ಸಂಶೋಧನೆ, ವಿಮರ್ಶೆ ಮಾಡುವವರ ಸೂಕ್ಷ್ಮತೆಯಿಂದ ಸಂಶೋಧನೆ ಹಾಗೂ ವಿಮರ್ಶೆಯ ಹೊಸ ಸಾಧ್ಯತೆಗಳನ್ನು ಹುಡುಕಲು ಸಾಧ್ಯ ಎಂದು ಚಿಂತಕ ಬರಗೂರು ರಾಮಚಂದ್ರಪ್ಪ ತಿಳಿಸಿದರು.
ಚಿತ್ರದುರ್ಗ ತಾಲೂಕಿನ ಜಿ ಆರ್ ಹಳ್ಳಿ ಜ್ಞಾನಗಂಗೋತ್ರಿ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಶನಿವಾರ ದಾವಣಗೆರೆ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಹಾಗೂ ಜ್ಞಾನಗಂಗೋತ್ರಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಕನ್ನಡ ಅಧ್ಯಯನ ವಿಭಾಗದಿಂದ ಕನ್ನಡ ಸಾಹಿತ್ಯ ಸಂಶೋಧನೆಯ ಹೊಸ ಸಾಧ್ಯತೆಗಳು ವಿಷಯ ಕುರಿತು ಆಯೋಜಿಸಿರುವ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
“ಸಂಶೋಧನೆ, ವಿಮರ್ಶೆ ಮಾಡುವವರಿಗೆ ಜಾತಿ, ಧರ್ಮ, ಪಕ್ಷ, ಪಂಥ ಇವೆಲ್ಲವನ್ನೂ ಮೀರಿದ ಮನಸ್ಥಿತಿ ಇರಬೇಕು. ಈ ಸೂಕ್ಷ್ಮತೆಗಳನ್ನು ಸಾಧಿಸುವವನೇ ಸಂಶೋಧನೆ ಹಾಗೂ ವಿಮರ್ಶೆಯ ಹೊಸ ಸಾಧ್ಯತೆಗಳನ್ನು ಹುಡುಕಲು ಸಾಧ್ಯ” ಎಂದರು.
“ಕಂಡುಕೊಳ್ಳುವ ಕ್ರಿಯೆ ಎಷ್ಟರ ಮಟ್ಟಿಗೆ ಜಾಗೃತವಾಗಿರುತ್ತದೆಯೋ ಅಷ್ಟರ ಮಟ್ಟಿಗೆ ಸಂಶೋಧನೆ, ವಿಮರ್ಶೆಯ ಸಾಧ್ಯತೆಗಳು ಹೆಚ್ಚಾಗುತ್ತಾ ಹೋಗುತ್ತದೆ. ಹಾಗಾಗಿ ನಾವು ಕೊಂಡುಕೊಳ್ಳುವುದಕ್ಕೆ ಮಾತ್ರ ಮೀಸಲಾಗದೆ ಕಂಡುಕೊಳ್ಳುವ ಮನುಷ್ಯರಾಗೋಣ” ಎಂದು ಹೇಳಿದರು.
“ಸಂಘಟಿತ ವಲಯದಿಂದ ಅಸಂಘಟಿತ ವಲಯಕ್ಕೆ ಸ್ಥಿತ್ಯಂತರಗೊಳ್ಳಬೇಕಾದ ಕಾಲದಲ್ಲಿ ನಾವಿದ್ದೇವೆ. ಆದ್ದರಿಂದ ಅಳಿಸಿ ಹೋಗುವುದನ್ನು ಉಳಿಸುವುದು ಸಂಶೋಧನೆಯ ಕೆಲಸವಾಗಬೇಕಿದೆ. ಸಂಘಟಿತ ವಲಯದ ಸಂಶೋಧನೆಗಳು ಸಾಕಷ್ಟು ನಡೆಯುತ್ತಿದ್ದು, ಇದು ಸ್ವಾಗತಾರ್ಹ. ಆದರೆ ಸಂಘಟಿತ ವಲಯದಿಂದ ಅಸಂಘಟಿತ ವಲಯಕ್ಕೆ ಸಂಶೋಧನೆ ಸ್ಥಿತ್ಯಂತರ, ವಿಸ್ತರಣೆಗೊಳ್ಳಬೇಕಾಗಿದೆ. ಇದು ಹೊಸ ಸವಾಲು ಹಾಗೂ ಹೊಸ ಸಾಧ್ಯತೆಯೂ ಹೌದು” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

“ಶಿಕ್ಷಣ ವಿಸ್ತರಣೆಯಾದಂತೆ ಸಾಹಿತ್ಯ, ವಿಮರ್ಶೆ, ಸಂಶೋಧನೆಯ ವಿಸ್ತರಣೆಯೂ ಆಯಿತು. ಈ ಹಿನ್ನಲೆಯಲ್ಲಿ ಶಿಕ್ಷಣವು ಹಟ್ಟಿ, ಹಾಡಿ, ಗುಡಿಸಲು, ಮಣ್ಣಿನ ಮನೆ, ಮಹಿಳೆಯರೆಡೆಗೆ ಶಿಕ್ಷಣ ಬಂತು. ಹಟ್ಟಿಗೆ ಶಿಕ್ಷಣ ಬಂದ ಮೇಲೆ ಆತಂಕ, ಅಕ್ರೋಶ ಹೊರಬರಲು ಶುರುವಾಯಿತು. ಹಾಡುಗಳಿಂದ ಅದರ ಪಾಡುಗಳು, ಮಣ್ಣಿನ ಮನೆಯಿಂದ ಮನದಾಳ, ಮಹಿಳೆಯರಿಗೆ ಶಿಕ್ಷಣ ತಲುಪಿದ ನಂತರ ಇನ್ನೊಂದು ಆಯಾಮವೇ ಸಾಹಿತ್ಯದಲ್ಲಿ ಸೃಷ್ಟಿಯಾಯಿತು. ಹಾಗಾಗಿ ಶಿಕ್ಷಣದಿಂದ ಮಹಿಳಾ ಲೋಕ, ಬುಡಕಟ್ಟು ಲೋಕ, ಅಲೆಮಾರಿ ಲೋಕ ಸಾಹಿತ್ಯ ಸಂಸ್ಕೃತಿ ಸೇರಿದಂತೆ ಬೇರೆ ಬೇರೆ ಲೋಕ ಅನಾವರಣಕ್ಕೆ ಕಾರಣವಾಯಿತು” ಎಂದರು.
