ಜನ ಮರುಳೋ ಜಾತ್ರೆ ಮರುಳೋ; ಸ್ವಯಂಘೋಷಿತ ದೇವಮಾನವನ ಪಾದ ಮುಟ್ಟಲು ಪ್ರಾಣತೆತ್ತ ಜನರು

Date:

Advertisements

ದೇವಮಾನವ, ಸ್ವಾಮೀಜಿ, ಬಾಬಾ, ಗುರು, ಮಠಾಧೀಶ ಎಂದೆನಿಸಿಕೊಂಡವರ ಹೆಚ್ಚಿನವರ ಅನುಯಾಯಿಗಳಲ್ಲಿ ಮಹಿಳೆಯರೇ ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಸೋಜಿಗದ ಸಂಗತಿಯೆಂದರೆ ಈ ಸ್ವಯಂಘೋಷಿತ ದೇವಮಾನವರು ಎಂದೆನಿಸಿಕೊಂಡಿರುವ ಅನೇಕರು ಒಂದಿಲ್ಲೊಂದು ರೀತಿಯಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಅಪರಾಧ ಪ್ರಕರಣಗಳಲ್ಲಿ ಸಿಕ್ಕಿ ಹಾಕಿಕೊಂಡಿರುವವರು. ಇದನ್ನು ಹೊರತುಪಡಿಸಿದರೇ, ಬಹುತೇಕರು ಕೊಲೆ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದಾರೆ.

ಅತ್ಯಾಚಾರ ಆರೋಪ ಪ್ರಕರಣದಲ್ಲಿ ಚಿತ್ರದುರ್ಗದ ಬಂಜಾರ ಗುರುಪೀಠದ ಸರ್ದಾರ್‌ ಸೇವಾಲಾಲ್‌ ಸ್ವಾಮೀಜಿ, ಇಬ್ಬರು ಸಾಧ್ವಿಯರ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಸ್ವಯಂಘೋಷಿತ ದೇವಮಾನವ ಗುರ್ಮೀತ್ ರಾಮ್ ರಹೀಮ್ ಸಿಂಗ್, ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಹುಲಿಯೂರುದುರ್ಗ ಹೋಬಳಿ ಹಂಗರಹಳ್ಳಿ ಗ್ರಾಮದ ಬಾಲಮಂಜುನಾಥ ಸ್ವಾಮೀಜಿ, ಪೋಕ್ಸೋ ಪ್ರಕರಣದಲ್ಲಿ ಚಿತ್ರದುರ್ಗ ಮುರುಘಾ ಮಠದ ಮಠಾಧೀಶ ಡಾ. ಶಿವಮೂರ್ತಿ ಶರಣ ಹಾಗೂ ಅಸರಾಮ್ ಬಾಪೂ, ಹೊಸನಗರದ ರಾಘವೇಶ್ವರ ಭಾರತಿ ಸ್ವಾಮಿ, ನಿತ್ಯಾನಂದ ಹೀಗೆ ಹೇಳುತ್ತಾ ಹೋದರೇ ಪಟ್ಟಿ ಸಾಲೋದಿಲ್ಲ.

ಕೊಲೆ, ಪೋಕ್ಸೋ ಪ್ರಕರಣ, ಲೈಂಗಿಕ ದೌರ್ಜನ್ಯ ಸೇರಿದಂತೆ ಇನ್ನಿತರ ಪ್ರಕರಣಗಳಲ್ಲಿ ಜೈಲು ಸೇರಿ ಆಚೆ ಬಂದು ಸ್ವಾಮೀಜಿ ಆಗುವವರು ಇದ್ದಾರೆ. ಅದೇ ರೀತಿ ಹೊರಗಡೆನೇ ಇದ್ದು ಇತರ ನೀಚ ಕೃತ್ಯಗಳನ್ನು ಎಸಗಿ ಜನರಿಗೆ ಮರಳು ಮಾಡುವ ಕಾವಿಧಾರಿಗಳು ಇದ್ದಾರೆ. ‘ಜನ ಮರಳೋ ಜಾತ್ರೆ ಮರಳೋ’ ಎಂಬಂತೆ ಹಲವು ಜನರ ಇತರಹದ ಕಾವಿದಾರಿಗಳನ್ನು ನಂಬಿ ಭಕ್ತರಾಗುತ್ತಾರೆ.

