ಬೆಂಗಳೂರಿನಿಂದ ತುಮಕೂರು-ಅರಸೀಕೆರೆ ಮಾರ್ಗದಲ್ಲಿ ಹೆಚ್ಚುವರಿ ರೈಲುಗಳು ಸಂಚರಿಸುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪ್ರಯಾಣಿಕರು ಕೇಂದ್ರ ಸಚಿವ ವಿ ಸೋಮಣ್ಣ ಅವರಿಗೆ ಮನವಿ ಮಾಡಿದ್ದಾರೆ.
ರೈಲಿನಲ್ಲಿ ಪ್ರಯಾಣಿಕರಿಂದ ದಟ್ಟಣೆ ಉಂಟಾಗಿರುವ ಫೋಟೋಗಳ ಮೂಲಕ ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವ ವಿ ಸೋಮಣ್ಣ ಅವರ ಗಮನ ಸೆಳೆಯಲು ಪ್ರಯಾಣಿಕರು ಮುಂದಾಗಿದ್ದಾರೆ.
“ಬೆಂಗಳೂರಿನಿಂದ ತುಮಕೂರಿಗೆ ಸಂಜೆ ವೇಳೆ ಚಲಿಸುವ ವಿಶೇಷ ಪ್ಯಾಸೆಂಜರ್ ಹಾಗೂ ಗೋಲ್‌ಗುಂಬಸ್ ರೈಲುಗಳಲ್ಲಿ ನಿಲ್ಲಲು ಜಾಗವಿಲ್ಲದೆ ಪ್ರಯಾಣಿಕರು ಹೈರಾಣಾಗುತ್ತಿದ್ದು, ಹೆಚ್ಚುವರಿ ಜನರಲ್ ಬೋಗಿಗಳು ಅಥವಾ ಹೆಚ್ಚುವರಿ ರೈಲುಗಳ ಸಂಚಾರಕ್ಕೆ ಕ್ರಮ ಕೈಗೊಳ್ಳಬೇಕು. ಅರಸೀಕೆರೆ, ತಿಪಟೂರು, ಗುಬ್ಬಿ, ತುಮಕೂರು ಸೇರಿದಂತೆ ಈ ಭಾಗದ ವಿವಿಧೆಡೆಗಳಿಂದ ಸಾವಿರಾರು ಮಂದಿ ಸರ್ಕಾರಿ, ಅರೆ ಸರ್ಕಾರಿ, ಖಾಸಗಿ, ವ್ಯಾಪಾರ-ವ್ಯವಹಾರ ಸೇರಿದಂತೆ ಹಲವು ಉದ್ದೇಶಗಳಿಗಾಗಿ ಬೆಂಗಳೂರಿಗೆ ರೈಲಿನಲ್ಲಿ ಪ್ರಯಾಣಿಸುತ್ತಾರೆ” ಎಂದು ತಿಳಿಸಿದ್ದಾರೆ.
“ಕೆಲ ಎಕ್ಸ್‌ಪ್ರೆಸ್ ರೈಲುಗಳು ನಿರ್ಧಿಷ್ಟ ನಿಲ್ದಾಣಗಳಲ್ಲಿ ನಿಲುಗಡೆ ಮಾಡುವುದನ್ನು ಬಿಟ್ಟರೆ ಉಳಿಡೆದೆ ನಿಲ್ಲಿಸುವುದಿಲ್ಲ. ಹಾಗಾಗಿ ಪ್ಯಾಸೆಂಜರ್ ರೈಲಿಗೆ ಬಹಳ ಬೇಡಿಕೆ ಇದೆ. ಈ ಪ್ಯಾಸೆಂಜರ್ ರೈಲಿನಲ್ಲಿ ನಿತ್ಯ ಸಾವಿರಾರು ಪ್ರಯಾಣಿಕರು ಪ್ರಯಾಣಿಸುತ್ತಾರೆ. ಆದರೆ ಈ ರೈಲಿನ ಬೋಗಿಗಳಲ್ಲಿ ಜನ ನಿಲ್ಲಲು ಜಾಗ ಇಲ್ಲದಷ್ಟರ ಮಟ್ಟಿಗೆ ಪ್ರಯಾಣಿಕರು ತುಂಬಿರುತ್ತಾರೆ. ಒಮ್ಮೊಮ್ಮೆ ಬೋಗಿಗಳಲ್ಲಿ ಉಸಿರಾಡಲೂ ಜಾಗ ಇರುವುದಿಲ್ಲ” ಎಂದು ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ರೈಲುಗಳಲ್ಲಿ ಉಸಿರುಗಟ್ಟಿ ಪ್ರಯಾಣಿಸಬೇಕಾದ ವಾತಾವರಣ ಸೃಷ್ಟಿಯಾಗಿರುತ್ತದೆ. ಅದರಲ್ಲೂ ಬೆಳಿಗ್ಗೆ ಮತ್ತು ಸಂಜೆ ವೇಳೆ ವೃದ್ಧರು, ಮಕ್ಕಳು, ಮಹಿಳೆಯರು ರೈಲುಗಾಡಿಗಳಲ್ಲಿ ಪ್ರಯಾಣಿಸುವುದು ಬಹಳ ದುಸ್ತರವಾಗಿದೆ. ಹಾಗಾಗಿ ಈ ಬಗ್ಗೆ ರೈಲ್ವೆ ಅಧಿಕಾರಿಗಳು ಹಾಗೂ ಸಚಿವ ವಿ ಸೋಮಣ್ಣ ಅವರು ಈ ಬಗ್ಗೆ ಗಮನಹರಿಸಿ ಬೆಳಿಗ್ಗೆ ಮತ್ತು ಸಂಜೆ ವೇಳೆಯಲ್ಲಿ ಹೆಚ್ಚುವರಿ ರೈಲುಗಳು ಸಂಚರಿಸುವಂತೆ ಕ್ರಮ ಕೈಗೊಳ್ಳಬೇಕು” ಎಂದು ಪ್ರಯಾಣಿಕರು ಮನವಿ ಮಾಡಿದ್ದಾರೆ.
