ಅಸ್ಸಾಂ ಪ್ರವಾಹ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ರಾಜ್ಯದ 29 ಜಿಲ್ಲೆಗಳ 16.50 ಲಕ್ಷ ಮಂದಿ ತೊಂದರೆಗೊಳಗಾಗಿದ್ದಾರೆ. ರಾಜ್ಯದಾದ್ಯಂತ ಎಲ್ಲ ನದಿಗಳು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿವೆ ಎಂದು ಅಧಿಕೃತ ವರದಿಗಳು ತಿಳಿಸಿವೆ.
ಕಾಮರೂಪಿ ಜಿಲ್ಲೆಯ ಬ್ರಹ್ಮಪುತ್ರ, ದಿಗರು ಹಾಗೂ ಕೊಲ್ಲಾಂಗ್ ನದಿಗಳು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿರುವುದರಿಂದ ಜನವಸತಿ ಹಾಗೂ ಕೃಷಿ ಭೂಮಿಗಳು ಜಲಾವೃತವಾಗಿವೆ.
ಪರಿಸ್ಥಿತಿಯ ಗಂಭೀರತೆಯನ್ನು ಅರಿಯಲು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಗುವಾಹಟಿಯ ಪ್ರವಾಹ ಪೀಡಿತ ಪ್ರದೇಶಗಳಾದ ಮಲಿಗಾವ್, ಪಂಡು ಬಂದರು ಹಾಗೂ ದೇಗುಲ ಘಟ್ಟಗಳ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ.
ಹಿಮಂತ ಬಿಸ್ವಾ ಶರ್ಮಾ ಅವರು ಪ್ರವಾಹ ಪರಿಸ್ಥಿತಿಗಳ ಬಗ್ಗೆ ಅವಲೋಕಿಸಲು ಬುಧವಾರ ರಾತ್ರಿ ಎಲ್ಲ ಜಿಲ್ಲೆಗಳ ಆಯುಕ್ತರೊಂದಿಗೆ ಸಭೆ ನಡೆಸಿದ್ದು, ನಿಯಮಾವಳಿಗಳ ಪ್ರಕಾರ ಪರಿಹಾರ ನೀಡಬೇಕೆಂದು ನಿರ್ದೇಶಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಅಸ್ಸಾಂ ಪ್ರವಾಹದಿಂದ 26 ಸಾವು, 1.61 ಲಕ್ಷ ಮಂದಿ ನಿರಾಶ್ರಿತ
ಆಗಸ್ಟ್ ತಿಂಗಳೊಳಗೆ ಎಲ್ಲ ಪುನರ್ವಸತಿ ಶಿಬಿರಗಳನ್ನು ಪೂರ್ಣಗೊಳಿಸಬೇಕು ಹಾಗೂ ಪರಿಹಾರ ನೀಡಿಕೆಯ ಬಗ್ಗೆ ಮುಖ್ಯ ಕಚೇರಿಗೆ ಖಚಿತ ಮಾಹಿತಿ ಒದಗಿಸಬೇಕು ಎಂದು ತಿಳಿಸಿದ್ದಾರೆ.
ಮುಂದಿನ ಮೂರು ದಿನಗಳಲ್ಲಿ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಸಂಪುಟ ದರ್ಜೆ ಸಚಿವರು ವಾಸ್ತವ್ಯ ಹೂಡಲಿದ್ದಾರೆ.
ಅಸ್ಸಾಂನಲ್ಲಿ ಪ್ರವಾಹ, ಭೂಕುಸಿತ ಹಾಗೂ ಚಂಡ ಮಾರುತದಿಂದ ಸಾವಿನ ಸಂಖ್ಯೆ 56ಕ್ಕೆ ಏರಿಕೆಯಾಗಿದೆ. ಧಿಬ್ರು ಅತ್ಯಂತ ಹೆಚ್ಚು ತೊಂದರೆಗೊಳಗಾದ ಜಿಲ್ಲೆಯಾಗಿದ್ದು, 2.23 ಲಕ್ಷ ಮಂದಿ ಅಪಾಯದ ಸ್ಥಿತಿ ಎದುರಿಸುತ್ತಿದ್ದಾರೆ. ದರಾಂಗ್‌ನಲ್ಲಿ 1.84 ಲಕ್ಷ ಹಾಗೂ ಲಕೀಂಪುರದಲ್ಲಿ 1.66 ಲಕ್ಷ ಜನರಿಗೆ ತೊಂದರೆಯಾಗಿದೆ.
