“ಇಂದಿರಾ ಕ್ಯಾಂಟೀನ್‌ನ ಮೂಲಕ ಹಳ್ಳಿಯಿಂದ ಬರುವ ಸಾವಿರಾರು ಬಸ್ ಪ್ರಯಾಣಿಕರು, ನಿತ್ಯ ವ್ಯಾಪಾರಕ್ಕೆ ಆಗಮಿಸುವ ಕಾರ್ಮಿಕರು, ಕಟ್ಟಡ ಕಾರ್ಮಿಕರಿಗೆ ಕಡಿಮೆ ದರದಲ್ಲಿ ಉಪಾಹಾರ, ಊಟ ದೊರೆಯುವ ಮೂಲಕ ಎಲ್ಲರಿಗೂ ಅನುಕೂಲವಾಗಲಿದೆ” ಎಂದು ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷರಾದ ಎಂ. ಎಂ. ಮುಲ್ಲಾ ಹೇಳಿದರು.
ವಿಜಯಪುರ ಜಿಲ್ಲೆ ನಿಡಗುಂಡಿ ಪಟ್ಟಣದ ಹೊಸ ಬಸ್ ನಿಲ್ದಾಣದ ಆವರಣದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, “ಬೆಲೆ ಏರಿಕೆಯ ದಿನಮಾನಗಳಲ್ಲಿ ಸರ್ಕಾರವು ಇಂದಿರಾ ಕ್ಯಾಂಟೀನ್ ತೆರೆಯಲು ಅನುದಾನ ಕೊಡುತ್ತಿದೆ. ಆ ಮೂಲಕ ಸರ್ಕಾರ ಬಡವರ ಪರ ಕೆಲಸ ಮಾಡುತ್ತಿದೆ. ಅದಕ್ಕೆ ಧನ್ಯವಾದಗಳು” ಹೇಳಿದರು.
ಮುಖ್ಯಾಧಿಕಾರಿ ವಿರೇಶ್ ಹಟ್ಟಿ ಮಾತನಾಡಿ, “ನಿಡಗುಂದಿಯಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣವಾಗುತ್ತಿರುವುದು ಹೆಮ್ಮೆಯ ಸಂಗತಿ. ಕಾರ್ಮಿಕರ ಹಾಗೂ ಕಚೇರಿಗೆ ಆಗಮಿಸುವ ಸಿಬ್ಬಂದಿಗೆ ಮತ್ತು ಶಾಲೆ, ಕಾಲೇಜು ವಿದ್ಯಾರ್ಥಿಗಳಿಗೆ ಇಂದಿರಾ ಕ್ಯಾಂಟೀನ್ ನಿರ್ಮಾಣದಿಂದ ಕಡಿಮೆ ದರದಲ್ಲಿ ಉಪಹಾರದಿಂದ ದೊರೆಯುವ ಮೂಲಕ ಹಸಿವು ನಿವಾರಣೆಗೆಯಾಗಲಿದೆ. 50 ಅಡಿ ಉದ್ದ 50 ಅಡಿ ಅಗಲ ಹೊಂದಿದ ಅಳತೆಯಲ್ಲಿ ಕ್ಯಾಂಟೀನ್ ನಿರ್ಮಾಣವಾಗಲಿದೆ. ಬೆಡ್ ನಿರ್ಮಾಣಗೊಂಡು ಕಟ್ಟಡಕ್ಕೆ ಸ್ಲ್ಯಾಬ್‌ಗಳನ್ನು ಹೊಂದಿಸಿ 15 ದಿನದಲ್ಲಿ ಕ್ಯಾಂಟೀನ್ ಕಾಮಗಾರಿ ಪೂರ್ಣವಾಗಲಿದೆ” ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಮೈಸೂರು | ಜನರ ಪಾಲಿಗೆ ನರಕವಾದ ಚೆಲುವಾಂಬ ಸರ್ಕಾರಿ ಆಸ್ಪತ್ರೆ; ಕಣ್ಣಾಡಿಸುವರೇ ಆರೋಗ್ಯ ಸಚಿವರು?
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಸಂಗಮೇಶ ಬಳಗೂರ, ಎಂ. ಎಂ. ಅತ್ತಾರ, ಮಲ್ಲಿಕ್ ಭಗವಾನ್, ಪರಶುರಾಮ, ಎಸ್. ಕೆ. ಗೌಡರ್, ಸಂಜು ರಾಠೋಡ್ ಮತ್ತಿತರರು ಉಪಸ್ಥಿತರಿದ್ದರು.