ಝೀಕಾ ಉಲ್ಬಣ | ಗರ್ಭಿಣಿಯರೆ ಎಚ್ಚರ, ಹುಟ್ಟುವ ಮಗುವಿನ ಮೇಲೆ ಇರಲಿ ನಿಗಾ

Date:

Advertisements

ಮಹಾರಾಷ್ಟ್ರದಿಂದ ಕನಿಷ್ಠ ಎಂಟು ಝೀಕಾ ವೈರಸ್ ಪ್ರಕರಣಗಳು ವರದಿಯಾದ ಬಳಿಕ ಜುಲೈ 3ರಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಎಲ್ಲಾ ರಾಜ್ಯಗಳಿಗೆ ಝೀಕಾ ವೈರಸ್ ಬಗ್ಗೆ ಎಚ್ಚರಿಕೆಯನ್ನು ನೀಡಿದೆ.

ಅದರಲ್ಲೂ ಮುಖ್ಯವಾಗಿ ಗರ್ಭಿಣಿಯರನ್ನು ಝೀಕಾ ವೈರಸ್ ಪರೀಕ್ಷೆ ಮಾಡಿಸಲು ಮತ್ತು ಝೀಕಾ ವೈರಸ್‌ ಪತ್ತೆಯಾದ ಗರ್ಭಿಣಿಯರ ಭ್ರೂಣದ ಬೆಳವಣಿಗೆಯ ಮೇಲೆ ಹೆಚ್ಚಿನ ಗಮನ ವಹಿಸಲು ಸಚಿವಾಲಯವು ತಿಳಿಸಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ಮಾರ್ಗಸೂಚಿಯು ಸೊಳ್ಳೆ ಉತ್ಪತ್ತಿ ತಾಣವನ್ನು ನಾಶಮಾಡುವಂತಹ ಝೀಕಾ ನಿಯಂತ್ರಣ ಚಟುವಟಿಕೆಗಳನ್ನು ಹೆಚ್ಚಿಸಲೂ ಹೇಳಿದೆ.

Advertisements

ಕೋವಿಡ್‌ಗೆ ಹೋಲಿಸಿದರೆ ಝೀಕಾ ಅತೀ ಹೆಚ್ಚು ಆರೋಗ್ಯ ಸಮಸ್ಯೆ ಉಂಟು ಮಾಡದ ವೈರಸ್ ಆಗಿದೆ. ಸೋಂಕು ಲಕ್ಷಣಗಳು ಸೌಮ್ಯವಾಗಿರುತ್ತವೆ ಮತ್ತು ಆಸ್ಪತ್ರೆಗೆ ಸೇರದೆಯೇ ತ್ವರಿತವಾಗಿ ಗುಣಮುಖರಾಗಬಹುದು. ಆದರೆ ಝೀಕಾ ವೈರಸ್ ಗರ್ಭಿಣಿಯರಿಗೆ ಅತೀ ಅಪಾಯಕಾರಿಯಾಗಿದೆ. ಗರ್ಭಾವಸ್ಥೆಯಲ್ಲಿ ಈ ಸೋಂಕು ಕಾಣಿಸಿಕೊಂಡರೆ ಆ ಹೆಣ್ಣಿನ ಜೀವನವನ್ನೇ ಬದಲಾಯಿಸುವಷ್ಟು ಪರಿಣಾಮಕಾರಿಯಾಗಬಲ್ಲದು.

