ರಾಹುಲ್ ಅಬ್ಬರ | ಮಣಿಪುರದ ಬಗ್ಗೆ ತುಟಿ ಬಿಚ್ಚಿದ ಮೋದಿ!

Date:

Advertisements

ಕಳೆದೊಂದು ವರ್ಷದಿಂದ ಜನಾಂಗೀಯ ಹಿಂಸಾಚಾರದಿಂದ ಮಣಿಪುರ ನಲುಗಿದೆ. 2023ರ ಮೇ 3ರಂದು ಮಣಿಪುರ ರಾಜ್ಯದಲ್ಲಿ ಆರಂಭವಾದ ಜನಾಂಗೀಯ ದಳ್ಳುರಿಗೆ ಭೌಗೋಳಿಕವಾಗಿ ಮತ್ತು ಮಾನಸಿಕವಾಗಿ ಇಡೀ ರಾಜ್ಯವೇ ತತ್ತರಿಸಿದೆ. ಒಂದು ಕಡೆ ಹಿಂಸಾಚಾರದಿಂದ ನೆಲೆ ಕಳೆದುಕೊಂಡ 60,000 ನಿರಾಶ್ರಿತರು, ಮತ್ತೊಂದೆಡೆ ಇತ್ತೀಚಿನ ವರುಣಾರ್ಭಟಕ್ಕೆ ತತ್ತರಿಸಿದ ನಿರಾಶ್ರಿತರು ಈಗಲೂ ಸಂಕಷ್ಟದಲ್ಲಿದ್ದಾರೆ.

ಕಳೆದ ವರ್ಷ ಮೇ 3ರಂದು ಮೈಥೇಯಿ ಮತ್ತು ಕುಕಿ ಸಮುದಾಯಗಳ ನಡುವೆ ಘರ್ಷಣೆಗಳು ಭುಗಿಲೆದ್ದ ಒಂದು ದಿನದ ನಂತರ, ಮೇ 4ರಂದು ಕಾಂಗ್‌ಪೊಕ್ಪಿಯ ಬಿ ಫೈನೋಮ್ ಗ್ರಾಮದಲ್ಲಿ ಕುಕಿ ಸಮುದಾಯದ ಮೂವರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಯಿತು. ಇಬ್ಬರು ಕುಕಿ ಮಹಿಳೆಯರನ್ನು ಗುಂಪೊಂದು ಬೆತ್ತಲೆಗೊಳಿಸಿ ಮೆರವಣಿಗೆ ಮಾಡುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಈ ಘಟನೆ ಜಗತ್ತಿನಾದ್ಯಂತ ಜನಾಕ್ರೋಶವನ್ನು ಹುಟ್ಟುಹಾಕಿತು. ಕುಕಿ ಸಮುದಾಯದ ಮೇಲಿನ ಮೈಥೇಯಿಗಳ ಮೇಲಿನ ದಾಳಿಯ ಕಾರಣದಿಂದಾಗಿ ಕಳೆದ ಒಂದು ವರ್ಷದಿಂದ ಮಣಿಪುರದಲ್ಲಿ ಹಿಂಸಾಚಾರ ಮುಂದುವರೆದಿದೆ.

ಹಿಂಸಾಚಾರ ಭುಗಿಲೆದ್ದ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸೌಜನ್ಯಕ್ಕಾದರೂ ಮಣಿಪುರಕ್ಕೆ ಭೇಟಿ ನೀಡುವ ಪ್ರಯತ್ನ ಮಾಡಲಿಲ್ಲ. ಕನಿಷ್ಠ ಈ ಘಟನೆ ಬಗ್ಗೆ ಒಂದು ಮಾತು ಆಡಿರಲಿಲ್ಲ. ಇಡೀ ದೇಶದ ಆಕ್ರೋಶಕ್ಕೆ ಕಾರಣವಾಗಿದ್ದ ಮಣಿಪುರ ಹಿಂಸಾಚಾರದ ಬಗ್ಗೆ ಪ್ರಧಾನಿ ಮೋದಿಯವರು ಸತತ 79 ದಿನಗಳ ಬಳಿಕ ಮೌನ ಮುರಿದು ಮಾತನಾಡಿದ್ದರು. ಮಹಿಳೆಯರಿಬ್ಬರನ್ನು ಬೆತ್ತಲೆ ಮೆರವಣಿಗೆ ಮಾಡಿ, ಅತ್ಯಾಚಾರ ದೌರ್ಜನ್ಯ ಎಸಗಿದ ಘಟನೆ ಬಗ್ಗೆ ನೋವು ವ್ಯಕ್ತಪಡಿಸಿದ್ದರು. “ಘಟನೆ ಬಗ್ಗೆ ನನ್ನ ಹೃದಯದಲ್ಲಿ ನೋವಿದೆ, ಕೋಪ ಇದೆ”ಎಂದಿದ್ದರು.

