‘ಮುಡಾ ಸ್ವಾಧೀನಪಡಿಸಿಕೊಂಡಿರುವ ಅತೀ ಕಡಿಮೆ ಬೆಲೆಯ ಜಮೀನಿಗೆ ಪ್ರತಿಷ್ಠಿತ ಬಡಾವಣೆಯಲ್ಲಿ ಹೆಚ್ಚು ಬೆಲೆ ಬಾಳುವ ನಿವೇಶನ ಹಂಚಿಕೆ ಮಾಡಲಾಗಿದೆ. ಮುಡಾ ಹಗರಣವು ದೇಶದ ದೊಡ್ಡ ಹಗರಣ” ಎಂದು ಚಿಕ್ಕಬಳ್ಳಾಪುರ ಬಿಜೆಪಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೊಂಡೇನಹಳ್ಳಿ ಮುರುಳಿ ಆರೋಪಿಸಿದರು.
ಚಿಕ್ಕಬಳ್ಳಾಪುರ ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಸುಮಾರು 2 – 3 ಸಾವಿರ ಕೋಟಿ ರೂಪಾಯಿ ಹಗರಣ ನಡೆದಿದ್ದು, ಇದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬ ನೇರವಾಗಿ ಶಾಮೀಲಾಗಿದ್ದಾರೆ. ಈ ಬಗ್ಗೆ ಕೂಡಲೇ ಉನ್ನತ ಮಟ್ಟದ ತನಿಖೆ ಆಗಬೇಕು” ಎಂದು ಒತ್ತಾಯಿಸಿದರು.
2009ರ ನಂತರದಲ್ಲಿ ಭೂಸ್ವಾಧೀನಪಡಿಸಿಕೊಂಡರೆ ಮಾತ್ರ 50:50 ಅನುಪಾತದಲ್ಲಿ ನಿವೇಶನ ಹಂಚಿಕೆ ಮಾಡಬೇಕೆಂದು ಸುಪ್ರೀಂ ಕೋರ್ಟ್ ಆದೇಶ ಇದೆ. ಆದರೆ 2009ಕ್ಕೂ ಹಿಂದೆ ಭೂಸ್ವಾಧೀನ ಮಾಡಿಕೊಂಡಿರುವ ಜಾಗಕ್ಕೂ ಕೋರ್ಟ್ ಆದೇಶ ಗಾಳಿಗೆ ತೂರಿ 50:50 ಅನುಪಾತದಲ್ಲಿ ನಿವೇಶನ ಹಂಚಿಕೆ ಮಾಡಿರುವುದು ನಿಜಕ್ಕೂ ಅಕ್ಷಮ್ಯ. ಇದರ ಕುರಿತು ಸಮಗ್ರ ತನಿಖೆ ಆಗಬೇಕು ಎಂದು ಆಗ್ರಹಿಸಿದರು.
