ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ನಾಗಲಮಡಿಕೆ ಹೋಬಳಿಯ ವೆಂಕಟಮ್ಮನಹಳ್ಳಿಯಲ್ಲಿ 2005ರಲ್ಲಿ ನಡೆದ ಏಳು ಪೊಲೀಸರ ಹತ್ಯಾಕಾಂಡದ ಆರೋಪಿಯೋರ್ವನನ್ನು ಪೊಲೀಸರು 19 ವರ್ಷಗಳ ನಂತರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತನನ್ನು ಮಾಜಿ ನಕ್ಸಲ್ ಚಂದ್ರ ಅಲಿಯಾಸ್ ಬಿ.ಮುತ್ಯಾಲು (36) ಎಂದು ಗುರುತಿಸಲಾಗಿದೆ. ಈತ ಈ ಪ್ರಕರಣದಲ್ಲಿ 75ನೇ ಆರೋಪಿಯಾಗಿದ್ದ.
2005ರ ಫೆಬ್ರುವರಿ 10ರಂದು ವೆಂಕಟಮ್ಮನಹಳ್ಳಿಯಲ್ಲಿ ನಕ್ಸಲರು ದಾಳಿ ನಡೆಸಿ ಏಳು ಪೊಲೀಸರನ್ನು ಹತ್ಯೆ ಮಾಡಿದ್ದು ದೇಶಾದ್ಯಂತ ದೊಡ್ಡ ಸುದ್ದಿಯಾಗಿತ್ತು. ಘಟನೆ ನಡೆದ ನಂತರ ತಲೆಮರೆಸಿಕೊಂಡಿದ್ದ ಆರೋಪಿ ಬಿ.ಮುತ್ಯಾಲು ವಿರುದ್ಧ ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಹೊರಡಿಸಿತ್ತು.
ಕಳೆದ 19 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಈತ, ಆಂಧ್ರದ ಅನಂತಪುರ ಜಿಲ್ಲೆಯ ಗಾರಲದಿನ್ನೆಯ ಕೇಶವಪುರದ ನಿವಾಸಿಯಾಗಿದ್ದು, ಬೆಂಗಳೂರಿನ ಬಿಬಿಎಂಪಿಯಲ್ಲಿ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ಆರೋಪಿಯನ್ನು ಘಟನೆ ನಡೆದು ಒಂದೂವರೆ ದಶಕದ ಬಳಿಕ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದ ಹಿನ್ನೆಲೆಯಲ್ಲಿ, ಪರಪ್ಪನ ಅಗ್ರಹಾರಕ್ಕೆ ಕಳುಹಿಸಲಾಗಿದೆ.
ಪ್ರಕರಣದ ಹಿನ್ನೆಲೆ
ವೆಂಕಟಮ್ಮನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಭದ್ರತಾ ದೃಷ್ಟಿಯಿಂದ ನಿಯೋಜಿಸಿದ್ದ ಕೆಎಸ್‌ಆರ್‌ಪಿ 9ನೇ ಕ್ಯಾಂಪ್‌ನ ಮೇಲೆ ಸುಮಾರು 300ಕ್ಕೂ ಹೆಚ್ಚು ನಕ್ಸಲರ ತಂಡವು 2005ರ ಫೆಬ್ರುವರಿ 10ರಂದು ಏಕಾಏಕಿ ದಾಳಿ ನಡೆಸಿತ್ತು.
ಲಾರಿಗಳಲ್ಲಿ ಬಂದಿದ್ದ ನಕ್ಸಲರು, ಒಮ್ಮೆಲೆ ದಾಳಿ ನಡೆಸಿ ಪೊಲೀಸರ ಬಳಿ ಇದ್ದ ಬಂದೂಕು, ಮದ್ದು ಗುಂಡುಗಳನ್ನು ದೋಚಿದ್ದರು. ನಂತರ ಮನ ಬಂದಂತೆ ಗುಂಡು ಹಾರಿಸಿದ್ದರು. ಘಟನೆಯಲ್ಲಿ, ಏಳು ಮಂದಿ ಪೊಲೀಸರು ಮೃತಪಟ್ಟಿದ್ದರು ಹಾಗೂ ಕ್ಯಾಂಪ್ ಮುಂಭಾಗ ನಿಂತಿದ್ದ ಖಾಸಗಿ ಬಸ್ ಕ್ಲೀನರ್ನನ್ನ ಕೊಲೆ ಮಾಡಲಾಗಿತ್ತು. ತಿರುಮಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ವೆಂಕಟಮ್ಮನಹಳ್ಳಿ ಪೊಲೀಸ್ ಹತ್ಯಾಕಾಂಡ ಪ್ರಕರಣದ ಕುರಿತು ಪಾವಗಡ ಮತ್ತು ಮಧುಗಿರಿ ನ್ಯಾಯಾಲಯದಲ್ಲಿ ಇನ್ನೂ ವಿಚಾರಣೆ ನಡೆಯುತ್ತಿದೆ. ಬಹುತೇಕ ಆರೋಪಿಗಳ ವಿರುದ್ಧ ಕೋರ್ಟ್ ಜಾಮೀನು ರಹಿತ ವಾರಂಟ್ ಹೊರಡಿಸಿದೆ.
ಕೆಲವು ಆರೋಪಿಗಳು ಆಂಧ್ರ ಪ್ರದೇಶ, ಬೆಂಗಳೂರಿನಲ್ಲಿ ಕಾರ್ಮಿಕರಾಗಿ ಜೀವನ ಸಾಗಿಸುತ್ತಿದ್ದಾರೆ. ಪ್ರಕರಣದ ಸಂಬಂಧ ಪೊಲೀಸರು ಆರೋಪಿಗಳನ್ನು ಹಂತ ಹಂತವಾಗಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸುತ್ತಿದ್ದಾರೆ.
ತುಮಕೂರು, ಬೆಂಗಳೂರು ಐಎಸ್‌ಡಿ ವಿಭಾಗದ ನಕ್ಸಲ್ ನಿಗ್ರಹ ಪಡೆ ಮಾಹಿತಿ ಮೇರೆಗೆ ತುಮಕೂರು ಜಿಲ್ಲಾ ವರಿಷ್ಠಾಧಿಕಾರಿಗಳ ತಂಡ, ಸಿಐ ತಂಡವು ತಲೆ ಮರೆಸಿಕೊಂಡಿದ್ದ ಮುತ್ಯಾಲ ಚಂದ್ರುನನ್ನು ಬೆಂಗಳೂರಿನ ಜೆ.ಪಿ.ನಗರದ ಸುರಭಿ ನಗರದ ಮನೆಯಲ್ಲಿ ಬಂಧಿಸಿದ್ದಾರೆ.

ಕಳೆದ ಮೇ ತಿಂಗಳಲ್ಲಿ ಬೆಂಗಳೂರಿನ ಗೌರಿಪಾಳ್ಯದಲ್ಲಿ ವಾಸವಿದ್ದುಕೊಂಡು ಬಿಬಿಎಂಪಿಯಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಶಂಕರ ಅಲಿಯಾಸ್ ಕೊತ್ತಗೆರೆ ಶಂಕರ (38) ಎಂಬಾತನನ್ನು ಕೂಡ ಬಂಧಿಸಲಾಗಿತ್ತು.
