ಜಪ್ಪು ಮಹಾಕಾಳಿಪಡ್ಪು ರೈಲ್ವೇ ಕೆಳಸೇತುವೆ ಕಾಮಗಾರಿ ವಿಳಂಬವಾಗುತ್ತಿದ್ದು, ರಸ್ತೆಯಲ್ಲಿ ಸಂಚರಿಸುವ ಜನರು ಪರದಾಡುವಂತಾಗಿದೆ. ಮಾತ್ರಲ್ಲದೆ, ಕಾಮಗಾರಿ ಮುಗಿಯದ ಕಾರಣ ಮಂಗಳೂರು ನಗರದಲ್ಲಿ ವಾಹನ ದಟ್ಟನೆ ಹೆಚ್ಚಾಗಿ ಅಡಚಣೆಯುಂಟಾಗಿದೆ. ರೈಲ್ಚೇ ಕಾಮಗಾರಿಯ ಪರಿಶೀಲಿಸಿ, ತ್ವರಿತವಾಗಿ ಕೆಲಸ ಮುಗಿಸುವಂತೆ ಸೂಚಿಸಬೇಕಾದ ಶಾಸಕ ವೇದವ್ಯಾಸ ಕಾಮತ್ ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದಾರೆ. ಕಾಮಗಾರಿಯನ್ನು ತ್ವರಿತವಾಗಿ ಮುಗಿಸದಿದ್ದಲ್ಲಿ, ಶಾಸಕರ ಕಚೇರಿಗೆ ಮುತ್ತಿಗೆ ಹಾಕಿ, ಕಪ್ಪುಬಾವುಟ ಪ್ರದರ್ಶಿಸಲಾಗುವುದು ಎಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಎಚ್ಚರಿಕೆ ನೀಡಿದ್ದಾರೆ.
ಸೋಮವಾರ, ಜಪ್ಪು ಮಹಾಕಾಳಿಪಡ್ಪು ರೈಲ್ವೇ ಕೆಳಸೇತುವೆ ವಿಳಂಬ ಧೋರಣೆಯನ್ನು ರೈಲ್ವೇ ಗೇಟ್ ಬಳಿ ಸಿಪಿಐಎಂ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಯಲ್ಲಿ ಸುನೀಲ್ ಕುಮಾರ್ ಮಾತನಾಡಿದರು. “ಕಾಮಗಾರಿ ಸಂಪೂರ್ಣ ಕಳಪೆಯಾಗಿರುವುದು ಗೋಚರಿಸುತ್ತಿದೆ. ಈ ಹಿಂದೆ, ಕಾಮಗಾರಿ ನಡೆಯುವ ವೇಳೆಯೇ ಸೇತುವೆ ಕುಸಿದಿತ್ತು. ಅಂತರಾಷ್ಟ್ರೀಯ ಮಟ್ಟದ ಎಂಜನಿಯರ್‌ಗಳನ್ನು ಒಳಗೊಂಡಿರುವ ಕೇಂದ್ರದ ರೈಲ್ವೇ ಇಲಾಖೆಗೆ ಈವರೆಗೂ ಕಾಮಗಾರಿ ಪೂರ್ಣಗೊಳಿಸಲಾಗಿಲ್ಲ. ಕಳೆದ ಹಲವು ಅವಧಿಗಳಿಂದ ನಿರಂತರವಾಗಿ ಆಯ್ಕೆಯಾಗುತ್ತಿರುವ ಬಿಜೆಪಿ ಸಂಸದರಿಗೂ ಈ ಬಗ್ಗೆ ಕಾಳಜಿ ಇಲ್ಲವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಪಿಐಎಂ ಮುಖಂಡ ಸಂತೋಷ್ ಬಜಾಲ್ ಮಾತನಾಡಿ, “ಶಾಸಕ ವೇದವ್ಯಾಸ ಕಾಮತ್, ಸಂಸದ ಬ್ರಿಜೇಶ್ ಚೌಟರು ಮತ್ತು ಪಾಲಿಕೆ ಮೇಯರ್ ಮಂಗಳೂರಿನಿಂದ ಕೇರಳದ ಕಣ್ಣೂರುವರೆಗೆ ರೈಲು ಪ್ರಯಾಣಿಸಿ ನೋಡಬೇಕು. ಕೇರಳದ ಸಣ್ಣ ಪುಟ್ಟ ಪಂಚಾಯತಿಗಳು ತಮ್ಮ ವ್ಯಾಪ್ತಿಯಲ್ಲಿರುವ ರೈಲ್ವೇ ಕೆಳ ಮತ್ತು ಮೇಲ್ಸೇತುವೆಗಳನ್ನು ನಿರ್ಮಿಸಿರುವ ಪರಿಯನ್ನು ವೀಕ್ಷಿಸಬೇಕು. ಇಲ್ಲಿ ಮಂಗಳೂರು ಮಹಾನಗರ ಪಾಲಿಕೆ, ಅದರೊಳಗೆ ಸ್ಮಾರ್ಟ್ ಸಿಟಿಯ ಸಾವಿರಾರು ಕೋಟಿ ಅನುದಾನ, ಇನ್ನು ಕೇಂದ್ರದ ಹಣಕಾಸು ನೆರವುಗಳಿದ್ದರೂ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಿಂದ ರೈಲು ಹೊರಟ ತಕ್ಷಣ ಪ್ರಾರಂಭದಲ್ಲಿ ಸಿಗುವ ಮೊದಲ ಮಾನವರಹಿತ ರೈಲ್ವೇಗೇಟ್ ಗೆ ಕೆಳಸೇತುವೆ ನಿರ್ಮಿಸಲು ಈವರೆಗೂ ಸಾಧ್ಯವಾಗಿಲ್ಲ ಎಂಬುದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ” ಎಂದು ಕಿಡಿಕಾರಿದರು.