ಇದನ್ನು ಓದಿದ್ದೀರಾ?  ಶಿವಮೊಗ್ಗದಲ್ಲಿ ಝೀಕಾ ವೈರಸ್‌ಗೆ ಮೊದಲ ಬಲಿ

ಗರ್ಭಧಾರಣೆ ಸಮಯದಲ್ಲಿ ಈ ಸೋಂಕು ಕಾಣಿಸಿಕೊಂಡ ಮಹಿಳೆಯರ ಪೈಕಿ ಶೇಕಡ 15ರಷ್ಟು ಮಹಿಳೆಯರಿಗೆ ಹುಟ್ಟಿದ ಮಕ್ಕಳಲ್ಲಿ ಹಲವಾರು ತೀವ್ರ ಆರೋಗ್ಯ ಸಮಸ್ಯೆಗಳು ಕಂಡುಬಂದಿವೆ. ಝೀಕಾ ವೈರಸ್ ಶಿಶುವು ದೈಹಿಕ ಮತ್ತು ಬೌದ್ಧಿಕ ಅಸಾಮರ್ಥ್ಯಕ್ಕೆ ಒಳಗಾಗುವಂತೆ ಮಾಡುತ್ತದೆ. ಇದರಿಂದಾಗಿ ಹುಟ್ಟಿದ ಮಕ್ಕಳು ತಮ್ಮ ಜೀವನದುದ್ದಕ್ಕೂ ಎಲ್ಲಾ ಚಟುವಟಿಕೆಗಳಿಗೆ ಪೋಷಕರ ಮೇಲೆ ಅವಲಂಬಿತರಾಗಬೇಕಾಗುತ್ತದೆ.

ಭಾರತದಲ್ಲಿ ಝೀಕಾ ಪ್ರಕರಣ

2016ರಲ್ಲಿ ಮೊದಲ ಬಾರಿಗೆ ಭಾರತದಲ್ಲಿ ಝೀಕಾ ಪ್ರಕರಣ ದಾಖಲಾಗಿದೆ. ಗುಜರಾತ್‌ನಲ್ಲಿ ಮೊದಲ ಪ್ರಕರಣ ವರದಿಯಾಗಿದ್ದು ಅಂದಿನಿಂದ ಕನಿಷ್ಠ ಎಂಟು ರಾಜ್ಯಗಳಲ್ಲಿ ಝೀಕಾ ವೈರಸ್ ಪ್ರಕರಣ ಕಂಡುಬಂದಿವೆ. ಈವರೆಗೆ ದೆಹಲಿ, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ತಮಿಳುನಾಡು ಮತ್ತು ಉತ್ತರ ಪ್ರದೇಶದಲ್ಲಿ ಝೀಕಾ ವೈರಸ್ ಪ್ರಕರಣಗಳು ದಾಖಲಾಗಿವೆ.

ಗರ್ಭಿಣಿಯರು ಏನು ಮಾಡಬೇಕು?

ಗರ್ಭಿಣಿಯರು ನಿಯಮಿತ ಅಲ್ಟ್ರಾಸೌಂಡ್ ಸ್ಕ್ಯಾನ್‌ ಮಾಡಿಸುವುದರಿಂದ ಮಗುವಿನಲ್ಲಿನ ಅಂಗವೈಕಲ್ಯಗಳನ್ನು ಗುರುತಿಸಬಹುದು (ಉದಾಹರಣೆಗೆ ಮೈಕ್ರೊಸೆಫಾಲಿ, ಅಂದರೆ, ಸಣ್ಣ ತಲೆಯ ಗಾತ್ರ). ಗರ್ಭಧಾರಣೆಯ ಆರಂಭಿಕ ಅವಧಿಯಲ್ಲಿಯೇ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿನಲ್ಲಿರುವ ಇಂತಹ ಸಮಸ್ಯೆಗಳ ಬಗ್ಗೆ ತಿಳಿದರೆ ಗರ್ಭಧಾರಣೆಯನ್ನು ಮುಂದುವರಿಸಬೇಕೆ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಲು ಮಹಿಳೆಗೆ ಅಥವಾ ದಂಪತಿಗೆ ಅವಕಾಶವಿರುತ್ತದೆ.