Advertisements

ಪ್ರಕೃತಿಯಲ್ಲಿ ಬದುಕುತ್ತಿರುವ ಯಾರಿಗೂ ಕೂಡ ಅತಿಂದ್ರೀಯ ಶಕ್ತಿ ಇಲ್ಲ. ಇರಲೂ ಸಾಧ್ಯವಿಲ್ಲ. ಆದರೂ ಜನರನ್ನು ಮರಳು ಮಾಡಿ ಹಣ ಸಂಪಾದನೆ ಮಾಡಿ, ಶೋಕಿ ಜೀವನ ನಡೆಸುವವರಿಗೆ ಜನ ಮರುಳಾಗಿ ಅವರನ್ನು ದೇವತಾಮನುಷ್ಯ ಎಂಬಂತೆ ನಂಬಿ ಅವರ ಪಾದವನ್ನು ನಾವು ಸ್ಪರ್ಶ ಮಾಡಿದರೇ ನಮ್ಮ ಪಾಪಗಳೆಲ್ಲ ಕಳೆದು ಹೋಗುತ್ತದೆ ಎಂಬ ಭ್ರಮೆಯಲ್ಲಿಯೇ ಹಲವಾರು ಜನ ಜೀವನ ನಡೆಸುತ್ತಿದ್ದಾರೆ. ಜನರಲ್ಲಿ ಇನ್ನು ಎಷ್ಟರ ಮಟ್ಟಿಗೆ ಮೂಡನಂಬಿಕೆ ಎಂಬುವುದು ತಾಂಡವವಾಡುತ್ತಿದೆ ಎಂಬುದನ್ನ ಇದು ಸೂಚಿಸುತ್ತದೆ.

ಇದೀಗ, ಇಂತಹ ನಂಬಿಕೆಯೇ ಬರೋಬ್ಬರಿ 121 ಜನರ ಜೀವವನ್ನು ಬಲಿ ಪಡೆದಿದೆ. ಜುಲೈ 2 ರಂದು ಉತ್ತರ ಪ್ರದೇಶದ ಹಾಥರಸ್‌ ಜಿಲ್ಲೆಯಲ್ಲಿ ಸತ್ಸಂಗ ನಡೆಯುತ್ತಿದ್ದ ವೇಳೆ ಕಾಲ್ತುಳಿತ ಉಂಟಾಗಿ ಬರೋಬ್ಬರಿ 121 ಜನರು ಸಾವನ್ನಪ್ಪಿದ್ದಾರೆ. ಅನೇಕರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.

ಸತ್ಸಂಗದಲ್ಲಿ ಸಾವನ್ನಪ್ಪಿದ 121 ಜನರಲ್ಲಿ ಹೆಚ್ಚಿನವರು ಮಹಿಳೆಯರು. ಕೆಲವರಂತೂ ಮನೆಯಲ್ಲಿ ಬಿಟ್ಟು ಬರಲಾರದಷ್ಟು ಚಿಕ್ಕ ಮಕ್ಕಳನ್ನು ಬಗಲಲ್ಲಿ ಕೂರಿಸಿಕೊಂಡು ಬಂದಿದ್ದರು. ಇದೀಗ ಮನೆಯ ಹಿರಿಯರ ಮೂಡನಂಬಿಕೆಗೆ ಮಕ್ಕಳು ಕೂಡ ನೋವು ಪಡುವಂತಾಗಿದೆ. ಕಾಲ್ತುಳಿತದಿಂದ ಸಾವನ್ನಪ್ಪಿದ 121 ಜನರಲ್ಲಿ 17 ಮಂದಿ ಅಲಿಗಢದವರು ಮತ್ತು 19 ಜನರು ಹಾಥರಸ್‌ನವರಾಗಿದ್ದಾರೆ.

