ಆನೆ ಅರ್ಜುನನ ಸಮಾಧಿ ಚಿರಸ್ಮಾಯಿಯಾಗಿ ಉಳಿಯುವಂತೆ ಸಮಾಧಿ ಸ್ಥಳದಲ್ಲಿ ಅರ್ಜುನನ ಸ್ಮಾರಕ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಮುಂದಾಗಿದ್ದು, ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಅರ್ಜುನನ ಸ್ಮಾರಕ ನಿರ್ಮಾಣ ಕಾಮಗಾರಿಗೆ ಶಂಕು ಸ್ಥಾಪನೆ ನೆವೇರಿಸಿದರು.
ಅಂಬಾರಿ ಹೊರುತಿದ್ದ ಆನೆಯಾದ ಅರ್ಜುನ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಯಸಳೂರು ಅರಣ್ಯ ವಲಯದ ದಬ್ಬಳ್ಳಿಕಟ್ಟೆ ನೆಡುತೋಪಿನಲ್ಲಿ ಕಾಡಾನೆ ಜೊತೆ ಸೆಣಸಾಡಿ ಡಿಸೆಂಬರ್ 4 ರಂದು ಮೃತಪಟ್ಟಿತ್ತು.
ವೀರಾವೇಶದಿಂದ ಹೋರಾಡಿ ಅರ್ಜುನ ವೀರಮರಣ ಹೊಂದಿದ್ದ ಸ್ಥಳದಲ್ಲೇ ಅರ್ಜುನನ ಸಮಾಧಿ ಮತ್ತು ಸ್ಮಾರಕ ನಿರ್ಮಾಣ ಮಾಡುವಂತೆ ಅರ್ಜುನನ ಅಭಿಮಾನಿಗಳು ಸೇರಿದಂತೆ ಬಹುತೇಕರು ಒತ್ತಾಯ ಮಾಡಿದ್ದರಿಂದ ಇದೀಗ ₹50 ಲಕ್ಷ ವೆಚ್ಚದಲ್ಲಿ ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ.
ಚಿನ್ನದ ಅಂಬಾರಿ ಹೊತ್ತ ಅರ್ಜುನನ ಚಿತ್ರಗಳು, ರಾಜ್ಯ ಮಾತ್ರವಲ್ಲದೆ ದೇಶದ ವಿವಿಧೆಡೆಯೂ ಆನೆ, ಹುಲಿ ಮತ್ತು ಚಿರತೆ ಸೆರೆ ಕಾರ್ಯಾಚರಣೆಯಲ್ಲಿ ಅರ್ಜುನ ಪಾಲ್ಗೊಂಡ ಚಿತ್ರಗಳನ್ನೂ ಪ್ರದರ್ಶನ ಮಾಡುವ ಮೂಲಕ ಜನಮಾನಸದಲ್ಲಿ ಅರ್ಜುನನ ಸಾಹಸ, ಸೇವೆ, ಕೊಡುಗೆ ಚಿರಸ್ಥಾಯಿಯಾಗಿ ಉಳಿಯುವಂತೆ ಮಾಡಲು ಸರ್ಕಾರ ನಿರ್ಧರಿಸಿದೆ.
ಸ್ಮಾರಕ ನಿರ್ಮಾಣ ಕಾಮಗಾರಿಯನ್ನು 6 ತಿಂಗಳ ಒಳಗಾಗಿ ಅಂದರೆ ಅರ್ಜುನನ ಮೊದಲ ವರ್ಷದ ಪುಣ್ಯತಿಥಿ ಡಿಸೆಂಬರ್ 4ರೊಳಗೆ ಪೂರ್ಣಗೊಳಿಸುವಂತೆ ಅರಣ್ಯ ಸಚಿವರು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚಿಕ್ಕಬಳ್ಳಾಪುರ | ವಿವೇಕವಿಲ್ಲದ ನಡಿಗೆಗೆ ಪರಂಪರೆಯ ಸ್ಪರ್ಶವಾಗಬೇಕಿದೆ: ಗೊಲ್ಲಹಳ್ಳಿ ಶಿವಪ್ರಸಾದ್
ಸಚಿವ ಈಶ್ವರ್ ಖಂಡ್ರೆ, ಸ್ಥಳೀಯ ಶಾಸಕ ಸಿಮೆಂಟ್ ಮಂಜು, ಅರಸೀಕೆರೆ ಶಾಸಕ ಕೆ ಎಂ ಶಿವಲಿಂಗೇಗೌಡ, ಜಿಪಂ ಸಿಇಒ ಪೂರ್ಣಿಮಾ, ಸಿಸಿಎಫ್ ರವಿಶಂಕರ್, ಡಿಸಿಎಫ್ ಸೌರಭ್ ಕುಮಾರ್ ಸೇರಿದಂತೆ ಬಹುತೇಕರು ಶಂಕು ಸ್ಥಾಪನೆ ಕಾರ್ಯಕ್ರಮದಲ್ಲಿ ಇದ್ದರು.