ಅಪ್ರಾಪ್ತೆಯೊಬ್ಬಳು ಕಾಲೇಜಿನ ಶೌಚಾಲಯದಲ್ಲೇ ಮಗುವಿಗೆ ಜನ್ಮ ನೀಡಿರುವ ಘಟನೆ ಕೋಲಾರ ಹೊರವಲಯದಲ್ಲಿರುವ ಖಾಸಗಿ ಕಾಲೇಜೊಂದರಲ್ಲಿ ಮಂಗಳವಾರ ನಡೆದಿರುವ ಬಗ್ಗೆ ವರದಿಯಾಗಿದೆ.
ಪ್ರಥಮ ಪಿಯುಸಿ ವಿದ್ಯಾರ್ಥಿನಿಯೋರ್ವಳು ಕಾಲೇಜಿನಲ್ಲಿ ಹೊಟ್ಟೆನೋವು ಎಂದು ಶೌಚಾಲಯಕ್ಕೆ ಹೋದ ಸಂದರ್ಭದಲ್ಲಿ, ಹೆರಿಗೆ ನೋವು ತಾಳಲಾರದೆ ಶೌಚಾಲಯದಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ವಿಷಯ ತಿಳಿದ ಕಾಲೇಜು ಸಿಬ್ಬಂದಿ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲಿಸಿ, ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕೋಲಾರ ಮಹಿಳಾ ಪೊಲೀಸರು ಬಾಲಕಿಯ ಈ ಸ್ಥಿತಿಗೆ ಕಾರಣನಾದವನಿಗೆ ಹುಡುಕಾಟ ನಡೆಸಿದ್ದಾರೆ.
ಪೊಲೀಸರಿಗೆ ಸಿಕ್ಕ ಪ್ರಾಥಮಿಕ ಮಾಹಿತಿ ಪ್ರಕಾರ, ಬಾಲಕಿಯು ಯುವಕನೋರ್ವನನ್ನು ಪ್ರೀತಿಸುತ್ತಿದ್ದಳು. ಆದರೆ, ಆತ ಅದೇ ಕಾಲೇಜಿನ ಯುವಕನಾ ಅಥವಾ ಹೊರಗಿನವನಾ ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಬಾಲಕಿ ಸ್ಥಿತಿ ಕಾರಣನಾದ ಯುವಕನಿಗಾಗಿ ಹುಟುಕಾಟ ನಡೆಸುತ್ತಿದ್ದೇವೆ. ಇಷ್ಟು ದಿನ ಯಾರಿಗೂ ಗೊತ್ತಿರಲಿಲ್ಲವೇ? ಅಥವಾ ಸ್ನೇಹಿತರಿಗೆ ಗೊತ್ತಿದ್ದೂ ವಿಚಾರ ಮುಚ್ಚಿಟ್ಟಿದ್ದರಾ? ಅನ್ನೋ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಗದಗ | ರಘುನಾಥ ಚ.ಹ., ವಿಲಾಸ್ ನಾಂದೋಡ್ಕರ್‌ಗೆ ‘ಡಾ.ತೋಂಟದ ಸಿದ್ಧಲಿಂಗ ಶ್ರೀ ಪುರಸ್ಕಾರ’
“ಮಂಗಳವಾರ ಶೌಚಾಲಯಕ್ಕೆ ತೆರಳಿದಾಗ ಬಾಲಕಿ ಅಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಸದ್ಯ ಬಾಲಕಿಯನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕಿಯ ಈ ಸ್ಥಿತಿಗೆ ಯಾರು ಕಾರಣ ಎಂಬುದನ್ನು ಪತ್ತೆ ಹಚ್ಚಲು ತನಿಖೆ ಕೈಗೊಂಡಿದ್ದೇವೆ. ಇದು ಸೂಕ್ಷ್ಮ ಪ್ರಕರಣ. ಹೆಚ್ಚು ವಿವರಗಳನ್ನು ದೂರವಾಣಿಯಲ್ಲಿ ಕೊಡಲು ಸಾಧ್ಯವಿಲ್ಲ” ಎಂದು ಈ ದಿನ.ಕಾಮ್ ಕೋಲಾರ ಮಹಿಳಾ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದಾಗ ತಿಳಿಸಿದ್ದಾರೆ.
