“ಭೂಮಿಯ ಮೇಲಿನ ಯಾವ ಜೀವಿಯನ್ನೂ ದ್ವೇಷ ಮಾಡುವ ಹಕ್ಕು ಯಾರಿಗೂ ಇಲ್ಲ. ಎಲ್ಲರನ್ನೂ ಸ್ನೇಹ ಹಾಗೂ ಮೈತ್ರಿಭಾವದಿಂದ ಕಾಣಬೇಕು ಎಂದು ಜಗತ್ತಿನ ಧರ್ಮಗ್ರಂಥಗಳು ಸಾರಿವೆ” ಎಂದು ಕೆಪಿಸಿಸಿ ವಕ್ತಾರ ಹಾಗೂ ಅಹಿಂದ ನಾಯಕ ನಿಕೇತ್ ರಾಜ್ ಮೌರ್ಯ ತಿಳಿಸಿದರು.
ತುಮಕೂರು ನಗರದ ಕನ್ನಡ ಭವನದಲ್ಲಿ ಶುಕ್ರವಾರ ಸಂಜೆ ಮುಸ್ಲಿಂ ಬಾಂಧವ್ಯ ವೇದಿಕೆ ಕರ್ನಾಟಕದ 2024-25ನೇ ಸಾಲಿನ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಪದಪ್ರದಾನ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
“ರಹೀಮ ರಾಮನ ಕೈ ಹಿಡಿದು ನಲಿಯುವುದು ಗಾಂಧಿಯ ಕನಸು. ಕುವೆಂಪುವಿನ ರಾಮನಿಗೆ ದ್ವೇಷ ತಿಳಿದಿರಲಿಲ್ಲ. ಇದಕ್ಕೆ ಆದರ್ಶಮಯವಾಗಿ ಸ್ವಾತಂತ್ರ್ಯ ಹೋರಾಟಗಾರ ಅಬ್ದುಲ್ ಗಫೂರ್ ಖಾನ್ ಹಾಗೂ ಮಹಾತ್ಮಗಾಂಧಿ ನಿಲ್ಲುತ್ತಾರೆ. ಯಾವ ಹಿಂದೂ ಮತ್ತು ಮುಸ್ಲಿಮನಲ್ಲಿ ಹಗೆ ಇರುತ್ತದೆಯೋ ಅವರಿಗೆ ಗೀತೆಯಾಗಲೀ, ಕುರಾನ್ ಆಗಲೀ ಅರ್ಥವಾಗಿಲ್ಲ ಎಂದೇ ನಾವು ತಿಳಿಯಬೇಕು” ಎಂದು ಹೇಳಿದರು.
“ದೇಶದಲ್ಲಿ ರಾಮ ಕೃಷ್ಣರಾಗಿ ಬದುಕುವುದು ಸಾಧ್ಯವಿದೆ. ಆದರೆ, ಅಕ್ಟರ್ ಆಗಿ ಬದುಕಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ನಮ್ಮಲ್ಲಿನ ಮನುಷ್ಯತ್ವವನ್ನು ದ್ವೇಷದ ಕಾರಣಕ್ಕಾಗಿ ಕಳೆದುಕೊಳ್ಳುತ್ತಿದ್ದೇವೆ. ಪ್ರತಿಯೊಬ್ಬರೂ ಈ ನೆಲವನ್ನು ಪ್ರೀತಿಸಿ ಎಂದು ಹೇಳಿದ ಗಾಂಧಿ, ಇದೇ ನೆಲದಲ್ಲಿ ಹೇ ರಾಮ್ ಎನ್ನುತ್ತಲೇ ಹತ್ಯೆಗೊಳಗಾದರು” ಎಂದು ನಿಕೇತ್ ರಾಜ್ ಮೌರ್ಯ ಹೇಳಿದರು.
