ವಿಚಾರವಾದಿಗಳ ಹತ್ಯೆಯಲ್ಲಿ ‘ಸನಾತನ ಸಂಸ್ಥೆ’ ಪಾತ್ರ; ಎಟಿಎಸ್‌ಗೆ ಪನ್ಸಾರೆ ಕುಟುಂಬ ಪತ್ರ

Date:

Advertisements

ಕೋಮುವಾದಿಗಳಿಂದ ಹತ್ಯೆಗೀಡಾದ ವಿಚಾರವಾದಿ, ಕಾಮ್ರೇಡ್ ಗೋವಿಂದ್ ಪನ್ಸಾರೆ ಅವರ ಕುಟುಂಬದ ಸದಸ್ಯರು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್) ಮುಖ್ಯಸ್ಥ ಜಯಂತ್ ಮೀನಾ ಅವರಿಗೆ ವಿವರವಾದ ಪತ್ರ ಬರೆದಿದೆ. ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ವಿಚಾರವಾದಿಗಳನ್ನು ಕೊಲ್ಲುವ ಸಂಚಿನಲ್ಲಿ ಹಿಂದೂತ್ವ ಪರ ಸಂಘಟನೆ ‘ಸನಾತನ ಸಂಸ್ಥೆ’ಯ ಪಾತ್ರದ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿದೆ.

ಪನ್ಸಾರೆ ಅವರ ಕುಟುಂಬದ ಸದಸ್ಯರು (ಡಾ. ಮೇಘಾ ಪನ್ಸಾರೆ, ಸ್ಮಿತಾ ಪನ್ಸಾರೆ, ಕಬೀರ್ ಪನ್ಸಾರೆ) ಡಾ. ನರೇಂದ್ರ ದಾಭೋಲ್ಕರ್, ಕಾಮ್ರೇಡ್ ಗೋವಿಂದ್ ಪನ್ಸಾರೆ, ಗೌರಿ ಲಂಕೇಶ್ ಹಾಗೂ ಪ್ರೊ. ಎಂ.ಎಂ ಕಲ್ಬುರ್ಗಿ ಅವರ ಹತ್ಯೆ ಪ್ರಕರಣಗಳಲ್ಲಿ ಪೊಲೀಸರು ಸಲ್ಲಿಸಿರುವ ಆರೋಪಪಟ್ಟಿಗಳ ಆಧಾರದ ಮೇಲೆ ಹಲವಾರು ಸಂಗತಿಗಳನ್ನು ತಮ್ಮ ಪತ್ರದಲ್ಲಿ ಬೆಳಕಿಗೆ ತಂದಿದ್ದಾರೆ.