1719965674 hathras123

ಸತ್ಸಂಗ್ ಎಂದರೇನು? ಇಷ್ಟು ಕಾಲ್ತುಳಿತ ಯಾಕೆ ಆಯಿತು?

ಸತ್ಸಂಗ್, ಸತ್ ಅಂದರೇ ಸಂಸ್ಕ್ರತದಲ್ಲಿ ಪರಿಶುದ್ಧತೆ ಅಥವಾ ಸತ್ಯ ಎಂದು ಅರ್ಥ. ಸಂಘ ಅಂದರೇ ಒಂದು ಗುಂಪು. ಆದರೆ, ಜನರನ್ನು ಮರಳು ಮಾಡಿ, ಅವರಿಗೆ ಇಲ್ಲ ಸಲ್ಲದನ್ನು ಹೇಳಿ, ಅವರಿಂದ ಹಣ ಬಾಚಿಕೊಂಡು ಶೋಕಿ ಜೀವನ ನಡೆಸುವ ಹಾಗೂ ಆ ಮೂಲಕ ಪ್ರಸಿದ್ಧಿ ಮತ್ತು ಪ್ರಭಾವ ಗಳಿಸುವವರು ಪರಿಶುದ್ಧರು ಹೇಗೆ ಆಗುತ್ತಾರೆ. ಯಾರೋ ಒಬ್ಬ ವ್ಯಕ್ತಿ ಕಾವಿ ಧರಿಸಿ ತಾನೂ ಬಾಬಾ, ಸ್ವಾಮೀಜಿ, ಆದ್ಯಾತ್ಮ ಗುರು ಅಂತ ಹೇಳಿಕೊಂಡ ನಂತರ ಆತನ ಹಿಂದೆ ಏನು? ಮುಂದೆ ಏನು? ಆತನ ಉದ್ದೇಶ ಏನು ಎಂಬುದನ್ನು ಜನರು ಅರಿಯದೇ ಆತನ ಹಿಂಬಾಲಕರಾಗಿ ಆತನ ಭಕ್ತರಾಗಿ ಆತನ ಹಿಂದೆ ಹೋಗಿ ನಿಂತು ಬಿಡುತ್ತಾರೆ. ಇದು ಹೇಗೆ ಸಾಧ್ಯ ಎಂದರೆ, ಇದು ಜನರಲ್ಲಿ ಮೂಡಿರುವ ಮೂಡನಂಬಿಕೆಯಿಂದ ಮಾತ್ರ ಸಾಧ್ಯ. ಮೊದಲು ಜನರು ಈ ಮೂಡನಂಬಿಕೆಯಿಂದ ಹೊರಬರಬೇಕು.

ಅಂದಹಾಗೆ, ಇಷ್ಟೊಂದು ಜನರು ಜಮಾಯಿಸಲು ಕಾರಣವಾದ ಸತ್ಸಂಗ್ ನಡೆಸುತ್ತಿದ್ದ ಭೋಲೇ ಬಾಬಾ ಯಾರು? ಎಂದು ಹುಡುಕಾಡಿದಾಗ ಸಿಕ್ಕ ಮಾಹಿತಿ ಏನೆಂದರೆ ಸತ್ಸಂಗ್‌ಗಳನ್ನು ನಡೆಸುತ್ತಿದ್ದ ಈ ಭೋಲೆ ಬಾಬಾನ ಮೂಲ ಹೆಸರು ಸೂರಜ್‌ ಪಾಲ್‌ ಸಿಂಗ್.

