಮಿಗಳೇ ಇದ್ದರೂ, ಫಲವತ್ತಾದ ಮಣ್ಣನ್ನು ಹೊಂದಿರುವ ಕೃಷಿ ಯೋಗ್ಯ ಭೂಮಿಗಳಾಗಿವೆ. ಇಲ್ಲಿನ ಕೃಷಿ ಭೂಮಿಗಳು ಭತ್ತ, ರಾಗಿ, ಮುಸುಕಿನ ಜೋಳ, ಸೂರ್ಯಕಾಂತಿ, ತೆಂಗು, ತೊಗರಿ, ಹೆಸರು, ಆಲೂಗಡ್ಡೆ, ಈರುಳ್ಳಿ, ತರಕಾರಿ ಬೆಳೆಗಳನ್ನು ಬೆಳೆಯಲು ಅತ್ಯಂತ ಯೋಗ್ಯವಾಗಿವೆ. ಆದರೆ, ತೀರಾ ಇತ್ತೀಚಿನವರೆಗೂ ಈ ಭಾಗದ ರೈತರಿಗೆ ಈ ಬೆಳೆಗಳು ಅಂತಹ ಲಾಭ ತಂದುಕೊಡದೆ ಇದ್ದುದರಿಂದ ಈಗ ಏಕಾಏಕಿ ಅಡಕೆ, ಶುಂಠಿ, ಹತ್ತಿಯಂಥ ವಾಣಿಜ್ಯ ಬೆಳೆಗಳ ಬೆನ್ನು ಹತ್ತಿದ್ದಾರೆ. ಅದರಲ್ಲೂ ಮಲೆನಾಡು ರೈತರು ಅಡಿಕೆ ಬೆಳೆಯಿಂದ ಕೈತುಂಬ ದುಡ್ಡು ನೋಡುತ್ತಿರುವುದನ್ನು ಕಂಡು ಅದರತ್ತ ಆಕರ್ಷಿತರಾಗಿರುವ ಬಯಲು ಸೀಮೆಯ ರೈತರು ಆಹಾರ ಧಾನ್ಯ, ತರಕಾರಿ ಬೆಳೆಗಳಿಗೆ ಸಂಪೂರ್ಣ ವಿದಾಯ ಹೇಳಿ, ಅಡಿಕೆ ಬೆಳೆಗೆ ಲಕ್ಷಾಂತರ ರೂಪಾಯಿಯನ್ನು ನೀರಿನಂತೆ ವ್ಯಯಿಸತೊಡಗಿದ್ದಾರೆ. ಇದರ ಅಡ್ಡ ಪರಿಣಾಮವೇ ಬಯಲು ಸೀಮೆಯ ಗ್ರಾಮೀಣ ಪ್ರದೇಶಗಳಲ್ಲೂ ತರಕಾರಿಗಳ ಬೆಲೆ ಬೆಂಗಳೂರಿಗಿಂತ ದುಬಾರಿಯಾಗತೊಡಗಿರುವುದು.

