ಕೇಂದ್ರ ಸರ್ಕಾರ ಜುಲೈ 1ರಿಂದ ಜಾರಿಗೆ ತಂದಿರುವ ಮೂರು ಹೊಸ ಕ್ರಿಮಿನಲ್ ಕಾನೂನುಗಳನ್ನು ಅಧ್ಯಯನ ನಡೆಸಿ, ಪರಿಶೀಲಿಸಿ, ಕಾನೂನುಗಳಿಗೆ ತರಬೇಕಾದ ತಿದ್ದುಪಡಿಗಳನ್ನು ಶಿಫಾರಸು ಮಾಡಲು ತಮಿಳುನಾಡು ಸರ್ಕಾರ ಸಮಿತಿ ರಚಿಸಿದೆ. ಮದ್ರಾಸ್ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಎಂ ಸತ್ಯನಾರಾಯಣನ್ ನೇತೃತ್ವದಲ್ಲಿ ಏಕವ್ಯಕ್ತಿ ಸಮಿತಿ ರಚಿಸಿ ಅಲ್ಲಿನ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಸೋಮವಾರ ಆದೇಶ ಹೊರಡಿಸಿದ್ದಾರೆ.
ರಾಜ್ಯಮಟ್ಟದಲ್ಲಿ ಕಾನೂನುಗಳ ಶೀರ್ಷಿಕೆಯೂ ಸೇರಿದಂತೆ ಕಾನೂನುಗಳಲ್ಲಿ ತರಬೇಕಾದ ಬದಲಾವಣೆಗಳನ್ನು ಶಿಫಾರಸು ಮಾಡಲು ಸಮಿತಿ ಸೂಚಿಸಲಾಗಿದೆ. ಏಕಸದಸ್ಯ ಸಮಿತಿಯು ವಕೀಲರ ಸಂಘಗಳು ಮತ್ತು ಇತರ ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಿ, ಅಗತ್ಯ ಶಿಫಾರಸುಗಳೊಂದಿಗೆ ಒಂದು ತಿಂಗಳೊಳಗೆ ವರದಿ ಸಲ್ಲಿಸಲು ಸೂಚಿಸಲಾಗಿದೆ.
ಅಧಿಕೃತ ಪ್ರಕಟಣೆಯ ಪ್ರಕಾರ, ಭಾರತೀಯ ದಂಡ ಸಂಹಿತೆ (IPC)-1860, ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ (CrPC)-1973, ಮತ್ತು ಭಾರತೀಯ ಸಾಕ್ಷ್ಯ ಕಾಯ್ದೆ-1872ರ ಬದಲಾಗಿ ಜುಲೈ 1ರಿಂದ ಭಾರತೀಯ ನ್ಯಾಯ ಸಂಹಿತಾ (BNS)-2023, ಭಾರತೀಯ ನಾಗರಿಕಾ ಸುರಕ್ಷಾ ಸಂಹಿತಾ (BNSS)-2023 ಮತ್ತು ಭಾರತೀಯ ಸಾಕ್ಷಿ ಅಧಿನಿಯಮ (BSA)-2023ಅನ್ನು ಜಾರಿಗೊಳಿಸುವ NDA ಸರ್ಕಾರದ ನಿರ್ಧಾರವನ್ನು ಮುಖ್ಯಮಂತ್ರಿ ಸ್ಟಾಲಿನ್ ಬಲವಾಗಿ ವಿರೋಧಿಸಿದ್ದಾರೆ. ಎಲ್ಲ ರಾಜ್ಯ ಸರ್ಕಾರಗಳು ಮತ್ತು ಇತರ ತಜ್ಞರ ಅಭಿಪ್ರಾಯಗಳನ್ನು ಪರಿಗಣಿಸಿ, ತಿದ್ದುಪಡಿ ತರುವವರೆಗೆ ಹೊಸ ಶಾಸನಗಳನ್ನು ತಡೆಹಿಡಿಯುವಂತೆ ಕೇಂದ್ರವನ್ನು ಅವರು ಒತ್ತಾಯಿಸಿದ್ದಾರೆ.
