ಮಧ್ಯಾಹ್ನದ ವೇಳೆ ಹೊರಾಂಗಣ ಪ್ರದೇಶಗಳಲ್ಲಿ ಜನರ ಗುಂಪು ಸೇರುವ ಯಾವುದೇ ಕಾರ್ಯಕ್ರಮ ಆಯೋಜನೆಗೊಂಡರೆ ಸಭಿಕರಿಗೆ ಬಿಸಿಲಿನಿಂದ ರಕ್ಷಣೆ ನೀಡುವ ವ್ಯವಸ್ಥೆಯಾಗಬೇಕು ಎಂದು ಆರೋಗ್ಯ ಇಲಾಖೆ ಸೂಚನೆ ನೀಡಿದೆ.
- ಪ್ರಸ್ತುತ, ರಾಜ್ಯದಲ್ಲಿ ಬೇಸಿಗೆಯ ತಾಪ ಹೆಚ್ಚುತ್ತಿರುವ ಹಿನ್ನೆಲೆ, ಅತಿಯಾದ ಉಷ್ಮಾಂಶದಿಂದ ಉಂಟಾಗುವ ಅನಾರೋಗ್ಯ ಪರಿಸ್ಥಿತಿಗಳನ್ನು ಮುಂಜಾಗ್ರತೆಯಿಂದ ನಿಭಾಯಿಸಬೇಕಾಗಿದೆ. ಬಿಸಿಲಿನ ಝಳ ಹೆಚ್ಚಿರುವ ಸಮಯದಲ್ಲಿ ಪಾಲಿಸಬೇಕಾದ ಕ್ರಮಗಳ ಕುರಿತು ರಾಜ್ಯ ಆರೋಗ್ಯ ಇಲಾಖೆ ಬುಧವಾರ ಸುತ್ತೋಲೆ ಹೊರಡಿಸಿದೆ.
- ಬೆಳಿಗ್ಗೆ 11-00 ಗಂಟೆಯಿಂದ ಸಂಜೆ 4-00 ಗಂಟೆ ಅವಧಿಯಲ್ಲಿ ಹೊರಾಂಗಣ ಪ್ರದೇಶಗಳಲ್ಲಿ ಯಾವುದೇ ಸಭೆ/ಕಾರ್ಯಕ್ರಮಗಳನ್ನು ಆಯೋಜಿಸುವ ಅನಿವಾರ್ಯತೆ ಇದ್ದಲ್ಲಿ, ಪೆಂಡಾಲ್ ಅಥವಾ ಶಾಮಿಯಾನ ಹಾಕಿ ಸಭಿಕರ ಆರೋಗ್ಯದ ಬಗ್ಗೆ ಜಾಗೃತಿ ವಹಿಸಬೇಕು. ಈ ನಿಯಮ ಪಾಲನೆಯಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಲು ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ ನೀಡಿದೆ.
- ಈ ಹಿಂದೆ ಬೆಂಗಳೂರಿನಲ್ಲಿ ಏಪ್ರಿಲ್ ತಿಂಗಳಲ್ಲಿ 34 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿತ್ತು. ಪ್ರಸಕ್ತ ವರ್ಷದಲ್ಲಿ ತಾಪಮಾನವು 35-36.5 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ ಎನ್ನಲಾಗಿದೆ.
- ಬೆಂಗಳೂರು ಹೊರತು ಪಡಿಸಿ ಬೇರೆ ಜಿಲ್ಲೆಗಳಲ್ಲಿ 40 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿದೆ. ಕರಾವಳಿ ಪ್ರದೇಶದಲ್ಲಿರುವ ಸಾರ್ವಜನಿಕರಿಗೆ ಈ ಬಾರಿಯ ಬೇಸಿಗೆಯ ಧಗೆ ಶಾಖ ಸಂಬಂಧಿತ ಕಾಯಿಲೆಗಳಿಗೆ ತಂದೊಡ್ಡುತ್ತವೆ ಎಂದು ಆರೋಗ್ಯ ಇಲಾಖೆ ಹೇಳಿದೆ.
- ಶಾಲಾ ರಜಾ ದಿನಗಳು ಇರುವುದರಿಂದ ಮಕ್ಕಳು ಸೇರಿದಂತೆ ಪೋಷಕರು ಪ್ರವಾಸ ತಾಣಗಳಿಗೆ ಭೇಟಿ ನೀಡುವುದು ಅಥವಾ ಹೊರಗಿರುವುದು ಸಾಮಾನ್ಯ. ರಾಜ್ಯ ವಿಧಾನಸಭಾ ಚುನಾವಣೆ ನಿಮಿತ್ತ ಪ್ರಚಾರ ಕಾರ್ಯಕ್ರಮ ನಡೆಯುತ್ತವೆ. ಇಂತಹ ಕಾರ್ಯಕ್ರಮ ಪ್ರವಾಸಿ ತಾಣ ತಲುಪುವ ಮುನ್ನ ನಿರ್ಜಲೀಕರಣ ಮತ್ತು ಸುಸ್ತು ಆಗದಿರಲು ಹೆಚ್ಚೆಚ್ಚು ನೀರನ್ನು ಕುಡಿಯಬೇಕು.
