ಜಗತ್ತನ್ನು ಆಳುತ್ತಿರುವುದು ಬೌದ್ಧಿಕ ಬಂಡವಾಳ. ಹಾಗಾಗಿ ಸ್ಲಂ ವಿದ್ಯಾರ್ಥಿಗಳು ಬೌದ್ಧಿಕವಾಗಿ ಬೆಳೆಯಬೇಕು ಎಂದು ಹಿರಿಯ ಚಿಂತಕ ಕೆ ದೊರೈರಾಜ್ ಅಭಿಪ್ರಾಯಪಟ್ಟರು.
ತುಮಕೂರು ನಗರದ ಕೋತಿತೋಪಿನ ರವೀಂದ್ರ ಕಲಾ ನಿಕೇತನ ಕಾಲೇಜ್ ಸಭಾಂಗಣದಲ್ಲಿ ಸ್ಲಂ ಜನಾಂದೋಲನ-ಕರ್ನಾಟಕ ಮತ್ತು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯಿಂದ ಹಮ್ಮಿಕೊಂಡಿದ್ದ 22ನೇ ವರ್ಷದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಸ್ಲಂ ಜನಾಂದೋಲನ ಕರ್ನಾಟಕ ಸಂಘಟನೆ ಕಳೆದ 22 ವರ್ಷಗಳಿಂದ ಈ ಪ್ರತಿಭಾ ಪುರಸ್ಕಾರ ಮಾಡುತ್ತ ಬಂದಿರುವುದು ಅಭಿನಂದನೀಯ. ಪ್ರತಿಭಾವಂತರನ್ನು ಪುರಸ್ಕರಿಸುವ ಜತೆಗೆ ಅನುತ್ತೀರ್ಣರಾದ ವಿದ್ಯಾರ್ಥಿಗಳನ್ನೂ ಮುಂದಿನ ಶಿಕ್ಷಣಕ್ಕೆ ಪ್ರೋತ್ಸಾಹಿಸುವ ಮೂಲಕ ಯುವಜನರನ್ನು ಸಂಘಟಿಸುತ್ತಿರುವುದು ನಿರಂತರವಾಗಿದೆ. ಎಲ್ಲ ಕಷ್ಟಗಳ ಜತೆಗೆ ಉತ್ತಮ ಅಂಕ ಗಳಿಸಿರುವ ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಅಭಿನಂದಿಸುತ್ತೇನೆ. ನಾವು ಬದುಕುತ್ತಿರುವ ಕಾಲಘಟ್ಟದಲ್ಲಿ ಶಿಕ್ಷಣ ಮುಖ್ಯವಾಗಿದೆ” ಎಂದರು.
“ನಮ್ಮ ಸ್ಲಂ ಸಮುದಾಯಗಳಲ್ಲಿ ಆಸ್ತಿ, ಅಂತಸ್ತು ಮಾಡುವುದಿಲ್ಲ. ಇದರಿಂದ ನಾವು ಎದೆಗುಂದಬೇಕಾಗಿಲ್ಲ. ಆದರೆ ನಮ್ಮಲ್ಲಿ ದೊಡ್ಡಶಕ್ತಿ ಇದೆ, ಅದೇ ಆತ್ಮವಿಶ್ವಾಸ. ಇದು ಜಗತ್ತಿನಲ್ಲೇ ಅಗಾಧವಾದ ಶಕ್ತಿಯಾಗಿದೆ. ಹಾಗಾಗಿ ನಮ್ಮ ವಿದ್ಯಾರ್ಥಿಗಳ ಬಗ್ಗೆ ನನಗೆ ಹಿರಿಮೆಯಿದೆ. ಇದರ ಮಧ್ಯ ನಾವು ಜಗತ್ತನ್ನು ಗೆಲ್ಲಬೇಕು. ಇಂದು ಜಗತ್ತನ್ನು ಆಳುತ್ತಿರುವುದು ಬೌದ್ಧಿಕ ಬಂಡವಾಳ(ಇಂಟಲಿಜೆನ್ಸ್ ಕ್ಯಾಪಿಟಲ್) ಇದನ್ನು ನಾವೂ ಕೂಡ ಬೆಳಸಿಕೊಳ್ಳಬೇಕು. ಆಗ ಮಾತ್ರ ನಾವು ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಬೆಳೆಯುತ್ತೇವೆ. ಇದು ಸ್ಪರ್ಧೆ, ಈ ಸ್ಪರ್ಧೆಯನ್ನು ಧೈರ್ಯವಾಗಿ ಎದುರಿಸಬೇಕು. ಸ್ಲಂಗಳಲ್ಲಿ ಉನ್ನತ ವ್ಯಾಸಂಗಕ್ಕೆ ಹೋಗುವವರ ಪ್ರಮಾಣ ಕಡಿಮೆ ಅದರಲ್ಲೂ ಹೆಣ್ಣು ಮಕ್ಕಳ ಶಿಕ್ಷಣ ಪ್ರಮಾಣವೂ ಕಡಿಮೆ ಇದೆ. ಹಸಿವು, ಬಡತನ ನಮ್ಮ ಕನಸಿಗೆ ಅಡ್ಡಿಯಾಗಬಾರದು” ಎಂದರು.
ಪ್ರಜಾ ಪ್ರಗತಿ ಪತ್ರಿಕೆಯ ಸಂಪಾದಕ ಎಸ್ ನಾಗಣ್ಣ ಮಾತನಾಡಿ, “ಬಲಾಢ್ಯ ಸಮುದಾಯಗಳನ್ನು ಎದುರಿಸಲು ನಗರ ಪ್ರದೇಶದ ಸ್ಲಂಗಳ ಬಹುತ್ವದ ಸಮುದಾಯ ಸಬಲರಾಗಿದ್ದಾರೆ. ದೇಶದಲ್ಲಿ ವಂಚಿತ ಸಮುದಾಯಗಳು ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಮುಂದೆ ಬರಬೇಕಾದರೆ ಛಲ ಬಿಡದೆ ಶಿಕ್ಷಣವನ್ನು ಮುಂದುವರೆಸಬೇಕು” ಎಂದರು.
“ನಮ್ಮ ದೇಶದ ವಿಪರ್ಯಾಸ ಗರಿಷ್ಟ ಸೇವೆ ನೀಡುವವರಿಗೆ ಕನಿಷ್ಟ ಸೇವೆ ನೀಡುತ್ತಿದ್ದೇವೆ. ದಕ್ಷಿಣ ಭಾರತದಲ್ಲಿ ವೈಚಾರಿಕತೆ ಬಂದಿದ್ದು, ಉತ್ತರದಲ್ಲಿ ಇನ್ನೂ ಕೂಡ ಗುಲಾಮಿತನವಿದೆ. ಚಾತುರ್ವರ್ಣ ವ್ಯವಸ್ಥೆಯನ್ನು ಎದುರಿಸಬೇಕಾದರೆ ವಿದ್ಯಾರ್ಥಿಗಳು ವಿಚಾರವಂತರಾಗಬೇಕು” ಎಂದರು.