ಹಿಂದುತ್ವದ ಉಗ್ರವಾದದ ವಿರುದ್ಧ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದ ಈ ನಾಲ್ವರು ವಿಚಾರವಾದಿಗಳ ಹತ್ಯೆಗಳಿಗೂ ಸನಾತನ ಸಂಸ್ಥೆಗೂ ಸಂಬಂಧವಿರುವ ಬಗ್ಗೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ. “ಕಾಮ್ರೇಡ್ ಪನ್ಸಾರೆ ಪ್ರಕರಣದಲ್ಲಿ ಸಲ್ಲಿಸಲಾದ ಐದು ಚಾರ್ಜ್‌ಶೀಟ್‌ಗಳ ಬಗ್ಗೆ ನಿಮ್ಮ ಗಮನ ಸೆಳೆಯಲು ನಾವು ಬಯಸುತ್ತೇವೆ. ಪ್ರಕರಣದಲ್ಲಿ ಹನ್ನೆರಡು ಜನರನ್ನು ಆರೋಪಿಗಳನ್ನಾಗಿ ಮಾಡಲಾಗಿದೆ. ಹನ್ನೆರಡು ಆರೋಪಿಗಳ ಪೈಕಿ ಇಬ್ಬರು ತಲೆಮರೆಸಿಕೊಂಡಿದ್ದಾರೆ ಎಂದು ಘೋಷಿಸಲಾಗಿದೆ. ಎಲ್ಲ ಆರೋಪಿಗಳು ಸನಾತನ ಸಂಸ್ಥೆ ಮತ್ತು/ಅಥವಾ ಹಿಂದೂ ಜನಜಾಗೃತಿ ಸಮಿತಿಯ ಸದಸ್ಯರಾಗಿದ್ದಾರೆ. ಅಲ್ಲದೆ, ಅವರಲ್ಲಿ ಕೆಲವು ಆರೋಪಿಗಳನ್ನು ಡಾ. ನರೇಂದ್ರ ದಾಭೋಲ್ಕರ್, ಪ್ರೊ. ಎಂ.ಎಂ. ಕಲ್ಬುರ್ಗಿ ಹಾಗೂ ಗೌರಿ ಲಂಕೇಶ್‌ ಕೊಲೆ ಪ್ರಕರಣಗಳಲ್ಲಿ ಹೆಸರಿಸಲಾಗಿದೆ. ಅಲ್ಲದೆ, ನಲಸೋಪರ ಶಸ್ತ್ರಾಸ್ತ್ರ ವಶಪಡಿಸಿಕೊಂಡ ಪ್ರಕರಣ ಮತ್ತು ಇತರ ಸಂಬಂಧಿತ ಪ್ರಕರಣಗಳಲ್ಲೂ ಆರೋಪಿಗಳ ಪಾತ್ರವಿದೆ ಎಂಬುದನ್ನು ಸಾಬೀತುಪಡಿಸುತ್ತದೆ. ಸನಾತನ ಸಂಸ್ಥೆಯ ಸದಸ್ಯರು ಎಂಬ ಉಲ್ಲೇಖಗಳೊಂದಿಗೆ ಎಲ್ಲ ಆರೋಪಿಗಳ ಪಟ್ಟಿ ಮತ್ತು ಅವರ ಪಾಲ್ಗೊಳ್ಳುವಿಕೆ ಆರೋಪಪಟ್ಟಿಗಳಲ್ಲಿ ಪ್ರತಿಫಲಿಸುತ್ತದೆ” ಎಂದು ಪತ್ರದಲ್ಲಿ (ಪ್ಯಾರಾ 4) ಹೇಳಲಾಗಿದೆ.

Advertisements

ಎಟಿಎಸ್, ಸಿಬಿಐ, ಮಹಾರಾಷ್ಟ್ರ ಪೊಲೀಸ್, ಕರ್ನಾಟಕ ಪೊಲೀಸ್ ಹಾಗೂ ಗೋವಾ ಪೊಲೀಸರಂತಹ ಇತರ ಏಜೆನ್ಸಿಗಳಿಗೆ ಆ ನಾಲ್ಕು ಕೊಲೆಗಳು ಮತ್ತು ಇತರ ಘೋರ ಅಪರಾಧಗಳಲ್ಲಿ ಸನಾತನ ಸಂಸ್ಥೆ ಮತ್ತು ಅದರ ಮುಖಂಡರ ಪಾತ್ರದ ಬಗ್ಗೆ ಸಂಪೂರ್ಣವಾಗಿ ತಿಳಿದಿದೆ ಎಂದು ಪನ್ಸಾರೆ ಕುಟುಂಬ ಹೇಳಿದೆ.

” ತನಿಖಾ ಸಂಸ್ಥೆಗಳಿಗೆ ತಿಳಿದಿರುವ ಕಾರಣದಿಂದ, ಸನಾತನ ಸಂಸ್ಥೆಯ ಪಾತ್ರದ ಆಯಮದಲ್ಲಿ ತನಿಖೆ ನಡೆದಿಲ್ಲ. ಆದ್ದರಿಂದ, ಜಯಂತ್ ಅಠವಳೆ ಮತ್ತು ವೀರೇಂದ್ರ ಮರಾಠೆ ಅವರ ಮಾರ್ಗದರ್ಶನ ಮತ್ತು ನಿರ್ದೇಶನದಂತೆ ಸಂಘಟಿತ ಭಯೋತ್ಪಾದಕ ಜಾಲವಾಗಿ ಕಾರ್ಯನಿರ್ವಹಿಸುವ ಅಪರಾಧಿಗಳ ‘ಸನಾತನ ಸಂಸ್ಥೆ’ ಮತ್ತು ಅದರ ನಾಯಕ ಪಾತ್ರವನ್ನು ತನಿಖೆ ಮಾಡುವುದು ಅವಶ್ಯಕ” ಎಂದು (ಪ್ಯಾರಾ 6) ಹೇಳಿದೆ.