ಈ ಬಾಬಾ ಮೂಲತಃ ಕಾಸ್‌ಗಂಜ್ ಜಿಲ್ಲೆಯ ಪಟಿಯಾಲಿಯ ಬಹಾದ್ದೂರ್‌ನಗರದವರು. ಮೊದಲು ಅವರು ತಮ್ಮ ಕೃಷಿ ಭೂಮಿಯಲ್ಲಿ ತಮ್ಮ ತಂದೆಗೆ ಸಹಾಯ ಮಾಡುತ್ತಿದ್ದರು. ನಂತರ ಪೊಲೀಸ್ ಗುಪ್ತಚರ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಅವರ ವೃತ್ತಿಜೀವನವು 17 ವರ್ಷಗಳ ಕಾಲ ನಡೆಯಿತು. ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸೂರಜ್‌ ಸಿಂಗ್‌ಗೆ ಜೈಲು ಶಿಕ್ಷೆ ವಿಧಿಸಲಾಗಿತ್ತು. ಜೈಲಿನಿಂದ ಬಿಡುಗಡೆಗೊಂಡ ನಂತರ ತಮ್ಮ ಹೆಸರನ್ನು ‘ಸಾಕಾರ ವಿಶ್ವಹರಿ ಬಾಬಾ’ (ಭೋಲೆ ಬಾಬಾ) ಎಂದು ಬದಲಿಸಿಕೊಂಡು ಕಥಾವಾಚಕರಾಗಿದ್ದಾರೆ.

ಭೋಲೆ ಬಾಬಾ ‘ಸತ್ಸಂಗ್‌’ಗಳನ್ನು ಆಯೋಜಿಸುವ ಮೂಲಕ ಪ್ರಸಿದ್ಧಿಗೆ ಬಂದವರು. ತಮ್ಮ ಹೆಂಡತಿಯೊಂದಿಗೆ ಸತ್ಸಂಗ್‌ವನ್ನು ನಡೆಸುತ್ತಾರೆ. ವಾಸ್ತವದಲ್ಲಿ ಬೋಲೇ ಬಾಬಾ ಎಂಬ ಸ್ವಯಂಘೋಷಿತ ದೇವಮಾನವನ ದೈವವಾಣಿ ಅಥವಾ ಉಪನ್ಯಾಸ ಕೇಳೊದಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಭೋಲೆ ಬಾಬಾರ ಹೆಚ್ಚಿನ ಭಕ್ತರು ಬಡ ವರ್ಗದವರಾಗಿದ್ದಾರೆ. ‘ನಾರಾಯಣ್ ಸಕಾರ್ ಹರಿ’ ಎಂದು ಸಂಬೋಧಿಸಲು ಇಷ್ಟಪಡುವ ಬಾಬಾ ಅವರ ಜನಪ್ರಿಯತೆ ಕಾಲಾನಂತರದಲ್ಲಿ ಬೆಳೆಯಿತು. ಅವರ ಅನುಯಾಯಿಗಳ ಸಂಖ್ಯೆಯೂ ಹೆಚ್ಚುತ್ತಾ ಹೋಯಿತು.

ಭೋಲೆ ಬಾಬಾ
ಭೋಲೇ ಬಾಬಾ

ತಮ್ಮ ಆಶೀರ್ವಾದ ಪಡೆಯಲು ಭಕ್ತರು ಬಂದ ವೇಳೆ ಉಂಟಾಗುವ ನೂಕು ನುಗ್ಗಲು ತಡೆಯುವುದಕ್ಕಾಗಿ ಭೋಲೇ ಬಾಬಾ ‘ನಾರಾಯಣಿ ಸೇನಾ’ ಎಂಬ ಭದ್ರತಾ ತಂಡ ರಚಿಸಿದ್ದಾರೆ. ಪುರುಷರು ಹಾಗೂ ಮಹಿಳೆಯರನ್ನು ಒಳಗೊಂಡಿರುವ ಈ ತಂಡ ‘ಸತ್ಸಂಗ್‌’ದಂತಹ ಕಾರ್ಯಕ್ರಮಗಳ ಸಂದರ್ಭದಲ್ಲಿ ಭೋಲೆ ಬಾಬಾ ಅವರಿಗೆ ಭದ್ರತೆ ಒದಗಿಸುತ್ತದೆ.

