ಬಿಬಿಸಿ ವರದಿಗಾರ ಮೋಹರ್ ಸಿಂಗ್ ಮೀಣಾ ಜುಲೈ 5ರಂದು ಜಿತೇಂದ್ರಸಿಂಗ್ ತಾಯಿಯ ಜೊತೆ ಮಾತಾಡುತ್ತಿದ್ದ ಆ ಕ್ಷಣದಲ್ಲೇ ಕುಟುಂಬದ ಖಾತೆಗೆ 48 ಲಕ್ಷ ರುಪಾಯಿ ನೀಡಲಾಗುತ್ತಿದೆ ಎಂಬ ವರ್ತಮಾನ ಬಂದಿದೆ. ಜು.2ರಂದು ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಸರ್ಕಾರವನ್ನು ಹಿಗ್ಗಾಮುಗ್ಗಾ ಝಾಡಿಸಿದ್ದರು
“ನನ್ನ ಮಗನ ಕಳೇಬರ ಬಿಟ್ಟರೆ ಸರ್ಕಾರದಿಂದ ನನಗೆ ಇನ್ನೇನೂ ಸಿಕ್ಕಿಲ್ಲ, ನನ್ನ ಕಂದ ಸತ್ತ ಎರಡು ತಿಂಗಳೇ ಆಗಿದೆ. ಅವನ ಸಾಮಗ್ರಿಗಳು ಮೊಬೈಲ್ ಫೋನ್ ಕೂಡ ಇಲ್ಲಿಯವರೆಗೆ ಬಂದಿಲ್ಲ”. 21 ವರ್ಷದ ಅಗ್ನಿವೀರ ಜಿತೇಂದ್ರ ಸಿಂಗ್ ತಂವರ್ ನ ಅಮ್ಮ ಸರೋಜ್ ದೇವಿಯ ಸಂಕಟವನ್ನು ಹೇಳಲು ಮಾತುಗಳು ಸಾಲುವುದಿಲ್ಲ.
ಹುತಾತ್ಮರಾಗುವ ಅಗ್ನಿವೀರರ ಪ್ರಾಣಗಳು ಬಲು ಅಗ್ಗವಾಗಿ ಹೋಗಿವೆ. ಅವರ ಕುಟುಂಬಗಳಿಗೆ ಪರಿಹಾರ ಸಿಗುವುದಿಲ್ಲ, ಅವರನ್ನು ಹುತಾತ್ಮ ಯೋಧ ಎಂದೇ ಪರಿಗಣಿಸುವುದಿಲ್ಲ ಎಂಬುದಾಗಿ ಇತ್ತೀಚೆಗೆ ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಸರ್ಕಾರವನ್ನು ಹಿಗ್ಗಾಮುಗ್ಗಾ ಬಡಿದು ಬಾರಿಸಿದರು. ಅಗ್ನಿವೀರರ ಕುಟುಂಬಗಳಿಗೆ ಒಂದು ಕೋಟಿ ರುಪಾಯಿ ಪರಿಹಾರ ನೀಡಲಾಗುತ್ತಿದೆ ಎಂದು ರಕ್ಷಣಾ ಸಚಿವ ರಾಜನಾಥಸಿಂಗ್ ಆ ಹೊತ್ತಿಗೆ ಬೀಸುವ ಬಡಿಗೆಯಿಂದ ತಪ್ಪಿಸಿಕೊಂಡಿದ್ದರು.
ಆದರೆ, ವಾಸ್ತವ ಸ್ಥಿತಿ ಏನು ಎಂಬುದನ್ನು ‘BBC’ ಹಿಂದಿ ಸುದ್ದಿ ಸಂಸ್ಥೆ ಬಯಲು ಮಾಡಿದೆ. ಬಿಬಿಸಿ ವರದಿಗಾರ ಮೋಹರ್ ಸಿಂಗ್ ಮೀಣಾ ಜುಲೈ ಐದರಂದು ಜಿತೇಂದ್ರಸಿಂಗ್ ತಾಯಿಯ ಜೊತೆ ಮಾತಾಡುತ್ತಿದ್ದ ಆ ಕ್ಷಣದಲ್ಲೇ ಕುಟುಂಬದ ಖಾತೆಗೆ 48 ಲಕ್ಷ ರುಪಾಯಿ ನೀಡಲಾಗುತ್ತಿದೆ ಎಂಬ ವರ್ತಮಾನ ಬಂದಿದೆ. ರಕ್ಷಣಾ ಮಂತ್ರಾಲಯದಿಂದ ಈ ಫೋನ್ ಕರೆ ಬಂದ ಕೆಲವೇ ತಾಸುಗಳಲ್ಲಿ ಜಿತೇಂದ್ರ ಸಿಂಗ್ ಕುಟುಂಬದ ಖಾತೆಗೆ 48 ಲಕ್ಷ ರುಪಾಯಿಗಳು ಜಮೆಯಾಗಿವೆ. ಅಗ್ನಿವೀರರಿಗೆ 48 ಲಕ್ಷ ರುಪಾಯಿಗಳ ಜೀವವಿಮೆಯ ಸೌಲಭ್ಯ ಕಲ್ಪಿಸಲಾಗಿದೆ.