ತೋಟಗಾರಿಕೆ ಬೆಳೆಗಳಲ್ಲಿ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳು ಎತ್ತಿದ ಕೈ. ಮೊದಮೊದಲಿಗೆ ಕೆರೆಗಳ ಜಿಲ್ಲೆಗಳಾದ ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ನೀರಿನ ಅತಿಯಾದ ಪೋಲಿನಿಂದ ಕ್ಷಾಮ ಪೀಡಿತ ಜಿಲ್ಲೆಗಳೆಂಬ ಹಣೆಪಟ್ಟಿಗೆ ತುತ್ತಾಗಿದ್ದವು. ಈಗಲೂ ಕೂಡಾ ಇಲ್ಲಿ ಶುದ್ಧ ಕುಡಿಯುವ ನೀರಿಗೆ ಕ್ಷಾಮವಿದೆ. ಹೀಗಾಗಿಯೇ ನೇತ್ರಾವತಿ ತಿರುವು ಯೋಜನೆಯಾದ ಎತ್ತಿನ ಹೊಳೆ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿರುವುದು. ಆದರೆ, ಇಲ್ಲಿನ ರೈತರು ನೀರಿನ ಪೋಲಿನಿಂದಾಗುವ ಅಪಾಯದ ಬಗ್ಗೆ ಬಹಳ ಬೇಗ ಎಚ್ಚೆತ್ತುಕೊಂಡರು. ಹೀಗಾಗಿ ಅವರು ನೀರಿನ ನಿರ್ವಹಣೆ ತಂತ್ರಜ್ಣಾನ(Water Management Technology) ಬಳಕೆಗೆ ಹೆಚ್ಚಿನ ಆದ್ಯತೆ ನೀಡಿದರು. ಅದರಿಂದ ತೋಟಗಾರಿಕೆ ಬೆಳೆಯಲ್ಲಿ ಏಕಸ್ವಾಮ್ಯ ಸಾಧಿಸಿದರು. ಇದಕ್ಕೆ ಪೂರಕವಾಗಿ ಬೆಂಗಳೂರು ಮಹಾನಗರವೂ ಈ ಎರಡು ಜಿಲ್ಲೆಗಳಿಗೆ ಹೊಂದಿಕೊಂಡಿದ್ದುದರಿಂದ ಇಲ್ಲಿನ ತೋಟಗಾರಿಕಾ ಬೆಳೆಗಳಿಗೆ ವಿಪುಲ ಮಾರುಕಟ್ಟೆ ಅವಕಾಶವೂ ದೊರೆಯಿತು. ಹೀಗಾಗಿ ತೋಟಗಾರಿಕೆ ಬೆಳೆಯಲ್ಲಿ ಈ ಎರಡೂ ಜಿಲ್ಲೆಗಳು ಇಂದಿಗೂ ಮುಂಚೂಣಿಯಲ್ಲಿವೆ.

Advertisements

ಇದನ್ನು ಓದಿದ್ದೀರಾ?: ಕನ್ನಡ ಕಲಿಸುವುದರಲ್ಲೇ ನಾವು ಅರ್ಧ ಶತಮಾನದಷ್ಟು ಹಿಂದೆ ಇದ್ದೇವೆ : ಡಾ ಪುರುಷೋತ್ತಮ ಬಿಳಿಮಲೆ 

ಇದೇ ಮಾತನ್ನು ಇತರ ಬಯಲು ಸೀಮೆ ಪ್ರದೇಶಗಳಾದ ಮಂಡ್ಯ, ಹಾಸನ, ತುಮಕೂರು, ಚಿತ್ರದುರ್ಗದಂಥ ಜಿಲ್ಲೆಗಳಿಗೆ ಹೇಳಲು ಬರುವುದಿಲ್ಲ. ಈ ಜಿಲ್ಲೆಗಳಿಗೆ ತಮ್ಮ ಅಕ್ಕ ಪಕ್ಕ ಬೆಂಗಳೂರಿನಂಥ ಮಹಾನಗರಗಳ ಮಾರುಕಟ್ಟೆ ಇಲ್ಲದೆ ಇರುವುದರಿಂದ ಸ್ಥಳೀಯ ಮಾರುಕಟ್ಟೆಯ ಬೇಡಿಕೆಗನುಗುಣವಾಗಿಯೇ ಬೆಳೆಯಬೇಕಾಗುತ್ತದೆ. ಹೆಚ್ಚುವರಿ ಬೆಳೆ ಬೆಳೆದರೆ ಬೆಲೆ ಕುಸಿತಕ್ಕೀಡಾಗಿ ನಷ್ಟ ಅನುಭವಿಸಬೇಕಾಗುತ್ತದೆ. ಇಂತಹ ಸಂದಿಗ್ಧದಿಂದಾಗಿಯೇ ಮಂಡ್ಯದ ಭತ್ತ-ಕಬ್ಬಿನ ಬೆಳೆಗಾರರು ಜೋಳ, ಅಡಕೆಯಂಥ ವಾಣಿಜ್ಯ ಬೆಳೆಗಳತ್ತ ಗುಳೆ ಹೊರಟಿದ್ದಾರೆ. ತುಮಕೂರು, ಹಾಸನ, ಚಿತ್ರದುರ್ಗದ ರೈತರು ಅಡಕೆ, ಶುಂಠಿ ಬೆಳೆಗೆ ಆಕರ್ಷಿತರಾಗುತ್ತಿದ್ದಾರೆ. ಇದರ ನೇರ ಪರಿಣಾಮ ಉಂಟಾಗಿರುವುದು ಸ್ಥಳೀಯ ತರಕಾರಿ ಮಾರುಕಟ್ಟೆಯ ಮೇಲೆ. ಕಳೆದ ಬೇಸಿಗೆಯ ಸಂದರ್ಭದಲ್ಲಿ ಬಯಲು ಸೀಮೆಯ ರೈತರು ಸೂಕ್ತ ಪ್ರಮಾಣದ ತರಕಾರಿಗಳನ್ನು ಬೆಳೆಯದ ಕಾರಣ, ಸ್ಥಳೀಯ ತರಕಾರಿ ಮಾರುಕಟ್ಟೆಯ ವರ್ತಕರು ತರಕಾರಿಗಳನ್ನು ಬೆಂಗಳೂರಿನಿಂದ ಸಗಟು ದರದಲ್ಲಿ ಖರೀದಿಸಿ ತಂದು, ಬಯಲು ಸೀಮೆಯ ಸ್ಥಳೀಯ ಮಾರುಕಟ್ಟೆಗಳಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡಿದ್ದರು. ಈ ಪ್ರವೃತ್ತಿ ಮಳೆಗಾಲ ಪ್ರಾರಂಭವಾದ ನಂತರವೂ ಮುಂದುವರಿದಿದೆ.