ಇನ್ನು ಪರಿಷ್ಕೃತ ಮಾರ್ಗಸೂಚಿಗಳ ಅಡಿಯಲ್ಲಿ ಮಗುವು ಜೀವನದುದ್ದಕ್ಕೂ ಇನ್ನೊಬ್ಬರ ಮೇಲೆ ಅವಲಂಬಿತವಾಗಬೇಕಾದ ಸ್ಥಿತಿಯಲ್ಲಿ ಜನಿಸುವುದಾದರೆ ಮಹಿಳೆಗೆ ಗರ್ಭಪಾತ ಮಾಡಿಸಿಕೊಳ್ಳಲು ಅನುಮತಿ ನೀಡಲಾಗುತ್ತದೆ. ಆದರೂ ಗರ್ಭಪಾತ ಮಾಡಿಸಿಕೊಳ್ಳಲು ವೈದ್ಯಕೀಯ ಮತ್ತು ನೈತಿಕ ಮಿತಿಗಳಿವೆ.

ಅಷ್ಟಕ್ಕೂ ಅಲ್ಟ್ರಾಸೌಂಡ್ ಸ್ಕ್ಯಾನ್ ಮೂಲಕ ಶಿಶುವಿನಲ್ಲಿರುವ ಎಲ್ಲಾ ಸಮಸ್ಯೆಗಳನ್ನು ಪತ್ತೆ ಹಚ್ಚಲು ಸಾಧ್ಯವಾಗುವುದಿಲ್ಲ. ಅದರಲ್ಲೂ ಗ್ರಾಮೀಣ ಮತ್ತು ಬಡ ವರ್ಗಗಳ ಅತ್ಯಂತ ದುರ್ಬಲ ಮಹಿಳೆಯರಿಗೆ ಅಲ್ಟ್ರಾಸೌಂಡ್ ಸ್ಕ್ಯಾನ್‌ಗಳನ್ನು ಮಾಡಿಸಿಕೊಳ್ಳುವಷ್ಟು ಕೂಡ ಆರ್ಥಿಕ ಸಾಮರ್ಥ್ಯ ಇಲ್ಲದಿರುವುದು ಶೋಚನೀಯ.

ಇದನ್ನು ಓದಿದ್ದೀರಾ?  ಬೆಂಗಳೂರಿನಲ್ಲಿ ಡೆಂಘೀಗೆ ಬಾಲಕ ಬಲಿ; ಝೀಕಾ ವೈರಸ್​ನಿಂದ ವೃದ್ಧ ಸಾವು

ಈ ಎಲ್ಲಾ ಕಾರಣದಿಂದಾಗಿ ಝೀಕಾ ವೈರಸ್ ಬಗ್ಗೆ ಜನರಲ್ಲಿ ಎಚ್ಚರಿಕೆ ಮೂಡಿಸುವುದು ಅತೀ ಮುಖ್ಯವಾಗಿದೆ. ಇದು ವಿಕಲ ಚೇತನ, ವಿಶೇಷ ಚೇತನ ಮಕ್ಕಳ ಆರೈಕೆಗಾಗಿ ಮಾನಸಿಕವಾಗಿ ಪೋಷಕರನ್ನು ಸಿದ್ಧಗೊಳಿಸಲು ಸಹಾಯ ಮಾಡುತ್ತದೆ. ಹಾಗೆಯೇ ಭಾರತದಲ್ಲಿ ವಿಕಲಾಂಗ ಮಕ್ಕಳ ಜೀವನದ ಗುಣಮಟ್ಟವನ್ನು ಸುಧಾರಿಸಲು ವೈದ್ಯಕೀಯ ಆರೈಕೆ, ಪುನರ್ವಸತಿ ಸೇವೆಗಳನ್ನೂ ತಿಳಿಸುತ್ತದೆ.

