ತುಮಕೂರು ಮಹಾನಗರ ಪಾಲಿಕೆಯಿಂದ ನಗರದ 25, 26 ಹಾಗೂ 27ನೇ ವಾರ್ಡ್ ವ್ಯಾಪ್ತಿಯ ನಾಗರಿಕರ ಕುಂದುಕೊರತೆಗಳನ್ನು ಆಲಿಸಲು ಹಮ್ಮಿಕೊಂಡಿದ್ದ ಜನಸ್ಪಂದನ ಸಭೆಯಲ್ಲಿ ಈ ಮೂರು ವಾರ್ಡ್‌ಗಳ ಸಮಸ್ಯೆಗಳು ಬಯಲಾಗಿವೆ.
ತುಮಕೂರು ನಗರದ 26ನೇ ವಾರ್ಡ್ ವ್ಯಾಪ್ತಿಯ ದೋಬಿಘಾಟ್‌ನಲ್ಲಿರುವ ಚಂದ್ರಶೇಖರ್ ಆಜಾದ್ ಪಾರ್ಕ್‌ನಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಲು ಪಾಲಿಕೆಯಿಂದ ನಡೆದ ಜನಸ್ಪಂದನ ಸಭೆಯಲ್ಲಿ ಮೂರು ವಾರ್ಡ್‌ಗಳ ನಾಗರಿಕರು ತಮ್ಮ ತಮ್ಮ ವಾರ್ಡ್‌ಗಳಲ್ಲಿರುವ ಸಮಸ್ಯೆಗಳನ್ನು ಅನಾವರಣಗೊಳಿಸಿದರು.
ಜನಸ್ಪಂದನ ಸಭೆಯಲ್ಲಿ ಪಾಲ್ಗೊಂಡಿದ್ದ ಶಾಸಕ ಜ್ಯೋತಿಗಣೇಶ್, ಪಾಲಿಕೆ ಆಯುಕ್ತೆ ಬಿ ವಿ ಅಶ್ವಿಜ ಹಾಗೂ ಪಾಲಿಕೆ ಅಧಿಕಾರಿಗಳು ಮೂರು ವಾರ್ಡ್‌ಗಳ ನಾಗರಿಕರ ಕುಂದುಕೊರತೆಗಳನ್ನು ಆಲಿಸಿ, ಶೀಘ್ರ ಪರಿಹಾರ ಒದಗಿಸುವ ಭರವಸೆ ನೀಡಿದರು.
ವಾರ್ಡ್‌ಗಳಲ್ಲಿರುವ ಬೀದಿನಾಯಿಗಳ ಹಾವಳಿ, ಕುಡಿಯುವ ನೀರಿನ ಸಮಸ್ಯೆ, ಯುಜಿಡಿ, ಚರಂಡಿ ಸಮಸ್ಯೆ, ರಸ್ತೆ ಸಮಸ್ಯೆ, ಬೀದಿದೀಪ ಸಮಸ್ಯೆ ಸೇರಿದಂತೆ ಅಗತ್ಯ ಮೂಲಭೂತ ಸಮಸ್ಯೆಗಳ ಬಗ್ಗೆ ಶಾಸಕರು ಹಾಗೂ ಪಾಲಿಕೆ ಆಯುಕ್ತರ ಗಮನ ಸೆಳೆದ ಸ್ಥಳೀಯರು ತಮ್ಮ ಅಹವಾಲು ಸಲ್ಲಿಸಿದರು.
ಎಸ್ ಎಸ್ ಪುರಂನ ಕೆಂಪಣ್ಣ ಅಂಗಡಿ ಸರ್ಕಲ್, ತುಮಕೂರು ವಿಶ್ವವಿದ್ಯಾಲಯದ ಮುಂಭಾಗ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದ್ದು, ಸಾರ್ವಜನಿಕರ ಸುಗಮ ಓಡಾಟಕ್ಕೆ ತೊಂದರೆಯಾಗುತ್ತಿದೆ. ಈ ಜಾಗಗಳಲ್ಲಿ ಟ್ರಾಫಿಕ್ ಸಮಸ್ಯೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆಯೂ ನಾಗರಿಕರು ಮನವಿ ಮಾಡಿದರು.