ನಿಷ್ಕ್ರಿಯ ಕೃಷಿ ಇಲಾಖೆ

ಬಯಲು ಸೀಮೆಯಲ್ಲಿ ತರಕಾರಿ ಬೆಲೆಗಳು ದುಬಾರಿಯಾಗಿರುವುದು ಕೃಷಿ ಇಲಾಖೆಯ ಪಾಲಿಗೆ ಗಂಭೀರ ಮತ್ತು ಕಳವಳಕಾರಿ ಸಂಗತಿಯಾಗಬೇಕಿತ್ತು. ಬಯಲು ಸೀಮೆಯ ಗ್ರಾಮೀಣ ಭಾಗಗಳಲ್ಲೇ ತರಕಾರಿ ದರ ಏಕೆ ದುಬಾರಿಯಾಗುತ್ತಿದೆ ಎಂಬ ಕುರಿತು ಅದು ಒಂದು ಸಮೀಕ್ಷೆಯನ್ನಾದರೂ ನಡೆಸಬೇಕಿತ್ತು. ಆದರೆ, ಅದಾವುದರತ್ತಲೂ ಗಮನ ನೀಡದ ಕೃಷಿ ಇಲಾಖೆ ಯಾಂತ್ರಿಕವಾಗಿ ಬೀಜ ವಿತರಣೆಯಲ್ಲಿ ತೊಡಗಿದೆ‌. ಈ ಅನಿಯಂತ್ರಿತ ಬೀಜ ವಿತರಣೆಯೇ ಬಯಲು ಸೀಮೆಯ ಗ್ರಾಮೀಣ ಭಾಗದಲ್ಲಿ ತರಕಾರಿ ದರ ದುಬಾರಿಯಾಗಲು ಪ್ರಮುಖ ಕಾರಣ ಎಂಬ ಕಿಂಚಿತ್ ಅರಿವೂ ಕೃಷಿ ಇಲಾಖೆಗಾಗಲಿ ಅಥವಾ ಕೃಷಿ ಕ್ಷೇತ್ರಾಧಿಕಾರಿಗಳಿಗಾಗಲಿ ಇಲ್ಲವೇ ಇಲ್ಲ. ಹೀಗಾಗಿಯೇ ತರಕಾರಿ ಬೆಳೆಯುವ ಕೃಷಿ ಭೂಮಿಗಳ ವಿಸ್ತೀರ್ಣ ಕುಸಿಯುತ್ತಾ ಸಾಗುತ್ತಿದ್ದರೆ, ವಾಣಿಜ್ಯ ಬೆಳೆಗಳಾದ ಶುಂಠಿ, ಅಡಕೆ, ಹತ್ತಿ ಬೆಳೆಯುವ ಕೃಷಿ ಭೂಮಿಗಳ ವಿಸ್ತೀರ್ಣ ಹಿಗ್ಗುತ್ತಾ ಸಾಗಿದೆ. ಈ ಮಾತಿಗೆ ತಾಜಾ ನಿದರ್ಶನ ಹಾಸನ ಜಿಲ್ಲೆ.