“ಸನಾತನ ಸಂಸ್ಥೆಯ ಸದಸ್ಯರು ನಡೆಸಿದ ತರಬೇತಿ ಅವಧಿಗಳ ವಿವರಗಳನ್ನು ದಾಖಲೆಯಲ್ಲಿ ಉಲ್ಲೇಖಿಸಲಾಗಿದೆ. ಆದರೂ ಅದರ ಮಾಸ್ಟರ್‌ಮೈಂಡ್‌ಗಳನ್ನು ಗುರುತಿಸಲು ಯಾವುದೇ ತನಿಖೆ ನಡೆಸಿಲ್ಲ. ತನಿಖೆ ನಡೆಸದೆ, ಕೇವಲ ಉಲ್ಲೇಖವು ಸಾಕ್ಷಿಯಾಗುವುದಿಲ್ಲ. ಆದಾಗ್ಯೂ, ಎಲ್ಲ ಆರೋಪಿಗಳ ಸಂಘಟಿತ ಚಲನವಲನ ಮತ್ತು ಆರೋಪಿಗಳಿಗೆ ಸಂಪನ್ಮೂಲಗಳನ್ನು ಒದಗಿಸಿದ ರೀತಿಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆದಿಲ್ಲ. ಡಾ. ವೀರೇಂದ್ರ ತಾವಡೆ ಒಬ್ಬರಿಂದಲೇ ಇಂತಹ ಕೃತ್ಯಗಳಿಗೆ ಸಂಚು ಎಣೆಯಲು ಸಾಧ್ಯವಾಗಿಲ್ಲ ಎಂಬುದು ದಾಖಲೆಯ ಮುಖಾಂತರ ಸ್ಪಷ್ಟವಾಗಿದೆ. ಮಾಸ್ಟರ್‌ಮೈಂಡ್‌ಗಳು ಇನ್ನೂ ತಲೆಮರೆಸಿಕೊಂಡಿದ್ದಾರೆ. ಆದರೆ, ತನಿಖೆ ಮುಂದೆ ಸಾಗಿಲ್ಲ ಎಂಬುದನ್ನು ಇದು ಸಾಬೀತುಪಡಿಸುತ್ತದೆ” ಎಂದು ಪನ್ಸಾರೆ ಕುಟುಂಬ ಆರೋಪಿಸಿದೆ.

“ದೇಶದಾದ್ಯಂತ ವಿವಿಧ ಸ್ಥಳಗಳಲ್ಲಿ ವಿಚಾರಗಳನ್ನು ಕೊಲ್ಲಲು ಯುವಕರಿಗೆ ಶಸ್ತ್ರಾಸ್ತ್ರ ತರಬೇತಿ ನೀಡುತ್ತಿರುವ ಮತ್ತು ಆಶ್ರಯ ನೀಡುತ್ತಿರುವ ಸಂಘಟಿತ ಸಂಚು ಮತ್ತು ಕೃತ್ಯದ ಬಗ್ಗೆ ನಾವು ನಿಮ್ಮ ಗಮನ ಸೆಳೆಯುತ್ತಿದ್ದೇವೆ. ಆರೋಪಿಗಳಿಗೆ ಜಲ್ನಾ, ನಲಸೋಪಾರ, ಪುಣೆ, ಸತಾರಾ, ಬೆಳಗಾವಿ ಸೇರಿದಂತೆ ನಾನಾ ಸ್ಥಳಗಳಲ್ಲಿ ಮನೆಗಳನ್ನು ಒದಗಿಸಲಾಗಿದೆ. ಪ್ರತಿ ಆರೋಪಿಗೆ ಶಸ್ತ್ರಾಸ್ತ್ರ ತರಬೇತಿ ನಡೆಸಲು ಬೇರೆ ಬೇರೆ ಸ್ಥಳವನ್ನು – ಚಿಖಲೆ, ಬೆಳಗಾವಿ, ಪೋಕಲ್, ವಡ್ಗಾವ್, ಜಲ್ನಾ, ಮುಲ್ಖೇಡ್, ಮುಲ್ಶಿ, ಪುಣೆ – ನಿಯೋಜಿಸಲಾಗಿದೆ. ಈ ಎಲ್ಲ ಮಾಹಿತಿ ಮತ್ತು ಸಂಗತಿಗಳು ಈಗಾಗಲೇ ದಾಖಲೆಯಲ್ಲಿದ್ದರೂ, ಕಾಮ್ರೇಡ್ ಪನ್ಸಾರೆ ಅವರ ಪ್ರಸ್ತುತ ಪ್ರಕರಣವನ್ನು ತನಿಖೆ ಮಾಡುವಾಗ ಎಟಿಎಸ್ ಅದನ್ನು ಪರಿಗಣಿಸುವಲ್ಲಿ ವಿಫಲವಾಗಿದೆ ಎಂಬುದು ಆಶ್ಚರ್ಯ ಉಂಟುಮಾಡಿದೆ” ಎಂದು ಕುಟುಂಬ ಅಸಮಾಧಾನ ವ್ಯಕ್ತಪಡಿಸಿದೆ.

