ಉತ್ತರ ಪ್ರದೇಶದ ಇಬ್ಬರು ಮಾಜಿ ಶಾಸಕರು ತಮ್ಮ 55ನೇ ವಯಸ್ಸಿನಲ್ಲಿ 12ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ (ಇಂಟರ್ ಮಿಡೀಯೆಟ್) ಉತ್ತೀರ್ಣರಾಗಿದ್ದಾರೆ.
ಏ.25ರಂದು ಉತ್ತರ ಪ್ರದೇಶದ 12ನೇ ತರಗತಿಯ ಬೋರ್ಡ್ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿತ್ತು. ಈ ವರ್ಷದ ಪರೀಕ್ಷೆ ಎದುರಿಸಿದ್ದ ಬಿಜೆಪಿ ಮಾಜಿ ಶಾಸಕ ರಾಜೇಶ್ ಮಿಶ್ರಾ ಮತ್ತು ಸಮಾಜವಾದಿ ಪಕ್ಷದ ಮಾಜಿ ಶಾಸಕ ಪ್ರಭು ದಯಾಳ್ ತೇರ್ಗಡೆಯಾಗಿದ್ದಾರೆ.
ರಾಜೇಶ್ ಮಿಶ್ರಾ ಅವರು ದ್ವಿತೀಯ ಪಿಯು ಪರೀಕ್ಷೆಯಲ್ಲಿ 500 ಅಂಕಗಳಿಗೆ 263 ಗಳಿಸಿದ್ದಾರೆ. ಹಿಂದಿ ವಿಷಯದಲ್ಲಿ 57 ಅಂಕ ಗಳಿಸಿದ್ದು, ಸಮಾಜಶಾಸ್ತ್ರದಲ್ಲಿ 89 ಅಂಕ ಹಾಗೂ ಚಿತ್ರಕಲೆಯಲ್ಲಿ 36 ಅಂಕ ಗಳಿಸಿದ್ದಾರೆ. ಅವರು ಕಳೆದ ವಿಧಾನಸಭೆಗೆ (2017ರಿಂದ 2022) ಬಿತ್ರಿ ಚೈನಪುರ್ ಕ್ಷೇತ್ರದಲ್ಲಿ ಬಿಜೆಪಿಯಿಂದ ಆಯ್ಕೆಯಾಗಿದ್ದರು.
ತಾವು ತೇರ್ಗಡೆಯಾದ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ರಾಜೇಶ್ ಮಿಶ್ರಾ, “ಫಲಿತಾಂಶ ನನಗೆ ತೃಪ್ತಿ ನೀಡಿಲ್ಲ. ನಾನು ಶಾಸಕನಾಗಿದ್ದಾಗ, ಆರ್ಥಿಕವಾಗಿ ದುರ್ಬಲ ವರ್ಗದ ಜನರು ಉತ್ತಮ ವಕೀಲರ ಸೇವೆಯನ್ನು ಪಡೆಯಲು ಹೆಚ್ಚು ಕಷ್ಟ ಅನುಭವಿಸುತ್ತಿದ್ದುದ್ದನ್ನು ಗಮನಿಸಿದ್ದೆ. ಹೀಗಾಗಿ, ಕಾನೂನು ವಿಷಯ ಅಧ್ಯಯನ ಮಾಡಬೇಕೆಂದು ಅಂದೇ ನಿರ್ಧರಿಸಿದ್ದೆ. ಮುಂದೆ ಜನರಿಗೆ ಸಹಾಯ ಮಾಡುತ್ತೇನೆ,” ಎಂದು ಹೇಳಿದ್ದಾರೆ.
ಪ್ರಭು ದಯಾಳ್ ವಾಲ್ಮೀಕಿ ಎನ್ನುವ ಸಮಾಜವಾದಿ ಪಕ್ಷದ ಮಾಜಿ ಶಾಸಕ ಕೂಡ ತಮ್ಮ 59ನೇ ವಯಸ್ಸಿನಲ್ಲಿ ವಿಜ್ಞಾನ ವಿಭಾಗದಲ್ಲಿ 12ನೇ ತರಗತಿ ಪಾಸಾಗಿದ್ದಾರೆ. ಪ್ರಭು ದಯಾಳ್ ಅವರು ಅಖಿಲೇಶ್ ಯಾದವ್ ಸರ್ಕಾರದಲ್ಲಿ ರಾಜ್ಯ ಸಚಿವ ಆಗಿದ್ದರು. ಹಸ್ತಿನಾಪುರದಿಂದ ಅವರು ಎರಡು ಬಾರಿ ಶಾಸಕರಾಗಿದ್ದರು.
ಈ ಸುದ್ದಿ ಓದಿದ್ದೀರಾ?: ʼಬಿಬಿಸಿʼ ಹೆಸರಿನಲ್ಲಿ ಬಿಜೆಪಿ ಪರ ನಕಲಿ ಸಮೀಕ್ಷೆ