ಪ್ರಧಾನಿಯ ಈ ಹೇಳಿಕೆಗೆ ರಾಷ್ಟ್ರೀಯ ದೈನಿಕ ‘ದಿ ಟೆಲಿಗ್ರಾಫ್’ 2023ರ ಜುಲೈ 21ರಂದು ತನ್ನ ಪತ್ರಿಕೆಯ ಮುಖಪುಟದಲ್ಲಿಯೇ ಪ್ರಧಾನಿಗೆ ಪರೋಕ್ಷವಾಗಿ ಛಾಟಿ ಏಟು ಕೊಟ್ಟಿತ್ತು.‘56 ಇಂಚಿನ ಚರ್ಮಕ್ಕೆ ನೋವು ಮತ್ತು ಅವಮಾನ ತಿಳಿಯಲು 79 ದಿನ ಬೇಕಾಯಿತು’ ಎಂಬ ಶೀರ್ಷಿಕೆಯೊಂದಿಗೆ ಮೊಸಳೆಯೊಂದು ಕಣ್ಣೀರು ಹಾಕುತ್ತಿರುವ ಗ್ರಾಫಿಕ್ಸ್ ಅನ್ನು ಬಳಸಿ, 79 ದಿನಗಳ ನಂತರ ‘ಮೊಸಳೆ ಕಣ್ಣೀರು’ ಎಂದು ಜಾಡಿಸಿತ್ತು.

ಇದಾದ ಬಳಿಕ ಮಣಿಪುರ ಎಂಬ ಪ್ರದೇಶ ನಮ್ಮ ದೇಶದಲ್ಲಿ ಇದೆ ಎಂಬುದನ್ನೇ ಮೋದಿ ಮರೆತಿದ್ದರು. ಲೋಕಸಭಾ ಚುನಾವಣೆ ಸಮಯದಲ್ಲೂ ಪ್ರಚಾರಕ್ಕಾಗಿಯೂ ಮೋದಿ ಮಣಿಪುರಕ್ಕೆ ಕಾಲಿಡಲಿಲ್ಲ. ತಮ್ಮ ಚುನಾವಣಾ ಪ್ರಚಾರಗಳಲ್ಲಿ ಮಣಿಪುರದ ಬಗ್ಗೆ ಒಂದೇ ಒಂದು ಮಾತನ್ನೂ ಎಲ್ಲಿಯೂ ಆಡಲಿಲ್ಲ. ಇದೀಗ, ಸತತ ಒಂದು ವರ್ಷಗಳ ಬಳಿಕ ಮಣಿಪುರ ಹಿಂಸಾಚಾರದ ಬಗ್ಗೆ ನರೇಂದ್ರ ಮೋದಿ ಅವರು ಸಂಸತ್‌ನಲ್ಲಿ ವಿರೋಧ ಪಕ್ಷದ ಎದುರು ಮಾತಾಡಿದ್ದಾರೆ. ಮಣಿಪುರದ ಬಗ್ಗೆ ಮಾತನಾಡಲು ಮೋದಿ ಅವರು ತೆಗೆದುಕೊಂಡಿದ್ದು ಒರೋಬ್ಬರಿ 1 ವರ್ಷ, ಎರಡು ತಿಂಗಳು ಕಾಲಾವಕಾಶ. ಅದೂ, ಸಂಸತ್‌ನಲ್ಲಿ ವಿಪಕ್ಷ ಪ್ರಬಲವಾಗಿರುವ ಕಾರಣಕ್ಕಾಗಿ ಮೋದಿ ಈಗ ಮಣಿಪುರ ಹಿಂಸಾಚಾರದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಪೂರ್ಣ ಬಹುಮತ ಗಳಿಸದ ಬಿಜೆಪಿ ಎನ್‌ಡಿಎ ಸರ್ಕಾರ ರಚನೆ ಮಾಡಿದೆ. ಇದೇ ಮೊದಲ ಬಾರಿಗೆ ಮೋದಿ ಅವರು ವಿರೋಧ ಪಕ್ಷದವರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ. ಇಷ್ಟು ದಿನ ಸರ್ವಾಧಿಕಾರ ನಡೆಸಿದ್ದ ಮೋದಿ ಅವರು ವಿಪಕ್ಷಗಳನ್ನು ಅಪಹಾಸ್ಯ ಮಾಡುವುದನ್ನು ಬಿಟ್ಟು, ಉತ್ತರ ನೀಡಲು ಮುಂದಾಗಿದ್ದಾರೆ.

