ಹರಿಯಾಣದಲ್ಲಿ ಬಿಜೆಪಿ ತನ್ನ ರಾಜ್ಯಾಧ್ಯಕ್ಷರ ನೇಮಕದಲ್ಲಿ ಬ್ರಾಹ್ಮಣ ‘ಕಾರ್ಡ್’ಅನ್ನು ದಾಳವಾಗಿ ಬಳಸಿದೆ. ಬ್ರಾಹ್ಮಣ ಸಮುದಾಯದ ನಾಯಕ, ಮೊದಲ ಬಾರಿಯ ಶಾಸಕ ಮೋಹನ್ ಲಾಲ್ ಬಡೋಲಿ ಅವರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಿದೆ. ಇತ್ತೀಚೆಗೆ, ಒಬಿಸಿ ಸಮುದಾಯದ ನಾಯಬ್ ಸಿಂಗ್ ಸೈನ್ ಅವರನ್ನು ಮುಖ್ಯಮಂತ್ರಿಯನ್ನಾಗಿ ನೇಮಿಸಿದ್ದ ಬಿಜೆಪಿ, ಇದೀಗ, ಬ್ರಾಹ್ಮಣರನ್ನು ಓಲೈಸಲು ಬಡೋಲಿಯನ್ನು ಅಧ್ಯಕ್ಷರನ್ನಾಗಿ ನೇಮಿಸಿದೆ.
ಬಿಜೆಪಿಯ ನಡೆ ಜಾಟ್ ಸಮುದಾಯವನ್ನು ದಾಟಿ, ಉಳಿದ ಸಮುದಾಯಗಳನ್ನೂ ತನ್ನ ಮತಬ್ಯಾಂಕ್ನಲ್ಲಿ ಕ್ರೋಢೀಕರಿಸುವ ಪ್ರಯತ್ನವಾಗಿದೆ ಎಂದು ಹೇಳಲಾಗುತ್ತಿದೆ. ರಾಜ್ಯದಲ್ಲಿ ಬ್ರಾಹ್ಮಣರು ಹೆಚ್ಚಾಗಿ ಕಾಂಗ್ರೆಸ್ಅನ್ನು ಬೆಂಬಲಿಸುತ್ತಿದ್ದಾರೆ.
ಮಂಗಳವಾರ, ರಾಜ್ಯಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಡೋಲಿ, 2019ರಲ್ಲಿ ಹರ್ಯಾಣ ವಿಧಾನಸಭೆಗೆ ರಾಯ್ ಕ್ಷೇತ್ರದಿಂದ ಸ್ಪರ್ಧಿಸಿ, ಗೆದ್ದಿದ್ದರು. ಈ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಮೊದಲ ಬಾರಿಗೆ ಗೆಲುವು ಸಾಧಿಸಿತ್ತು.
ಜಾಟ್ಗಳು ರಾಜ್ಯದಲ್ಲಿ ಪ್ರಬಲ ಜಾತಿಯಾಗಿದ್ದು, ಜಾಟ್ ನಂತರದಲ್ಲಿ ಬ್ರಾಹ್ಮಣ ಜನಸಂಖ್ಯೆಯೂ ಗಣನೀಯವಾಗಿದೆ. ಕಾಂಗ್ರೆಸ್ ನಾಯಕ ಭೂಪಿಂದರ್ ಸಿಂಗ್ ಹೂಡಾ ಕೂಡ ಬ್ರಾಹ್ಮಣ ಸಮುದಾಯವನ್ನು ಓಲೈಸಲು ಪ್ರಯತ್ನಿಸುತ್ತಿದ್ದಾರೆ. ಕಾಂಗ್ರೆಸ್ನ ಮತಬ್ಯಾಂಕ್ಅನ್ನು ಒಡೆಯಲು ಬಿಜೆಪಿ ಎಲ್ಲ ದಾಳಗಳನ್ನೂ ಉರುಳಿಸುತ್ತಿದೆ.
