“ತೆರಿಗೆ ಹೆಚ್ಚು ಸಂಗ್ರಹ ಮಾಡಿದರೆ ರಾಜ್ಯದ ಅಭಿವೃದ್ಧಿ ಕೆಲಸಗಳನ್ನು ಹೆಚ್ಚು ಮಾಡಲು ಸಾಧ್ಯ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ವಾಣಿಜ್ಯ ತೆರಿಗೆ ಇಲಾಖೆ ವತಿಯಿಂದ ಆಯೋಜಿಸಿದ್ದ ಜಿ.ಎಸ್. ಟಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಹಾಗೂ 2024-25 ನೇ ಸಾಲಿನ ಮುಖ್ಯಮಂತ್ರಿಗಳ ಸೇವಾ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಮಾತನಾಡಿದರು.
“ಪ್ರಜಾ ಸರ್ಕಾರಕ್ಕೂ ಮುನ್ನ ರಾಜರುಗಳ ಕಾಲದಿಂದಲೂ ತೆರಿಗೆ ಪದ್ಧತಿ ಇತ್ತು ಎನ್ನುವುದನ್ನು ಅನೇಕ ಶಾಸನಗಳಲ್ಲಿ ನಾವು ಕಾಣಬಹುದು. ಕದಂಬರು ಕರ್ನಾಟಕದಲ್ಲಿ ಮಾರಾಟ ತೆರಿಗೆಯನ್ನು ಪ್ರಾರಂಭಿಸಿದರು ಎಂದು ಶಾಸನಗಳು ಹೇಳುತ್ತವೆ. ರಾಜ್ಯ ನಡೆಸಲು ತೆರಿಗೆ ಅಗತ್ಯ. ತೆರಿಗೆ ಕೊಡಲು ಸಾಧ್ಯವಿದ್ದವರು ಮಾತ್ರ ತೆರಿಗೆಯನ್ನು ಕೊಡುತ್ತಾರೆ. ಪ್ರತಿ ಸರ್ಕಾರವೂ ಕೂಡ ತೆರಿಗೆಗಳನ್ನು ಸಂಗ್ರಹ ಮಾಡಿಯೇ ದೇಶವನ್ನು, ರಾಜ್ಯವನ್ನು ನಡೆಸುತ್ತದೆ. ಸಂವಿಧಾನ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ತೆರಿಗೆ ವಿಧಿಸುವ ಅಧಿಕಾರ ಕೊಟ್ಟಿದೆ” ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಗ್ಯಾರಂಟಿ ಯೋಜನೆಗಳಿಗೆ 60,000 ಕೋಟಿ ರೂಪಾಯಿಗಳ ಅಗತ್ಯವಿದೆ. ಸಮಾಜದ ಅಸಮಾನತೆ ಹೋಗಬೇಕಾದರೆ ಎಲ್ಲರಿಗೂ ಆರ್ಥಿಕ, ಸಾಮಾಜಿಕ ಶಕ್ತಿ ಬರಬೇಕು. ಆಗ ಮಾತ್ರ ಸಮಾನತೆ ಬರಲು ಸಾಧ್ಯ. ಆರ್ಥಿಕವಾಗಿ ದುರ್ಬಲರಾದವರಿಗೆ ವಿಶೇಷ ಕಾರ್ಯಕ್ರಮ ನೀಡಿ ಅವರಿಗೆ ಶಕ್ತಿ ತುಂಬುವ ಕೆಲಸ ಮಾಡಲಾಗುತ್ತಿದೆ. ಎಲ್ಲಾ ಧರ್ಮದ, ಎಲ್ಲಾ ಜಾತಿಗಳ ಬಡವರಿಗೆ ಶಕ್ತಿ… pic.twitter.com/Xd3kf2Aq3k
— Siddaramaiah (@siddaramaiah) July 1, 2024