ಅಗ್ನಿವೀರ ಜಿತೇಂದ್ರ ಸಿಂಗ್ ಭಾರತೀಯ ಸೇನೆಯ ಭಾಗವಾಗಿದ್ದ. ಎರಡು ತಿಂಗಳ ಹಿಂದೆ ಮೇ ಒಂಬತ್ತರಂದು ಜಮ್ಮು ಕಾಶ್ಮೀರದ ಪೂಂಛ್ ನಲ್ಲಿ ಉಗ್ರವಾದಿಗಳ ಜೊತೆಗಿನ ಗುಂಡಿನ ಕಾಳಗದಲ್ಲಿ ಹತನಾಗಿದ್ದ. ಘರ್ಷಣೆಯ ನಂತರ ನಡೆದ ಶೋಧ ಕಾರ್ಯದಲ್ಲಿ ತಲೆಗೆ ಗುಂಡು ಹೊಕ್ಕಿದ್ದ ಆತನ ಶವ ಪತ್ತೆಯಾಗಿತ್ತು. ಕಾಳಗದಲ್ಲಿ ಮಡಿದ ರಾಜಸ್ತಾನದ ಮೊದಲ ಅಗ್ನಿವೀರ ಎನಿಸಿಕೊಂಡಿದ್ದ ಜಿತೇಂದ್ರಸಿಂಗ್. 2022ರಲ್ಲಿ ಅಗ್ನಿವೀರನೆಂದು ಭಾರತೀಯ ಸೇನೆ ಸೇರಿದ್ದ 21ರ ಹರೆಯದ ತರುಣನೀತ.
ಮೋದಿ ಸರ್ಕಾರ ಜಾರಿಗೆ ತಂದ ಅಗ್ನಿವೀರ್ ನೇಮಕದ ಅನ್ಯಾಯ ಕುರಿತು ರಾಹುಲ್ ಗಾಂಧಿ ಮಾತನಾಡುತ್ತಲೇ ಬಂದಿದ್ದರು. ಆದರೆ ಅವರು ಪ್ರತಿಪಕ್ಷಗಳ ನಾಯಕರಾಗಿ ಲೋಕಸಭೆಯಲ್ಲಿ ಈ ಅನ್ಯಾಯವನ್ನು ಎತ್ತಿ ಆಡಿದ ನಂತರ ಜವಾಬು ನೀಡದೆ ರಾಜನಾಥ ಸಿಂಗ್ ಅವರಿಗೆ ಬೇರೆ ದಾರಿಯೇ ಇರಲಿಲ್ಲ. ಆ ಜವಾಬಿನಲ್ಲಿ ನಿಜವಿರಲಿಲ್ಲ ಎಂಬುದನ್ನೂ ರಾಹುಲ್ ಗಾಂಧಿ ಆನಂತರ ಹೊರಗೆಳೆದಿದ್ದಾರೆ. ಆ ವಿಚಾರ ಬೇರೆ.
ಆದರೆ, ರಾಹುಲ್ ಗಾಂಧಿ ಲೋಕಸಭೆಯಲ್ಲಿ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವ ಮುನ್ನ ಜಿತೇಂದ್ರ ಸಿಂಗ್ ತಂವರ್ ಕುಟುಂಬದ ಗೋಳು ಕೇಳುವವರೇ ದಿಕ್ಕಿರಲಿಲ್ಲ. ಈ ಕುರಿತು ಆತನ ಅಮ್ಮನಿಗೆ ಘೋರ ನಿರಾಶೆಯಾಗಿದೆ.

