ಮಧ್ಯ ಕರ್ನಾಟಕದ ಜೀವನಾಡಿ ಎಂದು ಹೆಸರಾಗಿರುವ ಭದ್ರಾ ಜಲಾಶಯದ ನೀರು ಪೋಲು ಅಧಿಕವಾಗಿರುವುದರಿಂದ ರೈತರಲ್ಲಿ ಆತಂಕಕ್ಕೆ ಮನೆ ಮಾಡಿದೆ.
ಮಲೆನಾಡಿನಲ್ಲಿ ಉತ್ತಮ ಮಳೆ ಸುರಿದು ಶುಕ್ರವಾರದ ವೇಳೆಗೆ 16 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಕಳೆದ ಬಾರಿ ಇದೇ ಅವಧಿಯಲ್ಲಿ 137 ಅಡಿ ತಲುಪಿದ ನೀರು ಈಬಾರಿ 129 ಅಡಿಗೆ ತಲುಪಿದ್ದು, ಅಧಿಕಾರಿಗಳ ಯಡವಟ್ಟಿನಿಂದಾಗಿ 8 ಅಡಿ ಕಡಿಮೆಯಾಗಿ, 5 ಸಾವಿರ ಕ್ಯೂಸೆಕ್ ನೀರು ಪೋಲಾಗುತ್ತಿದೆಯಾ ಎಂಬ ಅನುಮಾನ ಶುರುವಾಗಿದೆ. ಇದಕ್ಕೆ ಕಾರಣ ಜಲಾಶಯದಿಂದ ನದಿಗೆ ನೀರು ಹರಿದುಬರುತ್ತಿರುವ ದೃಶ್ಯ ಎಲ್ಲೆಡೆ ಕಂಡುಬರುತ್ತಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಭದ್ರಾ ಡ್ಯಾಂ ನೀರಿನ ಪ್ರಮಾಣ ಕಡಿಮೆಯಾಗಿದೆ. ಇನ್ನೂ ಎಂಟು ಅಡಿ ನೀರು ಬರಬೇಕು. ಜಲಾಶಯದ ನೀರಿನ ಮಟ್ಟ 129.6 ಅಡಿಗೆ ಏರಿಕೆಯಾಗಿದೆ. ಅಧಿಕಾರಿಗಳ ಯಡವಟ್ಟಿನಿಂದ ಮತ್ತೆ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ ಆತಂಕಕ್ಕೆ ಕಾರಣವಾಗಿದೆ.
“ಡ್ಯಾಂಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬರುತ್ತಿದ್ದು, ಸಂಗ್ರಹವಾದರೆ ನೀರಿನ ಮಟ್ಟ ಏರಿಕೆಯಾಗುತ್ತದೆ. ಐದು ಸಾವಿರದಷ್ಟು ಕ್ಯೂಸೆಕ್ ನೀರು ಪೋಲಾದರೆ ಯಾರು ಹೊಣೆ? ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಭದ್ರಾ ಡ್ಯಾಂ ಅಧಿಕಾರಿಗಳಿಗೆ ಯಾಕೆ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತಿಲ್ಲ” ಎಂದು ರೈತರು ಪ್ರಶ್ನಿಸುತ್ತಿದ್ದಾರೆ.