ವಿಶೇಷ ಚೇತನ ಮಕ್ಕಳ ಆರೈಕೆ

ಭಾರತದಾದ್ಯಂತ, ವಿಶೇಷ ಚೇತನ ಮಕ್ಕಳು ಸಾರ್ವಜನಿಕ ಸ್ಥಳಗಳಲ್ಲಿ ವಿರಳವಾಗಿ ಕಾಣಿಸಿಕೊಳ್ಳುತ್ತಾರೆ. ಫಿಸಿಯೋಥೆರಪಿ ಮತ್ತು ಆಕ್ಯುಪೇಷನಲ್ ಥೆರಪಿಗಳನ್ನು ಮಗು ಜನಿಸಿದ ನಂತರವೇ ಆರಂಭಿಸಿದರೆ ಮಕ್ಕಳ ಆರೋಗ್ಯದಲ್ಲಿ ಸುಧಾರಣೆ ತರಲು ಸಾಧ್ಯವಾಗುತ್ತದೆ ಎಂಬುವುದು ಜನರಿಗೆ ಮಾತ್ರವಲ್ಲ ಕೆಲವು ಖಾಸಗಿ ಆಸ್ಪತ್ರೆಯ ವೈದ್ಯರಿಗೂ ಹೆಚ್ಚಾಗಿ ತಿಳಿದಿಲ್ಲ.

ದೇಶದಾದ್ಯಂತ ಜಿಲ್ಲಾ ಆಸ್ಪತ್ರೆಗಳಲ್ಲಿ ವಿಶೇಷ ಚೇತನ ಮಕ್ಕಳಿಗಾಗಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇಲ್ಲಿ ಪೋಷಕರು ತಮ್ಮ ಮಕ್ಕಳನ್ನು ಪರೀಕ್ಷೆಗೆ ಕರೆದೊಯ್ಯಬಹುದು. ಸರ್ಕಾರಿ ಆಸ್ಪತ್ರೆಗಳಲ್ಲಿ ಸಾಮಾನ್ಯವಾಗಿ ಫಿಸಿಯೋಥೆರಪಿ ಮತ್ತು ಆಕ್ಯುಪೇಷನಲ್ ಥೆರಪಿಯಂತಹ ಸೇವೆಗಳನ್ನು ಉಚಿತವಾಗಿ ನೀಡಲಾಗುತ್ತದೆ. ಇನ್ನು ಕೆಲವೆಡೆ ವೀಲ್‌ಚೇರ್‌ಗಳಂತಹ ಸಾಧನಗಳನ್ನು ಉಚಿತವಾಗಿ ನೀಡಲಾಗುತ್ತದೆ.

ಈ ಕೇಂದ್ರಗಳು ಪೋಷಕರಿಗೆ ಮಾನಸಿಕ ಬೆಂಬಲವನ್ನು ನೀಡಲು ಮನಶಾಸ್ತ್ರಜ್ಞರು ಮತ್ತು ಸಾಮಾಜಿಕ ಕಾರ್ಯಕರ್ತರನ್ನು ಕೂಡ ಹೊಂದಿವೆ. ಇಲ್ಲಿ ವಿಶೇಷ ಶಾಲೆಗಳು ಮತ್ತು ಅಂತರ್ಗತ ಶಿಕ್ಷಣದ ಬಗ್ಗೆ ಮಾಹಿತಿಯನ್ನು ಒದಗಿಸಲಾಗುತ್ತದೆ. ಭಾರತದಲ್ಲಿ ಎಲ್ಲಾ ಕೇಂದ್ರಗಳಲ್ಲಿ ಉತ್ತಮ ಗುಣಮಟ್ಟದ ಸೇವೆ ಲಭ್ಯವಾಗದು. ಆದರೆ ಈ ಸೇವೆಯ ಗುಣಮಟ್ಟ ಹೆಚ್ಚಿಸಲು ಜನರ ಬೇಡಿಕೆ ಹೆಚ್ಚಾದಂತೆ ಸರ್ಕಾರವು ಅದರ ಮೇಲೆ ಮಾಡುವ ಹೂಡಿಕೆ ಅಧಿಕವಾಗಬಹುದು.