ಸೈನಿ ಒಬಿಸಿಯಿಂದ ಬಂದವರಾಗಿದ್ದರೆ, ಹಿಂದಿನ ಮುಖ್ಯಮಂತ್ರಿ, ಹಾಲಿ ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್ ಪಂಜಾಬಿ ಸಮುದಾಯಕ್ಕೆ ಸೇರಿದವರು ಮತ್ತು ಹೊಸ ರಾಜ್ಯ ಬಿಜೆಪಿ ಮುಖ್ಯಸ್ಥ ಬ್ರಾಹ್ಮಣ ಜಾತಿಯವರು. ಬಿಜೆಪಿಯು ಈ ಬಲವಾದ ಜಾತಿ ಸಂಯೋಜನೆಯೊಂದಿಗೆ ಕೆಲವೇ ತಿಂಗಳುಗಳಲ್ಲಿ ನಡೆಯಲಿರುವ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಗೆಲ್ಲಲು ಯತ್ನಿಸುತ್ತಿದೆ.
ಅದಾಗ್ಯೂ, ಲೋಕಸಭಾ ಚುನಾವಣೆಯಲ್ಲಿಯೂ ಸ್ಪರ್ಧಿಸಿದ್ದ ಬಡೋಲಿ ಅವರು ಸೋನಿಪತ್ ಕ್ಷೇತ್ರದಲ್ಲಿ ಕಾಂಗ್ರೆಸ್ ವಿರುದ್ಧ ಸೋಲುಂಡಿದ್ದಾರೆ. ತಿಂಗಳ ಹಿಂದೆಯಷ್ಟೇ ಸೋಲುಂಡ ಬಡೋಲಿ ಅವರನ್ನು ಈಗ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಿದೆ.
ಗಮನಾರ್ಹವಾಗಿ, ಹರಿಯಾಣದಲ್ಲಿ ಬಿಜೆಪಿ 2014ರಿಂದ ಅಧಿಕಾರದಲ್ಲಿದೆ. 10 ವರ್ಷಗಳ ಆಡಳಿತದಲ್ಲಿ ಜನರು ಬಿಜೆಪಿ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಜೊತೆಗೆ, ರೈತ ಹೋರಾಟದ ಸಮಯದಲ್ಲಿ ಹರಿಯಾಣ ಸರ್ಕಾರ ಎಸಗಿದ ದೌರ್ಜನ್ಯಗಳು ಜಾಟ್ ಸಮುದಾಯವೂ ಸೇರಿದಂತೆ ರೈತ, ಕೃಷಿ ಕಾರ್ಮಿಕರು ಬಿಜೆಪಿ ವಿರುದ್ಧ ಆಕ್ರೋಶಗೊಳ್ಳುವಂತೆ ಮಾಡಿದೆ. ರಾಜ್ಯದ ಜನರು ಬಿಜೆಪಿ ವಿರುದ್ಧವಿದ್ದಾರೆ ಎಂಬುದನ್ನು ಕಳೆದ ಲೋಕಸಭಾ ಚುನಾವಣೆ ಸೂಚಿಸಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಹರಿಯಾಣದ ಒಟ್ಟು 10 ಸ್ಥಾನಗಳನ್ನೂ ಗೆದ್ದುಕೊಂಡಿದ್ದ ಬಿಜೆಪಿ, ಈ ಬಾರಿಯ ಚುನಾವಣೆಯಲ್ಲಿ 5 ಸ್ಥಾನಗಳನ್ನು ಕಳೆದುಕೊಂಡಿದೆ. ಆ 5 ಸ್ಥಾನಗಳನ್ನು ಕಾಂಗ್ರೆಸ್ ದೋಚಿಕೊಂಡಿದೆ. ಈ ವರ್ಷದ ಅಂತ್ಯದಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಿ, ಅಧಿಕಾರಕ್ಕೇರಲು ಕಾಂಗ್ರೆಸ್ ಕಸರತ್ತು ನಡೆಸುತ್ತಿದೆ. ಕಾಂಗ್ರೆಸ್ ಜೊತೆಗೆ ಎಎಪಿ ಕೈಜೋಡಿಸಿದೆ.