“ಕೇಂದ್ರ ಸರ್ಕಾರವು ಯಾವುದೇ ಚರ್ಚೆಯಿಲ್ಲದೆ ಮತ್ತು ಕಳೆದ ವರ್ಷ ಡಿಸೆಂಬರ್‌ನಲ್ಲಿ ಸಂಸತ್ತಿನಿಂದ 146 ಸಂಸದರನ್ನು ಅಮಾನತುಗೊಳಿಸುವ ಮೂಲಕ ತರಾತುರಿಯಲ್ಲಿ ಈ ಮೂರು ಶಾಸನಗಳನ್ನು ಅಂಗೀಕರಿಸಿದೆ. ಈ ಶಾಸನಗಳನ್ನು ಸಂಸ್ಕೃತದಲ್ಲಿ ಹೆಸರಿಸಿರುವುದರಿಂದ, ಸಾಂವಿಧಾನಿಕ ನಿಬಂಧನೆಗಳನ್ನು ಉಲ್ಲಂಘಿಸಿ ಮತ್ತು ಸಂಸತ್ತಿನ ಸದಸ್ಯರ ಅಭಿಪ್ರಾಯಗಳನ್ನು ಕೇಳದೆ ಜಾರಿಗೊಳಿಸಿರುವುದರಿಂದ, ಈ ಕಾನೂನುಗಳ ವಿವಿಧ ನಿಮಯಗಳ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ನಡೆದಿವೆ” ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.
ಈ ಹಿಂದೆ ಕೇಂದ್ರದ ಕಾನೂನುಗಳಿಗೆ ರಾಜ್ಯಗಳು ತಿದ್ದುಪಡಿ ತಂದಿವೆ
ಕೇಂದ್ರ ಕಾಯಿದೆಗಳನ್ನು ತಿದ್ದುಪಡಿ ಮಾಡಲು ರಾಜ್ಯಕ್ಕೆ ಅಧಿಕಾರವಿದೆಯೇ ಎಂಬ ಬಗ್ಗೆ ಪ್ರತಿಕ್ರಿಯಿಸಿರುವ ನಿವೃತ್ತ ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶ ಕೆ ಚಂದ್ರು, “ಕ್ರಿಮಿನಲ್ ಕಾನೂನುಗಳು ಸಂವಿಧಾನದ ಸಮವರ್ತಿ ಪಟ್ಟಿಯ ಅಡಿಯಲ್ಲಿ ಬರುತ್ತವೆ. ಹೀಗಾಗಿ, ತಿದ್ದುಪಡಿ ಮಾಡುವ ಅಧಿಕಾರವನ್ನು ರಾಜ್ಯಗಳು ಹೊಂದಿವೆ” ಎಂದು ಹೇಳಿದ್ದಾರೆ.
“ಹಿಂದೆ, ಅನೇಕ ರಾಜ್ಯಗಳು ಅವರಿಗೆ ಸೂಕ್ತವಾದ ತಿದ್ದುಪಡಿಗಳನ್ನು ಮಾಡಿವೆ. ರಾಜ್ಯಗಳು ಈ ಕೇಂದ್ರದ ಕಾನೂನುಗಳ ಶೀರ್ಷಿಕೆಯನ್ನು ಸಹ ಬದಲಾಯಿಸಬಹುದು. ಆದರೆ, ಸಂವಿಧಾನದ ಸೆಕ್ಷನ್ 254(2)ರ ಅಡಿಯಲ್ಲಿ, ರಾಷ್ಟ್ರಪತಿಗಳ ಒಪ್ಪಿಗೆ ಪಡೆದ ನಂತರವೇ ರಾಜ್ಯಗಳು ಮಾಡುವ ತಿದ್ದುಪಡಿಗಳು ಮಾನ್ಯವಾಗುತ್ತವೆ ಮತ್ತು ಜಾರಿಯಾಗುತ್ತವೆ” ಎಂದು ಅವರು ಹೇಳಿದ್ದಾರೆ.