ಇದನ್ನು ಓದಿದ್ದೀರಾ?  ಚಿಕ್ಕಬಳ್ಳಾಪುರ | ರಕ್ತ ಪರೀಕ್ಷೆಯ ವರದಿಯಲ್ಲಿ ಝೀಕಾ ವೈರಸ್ ಪತ್ತೆಯಿಲ್ಲ; ದಿನೇಶ್ ಗುಂಡೂರಾವ್

ಮಗುವಿನ ಆರೈಕೆ ಆಧಾರದಲ್ಲಿ ಮಗುವಿನ ಸಾಮರ್ಥ್ಯ ಹೆಚ್ಚಿಸಲು ಸಾಧ್ಯವಾಗುತ್ತದೆ ಎಂಬ ಸಂದೇಶ ಹರಡುವುದು ಮುಖ್ಯವಾಗಿದೆ. ಹಾಗೆಯೇ ಮಗುವನ್ನು ಸಂಪೂರ್ಣವಾಗಿ ಗುಣಪಡಿಸುವ ಅವೈಜ್ಞಾನಿಕ, ಅಪರಿಪೂರ್ಣ ದಾರಿ ತುಳಿದು ಪೋಷಕರು ಹಣ ಕಳೆದುಕೊಳ್ಳುವ ಅಪಾಯದಿಂದ ತಪ್ಪಿಸಲು ಈ ಸಂದೇಶವು ಮುಖ್ಯವಾಗಿದೆ.

ಶಾಶ್ವತ ಅಂಗವೈಕಲ್ಯದೊಂದಿಗೆ ಜನಿಸಿದ ಮಗುವಿನ ಸುತ್ತ ಕುಟುಂಬ ಮತ್ತು ಸಮಾಜವು ಹೊಂದಿಕೊಳ್ಳಬೇಕು. ಹಾಗೆಯೇ ವಿಕಲಾಂಗ ಮಕ್ಕಳ ಹಕ್ಕುಗಳನ್ನು ಖಾತ್ರಿಪಡಿಸುವ ಕಾನೂನುಗಳ ಬಗ್ಗೆ ಜನರಿಗೆ ತಿಳಿವಳಿಕೆ ಮೂಡಿಸುವುದು ಅಗತ್ಯವಾಗಿದೆ.

ಪ್ರಸ್ತುತ ಗರ್ಭಿಣಿಯರನ್ನು ರಕ್ಷಿಸುವಲ್ಲಿ ಮತ್ತು ಸೊಳ್ಳೆಗಳ ಸಂತಾನೋತ್ಪತ್ತಿಯನ್ನು ತಡೆಗಟ್ಟುವಲ್ಲಿ ಗಮನವನ್ನು ಕೇಂದ್ರೀಕರಿಸಲಾಗಿದೆ. ಆದರೆ ಹುಟ್ಟುವ ಮಗುವಿಗೆ ಇರುವ ಸಮಸ್ಯೆಯಿಂದ ಜೀವಿತಾವಧಿಯಲ್ಲಿ ತೊಂದರೆ ಉಂಟಾಗಬಹುದು ಎಂಬುದನ್ನು ಗಮನಿಸುವುದೂ ಕೂಡ ಮುಖ್ಯವಾಗಿದೆ. ಯಾಕೆಂದರೆ ಹೆರಿಗೆಯಾದ ಬಳಿಕ ಝೀಕಾ ವೈರಸ್ ಸೋಂಕಿನ ಪರಿಣಾಮಗಳು ಕಾಣಿಸುವುದು ಕಂಡುಬಂದಿವೆ.