“ನಲಸೋಪರ ಪ್ರಕರಣದಲ್ಲಿ ಎಟಿಎಸ್ ಸಲ್ಲಿಸಿರುವ ಆರೋಪಪಟ್ಟಿಯನ್ನು ಪರಿಶೀಲಿಸಿದಾಗ, ಸನಾತನ ಸಂಸ್ಥೆ ಮತ್ತು ಅದರ ಸದಸ್ಯರ ಉದ್ದೇಶವು ಸಮಾಜವನ್ನು ದೊಡ್ಡ ಪ್ರಮಾಣದಲ್ಲಿ ಭಯಭೀತಗೊಳಿಸುವುದು ಮತ್ತು ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುದಾಗಿತ್ತು ಎಂದು ಸ್ಪಷ್ಟವಾಗಿ ದಾಖಲಿಸಲಾಗಿದೆ” ಎಂದು ಪತ್ರದಲ್ಲಿ ಬರೆಯಲಾಗಿದೆ.

“ಫ್ಯಾಕ್ಟ್‌ಗಳು ಮತ್ತು ಸನ್ನಿವೇಶಗಳು ಬಂಧಿಸಲಾದ ಆರೋಪಿಗಳನ್ನು ಮೀರಿ ದೊಡ್ಡ ಪಿತೂರಿ ಮತ್ತು ಮಾಸ್ಟರ್‌ಮೈಂಡ್‌ಗಳ ಪಾತ್ರವಿದೆ ಎಂಬುದನ್ನು ಒತ್ತಿ ಹೇಳುತ್ತವೆ. ತನಿಖಾ ಸಂಸ್ಥೆಯು ಸನಾತನ ಸಂಸ್ಥೆಯ ಪದಾಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಬೇಕಾಗಿತ್ತು. ಅವರು ದೊಡ್ಡ ಪಿತೂರಿಯಲ್ಲಿ ಭಾಗಿಯಾಗಿರುವುದನ್ನು ತಳ್ಳಿಹಾಕಲಾಗುವುದಿಲ್ಲ. ಅವರ ಒಪ್ಪಿಗೆಯಿಲ್ಲದೆ, ಅದರ ಸದಸ್ಯರು ಮಾತ್ರವೇ ಕೊಲೆ ಮತ್ತು ಬಾಂಬ್ ಸ್ಫೋಟದ ಬಗ್ಗೆ ಯೋಜನೆ ರೂಪಿಸಿ, ಕಾರ್ಯಗತಗೊಳಿದ್ದಾರೆ ಎಂದು ಹೇಳಲಾಗುವುದಿಲ್ಲ” ಎಂದು ಕುಟುಂಬವು (ಪ್ಯಾರಾ 7) ಹೇಳಿದೆ.