ಲೈಂಗಿಕ ಕಿರುಕುಳ ಪ್ರಕರಣ ಎದುರಿಸುತ್ತಿರುವ ಭೋಲೆ ಬಾಬಾ ಕೋಟ್ಯಧೀಶನಾಗಿದ್ದು, ‘ಫೈವ್‌ ಸ್ಟಾರ್‌’ ಆಶ್ರಮ ಹೊಂದಿದ್ದಾನೆ. ಉತ್ತರ ಪ್ರದೇಶ ಮೈನಪುರಿಯಲ್ಲಿ 13 ಎಕರೆಯಲ್ಲಿನ ಐಷಾರಾಮಿ ಆಶ್ರಮವು ಅಮೆರಿಕದ ಶ್ವೇತಭವನವನ್ನು ಹೋಲುತ್ತದೆ. ಇದರ ಮೌಲ್ಯ ₹50 ಕೋಟಿಗೂ ಅಧಿಕವಿದೆ. ಆಶ್ರಮದಲ್ಲಿ ಹಲವು ಕೋಣೆಗಳಿದ್ದು, ಬಾಬಾನಿಗೆ ಮೀಸಲಾಗಿರುವ 6 ಕೋಣೆಗಳು ಹೈಟೆಕ್‌ ಆಗಿವೆ. ಮತ್ತೆ 6 ಕೋಣೆಗಳನ್ನು ಸೇವಾದಾರರಿಗೆ (ಸ್ವಯಂ ಸೇವಕರು) ನೀಡಲಾಗಿದೆ. ಉತ್ತರ ಪ್ರದೇಶ ಅಲ್ಲದೆ ಮಧ್ಯ ಪ್ರದೇಶ, ರಾಜಸ್ಥಾನ ಸೇರಿ ಬೇರೆ ಕಡೆಯೂ ಆಸ್ತಿ ಹೊಂದಿದ್ದಾನೆ ಎನ್ನಲಾಗಿದೆ.

ಬಾಬಾ ಮೊದಲಿಗೆ ಧರ್ಮೋಪದೇಶವನ್ನು ನೀಡಲು ಮತ್ತು ‘ಸತ್ಸಂಗ್‌’ವನ್ನು ಆಯೋಜಿಸಲು ಪ್ರಾರಂಭಿಸಿದರು. ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಪ್ರವಾಸ ಕೈಗೊಳ್ಳುವ ಅವರು ಪ್ರತಿ ತಿಂಗಳು ಮೊದಲ ಮಂಗಳವಾರ ‘ಸತ್ಸಂಗ’ಗಳನ್ನು ಆಯೋಜಿಸುತ್ತಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ‘ಸಾಕಾರ್ ವಿಶ್ವ ಹರಿ ಬಾಬಾ’ ಎಂದು ಹೆಚ್ಚು ಜನಪ್ರಿಯರಾಗಿರುವ ಬಾಬಾ ಅವರು ಸಾರ್ವಜನಿಕವಾಗಿ ಬಿಳಿ ಬಟ್ಟೆಯಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಾರೆ.

