ರಾಜ್ಯದಲ್ಲಿ ಕನ್ನಡಿಗರ ಉದ್ಯೋಗ ಮೀಸಲಾತಿ ಜಾರಿಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಪ್ರಬಲ ಕಾನೂನು ರೂಪಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ಲೋಕೇಶ್ ಒತ್ತಾಯಿಸಿದರು.
ಚಿಕ್ಕಬಳ್ಳಾಪುರದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. “ರಾಜ್ಯದಲ್ಲಿ ಪ್ರಸ್ತುತ ವಲಸಿಗರ ಪ್ರಮಾಣ ಹೆಚ್ಚಿದ್ದು, ರಾಜ್ಯದ ಯುವ ಸಮುದಾಯ ನಿರುದ್ಯೋಗ ಭೀತಿಯಲ್ಲಿದೆ” ಎಂದು ಕಳವಳ ವ್ಯಕ್ತಪಡಿಸಿದರು.
“ಕೇಂದ್ರ ಸರ್ಕಾರದ ಕೈಗಾರಿಕಾ ಉದ್ಯೋಗ ಸ್ಥಾಯಿ ಕಾಯ್ದೆ-1946ರ ಪ್ರಕಾರ ನಿಯಮಾವಳಿ ರೂಪಿಸುವ ಅಧಿಕಾರ ಆಯಾ ರಾಜ್ಯಗಳಿಗಿದ್ದು, ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕನ್ನಡಿಗರಿಗೆ ಉದ್ಯೋಗ ದೊರೆಕಿಸಿಕೊಡುವ ನಿಟ್ಟಿನಲ್ಲಿ ಬಲಿಷ್ಠ ಕಾನೂನು ರೂಪಿಸಬೇಕು” ಎಂದು ಆಗ್ರಹಿಸಿದರು.
“ಡಾ.ಸರೋಜಿನಿ ಮಹಿಷಿ ಸಮಿತಿಯು ರಾಜ್ಯದಲ್ಲಿ ಉದ್ಯೋಗ ಮೀಸಲಾತಿಗೆ ಸಂಬಂಧಿಸಿದಂತೆ1986ರಲ್ಲಿ ವರದಿ ಸಿದ್ಧಪಡಿಸಿ, 58 ಶಿಫಾರಸ್ಸುಗಳನ್ನು ಮಾಡಿತ್ತು. ಆದರೆ, ಈ ವರದಿ ಸಮರ್ಪಕವಾಗಿ ಜಾರಿಯಾಗಲೇ ಇಲ್ಲ. ಸರಕಾರದ ಜಾರಿಗೊಳಿಸಿದ ಕೆಲ ಅಂಶಗಳನ್ನು ಖಾಸಗಿ ಸಂಸ್ಥೆಗಳು ಗಾಳಿಗೆ ತೂರಿ, ಹೊರರಾಜ್ಯದ ನೌಕರರಿಗೆ ಉದ್ಯೋಗ ನೀಡುತ್ತಿವೆ” ಎಂದರು.
“ರಾಜ್ಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ಸರಕಾರ ಸೂಕ್ತ ಕಾನೂನು ಜಾರಿಗೊಳಿಸಬೇಕು. ಖಾಸಗಿ ಸಂಸ್ಥೆಗಳಲ್ಲಿ ಶೇ.80-100ರಷ್ಟು ಉದ್ಯೋಗ ಮೀಸಲಾತಿ ಕಲ್ಪಿಸಬೇಕು. 15 ವರ್ಷ ರಾಜ್ಯದಲ್ಲಿ ನೆಲೆಸಿ, ಕನ್ನಡ ಓದು ಬರಹ ಬಲ್ಲವರನ್ನು ಮಾತ್ರ ಕನ್ನಡಿಗರೆಂದು ಪರಿಗಣಿಸಬೇಕು” ಎಂದು ಮನವಿ ಮಾಡಿದರು.
“ಸರ್ಕಾರದ ನಿಯಮ ಪಾಲಿಸದ ಸಂಸ್ಥೆಗಳ ಮಾನ್ಯತೆ ರದ್ಧುಗೊಳಿಸಿ, ನೀಡಿರುವ ಎಲ್ಲಾ ಸವಲತ್ತುಗಳನ್ನು ಹಿಂಪಡೆದು, ದಂಡ ವಿಧಿಸುವ ಪ್ರಬಲ ಕಾನೂನು ರೂಪಿಸಬೇಕು. ರಾಜ್ಯ ಸರಕಾರ ರೂಪಿಸುವ ಕಾನೂನನ್ನು ಜಾರಿಗೆ ತರುವ ನಿಟ್ಟಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಹೆಚ್ಚಿನ ಅಧಿಕಾರ ನೀಡಬೇಕು” ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ವಿವಿಧ ತಾಲೂಕು ಘಟಕಗಳ ಅಧ್ಯಕ್ಷರು ಹಾಗೂ ಕಾರ್ಯಕರ್ತರು ಹಾಜರಿದ್ದರು.