ಜುಲೈ 1ರಂದು ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕನಾಗಿ ಮೊಟ್ಟಮೊದಲ ಬಾರಿಗೆ ರಾಹುಲ್ ಗಾಂಧಿ ಅವರು ಭಾಷಣ ಮಾಡಿದ್ದು, ಅವರ ಅಬ್ಬರದ ಭಾಷಣಕ್ಕೆ ಮತ್ತು ಅವರು ಎತ್ತಿದ್ದ ಪ್ರಶ್ನೆಗಳಿಗೆ ಬಹುತೇಕ ಬಿಜೆಪಿಗರು ಉತ್ತರ ನೀಡುವಲ್ಲಿ ತಡವಡಿಸಿದರು. ಅಲ್ಲದೇ, ರಾಹುಲ್ ಗಾಂಧಿ ಅವರು ಹೇಳಿದ್ದ ಮಾತನ್ನು ಅಲ್ಲಿಯೇ ಕ್ಷಣಾರ್ಥದಲ್ಲಿ ವಿಷಯಾಂತರಿಸಿ, ತಿರುಚುವ ಯತ್ನವನ್ನೂ ನಡೆಸಿದರು. ಆದರೆ, ರಾಹುಲ್ ಸಂಸತ್‌ನಲ್ಲಿಯೇ ತಕ್ಕ ಉತ್ತರವನ್ನೂ ಕೊಟ್ಟರು.

ಮಧ್ಯರಾತ್ರಿಯಲ್ಲಿ ಮಹಿಳೆಯೊಬ್ಬರು ಏಕಾಂಗಿಯಾಗಿ, ಧೈರ್ಯವಾಗಿ ಓಡಾಡುವ ವಾತಾವರಣ ಸೃಷ್ಟಿಯಾದಾಗ ಮಾತ್ರ ಈ ದೇಶದಲ್ಲಿ ರಾಮರಾಜ್ಯ ಸ್ಥಾಪನೆಯಾಗುತ್ತದೆ ಎಂದು ಗಾಂಧೀಜಿ ಹೇಳಿದ್ದರು. ಇದು ಅವರ ಕನಸಾಗಿತ್ತು. ಆದರೆ, ಬಿಜೆಪಿಯ ರಾಮರಾಜ್ಯದಲ್ಲಿ ಹಾಡಹಗಲೇ ಮಹಿಳೆಯರನ್ನು ಬೆತ್ತಲಾಗಿಸಿ ಮೆರವಣಿಗೆ ನಡೆಸಿದ್ದಲ್ಲದೆ, ಅವರ ಮೇಲೆ ಸಾಮೂಹಿಕ ಅತ್ಯಾಚಾರಗಳು ನಡೆದಿವೆ. ಈಗಲೂ ಕೂಡ ನಡೆಯುತ್ತಿವೆ. ಮಣಿಪುರ ಅಂತಹ ಬರ್ಬರ ಕೃತ್ಯಗಳಿಗೆ ಇತ್ತೀಚಿನ ಉದಾಹರಣೆಯಾಗಿದೆ.