ಮುಸುಕಿನ ಜೋಳ
ಮುಸುಕಿನ ಜೋಳ

ಹಾಸನದ ಬಹುತೇಕ ಮಳೆಯಾಶ್ರಿತ ಕೃಷಿ ಭೂಮಿಗಳು ಕಪ್ಪು ಮಣ್ಣು (ಎರೆ ಮಣ್ಣು) ಹೊಂದಿರುವ ಫಲವತ್ತಾದ ಭೂಮಿಗಳಾಗಿವೆ. ಇಲ್ಲಿನ ಎರೆಭೂಮಿಗಳು ಆಲೂಗಡ್ಡೆ ಬೆಳೆಯಲು ಹೇಳಿ ಮಾಡಿಸಿದಂತಿವೆ. ಆದರೆ, ದಶಕದ ಹಿಂದೆ ಅಂಗಮಾರಿ ರೋಗ ಕಾಣಿಸಿಕೊಂಡು ಆಲೂಗಡ್ಡೆ ಬೆಳೆಗಾರರು ಭಾರಿ ನಷ್ಟ ಅನುಭವಿಸಿದ ನಂತರ, ಬಹುತೇಕ ರೈತರು ಆಲೂಗಡ್ಡೆಗೆ ವಿದಾಯ ಹೇಳಿ, ಈರುಳ್ಳಿ, ಶುಂಠಿ, ಅಡಕೆ, ಹತ್ತಿ, ಮುಸುಕಿನ ಜೋಳ ಬೆಳೆಗಳ ಬೆನ್ನು ಹತ್ತಿದ್ದಾರೆ. ಇದರ ಪರಿಣಾಮ, ಯಾವಾಗಲೂ ಚಿಲ್ಲರೆ ಮಾರುಕಟ್ಟೆಯಲ್ಲಿ ರೂ. 20ರ ಆಸುಪಾಸಿನಲ್ಲಿರುತ್ತಿದ್ದ ಆಲೂಗಡ್ಡೆಯ ದರ ಈ ಬಾರಿ ರೂ. 40-50ಕ್ಕೆ ಏರಿಕೆಯಾಗಿದೆ. ಈ ದರ ಏರಿಕೆಯಿಂದ ನೇರ ಸಂತ್ರಸ್ತರಾಗಿರುವುದು ಗ್ರಾಮೀಣ ಭಾಗದ ಶ್ರಮಿಕ ಕುಟುಂಬಗಳು.

ಇನ್ನು, ಅಡಕೆ, ಶುಂಠಿ, ಹತ್ತಿಯಂಥ ವಾಣಿಜ್ಯ ಬೆಳೆಗಳ ಹಿಂದೆ ಬಿದ್ದ ರೈತರ ಪರಿಸ್ಥಿತಿ ಬಿಸಿಲುಗುದುರೆ ಏರಿದಂತಾಗಿದೆ. ತುಮಕೂರಿನ ಗುಬ್ಬಿ ತಾಲ್ಲೂಕೊಂದರಲ್ಲೇ ಈ ಬಾರಿಯ ಬೇಸಿಗೆಯಲ್ಲಿ ತಮ್ಮ ಅಡಕೆ ಬೆಳೆಗಳಿಗೆ ನೀರು ಹರಿಸಲಾಗದೆ ಬರೋಬ್ಬರಿ 88 ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ನೀರಿನ ಸಮೃದ್ಧಿ ಇರುವ ಮಲೆನಾಡಿಗೆ ಹೇಳಿ ಮಾಡಿಸಿದ ವಾಣಿಜ್ಯ ಬೆಳೆಯಾದ ಅಡಕೆಯ ಬೆನ್ನು ಹತ್ತಿದ್ದರಿಂದ ಬಯಲು ಸೀಮೆಯ ರೈತರು ತೆತ್ತ ಬೆಲೆಯಿದು. ಹೀಗಿದ್ದೂ ಬರಡು ನೆಲದ ತವರಾದ ಚಿತ್ರದುರ್ಗ ಜಿಲ್ಲೆಯ ರೈತರೂ ಕೂಡಾ ಅಡಕೆ ಎಂಬ ಮಾಯಾಮೃಗದ ಬೆನ್ನು ಹತ್ತಿದ್ದಾರೆ ಎಂಬ ವರದಿಗಳಿವೆ. ಇಂತಹ ಅವಘಡಗಳಿಗೆ ಸರಕಾರ ಮತ್ತು ಕೃಷಿ ಇಲಾಖೆ ನೇರ ಜವಾಬ್ದಾರಿಯೇ ಹೊರತು ಮತ್ಯಾರೂ ಅಲ್ಲ.

