“ಬಿಜೆಪಿ ಮತ್ತು ಸಂಘ ಪರಿವಾರದವರು ತೋರಿಕೆಗಾಗಿ ವಿವೇಕಾನಂದರನ್ನು ಎಷ್ಟೇ ಆರಾಧಿಸಿದರೂ, ಅವರ ಆಂತರ್ಯದೊಳಗೆ ಸ್ವಾಮಿ ವಿವೇಕಾನಂದ ಬಗ್ಗೆ ಎಷ್ಟು ಅಸಹನೆ ಇದೆ ಎಂಬುದಕ್ಕೆ ರಾಜ್ಯ ಬಿಜೆಪಿ ಕಾರ್ಯಕಾರಣಿ ವಿಶೇಷ ಸಭೆಯಲ್ಲಿ ನಡೆದಿರುವ ಘಟನೆ ಸಾಕ್ಷಿ” ಎಂದು ಸಿ ಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಎಕ್ಸ್ ತಾಣದಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಅವರು, “ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಧಾಮೋಹನ್ ದಾಸ್ ಅಗರ್ವಾಲ್ ಅವರು ವೇದಿಕೆಯ ಮೇಲೆ ಕಾರ್ಯಕ್ರಮದಲ್ಲಿ ವಿವೇಕಾನಂದರ ಭಾವಚಿತ್ರ ಯಾಕಿದೆ? ಎಂದು ಪ್ರಶ್ನಿಸುವ ಮೂಲಕ ಬಹಿರಂಗವಾಗಿಯೇ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ವಿವೇಕಾನಂದರ ಪುಣ್ಯಸ್ಮರಣೆಯ ದಿನದಂದೇ ಅವರನ್ನು ಅವಮಾನಿಸುವ ಮೂಲಕ ಬಿಜೆಪಿ ಇಡೀ ಹಿಂದೂ ಸಮಾಜಕ್ಕೆ ಅವಮಾನಗೈದಿದೆ” ಎಂದಿದ್ದಾರೆ.
“ಸಂಘಪರಿವಾರದವರೂ ವಿವೇಕಾನಂದರನ್ನು ಎಷ್ಟೇ ಹೊತ್ತು ಮುದ್ದಾಡಿದರೂ ಅವರು ಇಂದಿಗೂ ಬಿಜೆಪಿಗೆ ಪೂರ್ಣವಾಗಿ ದಕ್ಕಿಲ್ಲ, ಮುಂದೆ ದಕ್ಕುವುದೂ ಇಲ್ಲ. ವಿವೇಕಾನಂದರು ದ್ವೇಷದ ಬದಲಾಗಿ ಸಹೋದರತ್ವವನ್ನು, ಮೌಢ್ಯದ ಬದಲಾಗಿ ವೈಜ್ಞಾನಿಕ ಚಿಂತನೆಯನ್ನು, ಕೋಮುಗಲಭೆಗಳಿಗೆ ಬದಲಾಗಿ ಸರ್ವಧರ್ಮ ಸಹಬಾಳ್ವೆಯನ್ನು ಹಿಂದೂ ಧರ್ಮದ ನೆಲೆಗಟ್ಟಿನಲ್ಲಿ ಪ್ರಚುಪಡಿಸಿದವರು” ಎಂದು ಹೇಳಿದ್ದಾರೆ.
“ಜಾಗತಿಕ ಸರ್ವಧರ್ಮ ಸಮ್ಮೇಳನದಲ್ಲಿ ಜಗತ್ತಿನ ನೂರಾರು ದೇಶಗಳಿಂದ ಆಗಮಿಸಿದ್ದ ಹತ್ತು ಹಲವು ಧರ್ಮ, ಸಂಸ್ಕೃತಿ, ಭಾಷೆಯ ಜನರನ್ನು ಮೈ ಡಿಯರ್ ಬ್ರದರ್ಸ್ ಎಂಡ್ ಸಿಸ್ಟರ್ಸ್ (ನನ್ನ ಪ್ರೀತಿಯ ಸಹೋದರ, ಸಹೋದರಿಯರೇ) ಎಂದು ಸಂಬೋಧಿಸಿದ್ದ ವಿವೇಕಾನಂದರು, ವಿಶ್ವಮಾನವ ಚಿಂತನೆಯೇ ಹಿಂದೂ ಧರ್ಮವೆಂದು ಹೇಳಿದವರು. ಆದರೆ ಬಿಜೆಪಿ ನಾಯಕರು ಬಾಯಿ ತೆರೆದರೆ ಹೊಡಿ, ಬಡಿ, ಕೊಲ್ಲು ಎಂದು ಹಿಂಸೆಗೆ ಪ್ರಚೋದನೆ ನೀಡುತ್ತಾರೆ” ಎಂದು ಟೀಕಿಸಿದರು.
“ಧರ್ಮ ರಕ್ಷಣೆಯ ಹೆಸರಲ್ಲಿ ದ್ವೇಷ ಬಿತ್ತುವ ಬಿಜೆಪಿಗೆ ವಿವೇಕಾನಂದರ ಈ ಚಿಂತನೆಗಳು ರುಚಿಸದು. ಇದಕ್ಕೆ ಪ್ರಧಾನಿ ನರೇಂದ್ರ ಮೋದಿಯೂ ಹೊರತಾಗಿಲ್ಲ. ಇದೇ ಕಾರಣಕ್ಕೆ ಸಾವಿರಾರು ಜನರು ತುಂಬಿದ್ದ ಸಭೆಯಲ್ಲೇ ವಿವೇಕಾನಂದರ ಫೋಟೊ ಯಾಕಿದೆ? ಎಂದು ಕೇಳುವ ಧೈರ್ಯವನ್ನು ರಾಧಾಮೋಹನ್ ದಾಸ್ ಅವರು ಮಾಡಿದ್ದಾರೆ” ಎಂದಿದ್ದಾರೆ.
“ಓರ್ವ ಸಂತನಾಗಿ, ದಾರ್ಶನಿಕರಾಗಿ, ಮಹಾನ್ ಮಾನವತಾವಾದಿಯಾಗಿ ಸರ್ವರಿಂದಲೂ ಗೌರವಿಸಲ್ಪಡುವ, ಅನುಸರಿಸಲ್ಪಡುವ ವಿವೇಕಾನಂದರಿಗೆ ಅವಮಾನ ಮಾಡಿರುವ ಬಿಜೆಪಿ ಪಕ್ಷ ಅದೇ ವೇದಿಕೆಯಲ್ಲೇ ಬಹಿರಂಗ ಕ್ಷಮೆ ಕೇಳಬೇಕು” ಎಂದು ಆಗ್ರಹಿಸಿದ್ದಾರೆ.