ಈಶಾನ್ಯ ದೆಹಲಿಯ ಭಜನ್‌ಪುರ ಪ್ರದೇಶದಲ್ಲಿ 28 ವರ್ಷದ ಜಿಮ್ ಮಾಲೀಕನನ್ನು ಗುಂಪೊಂದು ಇರಿದು ಕೊಂದಿದೆ, ಮುಖದ ಮೇಲೆ 21 ಬಾರಿ ಹಲ್ಲೆ ನಡೆಸಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಮೃತ ವ್ಯಕ್ತಿಯನ್ನು ಸುಮಿತ್ ಚೌಧರಿ ಅಲಿಯಾಸ್ ಪ್ರೇಮ್ ಎಂದು ಗುರುತಿಸಲಾಗಿದೆ. ಪ್ರೇಮ್ ಟೂರಿಸಂ ವ್ಯವಹಾರವನ್ನು ಕೂಡಾ ನಡೆಸುತ್ತಿದ್ದರು ಎಂದು ವರದಿಯಾಗಿದೆ. ಪತ್ನಿ ಮತ್ತು ಮೂರು ವರ್ಷದ ಮಗನನ್ನು ಅಗಲಿದ್ದಾರೆ.
ಬುಧವಾರ ತಡರಾತ್ರಿ ಗಮ್ರಿ ಎಕ್ಸ್‌ಟೆನ್ಶನ್‌ನಲ್ಲಿರುವ ಪ್ರೇಮ್ ಮನೆಯ ಹೊರಗೆ ಗುಂಪೊಂದು ಪ್ರೇಮ್ ಮೇಲೆ ದಾಳಿ ನಡೆಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
“ಪ್ರೇಮ್ ಮನೆಯ ಹೊರಗಡೆ ಕುಳಿತಿದಾಗ ಮೂರು-ನಾಲ್ಕು ಯುವಕರ ಗುಂಪಿನ ಜೊತೆ ವಾಗ್ವಾದ ನಡೆದಿದೆ. ಈ ವೇಳೆ ಈ ಗುಂಪು ಪ್ರೇಮ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದೆ. ಮುಖ, ಕುತ್ತಿಗೆ, ಎದೆ ಮತ್ತು ಹೊಟ್ಟೆಗೆ ಹಲವು ಬಾರಿ ಇರಿದಿದ್ದಾರೆ. ಮುಖದ ಮೇಲೆ 21ಕ್ಕೂ ಹೆಚ್ಚು ಬಾರಿ ಇರಿದ ಗಾಯಗಳಿದೆ” ಎಂದು ಉಪ ಪೊಲೀಸ್ ಆಯುಕ್ತ (ಈಶಾನ್ಯ) ಜಾಯ್ ಟಿರ್ಕಿ ಮಾಹಿತಿ ನೀಡಿದ್ದಾರೆ.
ಇದನ್ನು ಓದಿದ್ದೀರಾ? ಬೆಂ. ಗ್ರಾಮಾಂತರ | ಹಳೆ ವೈಷಮ್ಯ : ಗ್ರಾ.ಪಂ. ಸದಸ್ಯನ ಕೊಲೆ
ಪ್ರೇಮ್ ಅವರನ್ನು ಜೆಪಿಸಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಪ್ರೇಮ್ ಕೊಲೆ ಯತ್ನ ಪ್ರಕರಣದಲ್ಲಿ ಆರೋಪಿಯಾಗಿದ್ದು, ಜಾಮೀನಿನ ಮೇಲೆ ಹೊರಗಿದ್ದಾನೆ ಎಂದು ಡಿಸಿಪಿ ತಿಳಿಸಿದ್ದಾರೆ.
ಆರೋಪಿಗಳನ್ನು ಪತ್ತೆ ಮಾಡಲು ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.