ಭಾರತೀಯ ಕ್ರಿಕೆಟ್ ತಂಡದ ಅತ್ಯುತ್ತಮ ಆಟಗಾರ ರಾಹುಲ್ ದ್ರಾವಿಡ್ ಅವರಿಗೆ ಭಾರತದ ಅತ್ಯುನ್ನತ ಪ್ರಶಸ್ತಿ ‘ಭಾರತ ರತ್ನ’ ನೀಡಬೇಕೆಂದು ಟೀಮ್ ಇಂಡಿಯಾದ ಲೆಜೆಂಡರಿ ಬ್ಯಾಟರ್ ಸುನಿಲ್ ಗವಾಸ್ಕರ್ ಒತ್ತಾಯಿಸಿದ್ದಾರೆ.
ವೆಸ್ಟ್ ಇಂಡೀಸ್‌ನಲ್ಲಿ ನೆಡದ 2024ರ ಟಿ-20 ವಿಶ್ವಕಪ್‌ನಲ್ಲಿ ಭಾರತೀಯ ಕ್ರಿಕೆಟ್ ತಂಡವು ಜಯ ಗಳಿಸಿದೆ. ಇದೇ ವೇಳೆ, ತಂಡ ಮುಖ್ಯ ಕೋಚ್ ಆಗಿ ದ್ರಾವಿಡ್ ಅವರ ಅಧಿಕಾರವಾಧಿ ಕೊನೆಗೊಂಡಿದೆ. ಈ ಬೆನ್ನಲ್ಲೇ ಮಾತನಾಡಿರುವ ಸುನಿಲ್ ಗವಾಸ್ಕರ್, ‘ಭಾರತ ರತ್ನಕ್ಕೆ ದ್ರಾವಿಡ್ ಅರ್ಹರಾಗಿದ್ದಾರೆ’ ಎಂದು ಹೇಳಿದ್ದಾರೆ.
ದ್ರಾವಿಡ್ ಅವರ ಕೋಚಿಂಗ್ ಅವಧಿಯಲ್ಲಿ, ಭಾರತವು 2023ರ ಪುರುಷರ ಒನ್‌ಡೇ ವಿಶ್ವಕಪ್ ಮತ್ತು 2023ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ – ಎರಡಲ್ಲೂ ರನ್ನರ್-ಅಪ್ ಆಗಿ ಸ್ಥಾನ ಪಡೆದಿದ್ದು, ಸೇರಿದಂತೆ ಗಮನಾರ್ಹ ಮೈಲಿಗಲ್ಲು ಸಾಧಿಸಿದೆ. ಅಲ್ಲದೆ, 2023ರ ಏಷ್ಯಾ ಕಪ್‌ಅನ್ನು ತಂಡವು ಗೆದ್ದುಕೊಂಡಿದೆ.
ದ್ರಾವಿಡ್ ಅವರು ಭಾರತೀಯ ಕ್ರಿಕೆಟ್‌ಗೆ ಆಟಗಾರನಾಗಿ ತಮ್ಮ ವೃತ್ತಿಜೀವನದ ಅವಧಿಯಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 24,177 ರನ್‌ಗಳಷ್ಟು ಭರ್ಜರಿ ಮೊತ್ತವನ್ನು ಕಲೆಹಾಕಿದ್ದರು. ಅಲ್ಲದೆ, ಮುಖ್ಯ ತರಬೇತುದಾರನಾಗಿ ಗಣನೀಯ ಕೊಡುಗೆಗಳನ್ನು ನೀಡಿದ್ದಾರೆ. ಅವರು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (NCA) ಕ್ರಿಕೆಟ್‌ನ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. 2018ರ U19 ವಿಶ್ವಕಪ್‌ನಲ್ಲಿ ಅವರ ಮುಖ್ಯ ತರಬೇತುದಾರರಾಗಿ ಭಾರತೀಯ U19 ತಂಡ ವಿಜಯ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ವರದಿ ಓದಿದ್ದೀರಾ?: ಒಂದು ಅವಲೋಕನ | ದಕ್ಷಿಣ ಆಫ್ರಿಕಾ ಕ್ರಿಕೆಟ್ ನೆಪದಲ್ಲಿ ಕರಾಳ ಇತಿಹಾಸ ಮತ್ತು ಮಂಡೇಲಾ ಉದಾತ್ತತೆ
“ಭಾರತ ಸರ್ಕಾರವು ಅವರಿಗೆ ‘ಭಾರತ ರತ್ನ’ ನೀಡಿ ಗೌರವಿಸುವುದು ಸೂಕ್ತ. ಆ ಗೌರವಕ್ಕೆ ಅವರು ನಿಜಕ್ಕೂ ಅರ್ಹರಾಗಿದ್ದಾರೆ. ಇಂಗ್ಲೆಂಡ್‌ನಲ್ಲಿ ಟೆಸ್ಟ್ ಪಂದ್ಯಗಳ ಸರಣಿಯನ್ನು ಗೆದ್ದ ಮೂವರು ಭಾರತೀಯ ನಾಯಕರಲ್ಲಿ ದ್ರಾವಡ್ ಕೂಡ ಒಬ್ಬರಾಗಿದ್ದಾರೆ. ಅವರು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಅಧ್ಯಕ್ಷರಾಗಿ ಮತ್ತು ನಂತರ ಭಾರತೀಯ ತಂಡದ ತರಬೇತುದಾರರಾಗಿ ಅದ್ಭುತ ಪಾತ್ರ ನಿರ್ವಹಿಸಿದ್ದಾರೆ” ಎಂದು ಗವಾಸ್ಕರ್ ಹೇಳಿದ್ದಾರೆ.
“ದ್ರಾವಿಡ್ ಅವರ ಸಾಧನೆಗಳು ಎಲ್ಲ ಪಕ್ಷಗಳು, ಜಾತಿ, ಮತ, ಸಮುದಾಯಗಳನ್ನು ಮೀರಿ ಸಂತೋಷವನ್ನು ನೀಡಿವೆ. ಅವರ ಸಾಧನೆಗಳು ಅತ್ಯುನ್ನತ ಪುರಸ್ಕಾರಕ್ಕೆ ಅರ್ಹವಾಗಿದೆ. ಎಲ್ಲರೂ ನನ್ನೊಂದಿಗೆ ಕೈಜೋಡಿಸಿ, ದ್ರಾವಿಡ್‌ಗೆ ಭಾರತದ ಶ್ರೇಷ್ಠ ಪ್ರಶಸ್ತಿ ನೀಡುವಂತೆ ಒತ್ತಾಯಿಸಲು ಜೊತೆಗೂಡಿ” ಎಂದು ಗವಾಸ್ಕರ್ ಕರೆಕೊಟ್ಟಿದ್ದಾರೆ.