“ಮಣಿಪುರ ಹಿಂಸಾಚಾರದ ಬಗ್ಗೆ ಪ್ರಧಾನಿ ಮೋದಿಯವರು ಹೇಗೆ ಸ್ಪಂದಿಸಿದರು ಎಂಬುವುದು ಇಡೀ ಜಗತ್ತಿಗೇ ತಿಳಿದಿದೆ. ಮಣಿಪುರದಲ್ಲಿ ನಡೆಯುತ್ತಿರುವ ಅನ್ಯಾಯ, ಅನಾಚಾರಗಳಿಗಾಗಿ ಭಾರತವು ತೀವ್ರ ಟೀಕೆಗೊಳಗಾಗಿದೆ” ಎಂದು ಆಡಳಿತ ಪಕ್ಷದವರನ್ನು ರಾಹುಲ್ ಗಾಂಧಿ ಕುಟುಕಿದರು.

ರಾಹುಲ್ ಗಾಂಧಿಯ ಈ ಅಬ್ಬರದ ಭಾಷಣದ ಬೆನ್ನಲ್ಲೇ, ಮಣಿಪುರ ಹಿಂಸಾಚಾರದ ಬಗ್ಗೆ ತುಟಿ ಬಿಚ್ಚದ ಪ್ರಧಾನಿ ಮೋದಿ ಸಂಸತ್‌ನಲ್ಲಿ ಮಣಿಪುರದ ಬಗ್ಗೆ ಮಾತನಾಡಿದ್ದಾರೆ. “ಹಿಂಸಾಚಾರ ಪೀಡಿತ ಪ್ರದೇಶದಲ್ಲಿ ಸಹಜ ಪರಿಸ್ಥಿತಿಯನ್ನು ತರಲು ಸರ್ಕಾರ ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದೆ. ಹಿಂಸಾಚಾರ ಕ್ಷೀಣಿಸಿದ್ದು, ರಾಜ್ಯದ ಹಲವು ಭಾಗಗಳಲ್ಲಿ ಶಾಲೆಗಳು ಪುನರ್ ಆರಂಭವಾಗಿವೆ. ಮರಳಿ ಸಂಪೂರ್ಣ ಶಾಂತ ಪರಿಸ್ಥಿತಿಗೆ ತರಲು ಎಲ್ಲ ಪ್ರಯತ್ನ ಮಾಡಲಾಗುತ್ತಿದೆ” ಎಂದಿದ್ದಾರೆ.

“ಮಣಿಪುರದಲ್ಲಿ ಶಾಂತಿ ಮರು ಸ್ಥಾಪಿಸಲು ಪ್ರಯತ್ನ ಮಾಡಲಾಗುತ್ತಿದೆ. ಹಿಂಸಾಚಾರ ಪ್ರಕರಣದಲ್ಲಿ 500ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಸುಮಾರು 11,000 ಎಫ್‌ಐಆರ್ ದಾಖಲಿಸಲಾಗಿದೆ. ಮಣಿಪುರದ ಬಹುತೇಕ ಕಡೆಗಳಲ್ಲಿ ಸಹಜ ಪರಿಸ್ಥಿತಿ ಏರ್ಪಟ್ಟಿದೆ. ಪ್ರವಾಹದ ಪರಿಸ್ಥಿತಿ ಉಂಟಾದಾಗ ಎರಡು ಎನ್‌ಡಿಆರ್‌ಎಫ್ ತಂಡವನ್ನು ಕಳುಹಿಸಲಾಗಿತ್ತು” ಎಂದು ಪ್ರಧಾನಿ ಸಂಸತ್‌ನಲ್ಲಿ ಹೇಳಿದ್ದಾರೆ.

ಪ್ರತಿಪಕ್ಷಗಳು ಪರಿಸ್ಥಿತಿಯ ಲಾಭ ಪಡೆದುಕೊಂಡಿವೆ ಎಂದು ಕಾಂಗ್ರೆಸ್ ವಿರುದ್ಧ ಆರೋಪ ಮಾಡಿದ ಮೋದಿ, “ಒಂದು ದಿನ ನಿಮ್ಮನ್ನು ಜನರು ತಿರಸ್ಕರಿಸುತ್ತಾರೆ. ಮಣಿಪುರ ವಿಷಯವನ್ನಿಟ್ಟುಕೊಂಡು ರಾಜಕೀಯ ಮಾಡುವುದನ್ನು ನಿಲ್ಲಿಸಿ” ಎಂದರು. ಆದರೆ, ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಬೀಗಿದ್ದ ಬಿಜೆಪಿ ಇದೀಗ ಮಣಿಪುರ ರಾಜ್ಯದಲ್ಲಿರುವ ಎರಡು ಲೋಕಸಭಾ ಕ್ಷೇತ್ರದಲ್ಲಿ ಮಕಾಡೆ ಮಲಗಿದೆ.

