ಬೆಂಗಳೂರಿನ ವೈಟ್ ಫೀಲ್ಡ್ನ ಪಣತ್ತೂರು ದಿಣ್ಣೆಯಿಂದ ಪಣತ್ತೂರು ರೈಲ್ವೆ ಬ್ರಿಡ್ಜ್‌ವರೆಗಿನ ರಸ್ತೆಯಲ್ಲಿ ಜುಲೈ 9ರಿಂದ ಜುಲೈ 12ರವರೆಗೆ ನಾಲ್ಕು ದಿನಗಳ ಕಾಲ ಎಲ್ಲ ರೀತಿಯ ವಾಹನಗಳ ಸಂಚಾರ ನಿರ್ಬಂಧವಾಗಿದೆ.
ಈ ಸಂಬಂಧ ಬೆಂಗಳೂರು ಸಂಚಾರ ಪೊಲೀಸ್ ಇಲಾಖೆ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು ಈ ಮಾರ್ಗದಲ್ಲಿ ಸಾಗುವವರಿಗೆ ಪರ್ಯಾಯ ಮಾರ್ಗವನ್ನು ಕೂಡ ಪ್ರಕಟಿಸಿದೆ.
ಪಣತ್ತೂರು ರೈಲ್ವೇಬ್ರಿಡ್ಜ್ ಬಳಿ ಅಂಡರ್ಪಾಸ್ ನಿರ್ಮಾಣ ಕಾಮಗಾರಿ ನಡೆಯುತ್ತಿರುವುದರಿಂದ ಪಣತ್ತೂರು ದಿಣ್ಣೆಯಿಂದ ಪಣತ್ತೂರು ರೈಲ್ವೆ ಬ್ರಿಡ್ಜ್‌ವರೆಗಿನ ರಸ್ತೆಯನ್ನು ಬಂದ್ ಮಾಡಲಾಗಿದೆ.
ಇದನ್ನು ಓದಿದ್ದೀರಾ? ತುಮಕೂರಿಗೆ ಹೆಚ್ಚುವರಿ ರೈಲು ಸಂಚಾರಕ್ಕೆ ಆಗ್ರಹಿಸಿ ಕೇಂದ್ರ ಸಚಿವ ವಿ ಸೋಮಣ್ಣಗೆ ಮನವಿ
ಪಣತ್ತೂರು ದಿಣ್ಣೆ ಕಡೆಯಿಂದ ಪಣತ್ತೂರು ಮತ್ತು ಕುಂದಲಹಳ್ಳಿ ಕಡೆಗೆ ಸಾಗುವ ವಾಹನಗಳಿಗೆ ಗುಂಜೂರು ಪಾಳ್ಯ ರಸ್ತೆಯಿಂದ ಸಿಲ್ವರ್ ಓಕ್ ರಸ್ತೆ ಮೂಲಕ ಸಾಗಿ ಬಳಗೆರೆ ಮುಖ್ಯರಸ್ತೆಯಿಂದ ಪಣತ್ತೂರು ಹಾಗೂ ಕುಂದಲಹಳ್ಳಿ ಕಡೆಗೆ ಸಂಚಾರ ಮಾಡಲು ತಿಳಿಸಲಾಗಿದೆ.
ಇನ್ನು ಪಣತ್ತೂರು ಕಡೆಯಿಂದ ಪಣತ್ತೂರು ದಿಣ್ಣೆ ಕಡೆಗೆ ಹೋಗುವುದಾದರೆ ಬಳಗೆರೆ ಮುಖ್ಯರಸ್ತೆಯಿಂದ ಸಿಲ್ವರ್ ಓಕ್ ಮೂಲಕ ಗುಂಜೂರು ಪಾಳ್ಯ ರಸ್ತೆಯಲ್ಲಿ ಪಣತ್ತೂರು ದಿಣ್ಣೆ ಕಡೆಗೆ ಸಂಚಾರ ಮಾಡಬಹುದಾಗಿದೆ.