ತುಮಕೂರು ನಗರ ಪೋಲಿಸ್ ಠಾಣೆಯ ಪಿಎಸ್‌ಐ ದಿನೇಶ್ ಕುಮಾರ್ ಮಾತನಾಡಿ, “ಸಂವಿಧಾನದ ಆಶಯ ಮುಂದಿನ ತಲೆಮಾರಿಗೆ ತೆಗೆದುಕೊಂಡು ಹೋಗಬೇಕಿರುವುದು ವಿದ್ಯಾರ್ಥಿಗಳು ಮತ್ತು ಯುವಜನರು ಈ ಸಮಾಜದಲ್ಲಿ ಯಾವುದೇ ಮನಷ್ಯ ಕನಿಷ್ಟ ಅಲ್ಲ ಮತ್ತು ಯಾವುದೇ ವೃತ್ತಿಯ ಬಗ್ಗೆ ಕೀಳರಿಮೆ ಇಟ್ಟುಕೊಂಡು ಮನಸ್ಸನ್ನು ಸಂಕುಚಿತಗೊಳಿಸಿಕೊಳ್ಳಬಾರದು. ವಿದ್ಯಾರ್ಥಿಗಳು ವಿಶೇಷವಾಗಿ ಸೈಬರ್ ಚಟುವಟಿಕೆ ಮತ್ತು ಮಾದಕ ದ್ರವ್ಯಗಳಿಂದ ದೂರವಿರಬೇಕು. ಮನಸ್ಸಿನ ಪರಿಧಿಯನ್ನು ಸರಿಸಿಕೊಂಡಾಗ ಮಾತ್ರ ಸಾಧಕರಾಗಲು ಸಾಧ್ಯ” ಎಂದರು.
2023-24ನೇ ಸಾಲಿನಲ್ಲಿ ಶೇ.93ರಿಂದ ಶೇ.60ರಷ್ಟು ಅಂಕ ಗಳಿಸಿದ ಎಸ್‌ಎಸ್‌ಎಲ್‌ಸಿಯ 15 ಮತ್ತು ದ್ವಿತೀಯ ಪಿಯುಸಿಯ 10 ವಿವಿಧ ಸ್ಲಂಗಳ ವಿದ್ಯಾರ್ಥಿಗಳು ಹಾಗೂ ಆರ್ಥಿಕವಾಗಿ ಹಿಂದುಳಿದ 10 ಮಂದಿ ವಿದ್ಯಾರ್ಥಿಗಳಿಗೆ ಅಧ್ಯಯನ ಸಾಮಗ್ರಿಗಳನ್ನು ನೀಡಿ ಅಭಿನಂಧಿಸಿದರು.
ಈ ಸುದ್ದಿಓದಿದ್ದೀರಾ? ತಲಪಾಡಿ ಟೋಲ್ ಗೇಟ್‌ನಲ್ಲಿ ಸ್ಥಳೀಯ ಪ್ರಯಾಣಿಕರಿಗೆ ಮತ್ತೆ ಕಿರುಕುಳ: ಪ್ರಶ್ನಿಸಿದರೆ ಗೂಂಡಾ ಪಡೆಗಳ ಅಟ್ಟಹಾಸ
ಕಾರ್ಯಕ್ರಮದಲ್ಲಿ ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕ ಎ ನರಸಿಂಹಮೂರ್ತಿ,
ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಎನ್ ಆಂಜನಪ್ಪ, ಕೊಳಗೇರಿ ಅಭಿವೃದ್ಧಿ ಮಂಡಳಿಯ ಎಇಇ ಚೇತನ್ ಕುಮಾರ್, ಯುವರಾಜಕಾರಣಿ ವಾಲೇಚಂದ್ರಯ್ಯ, ಮಾಜಿ ಕಾರ್ಪೊರೇಟರ್ ಲಕ್ಷ್ಮೀನರಸಿಂಹರಾಜು, ಸ್ಲಂ ಸಮಿತಿಯ ಪದಾಧಿಕಾರಿಗಳಾದ ಶಂಕ್ರಯ್ಯ, ಜಾಬೀರ್ಖಾನ್, ಕಣ್ಣನ್, ಮಂಗಳಮ್ಮ, ಅನುಪಮಾ, ಪೂರ್ಣಿಮಾ,ಗಂಗಾ ಗಣೇಶ್, ತಿರುಮಲಯ್ಯ, ಕೃಷ್ಣಮೂರ್ತಿ, ಧನಂಜಯ್, ಮೋಹನ್ ಟಿ ಆರ್ ರಾಜ, ಮಾರಿ, ನಿವೇಶನ ಹೋರಾಟ ಸಮಿತಿಯ ಪದಾಧಿಕಾರಿಗಳು ಇದ್ದರು.