“ಬಿಜೆಪಿ ಆಡಳಿತದ ಅವಧಿಯಲ್ಲಿನ ಅಭಿವೃದ್ಧಿ ಕಾಮಗಾರಿ ಕೆಲಸದ ಬಗ್ಗೆ ದಿನಾ ಸಾಲು ಸಾಲು ಘಟನೆಗಳ ಬಗ್ಗೆ ವರದಿಗಳು ಕಾಣಸಿಗುತ್ತಿವೆ. ನಿನ್ನೆ ಜಾರ್ಖಾಂಡ್ ಸೇತುವೆ ಮುರಿದು ಬಿದ್ದರೆ, ಮೊನ್ನೆ ಬಿಹಾರದ ಸೇತುವೆಗಳು, ರಾಮ ಮಂದಿರ ಸೋರುತ್ತಿದೆ, ಇನ್ನು ದೆಹಲಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕುಸಿತದಿಂದ ಹಲವರು ಪ್ರಾಣ ಕಳೆದುಕೊಳ್ಳುವಂತಾಯಿತು. ಪಡೀಲ್ ಹೈವೇ ಮತ್ತು ಪಡೀಲ್ ಬಜಾಲ್ ಕೆಳ ಸೇತುವೆ ಕಾಮಗಾರಿ ಅನುಭವಗಳು ಕಣ್ಣ ಮುಂದೆನೇ ಇದೆ. ಇನ್ನು ಈ ಸೇತುವೆಯ ಕಥೆ ಹೇಗಿರುತ್ತೋ ಎಂದು ಕಾದು ನೋಡಬೇಕಾಗಿದೆ” ಎಂದರು.
ಪ್ರತಿಭಟನೆಯಲ್ಲಿ ಸ್ಥಳೀಯರೂ, ಸಾಮಾಜಿಕ ಹೋರಾಟಗಾರರಾದ ಜೆ ಇಬ್ರಾಹಿಂ ಜೆಪ್ಪು,ಸ್ಥಳೀಯ ಮಸೀದಿ ಅಧ್ಯಕ್ಷರಾದ ಇಸ್ಮಾಯಿಲ್ ಸೇರಿದಂತೆ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಹೋರಾಟವನ್ನು ಬೆಂಬಲಿಸಿ ಟೆಂಪೋ ಚಾಲಕರ ಸಂಘಟನೆಯ ಮುಖಂಡರಾದ ಮುಕ್ಬಲ್ ಅಹಮ್ಮದ್, ದೇವದಾಸ್ ಪೂಜಾರಿ, ಪದ್ಮಾವತಿ ಶೆಟ್ಟಿ, ಜಯಂತಿ ಶೆಟ್ಟಿ, ಪ್ರಮೋದಿನಿ ಕಲ್ಲಾಪುರಮ ಪ್ರಮೀಳಾ ದೇವಾಡಿಗ, ದೀಪಕ್ ಬಜಾಲ್, ನಾಗೇಶ್ ಕೋಟ್ಯಾನ್,ಭಾರತಿ ಬೋಳಾರ, ವರಪ್ರಸಾದ್ ಬಜಾಲ್,ಲೋಕೇಶ್ ಎಂ,ಅಶೋಕ್ ಸಾಲ್ಯಾನ್, ಜಯಪ್ರಕಾಶ್ ಜಲ್ಲಿಗುಡ್ಡ, ತಯ್ಯುಬ್ ಬೆಂಗರೆ, ಮುಝಾಫರ್, ಅಸುಂತ ಡಿಸೋಜ, ಯೋಗಿತಾ ಉಳ್ಳಾಲ, ನಾಸಿರ್ ಬೆಂಗರೆ ಮುಂತಾದವರು ವಹಿಸಿದ್ದರು.