“ಜಲಾಶಯ ತುಂಬಿದ ಬಳಿಕ, ನದಿಗೆ ನೀರು ಬಿಡಲು ಕ್ರೆಸ್ಟ್‌ಗೇಟ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಈ ಕ್ರೈಸ್ಟ್‌ಗೇಟ್‌ಗಳನ್ನು ಬೇಸಿಗೆಯಲ್ಲಿ ರಿಪೇರಿ ಮಾಡಿಕೊಂಡು ಸುಸ್ಥಿತಿಯಲ್ಲಿ ಇಡಬೇಕು. ಆದರೆ ಡ್ಯಾಂಗೆ ಸಂಬಂಧಿಸಿದ ರಿಪೇರಿ ಕೆಲಸ ಬೇಸಿಗೆ ಸಮಯದಲ್ಲಿ ಮಾಡದೆ ಮಳೆಗಾಲದಲ್ಲಿ ಕೈಗೆತ್ತಿಕೊಂಡಿರುವುದೇ ಈ ಸಮಸ್ಯೆಗೆ ಮೂಲ ಕಾರಣವೆಂದು ಹೇಳಲಾಗುತ್ತಿದೆ. ನದಿಗೆ ನೀರು ಬಿಡುವ ಎರಡು ಕ್ರೆಸ್ಟ್‌ಗೇಟ್‌ಗಳಿದ್ದು, ಸರಿಯಾಗಿ ಕೆಲಸ ಮಾಡುತ್ತವೆಯೋ ಇಲ್ಲವೋ ಎಂಬುದನ್ನು ಅಧಿಕಾರಿಗಳು ಪರಿಶೀಲಿಸಲು ಈಗ ಮುಂದಾಗಿದ್ದಾರೆಂದು ಹೇಳಲಾಗುತ್ತಿದೆ. ಇದರಿಂದಾಗಿ ಡ್ಯಾಂನ ರಿವರ್ ಗೇಟನ್ನು ರಿಪೇರಿ ಕೈಗೊಳ್ಳಲಾಗಿದೆ. ಆದರೆ ರಿಪೇರಿ ಮುಗಿದ ಮೇಲೆ ಒಂದು ಡ್ಯಾಂ ರಿವರ್ ಗೇಟ್ ಸಂಪೂರ್ಣ ಕೆಳಗೆ ಇಳಿಯುತ್ತಿಲ್ಲ. ಇದರಿಂದ ಡ್ಯಾಂಗೆ ಬರುತ್ತಿರುವ ನೀರು ಸಂಗ್ರಹವಾಗದೇ ಸರಾಗವಾಗಿ ಹೊರಕ್ಕೆ ಹೋಗುತ್ತಿದೆ” ಎಂಬುದನ್ನು ಉನ್ನತ ಮೂಲಗಳು ತಿಳಿಸಿವೆ.
“ಡ್ಯಾಂನ ಒಂದು ಗೇಟ್‌ನಿಂದ ಭಾರೀ ಪ್ರಮಾಣದಲ್ಲಿ ನೀರು ಪೋಲಾಗುತ್ತಿರುವುದನ್ನು ಕಂಡು ರೈತರು ಆತಂಕಗೊಂಡಿದ್ದಾರೆ. ಕಳೆದ ಒಂದು ವಾರದಿಂದ ನಿರಂತರವಾಗಿ ಸಾವಿರಾರು ಕ್ಯೂಸೆಕ್ ನೀರು ನದಿಗೆ ಹರಿದುಹೋಗುತ್ತಿದೆ. ಸೂಕ್ತ ಗೇಟನ್ನು ಕೂರಿಸಲಾಗದೆ ಡ್ಯಾಂ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಒದ್ದಾಡುತ್ತಿದ್ದಾರೆ. ಮಳೆಗಾಲದಲ್ಲಿ ಜಲಾಶಯದಲ್ಲಿನ ಸಂಗ್ರಹವಾದ ನೀರು ಅಧಿಕಾರಿಗಳ ಯಡವಟ್ಟಿನಿಂದ ಹೋದರೆ ಯಾರು ಹೊಣೆ? ಬರೋಬ್ಬರಿ ನಾಲ್ಕೈದು ಸಾವಿರ ಕ್ಯೂಸೆಕ್ಸ್ ನೀರು ನದಿಗೆ ಹರಿಯುತ್ತಿದೆ. ಅಲ್ಲದೆ ಡ್ಯಾಂನಲ್ಲಿ ನೀರು ಸಂಗ್ರಹ ಹೆಚ್ಚುತ್ತಿಲ್ಲ. ನದಿಯಲ್ಲಿ ಸರಾಗವಾಗಿ ಹರಿಯುತ್ತಿರುವ ನೀರನ್ನು ಗಮನಿಸಿರುವ ರೈತರು ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನೆ ಮಾಡಿದರೆ ಸಮರ್ಪಕ ಉತ್ತರ ಸಿಗುತ್ತಿಲ್ಲ” ಎಂಬ ಮಾತುಗಳು ಕೇಳಿಬಂದಿವೆ.