‘ಭೋಲೆ ಬಾಬಾ’ ವಿರುದ್ಧ ಲೈಂಗಿಕ ದೌರ್ಜನ್ಯ ಸೇರಿದಂತೆ ಹಲವು ಆರೋಪಗಳಿವೆ. ಆಗ್ರಾ, ಎಟಾ, ಕಾಸ್‌ಗಂಜ್, ಫರುಖ್ಖಾಬಾದ್ ನಗರಗಳಲ್ಲದೇ, ರಾಜಸ್ಥಾನದ ನಾನಾ ಪೊಲೀಸ್‌ ಠಾಣೆಗಳಲ್ಲಿ ಇವರ ವಿರುದ್ಧ ಪ್ರಕರಣಗಳು ದಾಖಲಾಗಿವೆ ಎಂದು ಮೂಲಗಳನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ. ಮೃತ ಬಾಲಕನನ್ನು ಬದುಕಿಸುವುದಾಗಿ ಹೇಳಿಕೊಂಡಿದ್ದಕ್ಕೆ ಸಂಬಂಧಿಸಿ ಬಾಬಾ ವಿರುದ್ಧ ಕೆಲ ವರ್ಷಗಳ ಹಿಂದೆ ಆಗ್ರಾ ಪೊಲೀಸ್‌ ಠಾಣೆಯೊಂದರಲ್ಲಿ ಪ್ರಕರಣ ದಾಖಲಾಗಿದೆ.

ಹಥ್ರಾಸ್

ಭೋಲೆ ಬಾಬಾ ಅವರ ಸತ್ಸಂಗ್‌ಕ್ಕೆ ಹೋಗುವ ಭಕ್ತರಿಗೆ ನೀರು ವಿತರಿಸಲಾಗುತ್ತದೆ. ಈ ನೀರು ಕುಡಿಯುವುದರಿಂದ ತಮ್ಮ ಸಮಸ್ಯೆಗಳು ಬಗೆಹರಿಯುತ್ತವೆ ಎಂದು ಬಾಬಾ ಅವರ ಅನುಯಾಯಿಗಳು ನಂಬುತ್ತಾರೆ. ಪಟಿಯಾಲದ ಬಹಾದ್ದೂರ್ ನಗರ ಗ್ರಾಮದಲ್ಲಿರುವ ಆಶ್ರಮದಲ್ಲಿ ಬಾಬಾ ದರ್ಬಾರ್ ನಡೆಸುತ್ತಿದ್ದಾರೆ. ಆಶ್ರಮದ ಹೊರಗೆ ಹ್ಯಾಂಡ್ ಪಂಪ್ ಕೂಡ ಇದೆ. ದರ್ಬಾರ್ ಸಮಯದಲ್ಲಿ, ಈ ಹ್ಯಾಂಡ್ ಪಂಪ್‌ನಿಂದ ನೀರು ಕುಡಿಯಲು ಉದ್ದನೆಯ ಸರತಿ ಸಾಲು ಇರುತ್ತದೆ.

ಉತ್ತರಪ್ರದೇಶದ ಹಾಥರಸ್‌ನಲ್ಲಿ ಸತ್ಸಂಗ್‌ ಕಾರ್ಯಕ್ರಮ ನಡೆಸಲು 80 ಸಾವಿರ ಜನರನ್ನು ಸೇರಿಸಲು ಅನುಮತಿ ನೀಡಲಾಗಿತ್ತು. ಆದರೆ, ನಿಯಮ ಮೀರಿ ಎರಡುವರೆ ಲಕ್ಷಕ್ಕೂ ಅಧಿಕ ಜನರು ಸೇರಿಸಿದ್ದರು. ಇದರಿಂದಲೂ ಕೂಡ ನೂಕುನುಗ್ಗುಲು ಉಂಟಾಗಿ ಕಾಲ್ತುಳಿತ ಸಂಭವಿಸಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಸತ್ಸಂಗ್‌ ನಡೆಸಲು ಅನುಮತಿ ಕೇಳುವಾಗ ಬರುವ ಭಕ್ತರ ಸಂಖ್ಯೆಯನ್ನು ಸಂಘಟಕರು ಮರೆಮಾಚಿ ಕಡಿಮೆ ಜನರ ಸಂಖ್ಯೆಯನ್ನು ಹೇಳಿದ್ದರು. ಸಂಚಾರ ನಿರ್ವಹಣೆಗೂ ಕೂಡ ಇವರು ಸಹಕರಿಸಿಲ್ಲ. ಕಾಲ್ತುಳಿತದ ನಂತರ ಸಾಕ್ಷ್ಯ ನಾಶ ಮಾಡುವುದಕ್ಕಾಗಿ ಚಪ್ಪಲಿಗಳನ್ನು ಬೇರೆಡೆ ಎಸೆಯಲಾಯಿತು ಎಂದು ತಿಳಿದುಬಂದಿದೆ.

