ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಅವರು ತನ್ನನ್ನು ತಾನು ಕೊಳಕು ನಟ ಎಂದು ಕರೆದುಕೊಂಡಿದ್ದಾರೆ.
ಇತ್ತೀಚಿಗೆ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿರುವ ಅವರು, ನಾನೊಬ್ಬ ಅತ್ಯಂತ ಕೊಳಕು ನಟ. ಈ ಮುಖದೊಂದಿಗೆ ನಾನು ನಟನಾಗಲು ನಿರ್ಧರಿಸಿದಾಗ ಜನರು ಏನೆಂದುಕೊಳ್ಳುತ್ತಾರೊ ಎಂದು ಯೋಚಿಸಿರಲಿಲ್ಲ. ನನ್ನ ನಟನೆಯ ಬಗ್ಗೆ ಹಲವರು ಕೆಟ್ಟ ಭಾವನೆಯನ್ನು ಹೊಂದಿರುವುದಾಗಿ ನಾನು ಕೇಳಿದ್ದೇನೆ ಎಂದು ಸಿದ್ದಿಕಿ ತಿಳಿಸಿದ್ದಾರೆ.
”ನನ್ನನ್ನು ನೋಡಿದರೆ ಕೆಲವರು ಏಕೆ ಕೋಪಿಸಿಕೊಳ್ಳುತ್ತಾರೆ ಎಂದು ಗೊತ್ತಿಲ್ಲ. ಏಕೆಂದರೆ ನಾನು ಕೊಳಕು ನಟನಾಗಿರಬಹುದು. ನಾನು ಕೂಡ ನನ್ನನ್ನು ಕನ್ನಡಿ ಮುಂದೆ ನಿಂತು ನೋಡಿಕೊಂಡರೆ ಅದೇ ರೀತಿ ಅನಿಸಬಹುದು. ಇಂತಹ ಕೆಟ್ಟ ಮುಖವನ್ನು ಇಟ್ಟುಕೊಂಡು ನಾನೇಕೆ ಸಿನಿಮಾ ಲೋಕಕ್ಕೆ ಬಂದೆ ಎಂದು ನಾನು ಪ್ರಶ್ನಿಸಿಕೊಂಡಿದ್ದೇನೆ” ಎಂದು ಸಿದ್ದಿಕಿ ಹೇಳಿದ್ದಾರೆ.
”ಸಿನಿಮಾ ರಂಗದಲ್ಲಿ ದೈಹಿಕವಾಗಿ ನಾನೊಬ್ಬ ಕೊಳಕು ನಟ. ನಾನು ಬಹಳ ವರ್ಷಗಳಿಂದ ಕೇಳಿಸಿಕೊಳ್ಳುತ್ತ ಬಂದಿದ್ದೇನೆ. ಹಾಗಾಗಿ ನಾನು ನಂಬಲು ಶುರು ಮಾಡಿದ್ದೇನೆ. ಚಿತ್ರರಂಗದ ಬಗ್ಗೆ ನನಗೆ ಯಾವುದೇ ದೂರುಗಳಿಲ್ಲ” ಎಂದು ಸಿದ್ದಿಕಿ ಸ್ಪಷ್ಟಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೊದಲ ಭಾಷಣದಲ್ಲೇ ಬಿಜೆಪಿಗರ ಬೆವರಿಳಿಸಿದ ರಾಹುಲ್ ಮತ್ತು ಮಹುವಾ
”ವಿವಿಧ ರೀತಿಯ ಪಾತ್ರಗಳನ್ನು ನೀಡಿದ ಎಲ್ಲ ನಿರ್ದೇಶಕರಿಗೆ ನಾನು ಧನ್ಯವಾದ ಹೇಳುತ್ತೇನೆ. ನಿಮ್ಮ ಬಳಿ ಚೂರು ಪ್ರತಿಭೆಯಿದ್ದರೂ ಸಿನಿಮಾ ರಂಗ ಹಲವು ಅವಕಾಶ ನೀಡುತ್ತದೆ. ಸಮಾಜದಲ್ಲಿ ತಾರತಮ್ಯವಿದೆ. ಆದರೆ ಉದ್ಯಮದಲ್ಲಿ ಇಲ್ಲ” ಎಂದು ನವಾಜುದ್ದೀನ್ ಸಿದ್ದಿಕಿ ತಿಳಿಸಿದ್ದಾರೆ.
ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಕೂಡ ಇತ್ತೀಚಿಗೆ ಪಾತ್ರಗಳ ಅಭಿನಯಗಳ ಆಧಾರದ ಮೇಲೆ ಚಿತ್ರರಂಗದಲ್ಲಿ ತಾರತಮ್ಯದಿಂದ ನಡೆಸಿಕೊಳ್ಳಲಾಗುತ್ತದೆ ಎಂದು ಹೇಳಿದ್ದರು.
ಚಿತ್ರರಂಗವು ನಟರನ್ನು ಗೌರವಿಸುವುದಿಲ್ಲ. ಅವರು ನವಾಜುದ್ದೀನ್ ಕಪ್ಪು ಬಣ್ಣ, ಪಂಕಜ್ ತ್ರಿಪಾಠಿ ಸಾಧಾರಣ, ಮನೋಜ್ ಬಾಜಪೇಯಿ ಗೂಂಡಾ ಎಂದು ಭಾವಿಸುತ್ತಾರೆ. ಅವರು ಜನರನ್ನು ನೋಡುವ ರೀತಿ ಹಾಗಿದೆ ಎಂದು ತಿಳಿಸಿದರು.
ನವಾಜುದ್ದೀನ್ ಸಿದ್ದಿಕಿ ಅಭಿನಯದ ನಿಗೂಢ ಕ್ರೈಂ ಕಥಾನಕಾ ಹೊಂದಿರುವ ‘ರೌತು ಕಾ ರಾಜ್’ ಸಿನಿಮಾ ಒಟಿಟಿ ವೇದಿಕೆ ಜೀ5ನಲ್ಲಿ ಇತ್ತೀಚೆಗಷ್ಟೆ ಬಿಡುಗಡೆಯಾಗಿದೆ.