ಕೃಷಿ ಇಲಾಖೆ ಏನು ಮಾಡಬೇಕು?

ಭಾರತ ಅತ್ಯಂತ ವಿಭಿನ್ನ ಭೌಗೋಳಿಕತೆಯನ್ನು ಹೊಂದಿರುವ ನೈಸರ್ಗಿಕ ಸಂಪನ್ಮೂಲಭರಿತ ದೇಶ. ಈ ಮಾತಿಗೆ ಕರ್ನಾಟಕವೂ ಹೊರತಲ್ಲ. ಉತ್ತರ ಕರ್ನಾಟಕದ ಭೌಗೋಳಿಕತೆಯೇ ಒಂದು ರೀತಿಯದಾದರೆ, ಮಧ್ಯ ಕರ್ನಾಟಕದ ಭೌಗೋಳಿಕತೆಯೇ ಮತ್ತೊಂದು ಬಗೆಯದು. ಮಲೆನಾಡಿನ ಭೌಗೋಳಿಕತೆಯೇ ಒಂದಾದರೆ, ಕರಾವಳಿ ಭಾಗದ ಭೌಗೋಳಿಕತೆಯೇ ಮತ್ತೊಂದು ಬಗೆಯದು. ಮಂಡ್ಯ, ಹಾಸನ, ತುಮಕೂರು, ಚಿತ್ರದುರ್ಗದಂಥ ಜಿಲ್ಲೆಗಳನ್ನು ಹೊಂದಿರುವ ಬಯಲು ಸೀಮೆಯ ಭೌಗೋಳಿಕತೆಯೇ ಒಂದು ತೆರದ್ದಾದರೆ, ಕೋಲಾರ, ಚಿಕ್ಗಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಭೌಗೋಳಿಕತೆಯೇ ಮತ್ತೊಂದು ಬಗೆಯದು. ಹೀಗಾಗಿಯೇ ಆಯಾ ಭೌಗೋಳಿಕತೆಗನುಗುಣವಾಗಿ ಆಹಾರ ಪದ್ಧತಿ ಬೆಳೆದು ಬಂದಿದೆ. ಆಯಾ ಪ್ರದೇಶದ ಆಹಾರಾಭ್ಯಾಸಕ್ಕನುಗುಣವಾಗಿ ಕೃಷಿ ಪದ್ಧತಿಯೂ ಬೆಳೆದು ಬಂದಿದೆ. ಆದರೆ, ಜಾಗತೀಕರಣದ ಈ ಹೊತ್ತಿನಲ್ಲಿ ಈ ವಿಶಿಷ್ಟತೆಯ ಗಡಿಯೇ ಅಳಿಸಿ ಹೋಗುತ್ತಿರುವುದರಿಂದ ಕೃಷಿ ಬಿಕ್ಕಟ್ಟು ಸೃಷ್ಟಿಯಾಗತೊಡಗಿದೆ.