ಸತ್ಸಂಗ್‌ದಲ್ಲಿ ಸೇರಿದ ಜನರು ಬಾಬಾ ಸಾಗಿ ಹೋದ ಸ್ಥಳದ ಪಾದದ ಧೂಳನ್ನು ಸಂಗ್ರಹಿಸಲು ಮುಂದಾದಾಗ ಅವರನ್ನು ತಳ್ಳಲು ಭದ್ರತಾ ಸಿಬ್ಬಂದಿ ಯತ್ನಿಸಿದ್ದಾರೆ. ಇಳಿಜಾರಲ್ಲಿ ಈ ಘಟನೆ ನಡೆದಿದ್ದು, ಆಗ ನೂಕುನುಗ್ಗಲು ಉಂಟಾಗಿದೆ ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ.

ಈ ಕಾಲ್ತುಳಿತ ದುರಂತದ ಬಳಿಕ ಸತ್ಸಂಗ ಕಾರ್ಯಕ್ರಮ ನಡೆಸಿಕೊಟ್ಟಿದ್ದ ಭೋಲೆ ಬಾಬಾ ಅಲಿಯಾಸ್‌ ಸಾಕಾರ ವಿಶ್ವ ಹರಿ ನಾಪತ್ತೆ ಆಗಿದ್ದಾರೆ. ಅಲ್ಲದೆ, ಅವರ ಮೇಲೆ ಎಫ್‌ಐಆರ್ ಕೂಡ ದಾಖಲಾಗಿಲ್ಲ. ಬದಲಾಗಿ, ಕಾರ್ಯಕ್ರಮ ಆಯೋಜಿಸಿದ್ದ ಅವರ ಭಕ್ತರ ಮೇಲೆ ಪ್ರಕರಣ ದಾಖಲಾಗಿದೆ.

ಕಾರ್ಯಕ್ರಮ ಆಯೋಜಿಸಿದ್ದ ‘ಮುಖ್ಯ ಸೇವಾದಾರ’ ದೇವಪ್ರಕಾಶ್ ಮಧುಕರ್ ಮತ್ತು ಇತರ ಸಂಘಟಕರನ್ನು ಎಫ್ಐಆರ್‌ನಲ್ಲಿ ಹೆಸರಿಸಲಾಗಿದೆ. ಇವರ ಮೇಲೆ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 105 (ಆಪರಾಧಿಕ ನರಹತ್ಯೆ), 110 (ಆಪರಾಧಿಕ ನರಹತ್ಯೆಗೆ ಯತ್ನ), 238 (ಸಾಕ್ಷ್ಯ ನಾಶ) ಪ್ರಕರಣ ದಾಖಲಿಸಲಾಗಿದೆ.

ಈ ನಡುವೆ, ಬಾಬಾ ಅವರ ಮೈನ್‌ಪುರಿ ಸಮೀಪದ ಬಿಚ್ವಾನ್‌ ಗ್ರಾಮದ ಆಶ್ರಮದ ಸುತ್ತ ಪೊಲೀಸ್‌ ಭದ್ರತೆ ಹಾಕಲಾಗಿದೆ. ಬಾಬಾ ಆಶ್ರಮದಲ್ಲೇ ಇದ್ದಾರೆ ಎಂದು ಕೆಲವು ಪೊಲೀಸರು ಹೇಳಿದ್ದರೆ, ಇನ್ನು ಕೆಲವರು ಮಾಹಿತಿ ನೀಡಲು ನಿರಾಕರಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ನೇಣು ಬಿಗಿದ ಸ್ಥಿತಿಯಲ್ಲಿ ಯುವತಿ ಮೃತದೇಹ ಪತ್ತೆ; ವರದಕ್ಷಿಣೆ ಕಿರುಕುಳ ಆರೋಪ