ಸನಾತನ ಸಂಸ್ಥೆ ಮತ್ತು ಅದರ ಸಂಸ್ಥಾಪಕರು (ಜಯಂತ್ ಅಠವಳೆ, ವೀರೇಂದ್ರ ಮರಾಠೆ) ಪ್ರತಿಪಾದಿಸಿದ ಮತ್ತು ಪೋಷಿಸಿದ ಸಿದ್ಧಾಂತದ ಮೇಲೆ ಅಪರಾಧಿಗಳು ಮತ್ತು ಇತರ ಆರೋಪಿಗಳು ಕೃತ್ಯದಲ್ಲಿ ತೊಡಗಿದ್ದಾರೆ. ಅವರಿಗೆ ಸನಾತನ ಸಂಸ್ಥೆಯು ಬೋಧಿಸಿದ ಹಿಂಸಾತ್ಮಕ ಸಿದ್ಧಾಂತಗಳು ಮತ್ತು ಹತ್ಯೆಗೀಡಾದವರನ್ನು ‘ಹಿಂದೂ ವಿರೋಧಿ’ ಎಂದು ಚಿತ್ರಿಸಿರುವ ಪತ್ರವು ಸಂಸ್ಥೆಯ ನಾಯಕರ ಪಾತ್ರವನ್ನು ವಿವರಿಸುತ್ತದೆ ಎಂದು ಪತ್ರದಲ್ಲಿ ಹೇಳಲಾಗಿದೆ.

“ಕಾಮ್ರೇಡ್ ಪನ್ಸಾರೆ ಅವರನ್ನು ಅವರ ಸಿದ್ಧಾಂತ, ಜಾತ್ಯತೀತತೆ, ವೈಚಾರಿಕತೆ, ಸಮಾನತೆ ಮತ್ತು ಶಿವಾಜಿ ಕಾನ್ ಹೋಟಾದಂತಹ ಪುಸ್ತಕಗಳನ್ನು ರಚಿಸುವ ಕೆಲಸಗಳಿಗಾಗಿ ಬಲಪಂಥೀಯ ಹಿಂದುತ್ವ ಸಂಘಟನೆಗಳಾದ ಸನಾತನ ಸಂಸ್ಥೆ, ಹಿಂದೂ ಜನಜಾಗೃತಿ ಸಮಿತಿ ಇತ್ಯಾದಿಗಳು ಕಟುವಾಗಿ ವಿರೋಧಿಸಿದ್ದವು” ಎಂದು ಪತ್ರದಲ್ಲಿ (ಪ್ಯಾರಾ 10) ಹೇಳಲಾಗಿದೆ.

“ಸನಾತನ ಸಂಸ್ಥೆ ಮತ್ತು ಅದರ ನಾಯಕರು ಡಾ. ದಾಭೋಲ್ಕರ್ ಮತ್ತು ಕಾಮ್ರೇಡ್ ಪನ್ಸಾರೆ ಅವರ ಹತ್ಯೆಯ ನಿಜವಾದ ಮಾಸ್ಟರ್ ಮೈಂಡ್‌ಗಳು ಎಂಬುದು ಇಲ್ಲಿ ನೀಡಲಾದ ಅವಲೋಕನಗಳು ಮತ್ತು ಸಂಶೋಧನೆಗಳಿಂದ ಸ್ಪಷ್ಟವಾಗಿದೆ. ಹಾಗಾಗಿ, ಡಾ. ದಾಭೋಲ್ಕರ್ ಪ್ರಕರಣದಲ್ಲಿ ಸಿಬಿಐ ವಿಚಾರಣೆ ನಡೆಸದೆ ಕೈಬಿಟ್ಟಿರುವ ಸನಾತನ ಸಂಸ್ಥೆ ಮತ್ತು ಅದರ ಮುಖಂಡರು ಹೂಡಿರುವ ಷಡ್ಯಂತ್ರವನ್ನು ತನಿಖೆ ನಡೆಸಿ ಬಯಲಿಗೆಳೆಯುವ ಅಗತ್ಯವಿದೆ. ನಾಲ್ಕು ಹತ್ಯೆಗಳ ಹಿಂದೆ ಸಂಘಟಿತ ಅಪರಾಧಿಗಳ / ಸನಾತನ ಸಂಸ್ಥೆಯ ಸಂಘಟಿತ ಅಪರಾಧಿಗಳ ಜಾಲವಿದೆ. ಸನಾತನ ಸಂಸ್ಥೆಯ ಸದಸ್ಯರು ಒಂದು ದಶಕಕ್ಕೂ ಹೆಚ್ಚು ಕಾಲದಿಂದಲೂ ಘೋರ ಅಪರಾಧಗಳಲ್ಲಿ ಆರೋಪಿಗಳಾಗಿದ್ದಾರೆ ಮತ್ತು ಶಿಕ್ಷೆಗೊಳಗಾಗುತ್ತಿದ್ದಾರೆ ಎಂಬುದು ಕೇವಲ ಕಾಕತಾಳೀಯವಲ್ಲ” ಎಂದು ಪತ್ರದಲ್ಲಿ (ಪ್ಯಾರಾ 11) ಪನ್ಸಾರೆ ಕುಟುಂಬ ವಿವರಿಸಿದೆ.