ಶಾಸಕ ಜ್ಯೋತಿಗಣೇಶ್ ಮಾತನಾಡಿ, “ಸರ್ಕಾರದಿಂದ ದೊಡ್ಡ ಮಟ್ಟದ ಅನುದಾನ ಬರುವವರೆಗೂ ನಾಗರಿಕರು ಸಹಕರಿಸಬೇಕು. ವಾರ್ಡ್‌ಗಳ ಸಮಸ್ಯೆಗಳಿಗೆ ಪಾಲಿಕೆ ಹಾಗೂ ತಾವು ಕೈಲಾದಷ್ಟು ಮಟ್ಟಿಗೆ ಸ್ಪಂದಿಸುತ್ತೇವೆ” ಎಂದರು.
“ಈಗಾಗಲೇ ಕೋಟ್ಯಂತರ ರೂಪಾಯಿ ವಿನಿಯೋಗಿಸಿ ಪ್ರಗತಿಯಲ್ಲಿರುವ 24×7 ಕುಡಿಯುವ ನೀರಿನ ವ್ಯವಸ್ಥೆ ಇನ್ನೂ ಸಂಪೂರ್ಣಗೊಂಡಿಲ್ಲ. ಹಾಗಾಗಿ ಸಮಸ್ಯೆ ಎದುರಾಗುತ್ತಿದೆ. ಈ ಯೋಜನೆ ಸಂಪೂರ್ಣಗೊಳ್ಳಬೇಕಾದರೆ ಸುಮಾರು 60ಕೋಟಿ ರೂಗಳಿಗೂ ಅಧಿಕ ಹಣದ ಅಗತ್ಯವಿದೆ. ಹಾಗಾಗಿ ಪಾಲಿಕೆ ಮತ್ತು ಸರ್ಕಾರದಿಂದ ಸಾಧ್ಯವಾದಷ್ಟು ಮಟ್ಟಿಗೆ ಈ ಯೋಜನೆ ಪೂರ್ಣಗೊಳಿಸಲು ಪ್ರಯತ್ನಿಸುತ್ತೇವೆ” ಎಂದರು.
“ಮನೆಗಳಲ್ಲಿರುವ ನೀರಿನ ಸಂಪ್‌ಗೆ ಸಂಪರ್ಕ ಕಲ್ಪಿಸಿರುವ ಪಿವಿಸಿ ಪೈಪ್‌ಗೆ ಯುಜಿಡಿ ನೀರು ಮಿಶ್ರಣಗೊಳ್ಳುತ್ತಿದೆ. ಹಾಗಾಗಿ ಎಸ್‌ಡಿಪಿ ಪೈಪ್‌ಲೈನ್ ಮಾಡಬೇಕಾಗಿದೆ. ಹಾಗೆಯೇ ಪಾಲಿಕೆಯವರು ಚರಂಡಿಗಳನ್ನು ಸ್ವಚ್ಛಗೊಳಿಸಿ ಗುಣಮಟ್ಟದಿಂದ ದುರಸ್ಥಿಪಡಿಸಬೇಕು. ಎಲ್ಲೆಲ್ಲಿ ಲೀಕೇಜ್ ಆಗುತ್ತಿದೆ ಎಂಬುದನ್ನು ಪತ್ತೆಹಚ್ಚಬೇಕು” ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
“ನಗರಕ್ಕೆ ಈಗ ನಿಗದಿಗೊಳಿಸಿರುವ ನೀರಿನ ಪ್ರಮಾಣ ಸಾಕಾಗುತ್ತಿಲ್ಲ. ಹಾಗಾಗಿ ಇನ್ನು ಹೆಚ್ಚುವರಿ ನೀರು ಹಂಚಿಕೆ ಮಾಡುವಂತೆ ಮನವಿ ಸಲ್ಲಿಸಲಾಗಿದೆ. ಬುಗುಡನಹಳ್ಳಿ, ಹೆಬ್ಬಾಕ ಕೆರೆ ಜತೆಗೆ ತುಮಕೂರು ಅಮಾನಿಕೆರೆ, ಗಂಗಸಂದ್ರ, ಮರಳೂರು ಕೆರೆಯನ್ನು ಕುಡಿಯುವ ನೀರಿಗಾಗಿ ಬಳಸಿಕೊಳ್ಳಬೇಕಾಗಿದೆ” ಎಂದರು.