ಅಗ್ನಿವೀರರಿಗೆ ಅನ್ಯಾಯ ಎಸಗಿರುವ ವಿಚಾರ ಲೋಕಸಭೆಯಲ್ಲಿ ಪ್ರಸ್ತಾಪವಾದ ನಂತರವೇ ಜಿತೇಂದ್ರಸಿಂಗ್ ಕುಟುಂಬಕ್ಕೆ ದಿಲ್ಲಿಯಿಂದ ಅನೇಕ ರಾಜಕೀಯ ನಾಯಕರ ಫೋನ್ ಕರೆಗಳು ಬರಲಾರಂಭಿಸಿದ್ದವು. ಜಿತೇಂದ್ರ ಕೆಲಸ ಮಾಡುತ್ತಿದ್ದ ಪ್ಯಾರಾ ಯೂನಿಟ್ನಿಂದಲೂ ಫೋನ್ ಬಂದದ್ದು ಆಗಲೇ. ಲೋಕಸಭೆಯಲ್ಲಿ ಈ ಸಂಗತಿ ಪ್ರಸ್ತಾಪ ಆಗುವ ಮುನ್ನವೇ ಸರ್ಕಾರ ನಮ್ಮ ಕುಟುಂಬವನ್ನು ತನ್ನ ಕುಟುಂಬ ಎಂದು ಭಾವಿಸಿ ಜೊತೆಗೆ ನಿಲ್ಲಬೇಕಿತ್ತು. ಆದರೆ ಹಾಗಾಗಲಿಲ್ಲ. ದೇಶಕ್ಕಾಗಿ ಜೀವ ಕೊಟ್ಟ ಯೋಧನ ಕುಟುಂಬವನ್ನು ನಡೆಸಿಕೊಳ್ಳುವ ರೀತಿ ಇದು ಅಲ್ಲವೇ ಅಲ್ಲ ಎಂಬುದು ಜಿತೇಂದ್ರಸಿಂಗ್ ನ ಸೋದರಸಂಬಂಧಿ ಹೇಮಂತ್ ನ ದೂರು.
ಜಿತೇಂದ್ರನ ತಾಯಿ ಸರೋಜ್ ದೇವಿಯ ಹಸ್ತಗಳು ಅವಚಿ ಹಿಡಿದದ್ದು ತನ್ನ ಕರುಳ ಕುಡಿಯ ಭಾವಚಿತ್ರವನ್ನು, ಕಣ್ಣೀರಾಗಿ ಬಿಕ್ಕಳಸುತ್ತಿದ್ದಳು. ಜಿತೇಂದ್ರ ಬಳಸುತ್ತಿದ್ದ ಸಾಮಾನು ಸರಂಜಾಮುಗಳನ್ನು ಕೂಡ ಈವರೆಗೆ ನಮಗೆ ತಲುಪಿಸಿಲ್ಲ ಎಂದಳು ಆಕೆ.
ರಾಜಸ್ತಾನ ಸೈನಿಕ ಕಲ್ಯಾಣ ವಿಭಾಗದ ನಿರ್ದೇಶಕ ಬ್ರಿಗೇಡಿಯರ್ (ನಿವೃತ್ತ) ವೀರೇಂದ್ರ ಸಿಂಗ್ ರಾಠೋಡ್ ಪ್ರಕಾರ ಜಿತೇಂದ್ರ ಬಳಸುತ್ತಿದ್ದ ಸಾಮಾನುಗಳನ್ನು ಕಳಿಸಲು ಎರಡು ತಿಂಗಳ ವಿಳಂಬದ ಅಗತ್ಯ ಇಲ್ಲ. ಕುಟುಂಬದ ಪರಿಚಿತ ಮತ್ತು ಮಾಜಿ ಸೈನಿಕ ಭಕ್ತಾವರ್ ಸಿಂಗ್ ಪ್ರಕಾರ ಒಬ್ಬ ಹುತಾತ್ಮನಿಗೆ ಹುತಾತ್ಮನ ಸಮ್ಮಾನ ಸಿಗಲೇಬೇಕು. ಅಗ್ನಿವೀರರಿಗೆ ಆಗಿರುವ ಅನ್ಯಾಯವನ್ನು ರಾಜಕೀಯ ವಿಷಯವನ್ನಾಗಿಸಿದ ಆನಂತರ ಮಾತಾಡಿಸುವುದು ಮಹಾತಪ್ಪು. ನಾವು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಾಯಕರನ್ನು ಸಂಪರ್ಕಿಸಿ ಜಿತೇಂದ್ರನಿಗೆ ಹುತಾತ್ಮ ಸ್ಥಾನಮಾನ ಸಿಗಬೇಕೆಂದೂ, ಕುಟುಂಬಕ್ಕೆ ಹಣಕಾಸಿನ ನೆರವು ನೀಡಬೇಕೆಂದೂ ಕೇಳಿಕೊಂಡೆವು. ಆದರೆ ಸರ್ಕಾರಗಳಿಂದ ಯಾವ ಪ್ರತಿಕ್ರಿಯೆಯೂ ಬಂದಿರಲಿಲ್ಲ.