ಆದ್ದರಿಂದ ಪೋಷಕರು ತಮ್ಮ ಜೀವನವನ್ನು ಬದಲಾಯಿಸುವ ಘಟನೆಯನ್ನು ಹೇಗೆ ನಿಭಾಯಿಸುವುದು ಎಂಬ ಬಗ್ಗೆ ಹೆಚ್ಚು ತಿಳಿಯಬೇಕು. ಮಾಧ್ಯಮಗಳೂ ಕೂಡ ವೈದ್ಯರ ಸಹಾಯದಿಂದ ಈ ಸಲಹೆ ನೀಡಬೇಕಾಗಿದೆ. ಈ ಸಂದರ್ಭದಲ್ಲಿ ಝೀಕಾ ವೈರಸ್ ಬಗ್ಗೆ ಮುನ್ನೆಚ್ಚರಿಕೆ ನೀಡುವ ಜೊತೆಗೆ ವಿಶೇಷ ಚೇತನ ಮಕ್ಕಳ ಆರೈಕೆ ಮತ್ತು ಅವರನ್ನು ನಮ್ಮೊಳಗೊಬ್ಬರನ್ನಾಗಿಸುವ ಸಂದೇಶವನ್ನು ಸಾರಬೇಕಾಗಿದೆ.

(ಸಂಪೂರ್ಣ ಮಾಹಿತಿ: ಪುಣೆಯ ಬರ್ತ್ ಡಿಫೆಕ್ಟ್ಸ್ ರಿಸರ್ಚ್ ಫೌಂಡೇಶನ್‌ನ ನಿರ್ದೇಶಕಿ, ಶಿಶು ಜನನ ದೋಷ ಸಂಶೋಧಕಿ ಅನಿತಾ ಕರ್) 

 

?s=150&d=mp&r=g
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ದಲಿತ ಸಂಘಟನೆಗಳ ಒಳಮೀಸಲಾತಿ ಪ್ರತಿಭಟನೆ; ಎಸಿ ಕಛೇರಿಗೆ ಬೀಗ

"ಸರ್ವೋಚ್ಚ ನ್ಯಾಯಾಲಯ ಆದೇಶ ನೀಡಿ ಒಂದು ವರ್ಷವಾದರೂ ಒಳಮೀಸಲಾತಿಯನ್ನು ಜಾರಿ ಮಾಡುವಲ್ಲಿ...

ಕರ್ನಾಟಕದಲ್ಲಿ ಒಂದು ವಾರ ಭಾರೀ ಮಳೆ: ಕರಾವಳಿ, ಒಳನಾಡಿನ ಜಿಲ್ಲೆಗಳಿಗೆ ರೆಡ್, ಆರೆಂಜ್ ಅಲರ್ಟ್

ಕರ್ನಾಟಕದಾದ್ಯಂತ ಆಗಸ್ಟ್ 17ರಿಂದ 21ರವರೆಗೆ ಭಾರೀ ಮಳೆಯ ಮುನ್ಸೂಚನೆಯನ್ನು ಭಾರತೀಯ ಹವಾಮಾನ...

ಪಿಓಪಿ ಮೂರ್ತಿಗಳ ವಿಸರ್ಜನೆಯಿಂದ ಜಲಚರ ಸಾವು : ಮಣ್ಣಿನ ಗಣಪತಿ ಪೂಜಿಸಲು ಸಚಿವ ಈಶ್ವರ ಖಂಡ್ರೆ ಮನವಿ

ಗಣೇಶ ಚತುರ್ಥಿಯಂದು ಮನೆಯಲ್ಲೂ ಪೂಜೆಗೊಳ್ಳುವ ಗಣೇಶ ಪರಿಸರ (ಮಣ್ಣಿನಿಂದ) ದಿಂದಲೇ ಹುಟ್ಟಿದ...

ರಾಜ್ಯದಲ್ಲಿ 31 ತಿಂಗಳಲ್ಲಿ 10,510 ಪೋಕ್ಸೋ ಪ್ರಕರಣ : 162 ಮಂದಿಗಷ್ಟೇ ಶಿಕ್ಷೆ!

ರಾಜ್ಯದಲ್ಲಿ ಅಪ್ರಾಪ್ತ ಹೆಣ್ಣು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ದಿನೇದಿನೇ...

Download Eedina App Android / iOS

X