ಮುಸ್ಲಿಂ ಬಾಂಧವ್ಯ ವೇದಿಕೆ ಕರ್ನಾಟಕದ ನೂತನ ಅಧ್ಯಕ್ಷ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿ ಸುಹೇಲ್ ಅಹಮದ್ ಮರೂರ್ ಮಾತನಾಡಿ, “ಭಾರತ ಎಂದರೆ ಬಾಂಧವ್ಯದ ರಮಣೀಯ ತವರು. ಭಾರತದ ತತ್ವವೇ ಔದಾರ್ಯ. ಅದನ್ನು ಕ್ರೌರ್ಯವಾಗಿ ಮಾರ್ಪಡಿಸಲು ಫ್ಯಾಸಿಸ್ಟ್ ಶಕ್ತಿಗಳು ಹೋರಾಡುತ್ತಿವೆ” ಎಂದು ಕಳವಳ ವ್ಯಕ್ತಪಡಿಸಿದರು.
“ನಮ್ಮ ಕಣ್ಣ ಮುಂದೆಯೇ ಗೋಡೆ ಕಟ್ಟುವ ರಾಜಕಾರಣ ನಡೆಯುತ್ತಿದೆ. ಅದನ್ನು ತಡೆಯಬೇಕು ಹಾಗೂ ಪ್ರತಿಭಟಿಸಬೇಕು. ಆ ನಿಟ್ಟಿನಲ್ಲಿ ರಾಜಕಾರಣ ಮಾಡಬೇಕು. ರಾಜಕೀಯದ ಹೊರತಾಗಿ ನಾವೇನೋ ಮಾಡುತ್ತೇವೆ ಎಂದರೆ ಸಾಧ್ಯವಿಲ್ಲ. ಸಂವಿಧಾನದ ತತ್ವ ಹಾಗೂ ಪ್ರಜಾಪ್ರಭುತ್ವದ ಆಶಯಗಳು ಆಪಾಯದಲ್ಲಿವೆ. ಅವುಗಳ ರಕ್ಷಣೆಗಾಗಿ ನಾನು ಪೊಲೀಸ್ ಅಧಿಕಾರಿ ಹುದ್ದೆಗೆ ರಾಜೀನಾಮೆ ಕೊಟ್ಟು ಹೊರಬಂದೆ” ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವ ಸಮಾಜ ಸೇವಕರಾದ ಚಾರ್ಮಾಡಿ ಹಸನಬ್ಬರನ್ನು ಸನ್ಮಾನಿಸಲಾಯಿತು.
ಇದನ್ನು ಓದಿದ್ದೀರಾ? ಬೆಳಗಾವಿ | ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವರೇ ನೂತನ ಜಿಲ್ಲಾಧಿಕಾರಿ ಮೊಹಮ್ಮದ್ ರೋಶನ್
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಸ್ಲಿಂ ಬಾಂಧವ್ಯ ವೇದಿಕೆಯ ಅನೀಸ್ ಪಾಷಾ ಮಾತನಾಡಿದರು. ಈ ಸಂದರ್ಭದಲ್ಲಿ ತುಮಕೂರು ನಗರ ಕಾಂಗ್ರೆಸ್ ಮುಖಂಡ ಇಕ್ಬಾಲ್ ಅಹ್ಮದ್, ಸಾಮಾಜಿಕ ಹೋರಾಟಗಾರ ಮೆಹರೋಜ್ ಖಾನ್ ಇದ್ದರು.
ವೇದಿಕೆಯಲ್ಲಿ ಮುಸ್ಲಿಂ ಬಾಂಧವ್ಯ ವೇದಿಕೆಯ ಗೌರವಾಧ್ಯಕ್ಷ ಎಸ್ ಬಿ ದಾರಿಮಿ, ಕೋಟಾ ಇಬ್ರಾಹಿಂ ಸಾಹೇಬ್, ಡಾ.ಹಕೀಮ್ ತೀರ್ಥಹಳ್ಳಿ, ಸಾಹಿತಿ ಮುಷ್ತಾಕ್ ಹೆನ್ನಾಬೈಲ್ ಉಪಸ್ಥಿತರಿದ್ದರು.