“ಗಂಗಸಂದ್ರ ಕೆರೆಯಿಂದ ಮರಳೂರು ಕೆರೆಗೆ ನೀರು ಲಿಫ್ಟ್ ಮಾಡಿ ಶುದ್ಧೀಕರಣ ಘಟಕ ಹಾಕಿದರೆ ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡಬಹುದಾಗಿದೆ” ಎಂದು ಹೇಳಿದರು.
“ಜನಸ್ಪಂದನ ಸಭೆಯಲ್ಲಿ ನಾಗರಿಕರು ಸಲ್ಲಿಸಿರುವ ಅಹವಾಲುಗಳನ್ನು ಶೀಘ್ರ ಪರಿಹರಿಸುವ ಕೆಲಸವಾಗಬೇಕು. ಈ ಕಾರ್ಯ ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು. ನಿರಂತರವಾಗಿ ನಡೆಯುತ್ತಿರಬೇಕು. ಈ ನಿಟ್ಟಿನಲ್ಲಿ ಪಾಲಿಕೆ ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು” ಎಂದು ಸೂಚನೆ ನೀಡಿದರು.
ಪಾಲಿಕೆ ಆಯುಕ್ತೆ ಬಿ ವಿ ಅಶ್ವಿಜಾ ಮಾತನಾಡಿ, “ವಾರ್ಡ್‌ಗಳಲ್ಲಿ ಚರಂಡಿಗಳ ಸ್ವಚ್ಚತೆ ಕಾಪಾಡಲಾಗುತ್ತಿದೆ. ಜತೆಗೆ ಫಾಗಿಂಗ್ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ. ನಗರದಲ್ಲಿ 500 ಪಾರ್ಕ್‌ಗಳಿದ್ದು, ಇವುಗಳನ್ನು ನಿರ್ವಹಣೆ ಮಾಡಲು ಪಾಲಿಕೆಯಲ್ಲಿ ಅಗತ್ಯ ಸಿಬ್ಬಂದಿಯಿಲ್ಲ. ಹಾಗಾಗಿ ನಿರ್ವಹಣೆ ಕಷ್ಟವಾಗುತ್ತಿದೆ. ಸ್ಮಾರ್ಟ್‌ಸಿಟಿ ವತಿಯಿಂದ ಕೆಲ ಪಾರ್ಕ್‌ಗಳನ್ನು ನಿರ್ವಹಣೆ ಮಾಡಲಾಗುತ್ತಿದೆ. ಪಾರ್ಕ್‌ಗಳ ನಿರ್ವಹಣೆ ಮಾಡುವುದಾಗಿ ಮುಂದೆ ಬಂದರೆ ಪಾಲಿಕೆಯೂ ಸಹಕಾರ ನೀಡಲಿದೆ” ಎಂದರು.
“ಪ್ರತಿ ವರ್ಷ ಆಸ್ತಿ ತೆರಿಗೆ ಪಾವತಿಸಲು ಏಪ್ರಿಲ್ ತಿಂಗಳಲ್ಲಿ ಶೇ.5ರ ರಿಯಾಯಿತಿ ನೀಡಲಾಗುತ್ತಿತ್ತು. ಈ ಬಾರಿ ಇದನ್ನು ಜುಲೈ 31ರವರೆಗೂ ವಿಸ್ತರಿಸಲಾಗಿದೆ. ಇದನ್ನು ನಗರದ ಜನತೆ ಸದುಪಯೋಗಪಡಿಸಿಕೊಳ್ಳಬೇಕು” ಎಂದರು.