ಅಂದಹಾಗೆ, ಪನ್ಸಾರೆ ಹತ್ಯೆ ಪ್ರಕರಣದ ವಿಚಾರಣೆಯನ್ನು ಜುಲೈ 12ರಂದು ಬಾಂಬೆ ಹೈಕೋರ್ಟ್‌ ನಡೆಸಲಿದೆ. ಇಂತಹ ಸಂದರ್ಭದಲ್ಲಿ ಬರೆಯಲಾಗಿರುವ ಈ ಪತ್ರವು ಹೆಚ್ಚು ಮಹತ್ವ ಪಡೆದುಕೊಂಡಿದೆ.

ಈ ವರದಿ ಓದಿದ್ದೀರಾ?: ರಾಹುಲ್ ಅಬ್ಬರ | ಮಣಿಪುರದ ಬಗ್ಗೆ ತುಟಿ ಬಿಚ್ಚಿದ ಮೋದಿ!

ವಿಚಾರವಾದಿಗಳ ಹತ್ಯೆ ಪ್ರಕರಣಗಳು;

ವಿಚಾರವಾದಿ, ಕಾರ್ಮಿಕ ಹೋರಾಟಗಾರ, ಸಾಮಾಜಿಕ ಕಾರ್ಯಕರ್ತ, ಸಿಪಿಐ ನಾಯಕ ಕಾಮ್ರೇಡ್ ಗೋವಿಂದ್ ಪನ್ಸಾರೆ ಮತ್ತು ಅವರ ಪತ್ನಿ ಉಮಾ ಅವರ ಮೇಲೆ 2015ರ ಫೆಬ್ರವರಿ 16ರಂದು ಕೊಲ್ಲಾಪುರದ ಅವರ ಮನೆಯ ಬಳಿ ಮೋಟಾರ್ ಸೈಕಲ್‌ನಲ್ಲಿ ಬಂದ ಇಬ್ಬರು ಯುವಕರು ಹಲ್ಲೆ ನಡೆಸಿದ್ದರು. ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ನಾಲ್ಕು ದಿನಗಳ ಬಳಿಕ ಪನ್ಸಾರೆ ಸಾವನ್ನಪ್ಪಿದರು. ಆರಂಭದಲ್ಲಿ ಪ್ರಕರಣದ ತನಿಖೆಯನ್ನು ರಾಜ್ಯ ಸಿಐಡಿಯ ವಿಶೇಷ ತಂಡ ನಡೆಸುತ್ತು. 12 ಮಂದಿಯನ್ನು ಬಂಧಿಸಿತ್ತು. ಅವರ ವಿರುದ್ಧ ವಿಚಾರಣೆ ನಡೆಯುತ್ತಿದೆ. ಆದಾಗ್ಯೂ, 2022 ರಲ್ಲಿ, ಸಿಐಡಿ ಅಪರಾಧದ ಹಿಂದಿರುವ ಸಂಚುಕೋರರನ್ನು ಬಂಧಿಸಿಲ್ಲವೆಂದು ಪನ್ಸಾರೆ ಕುಟುಂಬ ಆರೋಪಿಸಿದ ಬಳಿಕ, ಪ್ರಕರಣವನ್ನು ರಾಜ್ಯ ಭಯೋತ್ಪಾದನಾ ನಿಗ್ರಹ ದಳಕ್ಕೆ (ಎಟಿಎಸ್) ವರ್ಗಾಯಿಸಲಾಯಿತು. ಅಂದಿನಿಂದ, ಎಟಿಎಸ್ ತನಿಖೆ ನಡೆಸುತ್ತಿದ್ದು, ಮುಚ್ಚಿದ ಲಖೋಟೆಗಳಲ್ಲಿ ತನಿಖಾ ವರದಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುತ್ತಿದೆ.