- ಸಾರ್ವಜನಿಕ ಕಾರ್ಯಕ್ರಮಗಳನ್ನು ನಡೆಸುವಾಗ, ಸಾಕಷ್ಟು ಕುಡಿಯುವ ನೀರಿನ ವ್ಯವಸ್ಥೆ ಇರುವಂತೆ ನಿಗಾ ವಹಿಸಬೇಕು. ಬೇಸಿಗೆ ಸಮಯದಲ್ಲಿ ‘ಹೀಟ್ ಸ್ಟ್ರೋಕ್’ನಂತಹ ಕಾಯಿಲೆಯಿಂದ ತಪ್ಪಿಸಿಕೊಳಲು ನೀರಿನ ಅವಶ್ಯಕತೆ ಹೆಚ್ಚಿದೆ.
- ತಾಪಮಾನಕ್ಕೆ ಸಂಭವಿಸುವ ಆರೋಗ್ಯ ಸಮಸ್ಯೆಗಳಿಗೆ ಹಿರಿಯರು ಮತ್ತು ಮಕ್ಕಳು ತುತ್ತಾಗುವ ಸಂಭವವಿದೆ.ಹೀಗಾಗಿ, ರಜಾ ದಿನವೆಂದು ಮದ್ಯಾಹ್ನದ ವೇಳೆ ಮನೆಯಿಂದ ಹೊರ ಹೋಗಲು ಅಥವಾ ಬಿಸಿಲಿನಲ್ಲಿ ಆಡಲು ಬಿಡದಿರಲು ಸಲಹೆ ನೀಡಲಾಗಿದೆ.
- ಬಿಸಿಲಿನಲ್ಲಿ ಪ್ರಯಾಣ ಮಾಡುವಾಗ ಕಡ್ಡಾಯವಾಗಿ ಛತ್ರಿ ಬಳಸಬೇಕು. ಕಪ್ಪು ಬಣ್ಣ ಬಿಸಿಲನ್ನು ಹೆಚ್ಚು ಆಕರ್ಷಿಸಿಕೊಳ್ಳುವುದರಿಂದ ಆ ಬಣ್ಣದ ಛತ್ರಿಯನ್ನು ನಿಷೇಧಿಸಿ ಬಿಳಿ ಅಥವಾ ಬೇರೆ ಬಣ್ಣದ ಛತ್ರಿಗಳನ್ನು ಬಳಸುವುದು ಉತ್ತಮ. ಚರ್ಮ ಕಾಪಾಡಿಕೊಳ್ಳಲು ‘ಸನ್‌ಸ್ಕ್ರೀನ್’ ಲೋಷನ್ ಬಳಸಬೇಕು.
- ಬೇಸಿಗೆಯಲ್ಲಿ ನೀರಿನಾಂಶವಿರುವ ಹಣ್ಣು, ತರಕಾರಿಯಾದ ಸೌತೆಕಾಯಿ, ಕಲ್ಲಂಗಡಿ, ಖರ್ಬೂಜ ಹಾಗೂ ಮೂಸಂಬಿ ಸೇರಿದಂತೆ ಸುಲಭವಾಗಿ ಜೀರ್ಣವಾಗುವವಂತಹ ಆಹಾರವನ್ನೇ ಸೇವಿಸಬೇಕು.
- ಬೇಸಿಗೆಯಲ್ಲಿ ತಿಂದ ಆಹಾರ ಜೀರ್ಣವಾಗುವುದು ಕಡಿಮೆಯಾಗುವ ಕಾರಣ ಟೀ ಮತ್ತು ಕಾಫಿ, ಮದ್ಯಪಾನ ಮಾಡುವುದನ್ನು ಬೇಸಿಗೆ ಪೂರ್ಣಗೊಳ್ಳುವವರೆಗೂ ತ್ಯಜಿಸಿದರೆ ಒಳ್ಳೆಯದು. ಮೈ ಸುಡುವಂತೆ ಭಾಸವಾಗುವ ಸಿಂಥೆಟಿಕ್ ಬಟ್ಟೆ ಧರಿಸದೆ ಹತ್ತಿ ಬಟ್ಟೆಗಳನ್ನು ಧರಿಸುವುದು ಉತ್ತಮ ಎಂದು ಆರೋಗ್ಯ ಇಲಾಖೆ ಹೇಳಿದೆ.
ಈ ಸುದ್ದಿ ಓದಿದ್ದೀರಾ?: ಕೊಪ್ಪಳ | ತಾಪಮಾನ ಹೆಚ್ಚಳ; ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಲು ಸೂಚನೆ