9 ಅರ್ಜಿ ಸ್ವೀಕಾರ : ಪಾಲಿಕೆ ವತಿಯಿಂದ ನಡೆದ ಮೂರು ವಾರ್ಡ್‌ಗಳ ಜನಸ್ಪಂದನ ಸಭೆಯಲ್ಲಿ ನಿರ್ಧಿಷ್ಟ ಸಮಸ್ಯೆಗಳನ್ನೊಳಗೊಂಡ 9 ಅರ್ಜಿಗಳು ಸ್ವೀಕಾರಗೊಂಡಿವೆ.
“ಮೂರು ವಾರ್ಡ್‌ಗಳಲ್ಲಿರುವ ಖಾಲಿ ನಿವೇಶನಗಳಲ್ಲಿ ಬೆಳೆದಿರುವ ಗಿಡಗಂಟೆಗಳನ್ನು ತೆರವುಗೊಳಿಸಬೇಕು. ಈ ನಿವೇಶನಗಳಲ್ಲಿ ಹಾವು, ಇನ್ನಿತರೆ ಹುಳ ಉಪ್ಪಟೆಗಳ ಉಪಟಳ ಹೆಚ್ಚಾಗಿದ್ದು, ಅಕ್ಕಪಕ್ಕದ ಮನೆಯವರು ಭಯಭೀತಿಯಿಂದ ಇರುವಂತಾಗಿದೆ. ಕೂಡಲೇ ಖಾಲಿ ನಿವೇಶನಗಳಲ್ಲಿರುವ ಗಿಡಗಂಟೆಗಳನ್ನು ತೆರವುಗೊಳಿಸಲು ನಿವೇಶನಗಳ ಮಾಲೀಕರಿಗೆ ಸೂಚನೆ ನೀಡಬೇಕು. ಜತೆಗೆ ಈ ವಾರ್ಡ್‌ಗಳ ವ್ಯಾಪ್ತಿಯಲ್ಲಿರುವ ದೊಡ್ಡ ಚರಂಡಿ ಮೇಲೆ ಸ್ಲ್ಯಾಬ್ ಅಳವಡಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಕೊಡಗು | ಕನ್ನಡ ಸಾಹಿತ್ಯ ಪರಿಷತ್ತನ್ನು ಗಟ್ಟಿಗೊಳಿಸಬೇಕು: ಕಸಾಪ ಅಧ್ಯಕ್ಷ ಎಂ ಪಿ ಕೇಶವ ಕಾಮತ್
“ಈ ವಾರ್ಡ್‌ಗಳ ವ್ಯಾಪ್ತಿಯಲ್ಲಿರುವ ದೊಡ್ಡ ಚರಂಡಿ ಮೇಲೆ ಸ್ಲ್ಯಾಬ್ ಅಳವಡಿಸುವಂತೆಯೂ ಸಾರ್ವಜನಿಕರು ಪಾಲಿಕೆ ಅಧಿಕಾರಿಗಳ ಗಮನ ಸೆಳೆದರು.
ಸಭೆಯಲ್ಲಿ ಪಾಲಿಕೆ ಮಾಜಿ ಸದಸ್ಯ ಮಲ್ಲಿಕಾರ್ಜುನ್, ಉಪ ಆಯುಕ್ತ ರುದ್ರಮುನಿ, ಗಿರೀಶ್, ಕಾರ್ಯ ನಿರ್ವಾಹಕ ಎಂಜಿನಿಯರ್‌ಗಳಾದ ವಿನಯ್, ಸಂದೀಪ್, ಆರೋಗ್ಯಾಧಿಕಾರಿ ಡಾ. ವೀರೇಶ್ ಸೇರಿದಂತೆ ಇತರರು ಇದ್ದರು.