ಮಣಿಪುರದಲ್ಲಿ ಹಿಂಸಾಚಾರ ಭುಗಿಲೆದ್ದಾಗ ಸೌಜ್ಯನ್ಯಕ್ಕಾದರೂ ಭೇಟಿ ನೀಡದ ಮೋದಿ ಅವರಿಗೆ ಕುಕಿ, ಮೈತೇಯಿ, ನಾಗಾ ಮೂರು ಸಮುದಾಯದವರು ಚುನಾವಣೆಯಲ್ಲಿ ನೀಡಿರುವ ಉತ್ತರವನ್ನು ಪ್ರಧಾನಿ ಮೋದಿ ಅವರು ಮತ್ತೊಮ್ಮೆ ಅವಲೋಕಿಸಬೇಕಾಗಿದೆ. ತಮ್ಮನ್ನು ತಿರಸ್ಕಾರ ಮಾಡಿರುವ ಬಗ್ಗೆ ಮೋದಿ ಅವರು ಅರ್ಥೈಸಿಕೊಳ್ಳಬೇಕಾಗಿದೆ.

ಮೋದಿ ಮಣಿಪುರದಲ್ಲಿ ಸಹಜ ಸ್ಥಿತಿ ಬರುತ್ತಿದೆ ಎಂದು ಹೇಳಿದ್ದು ಸುಳ್ಳು ಎಂದು ಅಲ್ಲಿಯ ವಾಸ್ತವವನ್ನು ಉದಾಹರಿಸಿ ಹಲವು ಮಂದಿ ಹೇಳಿದ್ದಾರೆ. ಮಣಿಪುರದ ಪರಿಸ್ಥಿತಿ ಇನ್ನೂ ಗಂಭೀರವಾಗಿಯೇ ಇದ್ದರೂ ಎಲ್ಲವೂ ಸರಿಯಾಗಿದೆ ಎಂಬಂತೆ ಮೋದಿ ಹೇಳಿದ್ದು ಅವರಿಗೆ ಮಣಿಪುರದಂತ ಮುಖ್ಯ ವಿಷಯಗಳ ಬಗ್ಗೆ ಈಗಲೂ ಕೂಡ ಆಸಡ್ಡೆಯಿರುವುದು ಗೊತ್ತಾಗುವಂತಿದೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸರಣಿ ಅವಘಡಗಳಿಂದ ಬಯಲಾದ ಮೋದಿಯವರ ‘ಅಭಿವೃದ್ಧಿ ಮತ್ತು ಆಡಳಿತ’

ರಾಹುಲ್ ಗಾಂಧಿ ಸೇರಿದಂತೆ ಪ್ರತಿಪಕ್ಷದ ಸದಸ್ಯರು ಮಣಿಪುರದ ವಿಷಯ ಎತ್ತಿ ಸರ್ಕಾರದ ಮೇಲೆ ಸಕಾರಣವಾಗಿ ದಾಳಿ ಮಾಡಿದರಿಂದ ಅನಿವಾರ್ಯವಾಗಿ ಮೋದಿ ಮಣಿಪುರದ ವಿಷಯ ಮಾತಾಡಿದ್ದಾರೆಯೇ ಹೊರತು ನಿಜವಾದ ಕಾಳಜಿ ಮೋದಿಗಿತ್ತೆ ಎಂಬ ಗಂಭೀರ ಅನುಮಾನವೂ ಏಳುತ್ತದೆ.