“ನನ್ನ ತಮ್ಮ ಹುತಾತ್ಮ ಆದದ್ದು ಮೇ ಒಂಬತ್ತರಂದು. ಅಂದಿನಿಂದ ಎರಡು ತಿಂಗಳಾದರೂ ನಮ್ಮನ್ನು ಮಾತಾಡಿಸುವವರು ಗತಿಯಿರಲಿಲ್ಲ. ಆದರೆ ಜುಲೈ ನಾಲ್ಕರ ಸಂಜೆ ಆರೂ ಕಾಲಿಗೆ ನಮ್ಮ ಕುಟುಂಬದ ಖಾತೆಗೆ 48 ಲಕ್ಷ ರೂ ಪಾವತಿ ಮಾಡಿರುವುದಾಗಿ ಫೋನ್ ಮೆಸೇಜ್ ಬಂತು. ಈ ಹಣ ಬಂದಿರುವುದು ಎಲ್ಲಿಂದ ಎಂದು ಬ್ಯಾಂಕಿಗೆ ಹೋಗಿ ತಿಳಿದುಕೊಳ್ಳಬೇಕಿದೆ” ಎಂದಿದ್ದಾರೆ ಜಿತೇಂದ್ರನ ದೊಡ್ಡಣ್ಣ.
ಒಂದೇ ಸರಹದ್ದಿನಲ್ಲಿ ಇಬ್ಬರು ಯೋಧರು ಹುತಾತ್ಮರಾಗುತ್ತಾರೆ. ಒಬ್ಬ ಯೋಧನಿಗೆ ಹುತಾತ್ಮನ ಪಟ್ಟ ಸಿಗುತ್ತದೆ. ಪಿಂಚಣಿ ನೀಡಲಾಗುತ್ತದೆ. ಕುಟುಂಬದ ಸದಸ್ಯರೊಬ್ಬರಿಗೆ ನೌಕರಿ ದೊರೆಯುತ್ತದೆ. ಹುತಾತ್ಮನ ಆಶ್ರಿತರಿಗೆ ನೆರವೂ ಸಿಗುತ್ತದೆ. ಆದರೆ ಮಡಿದ ಈ ಯೋಧನಂತೆಯೇ ಮಡಿಯುವ ಅಗ್ನಿವೀರನ ಕುಟುಂಬಕ್ಕೆ ಈ ಯಾವುದೇ ಸೌಲಭ್ಯ ಯಾಕೆ ಸಿಗುವುದಿಲ್ಲ. ಸರ್ಕಾರ ಅವರನ್ನು ಹುತಾತ್ಮರೆಂದು ಯಾಕೆ ಕರೆಯುವುದಿಲ್ಲ ಎಂಬುದು ರಾಜಸ್ತಾನ ವಿಧಾನಸಭೆಯ ಪ್ರತಿಪಕ್ಷದ ನಾಯಕ ಟೀಕಾರಾಮ್ ಜೂಲಿ ಅವರ ಪ್ರಶ್ನೆ.