ಅಡಕೆ
ಅಡಕೆ

ಈ ಬಿಕ್ಕಟ್ಟನ್ನು ನಿವಾರಿಸಲು ಇರುವ ಏಕೈಕ ಮಾರ್ಗೋಪಾಯ ಪ್ರತಿ ರೈತನಿಗೂ ಬೆಳೆ ಚೀಟಿ ವಿತರಿಸುವುದು. ರೈತರು ಸಾಮಾನ್ಯವಾಗಿ ಮೂರು ಹಂಗಾಮುಗಳಲ್ಲಿ ಕೃಷಿ ಚಟುವಟಿಕೆಗಳನ್ನು ನಡೆಸುತ್ತಾರೆ. ಅದು ಖುಷ್ಕಿ, ಮುಂಗಾರು ಮತ್ತು ಹಿಂಗಾರು. ಇದಕ್ಕನುಗುಣವಾಗಿ ಪ್ರತಿ ರೈತನ ಕೃಷಿ ಭೂಮಿಯ ಮಣ್ಣು ಪರೀಕ್ಷೆ ನಡೆಸಿ, ಆಯಾ ರೈತರ ಕೃಷಿ ಭೂಮಿಗಳಿಗೆ ಒಗ್ಗುವಂಥ ಬೆಳೆಗಳ ವಿವರವುಳ್ಳ ಬೆಳೆ ಚೀಟಿಯನ್ನು ವಿತರಿಸಬೇಕು. ಈ ಬೆಳೆ ಚೀಟಿಯಲ್ಲಿ ಐದು ವರ್ಷಗಳ ಕಾಲ ಪ್ರತಿ ಹಂಗಾಮಿಗನುಗುಣವಾಗಿ ಬೆಳೆಯಬೇಕಾದ ಬೆಳೆಯ ವಿವರವನ್ನು ನಮೂದಿಸಬೇಕು. ಅದಕ್ಕನುಗುಣವಾಗಿಯೇ ಬೀಜ, ಗೊಬ್ಬರ, ಕ್ರಿಮಿ ನಾಶಕಗಳನ್ನು ವಿತರಿಸಬೇಕು. ಹಾಗೆಯೇ ಪ್ರತಿ ಹಂಗಾಮಿನಲ್ಲೂ ಮಿಶ್ರ ಬೆಳೆಯನ್ನು ಕಡ್ಡಾಯಗೊಳಿಸಬೇಕು. ಆಗ ರೈತರಲ್ಲಿ ಅನಾರೋಗ್ಯಕರ ಪೈಪೋಟಿ ತಪ್ಪಿ, ಮಾರುಕಟ್ಟೆಯ ಬೇಡಿಕೆಗನುಗುಣವಾಗಿ ಆಹಾರ ಧಾನ್ಯಗಳು, ತರಕಾರಿಗಳು, ವಾಣಿಜ್ಯ ಬೆಳೆಗಳನ್ನು ಬೆಳೆಯಲು ಸಾಧ್ಯವಾಗುತ್ತದೆ. ಇಂತಹ ಪ್ರಕ್ರಿಯೆಯಿಂದ ಉತ್ಪಾದನೆ ಮತ್ತು ಬೇಡಿಕೆಯ ನಡುವೆ ಸಮತೋಲನ ಸೃಷ್ಟಿಯಾಗಿ, ರೈತ ಮತ್ತು ಗ್ರಾಹಕರಿಬ್ಬರ ಆರ್ಥಿಕ ಲಾಭ-ನಷ್ಟದಲ್ಲಿ ಸಮತೋಲನ ಸಾಧ್ಯವಾಗುತ್ತದೆ.

ಈ ದಿಕ್ಕಿನಲ್ಲಿ ಸರಕಾರ ಮತ್ತು ಕೃಷಿ ಇಲಾಖೆ ಕಾರ್ಯೋನ್ಮುಖವಾಗಲಿ. ಆ ಮೂಲಕ ರೈತ ಪ್ರಧಾನ ಕೃಷಿಗೆ ಊರುಗೋಲಾಗಲಿ.

ಸದಾನಂದ ಗಂಗನಬೀಡು
ಸದಾನಂದ ಗಂಗನಬೀಡು
+ posts

ಪತ್ರಕರ್ತ, ಲೇಖಕ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಸದಾನಂದ ಗಂಗನಬೀಡು
ಸದಾನಂದ ಗಂಗನಬೀಡು
ಪತ್ರಕರ್ತ, ಲೇಖಕ

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹರೀಶ್‌ ಪೂಂಜಾ ಪ್ರಕರಣ | ಹೈಕೋರ್ಟ್‌ ನೀಡಿದ ತಡೆ ತೆರವಿಗೆ ಪ್ರಯತ್ನಿಸುವುದೇ ಸರ್ಕಾರ?

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಕಾರ ರಾಜಕೀಯ ಕಾರಣಕ್ಕೆ ಹಾಗೆಲ್ಲ ಮಾತನಾಡಿದ್ರೆ ಸುಮ್ಮನಿದ್ದು ಬಿಡಬೇಕು,...

ದಾವಣಗೆರೆ | ಕೆ.ಎನ್‌. ರಾಜಣ್ಣ, ನಾಗೇಂದ್ರರ ಮರಳಿ ಸಂಪುಟ ಸೇರ್ಪಡೆಗೆ ವಾಲ್ಮೀಕಿ ಸಮಾಜ ಆಗ್ರಹ

"ಇತ್ತೀಚೆಗೆ ಚುನಾವಣೆ ಆಯೋಗದ ವಿರುದ್ಧ ಕಾಂಗ್ರೆಸ್ ಆರೋಪಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿ...

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

Download Eedina App Android / iOS

X