“ಕರ್ನಾಟಕ ಸರ್ಕಾರ ಜಿ. ಎಸ್.ಟಿ ಗೂ ಮುನ್ನವೇ ವ್ಯಾಟ್ ಮೂಲಕ ತೆರಿಗೆ ವಸೂಲಿ ಮಾಡುತ್ತಿತ್ತು. ಜಿ ಎಸ್. ಟಿ ಪರೋಕ್ಷ ತೆರಿಗೆಯಾಯಾಗಿದೆ. ಕೇಂದ್ರದಿಂದ ರಾಜ್ಯಗಳಿಗೆ ಸರಿಯಾಗಿ ತೆರಿಗೆ ಪಾಲು ದೊರೆಯುತ್ತಿಲ್ಲ ಎಂಬ ಕೂಗು ಎದ್ದಿದೆ. ಪ್ರಸ್ತುತ 16ನೇ ಹಣಕಾಸು ಆಯೋಗ ರಚನೆಯಾಗುತ್ತಿದೆ. ಕೇಂದ್ರಕ್ಕೆ ಅತಿ ಹೆಚ್ಚು ತೆರಿಗೆ ನೀಡುವ ರಾಜ್ಯಗಳಿಗೆ ಸೂಕ್ತ ರೀತಿಯಲ್ಲಿ ತೆರಿಗೆ ಹಂಚಿಕೆಯಾಗಬೇಕೆಂದು ನಾವು ಪ್ರತಿಪಾದಿಸುತ್ತಿದ್ದೇವೆ. 15 ನೇ ಹಣಕಾಸು ಯೋಜನೆಯಡಿ ರಾಜ್ಯ ಸರ್ಕಾರಕ್ಕೆ ಶೇ.1.7% ರಷ್ಟು ತೆರಿಗೆ ಕಡಿಮೆಯಾಗಿದೆ ಎಂದು ಕೇಂದ್ರ ಸರ್ಕಾರ, ಸಂಸದರು ಹಾಗೂ ಪ್ರಧಾನಿಗಳ ಗಮನಕ್ಕೆ ತರುವ ಪ್ರಯತ್ನ ಮಾಡಿದ್ದೇವೆ. ಹೆಚ್ಚು ತೆರಿಗೆ ಸಂಗ್ರಹವಾದರೆ ರಾಜ್ಯದ ಅಭಿವೃದ್ಧಿ ಸಾಧ್ಯ” ಎಂದರು.
“ಗ್ಯಾರಂಟಿ ಯೋಜನೆಗಳಿಗೆ 60,000 ಕೋಟಿ ರೂಪಾಯಿಗಳ ಅಗತ್ಯವಿದೆ. ಸಮಾಜದ ಅಸಮಾನತೆ ಹೋಗಬೇಕಾದರೆ ಎಲ್ಲರಿಗೂ ಆರ್ಥಿಕ, ಸಾಮಾಜಿಕ ಶಕ್ತಿ ಬರಬೇಕು. ಆಗ ಮಾತ್ರ ಸಮಾನತೆ ಬರಲು ಸಾಧ್ಯ. ಆರ್ಥಿಕವಾಗಿ ದುರ್ಬಲರಾದವರಿಗೆ ವಿಶೇಷ ಕಾರ್ಯಕ್ರಮ ನೀಡಿ ಅವರಿಗೆ ಶಕ್ತಿ ತುಂಬುವ ಕೆಲಸ ಮಾಡಲಾಗುತ್ತಿದೆ. ಎಲ್ಲ ಧರ್ಮದ, ಎಲ್ಲಾ ಜಾತಿಗಳ ಬಡವರಿಗೆ ಶಕ್ತಿ ತುಂಬಬೇಕಾದರೆ ಸಂಪನ್ಮೂಲ ಇರಬೇಕಾದುದ್ದು ಅಗತ್ಯ” ಎಂದರು.
ಇದನ್ನು ಓದಿದ್ದೀರಾ? ಕನ್ನಡಿಗರಿಗೆ ಉದ್ಯೋಗ ನೀಡಲು ಕರವೇ ಮನವಿ; ‘ಪರಿಶೀಲಿಸಿ ಶೀಘ್ರವೇ ಕ್ರಮ’ ಎಂದ ಸಿಎಂ ಸಿದ್ದರಾಮಯ್ಯ
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಡಾ. ಕೆ.ಗೋವಿಂದರಾಜು ಹಾಗೂ ನಝೀರ್ ಅಹ್ಮದ್, ಆರ್ಥಿಕ ಇಲಾಖೆ ಹಾಗೂ ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತೆ ಸಿ.ಶಿಖಾ ಆರ್ಥಿಕ ಇಲಾಖೆ ಕಾರ್ಯದರ್ಶಿ ಪಿ.ಸಿ.ಜಾಫರ್ ಮತ್ತಿತರು ಉಪಸ್ಥಿತರಿದ್ದರು.
