ಕಳೆದ ಎರಡು ವಾರಗಳ ಹಿಂದೆ ಹಾವೇರಿಯಲ್ಲಿ ನಡೆದಿದ್ದ ಭೀಕರ ಅಪಘಾತದಲ್ಲಿ ನಿಂತಿದ್ದ ಲಾರಿಗೆ ಟೆಂಪೋ ಟ್ರಾವೆಲ್ಲರ್ ಡಿಕ್ಕಿ ಹೊಡೆದು 13 ಜನರು ಸಾವನ್ನಪ್ಪಿದ್ದರು. ಈ ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡಿದ್ದ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಎಮ್ಮೆಹಟ್ಟಿ ಗ್ರಾಮದ ಕುಟುಂಬಸ್ಥರನ್ನು ನಟ ಶಿವರಾಜ್ ಕುಮಾರ್ ಮತ್ತು ಪತ್ನಿ ಗೀತಾರವರು ಭೇಟಿಯಾಗಿ, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.
ಈ ಹಿಂದೆ ಕುಟುಂಬಸ್ಥರನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದ ಶಿಕ್ಷಣ ಸಚಿವ ಮಧು ಬಂಗಾರಪ್ಪನವರು ಮೃತಪಟ್ಟವರಿಗೆ ಗೀತಾ ಶಿವರಾಜ್ ಕುಮಾರ್ ಅವರು ತಲಾ 1 ಲಕ್ಷ ಪರಿಹಾರ ನೀಡುವುದಾಗಿ ಭರವಸೆ ನೀಡಿರುವುದಾಗಿ ತಿಳಿಸಿದ್ದರು. ಅಂತೆಯೆ ಭದ್ರಾವತಿ ತಾಲೂಕಿನ ಎಮ್ಮೆಹಟ್ಟಿ ಗ್ರಾಮಕ್ಕೆ ಭೇಟಿ ನೀಡಿದ ಗೀತಾ ಶಿವರಾಜ್ ಕುಮಾರ್ ಅವರು ಮೃತರ ಕುಟುಂಬಗಳನ್ನು ಸಂತೈಸಿ, ಪರಿಹಾರ ಮೊತ್ತವನ್ನು ವಿತರಿಸಿದರು.
ಸಾಂತ್ವನ ಸಭೆಯಲ್ಲಿ ಮೃತರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ನಡೆಸಲಾಯಿತು. ಅಲ್ಲದೇ, ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗೌತಮ್ ಮತ್ತು ಪರಶುರಾಮ್ ಎಂಬುವವರಿಗೆ ತಲಾ 1.5 ಲಕ್ಷ ನೀಡಿ ಮಾನವೀಯತೆ ಮೆರೆದಿದ್ದಾರೆ.
ಅಲ್ಲದೇ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಮಕ್ಕಳ ಮುಂದಿನ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ಹೊರುವುದಾಗಿ ನಟ ಶಿವರಾಜ್‌ಕುಮಾರ್ ದಂಪತಿ ತಿಳಿಸಿದರು.
ಬಳಿಕ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಗೀತಾ ಶಿವರಾಜ್ ಕುಮಾರ್, “ಈ ರೀತಿಯ ಘಟನೆ ಯಾರಿಗೂ ಆಗಬಾರದು. ಕುಟುಂಬಸ್ಥರಿಗೆ ದುಖ ಭರಿಸುವ ಶಕ್ತಿ ದೇವರು ನೀಡಲಿ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಹಾಯ ಮಾಡಬೇಕಾದಲ್ಲಿ ಅದಕ್ಕೂ ಸಿದ್ಧರಿದ್ದೇವೆ” ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಮಂಗಳೂರು | ವೃದ್ಧರಿದ್ಧ ಮನೆಗೆ ನುಗ್ಗಿ ದರೋಡೆಗೈದ ಗ್ಯಾಂಗ್; ಕಾರು ಸಹಿತ ಪರಾರಿ
ನಟ ಶಿವರಾಜ್ ಕುಮಾರ್ ಮಾತನಾಡಿ, “ಇದು ಮಾತನಡುವ ಸಮಯವಲ್ಲ. ಕುಟುಂಬಸ್ಥರಿಗೆ ಸಮಾಧಾನ ಮಾಡೋದು ಕಷ್ಟ. ಊರಿನ ಗ್ರಾಮಸ್ಥರು ಆ ಕುಟುಂಬದ ಜೊತೆ ನಿಂತಿದ್ದಾರೆ. ಇಲ್ಲಿಗೆ ಬಂದಾಗ ತುಂಬಾ ಬೇಜಾರಾಯಿತು ನಾವು ಕುಟುಂಬದ ಜೊತೆ ಇರುತ್ತೇವೆ. ನಮ್ಮ ಕೈಲಾದ ಸಹಾಯ ಮಾಡಿದ್ದೇವೆ” ಎಂದರು.
ಈ ವೇಳೆ ಭದ್ರಾವತಿ ಶಾಸಕರಾದ ಸಂಗಮೇಶ್, ಶಿವಮೊಗ್ಗ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಆರ್. ಪ್ರಸನ್ನಕುಮಾರ್, ಕಲಗೋಡು ರತ್ನಾಕರ್, ಶ್ರೀನಿವಾಸ್ ಕರಿಯಣ್ಣ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
