ಫರಿದಾಬಾದ್‌ನ ಕಾಂಗ್ರೆಸ್ ನಾಯಕನ ಸಹೋದರನಿಗೆ ಗುಂಡಿಕ್ಕಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಭಾನುವಾರ ರಾತ್ರಿ ಈ ಘಟನೆ ನಡೆದಿದೆ.
ನವಾಡ ಕೊಹ್ ಗ್ರಾಮದ ನಿವಾಸಿ, ಸ್ಥಳೀಯ ಕಾಂಗ್ರೆಸ್ ನಾಯಕ ಜ್ಯೋತೇಂದರ್ ಭದಾನ ಸಹೋದರನ ಕುನಾಲ್ ಭದನಾ (32) ಮೃತಪಟ್ಟ ವ್ಯಕ್ತಿ. ಫೋನ್ ಕರೆಯಲ್ಲಿ ಆರಂಭವಾದ ವಾಗ್ವಾದ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಅಪರಾಧ ತನಿಖಾ ವಿಭಾಗದ ಎಸಿಪಿ ಅಮನ್ ಯಾದವ್ ಹೇಳಿದ್ದಾರೆ.
ಆರೋಪಿಗಳನ್ನು ಕೋಟ್ ಗ್ರಾಮದ ನಿವಾಸಿಗಳಾದ ವಿಜಯ್ ಸಿಂಗ್ (48), ವೀರೇಂದ್ರ ಅಲಿಯಾಸ್ ಬಿಲ್ಲು (40), ಫರಿದಾಬಾದ್‌ನ ಎಸ್‌ಜಿಎಂ ನಗರದ ನಿವಾಸಿಗಳಾದ ರಮೇಶ್ (42), ಪ್ರದೀಪ್ ಅಲಿಯಾಸ್ ಕಲ್ಲು (34) ಮತ್ತು ಸಂದೀಪ್ ಅಲಿಯಾಸ್ ಸ್ಯಾಂಡಿ ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ ಜೂನ್ 29ರಂದು, ಪ್ರದೀಪ್ ಮತ್ತು ಭದನಾ ಸ್ನೇಹಿತ ರೋಹಿತ್ ನಡುವೆ ಫೋನ್‌ನಲ್ಲಿ ವಾಗ್ವಾದ ನಡೆದಿದೆ. ಇಬ್ಬರೂ ಕೂಡಾ ಪರಸ್ಪರ ನಿಂದನೆ ಮಾಡಿಕೊಂಡಿದ್ದಾರೆ. ಅದಾದ ಬಳಿಕ ಮರುದಿನ ಪ್ರದೀಪ್ ವಿಜಯ್ ಮತ್ತು ರೋಹಿತ್ ಕುನಾಲ್ ಕೂಡಾ ಕಾನ್ಫರೆನ್ಸ್ ಕರೆಯ ಮೂಲಕ ಪರಸ್ಪರರ ನಿಂದನೆ ಮಾಡಿದ್ದಾರೆ.
ಇದನ್ನು ಓದಿದ್ದೀರಾ? ಪಂಜಾಬ್| ಕೆನಡಾ ಮೂಲದ ಖಲಿಸ್ತಾನಿ ಭಯೋತ್ಪಾದಕ ಲಖ್ಬೀರ್ ಲಾಂಡಾನ ಐವರು ಸಹಾಯಕರ ಬಂಧನ
“ಇದಾದ ಬಳಿಕ ವಿಜಯ್ ಸಿಂಗ್ ತನ್ನ ಸಹೋದರ ವೀರೇಂದ್ರ ಮತ್ತು ಇತರ ಸಹಚರರಾದ ಸಂದೀಪ್, ಪ್ರದೀಪ್ ಮತ್ತು ರಮೇಶ್ ಅವರೊಂದಿಗೆ ಕುನಾಲ್ ಮತ್ತು ಇತರರು ನಿಂತಿದ್ದ ಮಸೀದಿ ಚೌಕ್‌ಗೆ ತಮ್ಮ ಕಾರಿನಲ್ಲಿ ಹೋಗಿದ್ದಾರೆ. ಇಲ್ಲಿ ವಾಗ್ದಾದ ನಡೆದಿದ್ದು ಕುನಾಲ್ ಭದನಾ ಮೇಲೆ ವಿಜಯ್ ಸಿಂಗ್ ಗುಂಡು ಹಾರಿಸಿದ್ದಾನೆ. ಕುನಾಲ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ” ಎಂದು ಎಸಿಪಿ ಮಾಹಿತಿ ನೀಡಿದ್ದಾರೆ.
ಕಾಂಗ್ರೆಸ್ ನಾಯಕ ಜ್ಯೋತೇಂದರ್ ಭದನಾ ದೂರಿನ ಆಧಾರದ ಮೇಲೆ, ದಾಬುವಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಮತ್ತು ಆರೋಪಿಗಳನ್ನು ಬಂಧಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೋಲಿಸರು ಹೇಳಿದ್ದಾರೆ.
“ನನ್ನ ಸಹೋದರನ ಸ್ನೇಹಿತ ನನಗೆ ಮಾಹಿತಿ ನೀಡಿದ ನಂತರ ನಾನು ಸ್ಥಳಕ್ಕೆ ಧಾವಿಸಿದೆ. ವಿಜಯ್ ನನ್ನ ಸಹೋದರನ ಎದೆಗೆ ಗುಂಡು ಹಾರಿಸಿದಾಗ ಬಿಲ್ಲು ನನ್ನ ಸಹೋದರನ ಕೈ ಹಿಡಿದುಕೊಂಡಿರುವುದನ್ನು ನಾನು ನೋಡಿದೆ. ನಂತರ ಅವರು ತಮ್ಮ ಸ್ವಿಫ್ಟ್ ಕಾರಿನಲ್ಲಿ ಪರಾರಿಯಾಗಿದ್ದಾರೆ. ಇತರರ ಸಹಾಯದಿಂದ ನಾನು ಕುನಾಲ್ ಅನ್ನು ಏಷ್ಯನ್ ಆಸ್ಪತ್ರೆಗೆ ಕರೆದೊಯ್ದಿದ್ದೇನೆ. ವೈದ್ಯರು ನನ್ನ ಸಹೋದರ ಸಾವನ್ನಪ್ಪಿರುವುದಾಗಿ ಘೋಷಿಸಿದ್ದಾರೆ” ಎಂದು ಕಾಂಗ್ರೆಸ್ ನಾಯಕ ದೂರಿನಲ್ಲಿ ತಿಳಿಸಿದ್ದಾರೆ.