ನೀಟ್ ರದ್ದುಪಡಿಸಬೇಕು, ಹಾಸ್ಟೆಲ್ ಪ್ರಾರಂಭಿಸಿ ಹಾಗೂ ವಿದ್ಯಾರ್ಥಿಗಳಿಗೆ ಉಂಟಾಗಿರುವ ಬಸ್ ಸಮಸ್ಯೆಯನ್ನು ಬಗೆಹರಿಸುವಂತೆ ಆಗ್ರಹಿಸಿ ಗದಗ ಜಿಲ್ಲೆಯ ಗಜೇಂದ್ರಗಡದಲ್ಲಿ ಎಸ್ಎಫ್ಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಜಿಲ್ಲೆಯ ಗಜೇಂದ್ರಗಡದ ಪುರಸಭೆಯಿಂದ ಹೊರಟ ವಿದ್ಯಾರ್ಥಿಗಳ ಮೆರವಣಿಗೆಯು ಮೈಸೂರು ಮಠ, ದುರ್ಗಾ ಸರ್ಕಲ್, ಮಾರ್ಗವಾಗಿ ಕೆ ಕೆ ಸರ್ಕಲ್ ನಲ್ಲಿ ಮಾನವ ಸರಪಳಿ ಮಾಡಿ, ಸಮಸ್ಯೆ ಬಗೆಹರಿಸಲು ಆಗ್ರಹಿಸಿದರು.
ಎಸ್ಎಫ್ಐನ ರಾಜ್ಯ ಮುಖಂಡ ಗಣೇಶ ರಾಠೋಡ್ ಮಾತನಾಡಿ, “ನೀಟ್ ಪರೀಕ್ಷೆ ರದ್ದುಪಡಿಸಬೇಕು. ನೆಟ್ ಪರೀಕ್ಷೆಯಲ್ಲಿ ನಡೆದ ಹಗರಣವನ್ನು ನಿಪಕ್ಷಪಾತ ತನಿಖೆ ಮಾಡಬೇಕು. ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರವು ಸಾರ್ವಜನಿಕ ಶಿಕ್ಷಣ ಸಂಸ್ಥೆಗಳನ್ನು ದುರ್ಬಲಗೊಳಿಸುತ್ತಿದೆ. ‘ಒಂದು ರಾಷ್ಟ್ರ, ಒಂದು ಪರೀಕ್ಷೆ’ ಎಂಬ ಘೋಷಣೆಯ ಅಡಿಯಲ್ಲಿ, ಇಡೀ ಪರೀಕ್ಷಾ ವ್ಯವಸ್ಥೆಯು ಕುಸಿದಿದೆ ಮತ್ತು ಅನಿರ್ದಿಷ್ಟಾವಧಿಗೆ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯವನ್ನು ಅಪಾಯಕ್ಕೆ ಸಿಲುಕಿಸಿದೆ” ಎಂದು ತಿಳಿಸಿದರು.
ಎಸ್ಎಫ್ಐನ ಜಿಲ್ಲಾ ಮುಖಂಡರಾದ ಚಂದ್ರು ರಾಠೋಡ್ ಮಾತನಾಡಿ, “ಗಜೇಂದ್ರಗಡ ನಗರವು ಶಿಕ್ಷಣ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಬೆಳೆಯುತ್ತಿರುವ ನಗರವಾಗಿದೆ. ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳಿಂದ ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ನಗರಕ್ಕೆ ಬರುತ್ತಿರುವ ಕಾರಣ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ ಪ್ರಾರಂಭಿಸಬೇಕು. ಗ್ರಾಮೀಣ ಪ್ರದೇಶಗಳಿಂದ ಶಿಕ್ಷಣಕ್ಕಾಗಿ ನಗರಕ್ಕೆ ಬರುವ ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್ ಸೌಲಭ್ಯ ಕಲ್ಪಿಸಬೇಕು. ಗಜೇಂದ್ರಗಡದಲ್ಲಿ ಸ್ನಾತಕೋತ್ತರ ಪದವಿ ಕೇಂದ್ರ ಪ್ರಾರಂಭಿಸಬೇಕು. ಗಜೇಂದ್ರಗಡ ತಾಲೂಕು ಘೋಷಣೆ ಆಗಿ 5-6 ವರ್ಷಗಳಾದರೂ ಕೂಡ, ಸರಿಯಾಗಿ ಎಲ್ಲ ತಾಲೂಕು ಕಚೇರಿಗಳನ್ನು ಪ್ರಾರಂಭಿಸಿಲ್ಲ. ಹಾಗಾಗಿ, ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಪ್ರಾರಂಭಿಸಬೇಕು” ಎಂದು ಆಗ್ರಹಿಸಿದರು.
“ರಾಜ್ಯದಲ್ಲಿ ಶೈಕ್ಷಣಿಕ ವರ್ಷ ಪ್ರಾರಂಭಗೊಂಡಿದ್ದು, ಶಾಲಾ ಕಾಲೇಜಿನಲ್ಲಿ ಶೈಕ್ಷಣಿಕ ವಾತಾವರಣವೇ ಇಲ್ಲದಂತಾಗಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ರಾಜ್ಯದ ಶಾಲಾ ಕಾಲೇಜುಗಳಲ್ಲಿ ಇರುವ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಮುಂದಾಗಬೇಕೆಂದು ಎಂದು ಭಾರತ ವಿದ್ಯಾರ್ಥಿ ಫೆಡರೇಷನ್ ಸಂಘಟನೆಯು ಒತ್ತಾಯಿಸುತ್ತದೆ” ಎಂದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಗಜೇಂದ್ರಗಡ ತಹಶೀಲ್ದಾರ್ ಪ್ರತಿಭಟನಾಕಾರರ ಮನವಿ ಸ್ವೀಕರಿಸಿದರು. ಬಳಿಕ ಭರವಸೆ ನೀಡಿದ ಅವರು, “ಸ್ಥಳೀಯ ಸಮಸ್ಯೆಗಳ ಕುರಿತು ಎಲ್ಲ ಇಲಾಖೆಯ ಅಧಿಕಾರಿಗಳನ್ನು ಮತ್ತು ಡಿಪೋ ಮ್ಯಾನೇಜರ್ ಅವರನ್ನು ಒಳಗೊಂಡು ಸಭೆ ಕರೆಯುತ್ತೇನೆ. ವಿದ್ಯಾರ್ಥಿ ಮುಖಂಡರ ಜೊತೆ ಕೂಡ ಸಭೆ ಮಾಡಿ ಬಗೆಹರಿಸಲು ತಕ್ಷಣವೇ ಕ್ರಮ ಕೈಗೊಳ್ಳುತ್ತೇವೆ” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಸ್ಎಫ್ಐನ ತಾಲೂಕು ಕಾರ್ಯದರ್ಶಿ ಶರಣು ಎಂ, ಮುಖಂಡರಾದ ಮಾಂತೇಶ್, ಬಸವರಾಜ, ಅನಿಲ್, ಸುನೀಲ್, ಗುರು, ಭೀಮ, ನಂದಿನಿ, ಲಕ್ಷ್ಮೀ, ವಿಜಯಕುಮಾರ್, ಬಸು ಪಾಟೀಲ್, ಅಕ್ಷತಾ, ಬಾನು, ಉಮೇಶ್, ದ್ಯಾಮಣ್ಣ, ಕಿರಣ ರಾಠೋಡ್ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.