121 ಭಕ್ತರ ಬಲಿಪಡೆದ ಭೀಕರ ಕಾಲ್ತುಳಿತ ಘಟನೆಯ ಹೊಣೆ ಹೊರಲು ನಿರಾಕರಿಸಿರುವ ವಿವಾದಾತ್ಮಕ ಧರ್ಮಗುರು ಭೋಲೆ ಬಾಬಾ, “ನಾನು ಸತ್ಸಂಗ್ ಮುಗಿಸಿ ತೆರಳಿದ ನಂತರ ಈ ಘಟನೆ ಸಂಭವಿಸಿದೆ. ಸಮಾಜಘಾತಕ ಶಕ್ತಿಗಳ ಕೃತ್ಯ ಇದಾಗಿದೆ. ಅವುಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವೆ. ಮೃತರ ಕುಟುಂಬಗಳಿಗೆ ಸಾಂತ್ವನ ಹೇಳುವೆ” ಎಂದು ಹೇಳಿದ್ದಾನೆ. ಆದರೆ, ಈ ಭೋಲೆ ಬಾಬಾ ವಿರುದ್ಧ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ.

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಶುಕ್ರವಾರ ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಸಾಂತ್ವಾನ ಹೇಳಿದ್ದಾರೆ.

ಹಥ್ರಾಸ್

ಈ ದುರಂತದ ಬಳಿಕ ಆದರೂ ಜನರು ಎಚ್ಚೆತ್ತು ಆ ಭೋಲೆ ಬಾಬಾ, ಈ ಬೋಲೆ ಬಾಬಾ, ಆ ಸ್ವಾಮೀಜಿ ಈ ಸ್ವಾಮೀಜಿ ಎಂದು ಅವರ ಹಿಂದೆ ಹೋಗಿ ಇರುವ ಜೀವನವನ್ನು ನರಕ ಮಾಡಿಕೊಳ್ಳುವ ಬದಲು ತಮ್ಮ ಕುಟುಂಬದವರಿಗಾಗಿ ಜೀವನ ನಡೆಸುವದನ್ನು ಇನ್ನಾದರೂ ಕಲಿಯಬೇಕಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧರ್ಮಸ್ಥಳ ಪ್ರಕರಣಗಳ ಸಮಗ್ರ ತನಿಖೆಗೆ ಎಡಪಕ್ಷಗಳ ಒತ್ತಾಯ

ಧರ್ಮಸ್ಥಳದಲ್ಲಿ ನಡೆದಿರುವ ವೇದವಲ್ಲಿ, ಪದ್ಮಲತಾ, ನಾರಾಯಣ, ಯಮುನಾ ಮತ್ತು ಸೌಜನ್ಯ, ಮುಂತಾದ...

ನಟಿಗೆ ಕಿರುಕುಳ ಆರೋಪ: ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷನ ಹುದ್ದೆ ತೊರೆದ ರಾಹುಲ್ ಮಾಂಕೂಟತ್ತಿಲ್

ಕೇರಳದ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಂದೇಶ ಹಾಗೂ ದುರ್ವರ್ತನೆ...

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

ಈದಿನ ವಿಶೇಷ | ಧರ್ಮಸ್ಥಳ: ಉತ್ತರ ನೀಡಿದ ಗೃಹ ಸಚಿವರು; ಈಗಲೂ ಉಳಿದ ಹಲವು ಪ್ರಶ್ನೆಗಳು

ಸದನದಲ್ಲಿ ನಿಂತು ಷಡ್ಯಂತ್ರ ಎನ್ನುವವರಿಗೆ, ಎಸ್‌ಐಟಿ ರಚನೆಯಾಗಿದ್ದೇಕೆ? ಕಾನೂನು ಏನು ಹೇಳುತ್ತೆ?...

Download Eedina App Android / iOS

X