ಡಾ. ನರೇಂದ್ರ ದಾಭೋಲ್ಕರ್ ವಿಚಾರವಾದಿ ಮತ್ತು ಮೂಢನಂಬಿಕೆ ವಿರೋಧಿ ಹೋರಾಟಗಾರರಾಗಿದ್ದರು. ಅವರು ಮಹಾರಾಷ್ಟ್ರ ಅಂಧಶ್ರದ್ಧ ನಿರ್ಮೂಲನ ಸಮಿತಿಯ (MANS) ಸಂಸ್ಥಾಪಕರಾಗಿದ್ದರು. 2013ರ ಜೂನ್ 20 ರಂದು ಪುಣೆಯ ಓಂಕಾರೇಶ್ವರ ದೇವಸ್ಥಾನದ ಬಳಿ ಇಬ್ಬರು ಅಪರಿಚಿತ ಬಂದೂಕುಧಾರಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಅವರ ಹತ್ಯೆಯಾದರು.

ಪ್ರಸಿದ್ಧ ವಿದ್ವಾಂಸಕ ಮತ್ತು ಬರಹಗಾರ ಪ್ರೊ. ಎಂ.ಎಂ ಕಲ್ಬುರ್ಗಿ ಅವರು ಹಲವು ವರ್ಷಗಳಿಂದ ಬಲಪಂಥೀಯ ಹಿಂದುತ್ವವಾದಿಗಳನ್ನು ವಿರೋಧಿಸುತ್ತಿದ್ದರು. ಅಲ್ಲದೆ, ಲಿಂಗಾಯತ ಧರ್ಮದ ಬಗ್ಗೆ ಸಾಕಷ್ಟು ಅಧ್ಯಯನಗಳನ್ನು ನಡೆಸಿದ್ದರು. ಅವರನ್ನು 2015ರ ಆಗಸ್ಟ್ 30ರಂದು ಧಾರವಾಡದ ಕಲ್ಯಾಣನಗರದಲ್ಲಿ ಅಪರಿಚಿತ ಬಂದೂಕುಧಾರಿಗಳು ಗುಂಡು ಹಾರಿಸಿ, ಹತ್ಯೆಗೈದಿದ್ದರು.

ದಿಟ್ಟ ಪತ್ರಕರ್ತೆ, ಹೋರಾಟಗಾರ್ತಿ, ಬಲಪಂಥೀಯವಾದ ಕಟು ವಿಮರ್ಶಕಿ ಗೌರಿ ಲಂಕೇಶ್ ಅವರನ್ನು 2017ರ ಸೆಪ್ಟೆಂಬರ್‌ 5ರಂದು ಬೆಂಗಳೂರಿನ ತಮ್ಮ ನಿವಾಸದ ಹೊರಗೆ ಬೈಕ್‌ನಲ್ಲಿ ಬಂದ ಇಬ್ಬರು ಗುಂಡು ಹಾಕಿ, ಹತ್ಯಗೈದಿದ್ದರು. ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ಎಸ್‌ಐಟಿ ತನಿಖೆ ನಡೆಸುತ್ತಿದೆ. ಈವರೆಗೆ ಹಲವಾರು ಆರೋಪಿಗಳನ್ನು ಬಂಧಿಸಲಾಗಿದೆ. ಗೌರಿ ಪ್ರಕರಣದಲ್ಲಿ ಬಂಧಿಸಲಾದ ಆರೋಪಿಗಳಿಂದ ಕಲ್ಬುರ್ಗಿ ಅವರ ಹತ್ಯೆ ಪ್ರಕರಣಕ್ಕೂ ಸಂಬಂಧಿಸಿದಂತೆ ಹಲವಾರು ಮಾಹಿತಿಗಳನ್ನು ಕಲೆ ಹಾಕಲಾಗಿದೆ ಎಂದು ತಿಳಿದುಬಂದಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

Download Eedina App Android / iOS

X