- ಬಿಜೆಪಿ 140 ಕ್ಷೇತ್ರದಲ್ಲಿ ಗೆಲ್ಲಲಿದೆ ಎಂದು ಭವಿಷ್ಯ ನುಡಿದ ನಕಲಿ ಸಮೀಕ್ಷೆ
- ಭಾರತದಲ್ಲಿ ಚುನಾವಣಾ ಸಮೀಕ್ಷೆ ನಡೆಸಲ್ಲ ಎಂದು 2018ರಲ್ಲೇ ಸ್ಪಷ್ಟಪಡಿಸಿದ್ದ ಬಿಬಿಸಿ
ರಾಜ್ಯದಲ್ಲಿ ಚುನಾವಣಾ ಕಣ ರಂಗೇರುತ್ತಿರುವ ಹೊತ್ತಿನಲ್ಲೇ ʼಬಿಬಿಸಿʼ ಸಂಸ್ಥೆಯ ಹೆಸರಿನಲ್ಲಿ ಚುನಾವಣಾಪೂರ್ವ ನಕಲಿ ಸಮೀಕ್ಷೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ, ಭಾರತದಲ್ಲಿ ಚುನಾವಣಾ ಪೂರ್ವ ಸಮೀಕ್ಷೆ ನಡೆಸುವುದಿಲ್ಲ ಎಂದು ಸಂಸ್ಥೆ ಈ ಹಿಂದೆಯೇ ಸ್ಪಷ್ಟಪಡಿಸಿದೆ.
ʼಬಿಬಿಸಿʼ ಸಂಸ್ಥೆಯ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿರುವ ಈ ನಕಲಿ ಚುನಾವಣಾ ಪೂರ್ವ ಸಮೀಕ್ಷೆಯ ವರದಿಯ ಪೋಸ್ಟರ್ ಅನ್ನು ʼಸುಪ್ರೀಮ್ ತೇಲಿ ಬಿಜೆಪಿʼ ಎಂಬ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
ಈ ನಕಲಿ ಸಮೀಕ್ಷೆಯ ವರದಿಯಲ್ಲಿ, ʼಬಿಜೆಪಿ ಈ ಬಾರಿ ರಾಜ್ಯದಲ್ಲಿ 130 ರಿಂದ 142 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತದೆ. 58 ರಿಂದ 66 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲಲಿದ್ದಾರೆ. ಜೆಡಿಎಸ್ 22 ರಿಂದ 29 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಲಿದೆ. 1 ರಿಂದ 3ರ ಕ್ಷೇತ್ರಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ಆಡಳಿತಾರೂಢ ಬಿಜೆಪಿ 140ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆʼ ಎಂದು ಪ್ರದೇಶವಾರು ಸಮೀಕ್ಷೆ ನಡೆಸಿರುವುದಾಗಿಯೂ ಸುಳ್ಳು ವರದಿ ನೀಡಲಾಗಿದೆ.

ಈ ಬಗ್ಗೆ ರಾಷ್ಟ್ರೀಯ ಸುದ್ದಿ ಸಂಸ್ಥೆ ʼದಿ ಕ್ವಿಂಟ್ʼ ವರದಿ ಮಾಡಿದ್ದು, “ಬಿಬಿಸಿ ಈ ಬಾರಿಯ ಕರ್ನಾಟಕ ಚುನಾವಣೆಯ ಕುರಿತು ಯಾವುದೇ ಸಮೀಕ್ಷೆಯನ್ನು ನಡೆಸಿಲ್ಲ. ಬಿಬಿಸಿ ಹೆಸರಿನಲ್ಲಿ ಸುಳ್ಳಿ ಸಮೀಕ್ಷೆ ವರದಿ ಸೃಷ್ಟಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡಲಾಗುತ್ತಿದೆ. ಸಮೀಕ್ಷೆಯ ಪೋಸ್ಟರ್ ಜೊತೆಗೆ ʼಬಿಬಿಸಿ ಹಿಂದಿʼ ವೆಬ್ ತಾಣದ ಕರ್ನಾಟಕ ವಿಭಾಗದ ಲಿಂಕ್ ಅನ್ನು ಸೇರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗುತ್ತಿದೆ. ಆ ಲಿಂಕ್ ಒತ್ತಿ ನೋಡಿದರೆ, ಕರ್ನಾಟಕ ವಿಭಾಗದ ಸುದ್ದಿಯ ಪುಟ ತೆರೆದುಕೊಳ್ಳುತ್ತದೆಯೇ ಹೊರತು ಸಮೀಕ್ಷೆಯಲ್ಲ” ಎಂದು ಸ್ಪಷ್ಟಪಡಿಸಿದೆ.
ಈ ಹಿಂದೆ 2018ರ ಚುನಾವಣೆಯ ಸಂದರ್ಭದಲ್ಲೂ ಇದೇ ರೀತಿ ಸುಳ್ಳು ಸಮೀಕ್ಷೆಯ ವರದಿ ಹರದಾಡಿದ್ದಾಗ ಭಾರತದಲ್ಲಿ ನಾವು ಯಾವುದೇ ರೀತಿಯ ಚುನಾವಣಾ ಪೂರ್ವ ಸಮೀಕ್ಷೆ ನಡೆಸುವುದಿಲ್ಲ. ಸಂಸ್ಥೆಯ ಹೆಸರಿನಲ್ಲಿ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ ಎಂದು ಬಿಬಿಸಿ ಸಂಸ್ಥೆ ಟ್ವೀಟ್ ಮೂಲಕ ಮತದಾರರನ್ನು ಎಚ್ಚರಿಸಿತ್ತು.