“ಸಾಹಿತ್ಯ ಸಂಶೋಧನೆಗೆ ವಿಮರ್ಶೆಯ ವಿವೇಕ ಬೇಕಾಗಿದೆ. ಸಾಹಿತ್ಯ ಸಂಶೋಧನೆ, ವಿಮರ್ಶೆ ಒಂದರೊಳಗೊಂದು ಬೆಸೆದುಕೊಂಡಿರುವುದನ್ನು ನಾವು ನೋಡುತ್ತಿದ್ದೇವೆ. ಆದರೆ ವಿಮರ್ಶೆಗಳೆಲ್ಲವೂ ಸಂಶೋಧನೆ ಆಗಬೇಕಾಗಿರುವುದಿಲ್ಲ. ಸಂಶೋಧನೆ ಅಂದರೆ ಅಜ್ಞಾತಗಳ ಹುಡುಕಾಟ. ವಿಮರ್ಶೆ ಎನ್ನುವುದು ವ್ಯಾಖ್ಯಾನಗಳ ಒಕ್ಕೂಟ” ಎಂದು ಹೇಳಿದರು.
ಕನ್ನಡ ಸಾಹಿತ್ಯ ಸಂಶೋಧನೆಯ ಹೊಸ ಸಾಧ್ಯತೆಗಳು ಎಂಬ ವಿಷಯಕ್ಕೆ ಸಂಬಂಧಪಟ್ಟಂತೆ ಲೇಖನಗಳ ಒಳಗೊಂಡ ನವನೀತ ಬೃಹತ್ ಗ್ರಂಥವನ್ನು ಲೋಕಾರ್ಪಣೆಗೊಳಿಸಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಹಸಿರು ಕ್ರಾಂತಿ ಹರಿಕಾರ ಬಾಬೂಜಿಯವರ ತತ್ವಾದರ್ಶ ನಮಗೆಲ್ಲ ಮಾದರಿ: ಜಿಲ್ಲಾಧಿಕಾರಿ ಶುಭಕಲ್ಯಾಣ್
ದಾವಣಗೆರೆ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಬಿ ಡಿ ಕುಂಬಾರ, ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ ವೆಂಕಟೇಶ್, ಕುವೆಂಪು ವಿಶ್ವವಿದ್ಯಾಲಯದ ಡಾ.ಬಿ ಆರ್ ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಡಾ ನೆಲ್ಲಿಕಟ್ಟೆ ಎಸ್ ಸಿದ್ದೇಶ್, ದಾವಣಗೆರೆ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ವಿಭಾಗ ಅಧ್ಯಕ್ಷ ಡಾ.ವಿ ಜಯರಾಮಯ್ಯ, ಜಿ ಆರ್ ಹಳ್ಳಿ, ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಂಯೋಜನಾಧಿಕಾರಿ ಪ್ರೊ.ಎಂ ಯು ಲೋಕೇಶ್, ಜಿ ಆರ್ ಹಳ್ಳಿ ಸ್ನಾತಕೋತ್ತರ ಕನ್ನಡ ಅಧ್ಯಯನ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ.ಎಚ್ ಜಿ ವಿಜಯ ಕುಮಾರ್, ಶಿಕಾರಿಪುರ ಸುವ್ವಿ ಪಬ್ಲಿಕೇಷನ್ ಪ್ರಕಾಶಕ ಬಿ ಎನ್ ಸುನೀಲ್ ಕುಮಾರ್, ತುಮಕೂರು ವಿಶ್ವವಿದ್ಯಾಲಯ ಪ್ರಾಧ್ಯಾಪಕಿ ಗೀತಾ ವಸಂತ, ಸರ್ಕಾರಿ ಕಲಾ ಕಾಲೇಜು ಸ್ನಾತಕೋತ್ತರ ಕನ್ನಡ ಅಧ್ಯಯನ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ. ಜೆ ಕರಿಯಪ್ಪ ಮಾಳಿಗೆ ಇದ್ದರು.
