ಎನ್‌ಡಿಎ ನೇತ್ರತ್ವದ ಕೇಂದ್ರ ಸರ್ಕಾರದ ಆಡಳಿತದಲ್ಲಿ ನಡೆಯುತ್ತಿರುವ ವ್ಯಾಪಕ ಗುಂಪು ಹತ್ಯೆ, ಲೂಟಿ ಮತ್ತು ವಿಧ್ವಂಸಕ ಕೃತ್ಯಗಳನ್ನು ಖಂಡಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಪ್ರತಿಭಟನೆ ನಡೆಸಿತು.
ಕಾಪು ಕ್ಷೇತ್ರ ಸಮಿತಿಯಿಂದ ತಾಲೂಕಿನ ಹೃದಯ ಭಾಗವಾದ ಉಚ್ಚಿಲ ಪೇಟೆಯಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಕೇಂದ್ರದ ಜನವಿರೋಧಿ ನೀತಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ನೇತ್ರತ್ವದ ವಹಿಸಿದ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಶಾಹಿದ್ ಅಲಿ ಮಾತನಾಡಿ, ʼಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಗುಂಪು ಹತ್ಯೆಗಳ ಘೋರವಾದ ಕೃತ್ಯಕ್ಕೆ ಚಾಲನೆ ನೀಡಿದಂತಾಗಿದೆ. ದೇಶದಲ್ಲಿ ಇಂತಹ ಕೃತ್ಯಗಳು ಮರುಕಳಿಸಿದರೆ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆʼ ಎಂದು ಎಚ್ಚರಿಸಿದರು.
ಉಡುಪಿ ಜಿಲ್ಲಾ ಸಮಿತಿ ಸದಸ್ಯ ಮಜೀದ್ ಹಸನ್ ಬೀರಲಿ ಮಾತನಾಡಿ, ʼಜೂನ್ ಒಂದೇ ತಿಂಗಳಲ್ಲಿ 7 ಗುಂಪು ಹತ್ಯೆಗಳು ನಡೆದಿರುವುದು ಖಂಡನೀಯ. ಇಂತಹ ಅಮಾನವೀಯ ಕೃತ್ಯಗಳಿಗೆ ಕಡಿವಾಣ ಹಾಕಲು ಕಠಿಣ ಕಾನೂನು ಕ್ರಮ ಜಾರಿಗೊಳಿಸಬೇಕುʼ ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಬೈಕ್-ಕಾರು ಢಿಕ್ಕಿ; ಓರ್ವ ಯುವಕ ಸಾವು
ಪ್ರತಿಭಟನೆಯಲ್ಲಿ ಕಾಪು ಕ್ಷೇತ್ರ ಸಮಿತಿ ಕಾರ್ಯದರ್ಶಿ ಅಬ್ದುಲ್ ಖಾದರ್, ಉಡುಪಿ ಜಿಲ್ಲಾ ಸಮಿತಿ ಸದಸ್ಯರಾದ ಇಬ್ರಾಹಿಂ ಕಂಚಿನಡ್ಕ, ಹರ್ಶ್ ಇಬ್ರಾಹಿಂ, ಉಚ್ಚಿಲ ಗ್ರಾಮ ಸಮಿತಿ ಅಧ್ಯಕ್ಷ ಆಸಿಫ್ ವೈ.ಸಿ, ವಿಮೆನ್ ಇಂಡಿಯಾ ಮೂವ್ಮೆಂಟ್ ಉಡುಪಿ ಜಿಲ್ಲಾಧ್ಯಕ್ಷೆ ನಾಝಿಯ ನಸ್ರುಲ್ಲ, ವಿಮ್ ಕಾಪು ಘಟಕ ಅಧ್ಯಕ್ಷೆ ಫರ್ಜಾನ ಹಮೀದ್ ಸೇರಿದಂತೆ ಇತರರು ಭಾಗವಹಿಸಿದ್ದರು.