100ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದ ಹಾಥರಸ್ ಕಾಲ್ತುಳಿತ ದುರ್ಘಟನೆಯಲ್ಲಿ ಆಡಳಿತದಿಂದ ಲೋಪಗಳಾಗಿವೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಆದರೆ, ದುರಂತ ಘಟನೆಯನ್ನು ‘ರಾಜಕೀಯ’ ಮಾಡಲು ನಾನು ಬಯಸುವುದಿಲ್ಲ ಎಂದೂ ಹೇಳಿದ್ದಾರೆ.
ಉತ್ತರ ಪ್ರದೇಶದ ಹಾಥರಸ್‌ನಲ್ಲಿ ಸಂಭವಿಸಿದ ಕಾಲ್ತುಳಿತದ ಸಂತ್ರಸ್ತರನ್ನು ರಾಹುಲ್ ಗಾಂಧಿ ಶುಕ್ರವಾರ ಬೆಳಗ್ಗೆ ಭೇಟಿ ಮಾಡಿದ್ದಾರೆ. ಭೇಟಿ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. “ಹಲವಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಹಲವಾರು ಜನರು ಪ್ರಾಣ ಕಳೆದುಕೊಂಡಿರುವುದು ದುಃಖದ ಸಂಗತಿ” ಎಂದು ಹೇಳಿದ್ದಾರೆ.
“ನಾನು ರಾಜಕೀಯ ದೃಷ್ಟಿಕೋನದಿಂದ ಮಾತನಾಡಲು ಬಯಸುವುದಿಲ್ಲ. ಆದರೆ, ಆಡಳಿತದ ಕಡೆಯಿಂದ ಕೆಲವು ಲೋಪಗಳಾಗಿವೆ” ಎಂದು ಹೇಳಿದ್ದಾರೆ.
ಹಾಥರಸ್ ಭೇಟಿ ವೇಳೆ ರಾಹುಲ್ ಗಾಂಧಿ ಜೊತೆಗೆ ಉತ್ತರ ಪ್ರದೇಶದ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಅಜಯ್ ರೈ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಅವಿನಾಶ್ ಪಾಂಡೆ, ಪಕ್ಷದ ವಕ್ತಾರ ಸುಪ್ರಿಯಾ ಶ್ರೀನಾಟೆ ಮತ್ತು ಇತರ ಪದಾಧಿಕಾರಿಗಳು ಇದ್ದರು.
ಮಂಗಳವಾರ ಹಾಥರಸ್‌ನಲ್ಲಿ ನಡೆದ ಸ್ವಯಂಘೋಷಿತ ದೇವಮಾನವ ಬಾಬಾ ಭೋಲೆ ಅವರ ಸತ್ಸಂಗದಲ್ಲಿ ಕಾಲ್ತುಳಿತ ಸಂಭವಿಸಿ ಒಟ್ಟು 121 ಜನರು ಸಾವನ್ನಪ್ಪಿದ್ದಾರೆ. ಹಲವರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.