ಕೆ ಚಂದ್ರಶೇಖರ್ ರಾವ್ ನೇತೃತ್ವದ ಬಿಆರ್‌ಎಸ್ ಪಕ್ಷಕ್ಕೆ ಮತ್ತೊಮ್ಮೆ ಭಾರಿ ಹಿನ್ನಡೆಯಾಗಿದ್ದು, ಆರು ವಿಧಾನ ಪರಿಷತ್ ಸದಸ್ಯರು ಇಂದು ರಾತ್ರಿ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಗೊಳ್ಳಲಿದ್ದಾರೆ.
ದಂಡೆ ವಿಠಲ್, ಭಾನು ಪ್ರಸಾದ್, ಬಿ ದಯಾನಂದ್, ಪ್ರಭಾಕರ್ ರಾವ್, ಬಸವರಾಜ್ ಸರಯ್ಯ ಹಾಗೂ ಇ ಮಲ್ಲೇಶಯ್ಯ ಕಾಂಗ್ರೆಸ್ ಸೇರ್ಪಡೆಗೊಳ್ಳುವ ಶಾಸಕರು. ದೆಹಲಿಗೆ ಎರಡು ದಿನದ ಪ್ರವಾಸಕ್ಕೆ ತೆರಳಲಿರುವ ರೇವಂತ್ ರೆಡ್ಡಿ ವಾಪಸಾದ ನಂತರ 6 ಶಾಸಕರು ಕಾಂಗ್ರೆಸ್‌ಗೆ ಸೇರ್ಪಡೆಗೊಳ್ಳಲಿದ್ದಾರೆ.
ಈ ಹೊಸ ಬೆಳವಣಿಗೆಯೊಂದಿಗೆ ಆಡಳಿತರೂಢ ಕಾಂಗ್ರೆಸ್‌ನ ಮೇಲ್ಮನೆ ಸದಸ್ಯರ ಸಂಖ್ಯೆ 12ಕ್ಕೆ ಏರಿಕೆಯಾಗಲಿದೆ. ತೆಲಂಗಾಣದ 40 ಸದಸ್ಯರ ವಿಧಾನ ಪರಿಷತ್‌ನಲ್ಲಿ 21 ಬಿಆರ್‌ಎಸ್, ಎಐಎಂಐಎಂ 2, ಬಿಜೆಪಿ 2 ಹಾಗೂ ಇಬ್ಬರು ಪಕ್ಷೇತರ ಶಾಸಕರಿದ್ದಾರೆ. ಎರಡು ಸ್ಥಾನ ಖಾಲಿಯುಳಿದಿದೆ.
ಈ ಸುದ್ದಿ ಓದಿದ್ದೀರಾ? ಕಾಂಗ್ರೆಸ್ ಸೇರ್ಪಡೆ ನಂತರ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ ಕೆ ಕೇಶವ್ ರಾವ್
ತೆಲಂಗಾಣ ವಿಧಾನಸಭೆ ಚುನಾವಣೆಯಾದ ನಂತರ ರಾಜಕೀಯವಾಗಿ ಬಿಆರ್‌ಎಸ್ ಭಾರಿ ಹಿನ್ನಡೆ ಅನುಭವಿಸುತ್ತಿದೆ. ಪಕ್ಷದ ಸೋಲಿನ ಜೊತೆ ವಿಧಾನಸಭೆ ಹಾಗೂ ವಿಧಾನ ಪರಿಷತ್‌ನ ಹಲವು ಶಾಸಕರು ಕಾಂಗ್ರೆಸ್‌ಗೆ ಪಕ್ಷಾಂತರಗೊಳ್ಳುತ್ತಿದ್ದಾರೆ. ಇತ್ತೀಚಿಗೆ ಒಂದು ದಿನದ ಹಿಂದಷ್ಟೆ ಬಿಆರ್‌ಎಸ್ ರಾಜ್ಯಸಭಾ ಸದಸ್ಯರಾದ ಕೆ ಕೇಶವ ರಾವ್ ಅವರು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದರು.
ಕಳೆದ ವರ್ಷ ನಡೆದ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಒಟ್ಟು 119 ಸ್ಥಾನಗಳ ಪೈಕಿ ಕಾಂಗ್ರೆಸ್ 64 ಸ್ಥಾನಗಳಿಸಿ ಸರ್ಕಾರ ರಚಿಸಿದರೆ ಬಿಆರ್‌ಎಸ್ 39 ಕ್ಷೇತ್ರಗಳಲ್ಲಿ ಮಾತ್ರ ಜಯಗಳಿಸಿತ್ತು. ಕೆಲವು ತಿಂಗಳ ಹಿಂದೆ ರಸ್ತೆ ಅಪಘಾತದಲ್ಲಿ ಸಿಕಂದರಾಬಾದ್ ಕ್ಷೇತ್ರದ ಬಿಆರ್‌ಎಸ್ ಶಾಸಕಿ ಜಿ ಲಾಸ್ಯ ನಂದಿತಾ ಮೃತಪಟ್ಟಿದ್ದರು. ಈ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು. ಇದರ ನಡುವೆ ಬಿಆರ್‌ಎಸ್ 6 ಶಾಸಕರು ಕಾಂಗ್ರೆಸ್ ಸೇರ್ಪಡೆಗೊಂಡ ಪರಿಣಾಮ ಕೈ ಶಾಸಕರ ಸಂಖ್ಯೆ 71ಕ್ಕೆ ಏರಿಕೆಯಾಗಿ ಭಾರತ್ ರಾಷ್ಟ್ರ ಸಮಿತಿ ಶಾಸಕರ ಸಂಖ್ಯೆ 32ಕ್ಕೆ ಕುಸಿದಿದೆ.