“ಸಂಜೆ 6.20ಕ್ಕೆ ಮೆಜೆಸ್ಟಿಕ್‌ನಿಂದ ವಿಶೇಷ ಪ್ಯಾಸೆಂಜರ್ ರೈಲು ಹೊರಡಲಿದೆ. ಹಾಗೆಯೇ ಸಂಜೆ 6.40ಕ್ಕೆ ಗೋಲ್‌ಗುಂಬಸ್ ಎಕ್ಸ್‌ಪ್ರೆಸ್ ರೈಲು ಹೊರಡುತ್ತದೆ. ಈ ಅವಧಿಯಲ್ಲಿ ರಾಜಧಾನಿ ಬೆಂಗಳೂರಿಗೆ ವಿವಿಧ ಉದ್ದೇಶಗಳಿಗಾಗಿ ತೆರಳಿದ್ದ ಜನರು ತಮ್ಮ ತಮ್ಮ ಊರುಗಳಿಗೆ ಹೋಗಲು ತುದಿಗಾಲಲ್ಲಿ ನಿಂತಿರುತ್ತಾರೆ. ಈ ಎರಡೂ ರೈಲುಗಾಡಿಗಳ ಬೋಗಿಗಳಲ್ಲಿ ಜನ ನಿಲ್ಲಲು ಜಾಗ ಇಲ್ಲದೆ ಹೈರಾಣಾಗುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಇದು ಒಂದು-ಎರಡು ದಿನದ ಕಥೆಯಲ್ಲ, ವರ್ಷೊಂಬತ್ಕಾಲ ಇದೇ ಪರಿಸ್ಥಿತಿಯಲ್ಲಿ ಜನರು ಪ್ರಯಾಣಿಸಬೇಕಾಗಿದೆ. ಪ್ರಯಾಣಿಕರ ಸುರಕ್ಷತೆ ಬಗ್ಗೆ ಯಾವೊಬ್ಬ ಅಧಿಕಾರಿಗಳೂ ಕೂಡ ಗಮನಹರಿಸುತ್ತಿಲ್ಲ” ಎಂದು ಪ್ರಯಾಣಿಕರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
“ಗೋಲ್‌ಗುಂಬಸ್ ರೈಲಿನಲ್ಲಿ ಎರಡು ಅಥವಾ ಮೂರು ಮಾತ್ರ ಜನರಲ್ ಬೋಗಿಗಳು ಇರುತ್ತವೆ. ಉಳಿದಂತೆ ರಿಸರ್ವ್ ಬೋಗಿಗಳು ಇವೆ. ಈ ರೈಲಿಗೆ ಟಿಕೆಟ್ ಪಡೆದಿರುವ ಮತ್ತು ಪಾಸ್ ಹೊಂದಿರುವ ಪ್ರಯಾಣಿಕರೂ ಬರುತ್ತಾರೆ. ಆಗ ಇರುವ 2-3 ಜನರಲ್ ಬೋಗಿಯಲ್ಲಿ ಕಾಲಿಡಲು ಸಹ ಜಾಗ ಇಲ್ಲದೇ ಪರದಾಡುವಂತಹ ವಾತಾವರಣ ಸೃಷ್ಟಿಯಾಗುತ್ತಲೇ ಇರುತ್ತದೆ. ಈ ಬಗ್ಗೆ ರೈಲ್ವೆ ಟಿ ಸಿಗಳು ಗಮನ ಹರಿಸುವುದಿಲ್ಲ. ಜತೆಗೆ ಪ್ರಯಾಣಿಕರೊಂದಿಗೆ ಸೌಜನ್ಯವಾಗಿ ವರ್ತಿಸಿ ಮಾಹಿತಿ ನೀಡುವುದಿಲ್ಲ. ಇದರಿಂದ ಪಾಸ್ ಹೊಂದಿರುವವರು ಹಾಗೂ ಟಿಕೆಟ್ ಪಡೆದು ಪ್ರಯಾಣಿಸುವ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ” ಎಂದು ಪ್ರಯಾಣಿಕರು ದೂರಿದ್ದಾರೆ.
ಈ ಸುದ್ದಿ ಓದಿದ್ದೀರಾ? ಹಾವೇರಿ | ವಿದ್ಯಾರ್ಥಿಗಳು ಹಕ್ಕಿಗಾಗಿ ಹೋರಾಡಲು ಸಂಘಟಿತರಾಗಬೇಕು: ಎಸ್ಎಫ್ಐ ರಾಜ್ಯಾಧ್ಯಕ್ಷ ಅಮರೇಶ್
“ಗೋಲ್‌ಗುಂಬಸ್ ರೈಲಿನಲ್ಲಿ ಇನ್ನೂ ಹೆಚ್ಚುವರಿ ಜನರಲ್ ಬೋಗಿಗಳನ್ನು ಅಳವಡಿಸಿದರೆ ನಿತ್ಯವೂ ಪ್ರಯಾಣಿಸುವ ಪ್ರಯಾಣಿಕರಿಗೆ ತುಂಬಾ ಅನುಕೂಲವಾಗಲಿದೆ. ಈ ಬಗ್ಗೆಯೂ ಸಚಿವರು ಗಮನಹರಿಸಿ ಕ್ರಮ ಕೈಗೊಳ್ಳಬೇಕು” ಎಂದು ಪ್ರಯಾಣಿಕರು ಮನವಿ ಮಾಡಿದ್ದಾರೆ.