“ಸಂಶೋಧಕರು ವಿಚಾರ, ಆಚಾರ ಮತ್ತು ಅಧಿಕಾರ ನಡುವೆ ಇರುವ ಸಂಬಂಧವನ್ನು ಅರ್ಥ ಮಾಡಿಕೊಳ್ಳಬೇಕು. ಸಾಂಪ್ರದಾಯಿಕ ಚೌಕಟ್ಟನ್ನು ಮೀರಿದಾಗ ಮಾತ್ರ ಹೊಸ ಚಿಂತನೆ ಹುಟ್ಟಲು ಸಾಧ್ಯ” ಎಂದು ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಚಂದ್ರ ಪೂಜಾರಿ ಹೇಳಿದರು.
ವಿಜಯಪುರ ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಮಹಿಳಾ ಅಧ್ಯಯನ ಕೇಂದ್ರ ಹಾಗೂ ಪ. ಹಾ, ಪ. ಪಂ ನಿರ್ದೇಶನಾಲಯದ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ‘ಸಂಶೋಧನಾ ವೈಧಾನಿಕತೆ’ ಕಾರ್ಯಾಗಾರದ 2ನೇ ದಿನದ ಕಾರ್ಯಾಗಾರದ ಮೊದಲನೆ ಗೋಷ್ಠಿಯಲ್ಲಿ ಅವರು ಮಾತನಾಡಿದರು.
“ಸಾಮಾಜಿಕ ಜಗತ್ತಿನಲ್ಲಿ ಹಲವು ಸಂಶೋಧನಾ ಸಮಸ್ಯೆಗಳು ಇವೆ. ಅವುಗಳನ್ನು ಗ್ರಹಿಸುವ, ಸಂಶೋಧನೆಯ ಚೌಕಟ್ಟಿನಲ್ಲಿ ತರುವ ಕೆಲಸವನ್ನು ಸಂಶೋಧಕರುಗಳು ಮಾಡಬೇಕಾಗುತ್ತದೆ. ಸಂಶೋಧಕರು ತಾವು ಆಯ್ಕೆ ಮಾಡಿಕೊಂಡ ವಿಷಯದ ಕುರಿತು ಸಂಬಂಧಿಸಿದ ಸಾಹಿತ್ಯವನ್ನು ನಿರಂತರ ಅಧ್ಯಯನ ಮಾಡಬೇಕು.
ಸಾಹಿತ್ಯ ಅವಲೋಕನ ಸಂಶೋಧನೆಯ ಮೊದಲ ಹೆಜ್ಜೆ” ಎಂದು ಅಭಿಪ್ರಾಯಿಸಿದರು.
“ಸಂಶೋಧಕರುಗಳು ಸಂಶೋಧನಾ ಪರಿಕಲ್ಪನೆಗಳನ್ನು ಸರಿಯಾಗಿ ಅರ್ಥೈಸುವ, ವ್ಯಾಖ್ಯಾನಿಸುವ, ಪರೀಕ್ಷಿಸುವ ಹಾಗೂ ವಿಮರ್ಶಿಸುವ ಜ್ಞಾನವನ್ನು ಪಡೆಯಬೇಕಾಗುತ್ತದೆ. ಜ್ಞಾನ ಒಂದು ಕ್ಷಣಕ್ಕೆ, ಗಂಟೆಗೆ. ದಿನಕ್ಕೆ ಬರುವುದಿಲ್ಲ” ಎಂದು ತಿಳಿಸಿದರು.
“ಜ್ಞಾನವು ನಿರಂತರವಾದ ಅಧ್ಯಯನ, ಆಲೋಚನೆಯಿಂದ ಮಾತ್ರ ಬರುತ್ತದೆ. ಸಂಶೋಧಕರುಗಳಿಗೆ ಸೂಕ್ಷ್ಮತೆ ಇರಬೇಕಾಗುತ್ತದೆ. ಸಂಶೋಧನಾ ಸಮಸ್ಯೆಗಳಿಗೆ ಉತ್ತರಗಳನ್ನು ಸೈದ್ಧಾಂತಿಕವಾಗಿ, ತಾರ್ಕಿಕವಾಗಿ, ಕ್ರಿಯಾತ್ಮಕವಾಗಿ ಹುಡುಕಬೇಕಾಗುತ್ತದೆ. ಈ ಹುಡುಗಾಡುವಿಕೆಯು ನಿರಂತರವಾದ ಕ್ರಿಯೆ ಮತ್ತು ಪ್ರಕ್ರಿಯೆಯಾಗಿರುತ್ತದೆ. ಸಾಮಾಜಿಕ ಸಂಶೋಧನೆಗಳು ಜಗತ್ತಿನಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ” ಎಂದು ಪ್ರೊ. ಚಂದ್ರ ಪೂಜಾರಿ ಹೇಳಿದರು.
ಬಳ್ಳಾರಿಯ ಕೃಷ್ಣದೇವರಾಯ ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ಅಧ್ಯಯನ ವಿಭಾಗದ ಪ್ರೊ.ಅರುಣಕುಮಾರ ಲಗಶೆಟ್ಟಿ ಮಾತನಾಡಿ, “ಸಂಶೋಧಕರುಗಳು ಓದುವ, ಬರೆಯುವ ಅಭಿರುಚಿ ಬೆಳೆಸಿಕೊಳ್ಳಬೇಕು. ವಿಜ್ಞಾನ, ಸಮಾಜ ವಿಜ್ಞಾನ, ವಾಣಿಜ್ಯ ಇತ್ಯಾದಿ ಎಲ್ಲ ನಿಕಾಯಗಳ ಸಂಶೋಧನೆಗಳು ಸಮಾಜ ಮುಖಿ ಅಭಿವೃದ್ಧಿಗೆ ಕೊಡುಗೆ ನೀಡಬೇಕು” ಎಂದರು.
ಪ್ರೊ. ಸಂಜೀವಕುಮಾರ ಗಿರಿ, ಡಾ.ಭಾಗ್ಯಶ್ರೀ ದೊಡಮನಿ, ಡಾ.ಸರೋಜಾ ಸಂತಿ, ಡಾ. ಶಶಿಕಲಾ ರಾಠೋಡ, ಡಾ.ರಜಿಯಾ ಉಪಸ್ಥಿತರಿದ್ದರು.
ಇದನ್ನು ಓದಿದ್ದೀರಾ? ಬೀದರ್ | ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ವರ್ಗಾವಣೆ : ಶಿಲ್ಪಾ ಶರ್ಮಾ ನೂತನ ಡಿಸಿ
ಕಾರ್ಯಕ್ರಮದಲ್ಲಿ ಮಹಿಳಾ ಅಧ್ಯಯನ ಕೇಂದ್ರ ಮತ್ತು ಪ.ಜಾ / ಪ.ಪಂಗಡದ ನಿರ್ದೇಶಕಿ ಪ್ರೊ.ಲಕ್ಷ್ಮೀದೇವಿ ಸ್ವಾಗತಿಸಿದರು. ಸಂಶೋಧನಾ ವಿದ್ಯಾರ್ಥಿನಿಯರಾದ ಗಿರಿಜಾ ನವಲಿಮಠ ಕಾರ್ಯಕ್ರಮ ನಿರೂಪಿಸಿದರು. ಹಿನಾ ವಂದಿಸಿದರು.