ಸುದ್ದಿ ತಿಳಿದು ರೈತರು , ರೈತ ಮುಖಂಡರು ಜಲಾಶಯದತ್ತ ಧಾವಿಸುತ್ತಿದ್ದಾರೆ. ʼಕಾಡಾʼ ಅಧ್ಯಕ್ಷರು ಚಿಕ್ಕಮಗಳೂರಿನವರಾಗಿದ್ದು, ಈ ಮಾಹಿತಿ ಅವರಿಗೆ ತಲುಪಿದ್ದರೂ ಈವರೆಗೆ ಭೇಟಿ ನೀಡಿಲ್ಲವೆಂದು ಭಾರತೀಯ ರೈತ ಒಕ್ಕೂಟದ ಮೂಲಗಳು ತಿಳಿಸಿವೆ.
“ಈ ಹಿಂದೆ ರಿವರ್ ಗೇಟ್ ಕೆಲಸ ಮಾಡುತ್ತಿಲ್ಲ ಎಂಬುದರ ಬಗ್ಗೆ ಹಲವು ಕಡೆಗೆ ದೂರು ನೀಡಿದ್ದು, ಬಳಿಕ ಅನುದಾನ ಬಿಡುಗಡೆಯಾಗಿ ರಿಪೇರಿ ಕಾರ್ಯ ನಡೆದಿದೆಯೆಂದು ಹೇಳಲಾಗಿದೆಯಾದರೂ ಕೇವಲ ಕಾಗದದ ಪತ್ರಗಳಲ್ಲಿ ರಿಪೇರಿ ನಡೆದಿದೆ ಎಂಬುದು ಸ್ಥಳೀಯರ ಆರೋಪ. ಇನ್ನೂ ಇದೇ ಕಾರಣಕ್ಕೆ ಇದೀಗ ಗೇಟ್ ಕೈಕೊಟ್ಟಿದ್ದು, ಮೇಲಕ್ಕೆತ್ತಿದ ಗೇಟ್ನ್ನು ಇಳಿಸಲಾಗದೆ ಭರಪೂರ ನೀರು ಹರಿದು ಹೋಗುತ್ತಿದೆ. ಇದಕ್ಕೆ ಯಾರು ಹೊಣೆ” ಎಂಬುದು ರೈತ ಮುಖಂಡ ಪ್ರಶ್ನೆಯಾಗಿದೆ.
ಈ ಸುದ್ದಿ ಓದಿದೀರಾ? ತುಮಕೂರು | ರೈತನಿಗೆ ಭೂ ಪರಿಹಾರ ನೀಡುವಲ್ಲಿ ವಿಫಲ: ಟೂಡಾ ಕಚೇರಿಯ ಪೀಠೋಪಕರಣ ಜಪ್ತಿ
“ನದಿಗೆ ನೀರು ಬಿಡುವ ಗೇಟನ್ನು ಬೇಸಿಗೆ ಕಾಲದಲ್ಲಿ ರಿಪೇರಿ ಮಾಡಬೇಕಿತ್ತು. ಮಳೆಗಾಲದಲ್ಲಿ 17 ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರು ಹಾಗೂ ಒಳಹರಿವು ಹೆಚ್ಚಳವಾಗುಗುತ್ತಿರುವಾಗ ಅಧಿಕಾರಿಗಳು ರಿಪೇರಿ ಮಾಡಲು ಕೈಗೊಂಡಿರುವುದು ಮೂರ್ಖತನದ ಪರಮಾವಧಿ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ನದಿಗೆ 5000 ಕ್ಯೂಸೆಕ್ಸ್ ನೀರು ಪೋಲಾಗುತ್ತಿದೆ. ಇದರಿಂದ ರೈತರ ಬಗ್ಗೆ ಕಾಳಜಿ ಇಲ್ಲವೆಂಬುದು ತೋರಿಸುತ್ತದೆ. ಶೀಘ್ರ ನಿರ್ವಹಣೆಗೆ ಕ್ರಮ ಕೈಗೊಂಡು ನೀರನ್ನು ಜಲಾಶಯದಲ್ಲಿ ಕಾಯ್ದಿಡಬೇಕು” ಎಂದು ಭಾರತೀಯ ರೈತ ಒಕ್ಕೂಟ ದಾವಣಗೆರೆ ಅಧ್ಯಕ್ಷ ಹೆಚ್ ಆರ್ ಲಿಂಗರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.