ಜಿತೇಂದ್ರ ಮಡಿದ ನಾಲ್ಕು ದಿನಗಳೊಳಗೇ ರಾಜಸ್ತಾನ ವಿಧಾನಸಭೆಯಲ್ಲಿ ಈ ಸಂಗತಿಯನ್ನು ಪ್ರಸ್ತಾಪಿಸಿದ್ದರು ಟೀಕಾರಾಮ್. ಮುಖ್ಯಮಂತ್ರಿ ಭಜನ್ ಲಾಲ್ ಅವರಿಗೂ ಪತ್ರ ಬರೆದು ಜಿತೇಂದ್ರನ ಕುಟುಂಬದ ಬೇಡಿಕೆಗಳನ್ನು ಮಂಡಿಸಿದ್ದರು. ಆದರೆ ಅವರ ಪತ್ರಕ್ಕೆ ಉತ್ತರ ಬಂದದ್ದು ಮಾತ್ರ ಲೋಕಸಭೆಯಲ್ಲಿ ರಾಹುಲ್ ಗಾಂಧಿ ಈ ವಿಷಯವನ್ನು ಜುಲೈ ಎರಡರಂದು ಪ್ರಸ್ತಾಪಿಸಿದ ನಂತರವೇ. ಜಿತೇಂದ್ರನ ಕುರಿತ ದಾಖಲೆ ದಸ್ತಾವೇಜುಗಳಿಗಾಗಿ ದಿಲ್ಲಿಯಿಂದ ಕರೆ ಬಂತು. ಕುಟುಂಬಕ್ಕೆ ಪರಿಹಾರದ ಕೊಂಚ ಹಣ ಬಂದದ್ದೂ ಆಗಲೇ ಎಂದಿದ್ದಾರೆ ಟೀಕಾರಾಮ್.
ಅಗ್ನಿಪಥ ಯೋಜನೆಯ ಪ್ರಕಾರ ಮಧ್ಯಪ್ರದೇಶದಲ್ಲಿ 2024-25ರ ಸಾಲಿಗೆ ಅಗ್ನೀವಿರರ ನೇಮಕಾತಿ ನಡೆಯಿತು. ಆ ಸಂದರ್ಭದಲ್ಲಿ ಅಗ್ನಿವೀರರಿಗೆ ದೊರೆಯುವ ಭತ್ಯೆಗಳು ಮತ್ತು ಸೌಲಭ್ಯಗಳ ಕುರಿತು ಜಾಹೀರಾತು ವಿವರಣೆಯೊಂದು ಹೊರಬಿದ್ದಿತ್ತು. ಅದರ ಪ್ರಕಾರ ಅಗ್ನಿವೀರರಿಗೆ ನೀಡಲಾಗುವ ಪ್ಯಾಕೇಜ್ ನಲ್ಲಿ ಪ್ರತಿ ವರ್ಷ ವೇತನ ಬಡ್ತಿ, ರಿಸ್ಕ್ ಮತ್ತು ಹಾರ್ಡ್ಶಿಪ್ ಭತ್ಯೆಗಳು ಸೇರಿವೆ. ಸಾವು ಮತ್ತು ಅಂಗಹೀನತೆಯ ಸಂದರ್ಭದಲ್ಲಿ 48 ಲಕ್ಷ ರುಪಾಯಿಗಳ ಜೀವವಿಮೆ ದೊರೆಯುವುದಾಗಿ ತಿಳಿಸಲಾಗಿತ್ತು.
ಗ್ರ್ಯಾಚ್ಯುಯಿಟಿ ಮತ್ತು ಪಿಂಚಣಿ ಸಿಗುವುದಿಲ್ಲ, ಆದರೆ ಸುಮಾರು 95 ಲಕ್ಷ ರುಪಾಯಿಗಳ ಪ್ಯಾಕೇಜ್ ಸಿಗುತ್ತದೆ ಕೇಂದ್ರ ಸರ್ಕಾರದಿಂದ. ಅಷ್ಟೇ ಅಲ್ಲ, ರಾಜ್ಯ ಸರ್ಕಾರದಿಂದ ದೊರೆಯುವ ಪ್ಯಾಕೇಜುಗಳು ಇವೆ ಎನ್ನುತ್ತಾರೆ ನಿವೃತ್ತ ಬ್ರಿಗೇಡಿಯರ್ ವೀರೇಂದ್ರ ಸಿಂಗ್ ರಾಠೋಡ್.