ಸಂಘರ್ಷ ಆರಂಭವಾದ ಮೇಲೆ ಈವರೆಗೂ ಮಣಿಪುರಕ್ಕೆ ಕಾಲಿಡದ ಮೋದಿ ಈಗಲಾದರೂ ಮಣಿಪುರ ಜನತೆಯ ಕೂಗನ್ನು ಅರ್ಥಮಾಡಿಕೊಳ್ಳಬೇಕಾಗಿದೆ. ಇಷ್ಟು ದಿನ ಸರ್ವಾಧಿಕಾರ ಆಡಳಿತ ನಡೆಸಿದ ಮೋದಿ ಅವರಿಗೆ ಸೆಡ್ಡು ಹೊಡೆಯಲು ಪ್ರಧಾನಿ ಹುದ್ದೆಯ ಛಾಯೆಯಾದ ವಿರೋಧ ಪಕ್ಷದ ನಾಯಕನ ಸ್ಥಾನವೂ ಬಂದಿದೆ. ರಾಹುಲ್ ಗಾಂಧಿ ಅವರು ಆಡಳಿತದ ಸಮಸ್ಯೆಗಳು ಮತ್ತು ಲೋಪದೋಷಗಳ ಬಗ್ಗೆ ಸಂಸತ್‌ನಲ್ಲಿ ಧ್ವನಿಎತ್ತಲಿದ್ದಾರೆ. ಇಷ್ಟು ದಿನ ಸರ್ವಾಧಿಕಾರ ಆಡಳಿತ ನಡೆಸುತ್ತಿದ್ದ ಮೋದಿ ಅವರಿಗೆ ಈಗ ಮೂಗುದಾರ ಎಳೆಯುವವರು ಬಂದಿರುವುದು ಸಮಾಜಕ್ಕೆ ಒಳಿತಾಗಲಿದೆ.

e057b508e9e1b164fadd3c3edb023f5214f4d0a6d12066a30e302f9e3b0f6f24?s=150&d=mp&r=g
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಅಲೆಮಾರಿ ಸಮುದಾಯಗಳಿಗೆ 1% ಪ್ರತ್ಯೇಕ ಮೀಸಲಾತಿಗೆ ಆಗ್ರಹ; ದೆಹಲಿಯಲ್ಲಿ ಪ್ರತಿಭಟನೆ

ಕರ್ನಾಟಕ ಸರ್ಕಾರವು ಒಳಮೀಸಲಾತಿಯನ್ನು ಜಾರಿಗೊಳಿಸಿದೆ. ಆದರೆ, ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕ 1%...

‘ನನ್ನ ಗಂಡನನ್ನು ಭೇಟಿಯಾಗುವ ಅರ್ಹತೆ ನನಗಿಲ್ಲವೇ?’: ರಾಷ್ಟ್ರಪತಿ, ಮೋದಿಗೆ ಪತ್ರ ಬರೆದ ವಾಂಗ್ಚುಕ್ ಪತ್ನಿ

ಲಡಾಖ್‌ಗೆ ರಾಜ್ಯ ಸ್ಥಾನಮಾನ ನೀಡಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಇಟ್ಟುಕೊಂಡು...

ಯುವಜನರಿಗಾಗಿ ಪ್ರಾಣವನ್ನೇ ತ್ಯಾಗ ಮಾಡುತ್ತೇನೆ: ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ

ಸುಡುವ ಬಿಸಿಲಿನಲ್ಲಿ ಕುರಿತು ಯುವಜನರು ತಮ್ಮ ಹಕ್ಕೊತ್ತಾಯಗಳ ಈಡೇರಿಕೆಗಾಗಿ ಹೋರಾಟ ನಡೆಸುತ್ತಿದ್ದಾರೆ....

ದೆಹಲಿ ಶಾಲೆಗಳಲ್ಲಿ RSS ಬೋಧನೆ: ಮಕ್ಕಳ ಎಳೆ ಮನಸ್ಸಲ್ಲಿ ಕೋಮುದ್ವೇಷ ಬಿತ್ತುವ ಹುನ್ನಾರ!

ಕೋಮುವಾದಿ, ಕೋಮುದ್ವೇಷಿ, ಸಮಾಜಘಾತುಕ ಸಂಘಟನೆಯ ಬಗ್ಗೆ ಶಾಲೆಗಳಲ್ಲಿ ಬೋಧಿಸುವುದು ಎಳೆ ಮನಸ್ಸುಗಳಲ್ಲಿ...

Download Eedina App Android / iOS

X