ತಮಿಳು ಚಿತ್ರರಂಗದ ಅತ್ಯದ್ಭುತ ನಿರ್ದೇಶಕ ಪ ರಂಜಿತ್ ನಿರ್ದೇಶನದ ನಟ ವಿಕ್ರಮ್ ಅಭಿನಯದ ಬಹು ನಿರೀಕ್ಷಿತ ‘ತಂಗಲಾನ್’ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು, ಭಾರೀ ಸದ್ದು ಮಾಡುತ್ತಿದೆ. ಸಿನಿರಸಿಕರಲ್ಲಿ ಮತ್ತಷ್ಟು ಸಿನಿಮಾ ಬಗ್ಗೆ ಕುತೂಹಲ ಕೆರಳಿಸಿದೆ. ಸಿನಿಮಾ ಆಗಸ್ಟ್ 15ರಂದು ತೆರೆಗೆ ಬರಲಿದೆ.
‘ತಂಗಲಾನ್’ ಸಿನಿಮಾ ಬ್ರಿಟಿಷ್ ಆಳ್ವಿಯ ಅವಧಿಯಲ್ಲಿ ಕೋಲಾರ ಚಿನ್ನದ ಗಣಿ ಪ್ರದೇಶದಲ್ಲಿ ನಡೆದ ಘಟನೆಗಳನ್ನು ಆಧರಿಸಿದೆ. ಚಿತ್ರದಲ್ಲಿ ನಟ ವಿಕ್ರಮ್ ಒಬ್ಬ ಉಗ್ರ ಬುಡಕಟ್ಟು ನಾಯಕನಾಗಿ ಕಾಣಿಸಿಕೊಂಡಿದ್ದಾರೆ.
2 ನಿಮಿಷ 9 ಸೆಕೆಂಡ್ ಇರುವ ಟ್ರೇಲರ್‌ಅನ್ನು ‘ಎಕ್ಸ್’ನಲ್ಲಿ ನಟ ವಿಕ್ರಮ್ ಹಂಚಿಕೊಂಡಿದ್ದಾರೆ. ಟ್ರೇಲರ್, ಪಾರ್ವತಿ ತಿರುವೋತ್ತು ಅವರ ಪಾತ್ರವು ‘ವಿಕ್ರಮ್ ಮನಸ್ಸಿನಲ್ಲಿ ಏನಾಗುತ್ತಿದೆ’ ಎಂದು ಪ್ರಶ್ನಿಸುವ ಮೂಲಕ ಪ್ರಾರಂಭವಾಗುತ್ತದೆ. ಬುಡಕಟ್ಟು ನಾಯಕನ (ವಿಕ್ರಮ್) ಮಾನಸಿಕ ಆರೋಗ್ಯದ ಬಗ್ಗೆ ಸುಳಿವು ನೀಡುತ್ತದೆ. ಅವರ ಗ್ರಾಮಕ್ಕೆ ಬ್ರಿಟಿಷ್ ಅಧಿಕಾರಿ ಲಾರ್ಡ್ ಕ್ಲೆಮೆಂಟ್ ನೇತೃತ್ವದ ಬ್ರಿಟಿಷರು ಚಿನ್ನವನ್ನು ಹುಡುಕಲು ಬರುವುದನ್ನು ತೋರಿಸುತ್ತದೆ.
ಚಿನ್ನ ಅಗೆದು ಭೂಮಿಯನ್ನು ಹಾಳು ಮಾಡದಂತೆ ಭೂಮಿಯನ್ನು ರಕ್ಷಿಸುವ ಆರತಿ ಎಂಬ ಮಾಂತ್ರಿಕಳ ಪಾತ್ರವನ್ನು ಮಾಳವಿಕಾ ಮೋಹನನ್ ನಿರ್ವಹಿಸಿದ್ದಾರೆ. ಟ್ರೇಲರ್‌ನಲ್ಲಿ ವಿಕ್ರಮ್ ಚಿನ್ನದ ಧೂಳಿನಲ್ಲಿ ಮಿಂದಿರುತ್ತಾರೆ. ಅವರು ಜನ ಸಮೂಹವನ್ನು ಸೇರುವುದರೊಂದಿಗೆ ಟ್ರೇಲರ್ ಕೊನೆಗೊಳ್ಳುತ್ತದೆ.
ಕೋಲಾರ ಗೋಲ್ಡ್ ಫೀಲ್ಡ್ಸ್ (ಕೆಜಿಎಫ್) ಕಥೆ
ಚಿತ್ರದ ತಂಡದ ಪ್ರಕಾರ, ‘ತಂಗಲಾನ್’ ಸಿನಿಮಾ ಕರ್ನಾಟಕದ ಕೋಲಾರ ಗೋಲ್ಡ್ ಫೀಲ್ಡ್‌ನ (ಕೆಜಿಎಫ್) ಹಿಂದಿನ ‘ನೈಜ ಕಥೆ’ಯನ್ನು ಆಧರಿಸಿದೆ. ಕೆಜಿಎಫ್ ಕಾರಣಕ್ಕಾಗಿ ಭಾರತೀಯರನ್ನು ‘ಸೋನೆ ಕಿ ಚಿಡಿಯಾ’ (ಚಿನ್ನದ ಹಕ್ಕಿ) ಎಂದು ಹೇಗೆ ಕರೆಯಲಾಯಿತು ಎಂಬುದರ ಕುರಿತು ಚಿತ್ರತಂಡ ವಿವರಿಸಿದೆ.
ಬ್ರಿಟಿಷರು ವಿಶ್ವದಲ್ಲೇ ಅತಿ ದೊಡ್ಡದಾದ ಚಿನ್ನದ ಗಣಿಯನ್ನು ದುರ್ಬಳಕೆ ಮಾಡಿಕೊಂಡರು. 900 ಟನ್‌ಗಳಷ್ಟು ಚಿನ್ನವನ್ನು ಇಂಗ್ಲೆಂಡ್‌ಗೆ ತೆಗೆದುಕೊಂಡು ಹೋದರು. ಹೆಚ್ಚಿನವರಿಗೆ ಇದರ ಬಗ್ಗೆ ತಿಳಿದಿಲ್ಲ. ಆದ್ದರಿಂದ, ‘ತಂಗಲಾನ್’ ಚಿತ್ರವು ಚಿನ್ನದ ಗಣಿಗಳ ಹಿಂದಿನ ‘ನೈಜ ಕಥೆ’ಯನ್ನು ವಿವರಿಸುತ್ತದೆ ಎಂದು ಚಿತ್ರತಂಡ ಹೇಳಿಕೊಂಡಿದೆ.
ತಂಗಲಾನ್ ನೈಜ ಘಟನೆಗಳನ್ನು ಆಧರಿಸಿದೆ. 19ನೇ ಶತಮಾನದಲ್ಲಿ ಕೆಜಿಎಫ್‌ನ ಜನರು ಅಲ್ಲಿನ ಗಣಿಗಳನ್ನು ಬ್ರಿಟಿಷರಿಂದ ರಕ್ಷಿಸಲು ಹೇಗೆ ಹೋರಾಡಿದರು ಎಂಬುದನ್ನು ಸಿನಿಮಾ ತನ್ನ ಕತೆಯಲ್ಲಿ ಚಿತ್ರಿಸಿದೆ.
ಕನ್ನಡದಲ್ಲೂ ತಂಗಲಾನ್ ಬಿಡುಗಡೆ
ತಂಗಲಾನ್ ಸಿನಿಮಾ 2024ರ ಜನವರಿಯಲ್ಲಿ ಬಿಡುಗಡೆಯಾಗುತ್ತದೆ ಎಂದು ಚಿತ್ರತಂಡ ಹೇಳಿತ್ತು. ಎರಡು ಬಾರಿ ಮುಂಡೂಡಲ್ಪಟ್ಟಿತ್ತು. ಇದೀಗ, ಆಗಸ್ಟ್ 15ರಂದು ಸಿನಿಮಾ ಬಿಡುಗಡೆಯಾಗಲಿದೆ ಎಂದು ತಂಡವು ಘೋಷಿಸಿದೆ.
ಸಿನಿಮಾ ತಮಿಳು, ತೆಲುಗು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ಚಿತ್ರದಲ್ಲಿ ಪಾರ್ವತಿ ತಿರುವೋತ್ತು, ಮಾಳವಿಕಾ ಮೋಹನನ್, ಪಶುಪತಿ, ಮುತ್ತುಕುಮಾರ್, ಹರಿ ಕೃಷ್ಣನ್, ಪ್ರೀತಿ, ಅರ್ಜುನ್ ಪ್ರಭಾಕರನ್ ಮತ್ತು ಹಾಲಿವುಡ್ ನಟ ಡೇನಿಯಲ್ ಗೋಲ್ಡ್‌ರಾಗನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಸಿನಿಮಾವನ್ನು ಸ್ಟುಡಿಯೋ ಗ್ರೀನ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಲಾಗಿದ್ದು, ಜಿ.ವಿ.ಪ್ರಕಾಶ್ ಸಂಗೀತ ಸಂಯೋಜಿಸಿದ್ದಾರೆ.