ಇವೆಲ್ಲ ಸೌಲಭ್ಯಗಳು ನಿಜಕ್ಕೂ ಅಗ್ನಿವೀರರಿಗೆ ಸಿಗುವುವೇ ಹುತಾತ್ಮ ಪಟ್ಟ ಅವರ ಪಾಲಿಗೆ ಗಗನ ಕುಸುಮವೇ ಎಂಬ ಪ್ರಶ್ನೆಗಳಿಗೆ ಮೋದಿಯವರೇ ಎದೆ ಮುಟ್ಟಿ ನೋಡಿಕೊಂಡು ಜವಾಬು ಹೇಳಬೇಕು. ಮಗ ಮಡಿದ ನಂತರ ತಾಯಿ ಸರೋಜ್ ದೇವಿ ಹಾಸಿಗೆ ಹಿಡಿದಿದ್ದಾಳೆ. ಆಸ್ಪತ್ರೆಯಲ್ಲಿ ಚಿಕಿತ್ಸೆಯ ನಂತರವೂ ಚೇತರಿಸಿಕೊಂಡಿಲ್ಲ. “ನನ್ನ ಮಗ ದೇಶಕ್ಕಾಗಿ ಜೀವ ತೆತ್ತಿರುವುದು ನಿಜವಾಗಿದ್ದಲ್ಲಿ ಆತನನ್ನು ಹುತಾತ್ಮ ಎಂದು ಕರೆಯಲು ಸರ್ಕಾರಕ್ಕೆ ಯಾಕೆ ಹಿಂಜರಿಕೆ” ಎಂದು ಕೇಳುತ್ತದೆ ತಾಯಿ ಕರುಳು.
ರಾಜಸ್ತಾನದ ರಾಜಧಾನಿ ಜೈಪುರದಿಂದ ಸುಮಾರು 170 ಕಿ.ಮೀ.ದೂರದ ಅಲ್ವರ್ ಜಿಲ್ಲೆಯ ಮಾಲಾಖೇಡ ತೆಹಸೀಲ್ ನ ಗ್ರಾಮ ನವಲಪುರ. ಹಳ್ಳಿಯನ್ನು ಪ್ರವೇಶಿಸುತ್ತಿದ್ದಂತೆಯೇ ಎದುರಾಗುವುದು ಜಿತೇಂದ್ರ ಸಿಂಗ್ ಮನೆ. ಮೂರು ಕೋಣೆಯ ಕಟ್ಟಡ. ಮನೆಯ ಹೊರಗೆ ಕಟ್ಟಿರುವ ಬ್ಯಾನರ್ನಲ್ಲಿ ಮೂಡಿರುವ ಅಕ್ಷರಗಳು- ಅಮರ ಹುತಾತ್ಮ ಜಿತೇಂದ್ರ ಸಿಂಗ್ ತಂವರ್.
ಏಳು ವರ್ಷಗಳ ಹಿಂದೆ ಜಿತೇಂದ್ರನ ತಂದೆ ಗತಿಸಿದರು. ಹಿರಿಯ ಮಗನ ಆರೋಗ್ಯ ಸರಿಯಿಲ್ಲ. ಕುಟುಂಬದ ಒಂದೂವರೆ ಬಿಘಾ ಜಮೀನಿನಲ್ಲಿ ಹೊಟ್ಟೆ ಹೊರೆಯುವುದು ಸಾಧ್ಯವಿಲ್ಲ. ತಂದೆಯ ತರುವಾಯ ಮನೆಯಲ್ಲಿ ದುಡಿಯುವವನು ಜಿತೇಂದ್ರನೊಬ್ಬನೇ ಆಗಿದ್ದ. ಕೂಲಿನಾಲಿ ಮಾಡಿ ಹೊಟ್ಟೆ ಹೊರೆಯುತ್ತಿದ್ದ ಹೊತ್ತಿನಲ್ಲಿ ಜಿತೇಂದ್ರನಿಗೆ ಅಗ್ನಿವೀರನ ನೌಕರಿ ಸಿಕ್ಕಿತು. ಪರಿಸ್ಥಿತಿ ಚೇತರಿಸಿಕೊಂಡಿತ್ತು. ಈಗ ಅವನಿಲ್ಲ. ಅವನೂ ಮಡಿದ ಬಳಿಕ ನನ್ನಲ್ಲಿ ಏನೂ ಉಳಿದಿಲ್ಲ ಎಂದು ಬಿಕ್ಕುತ್ತಾಳೆ ಸರೋಜ್ ದೇವಿ.
ಸೌಜನ್ಯ- BBC Hindi