ಬಿಜೆಪಿ ರಾಜ್ಯ ಪರಿಷತ್ ಸದಸ್ಯ ಭೈರೇಗೌಡ ಮಾತನಾಡಿ, “ಮುಡಾ ಹಗರಣದಲ್ಲಿ ಸಿಎಂ ಪತ್ನಿ ಪಾರ್ವತಮ್ಮ ಅವರ ಪಾತ್ರ ಇದೆ. 1992ರಲ್ಲಿ ಸ್ವಾಧೀನಪಡಿಸಿಕೊಂಡಿರುವ ಜಾಗಕ್ಕೆ 40:60 ಅನುಪಾತದಲ್ಲಿ ಆಯಾ ಜಾಗದ ಎಸ್.ಆರ್. ಬೆಲೆಗೆ ಅನುಗುಣವಾಗಿ ನಿವೇಶನ ಹಂಚಿಕೆ ಆಗಬೇಕಿತ್ತು. ಆದರೆ ಸಿಎಂ ಸಿದ್ದರಾಮಯ್ಯ ಅವರ ಭಾಮೈದ ಮಲ್ಲಿಕಾರ್ಜುನ ಸ್ವಾಮಿ ಎಂಬುವವರು ರಾಜಕೀಯ ಪ್ರಭಾವ ಬಳಸಿ ಮೈಸೂರಿನ ಪ್ರತಿಷ್ಠಿತ ವಿಜಯನಗರ ಬಡಾವಣೆಯಲ್ಲಿ 50:50 ಅನುಪಾತದಲ್ಲಿ ನಿವೇಶನ ಪಡೆದುಕೊಂಡು, ತನ್ನ ಅಕ್ಕ ಪಾರ್ವತಮ್ಮ ಅವರಿಗೆ ದಾನ ಕೊಟ್ಟಿದ್ದಾರೆ. ಇದರಿಂದ ಪ್ರಾಧಿಕಾರಕ್ಕೆ ನಷ್ಟ ಆಗಿದೆ. ಇದರಲ್ಲಿ ಸಚಿವ ಭೈರತಿ ಸುರೇಶ್ ಅವರ ಪಾತ್ರವೂ ಇದೆ. ಈ ಕೋಟಿ ಹಗರಣದ ಸಮಗ್ರ ತನಿಖೆ ಆಗಬೇಕು. ಸಿಎಂ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡಬೇಕು” ಎಂದು ಆಗ್ರಹಿಸಿದರು.
ಜಿಲ್ಲಾ ವಕ್ತಾರ ರಮೇಶ್ ಬಾಯಿರೆ ಮಾತನಾಡಿ, “ಕಾಂಗ್ರೆಸ್ ಭ್ರಷ್ಟಾಚಾರಗಳ ಸರ್ಕಾರ. ಈ ಸರ್ಕಾರ ಬಂದಾಗಿನಿಂದ ಒಂದಿಲ್ಲೊಂದು ಹಗರಣಗಳು ಬೆಳಕಿಗೆ ಬರುತ್ತಿವೆ. ಇಲಾಖೆಗಳಲ್ಲಿ ವ್ಯಾಪಕ ಭ್ರಷ್ಟಾಚಾರಗಳು ನಡೆಯುತ್ತಿವೆ. ಭ್ರಷ್ಟಾಚಾರ ಮುಚ್ಚಿ ಹಾಕುವ ಸಲುವಾಗಿ ಎಸ್.ಐ.ಟಿ ತನಿಖಾ ತಂಡ ರಚನೆ ಮಾಡಿಕೊಂಡಿದ್ದಾರೆ. ತಮಗೆ ಬೇಕಾದಂತೆ ತನಿಖೆ ಮಾಡಿಸುತ್ತಿದ್ದಾರೆ. ಇದಕ್ಕೆ ಪ್ರಜ್ವಲ್ ರೇವಣ್ಣ ಅವರ ಪ್ರಕರಣವೇ ಸಾಕ್ಷಿ. ಇದೆಲ್ಲವನ್ನೂ ವಿರೋಧಿಸಿ ನಾಳೆ ಮೈಸೂರಿನಲ್ಲಿ ಬಿಜೆಪಿ ರಾಜ್ಯ ಘಟಕದಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ” ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಅಂಗನವಾಡಿ ಅವ್ಯವಸ್ಥೆ | ಮದ್ದೂರು : ಕಾಂಪೌಂಡ್ ಇದೆ ಗೇಟಿಲ್ಲ, ಶೌಚಾಲಯ ಇದೆ ನೀರೇ ಇಲ್ಲ!
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಸಹ ವಕ್ತಾರ ದೇವಸ್ಥಾನ ಹೊಸಳ್ಳಿ ರಾಮಣ್ಣ, ಜಿಲ್ಲಾ ಕಾರ್ಯದರ್ಶಿ ಅಶೋಕ್ ಕುಮಾರ್, ಮುಖಂಡರಾದ ಶ್ರೀನಿವಾಸ್, ಮಾಧ್ಯಮ ಸಂಚಾಲಕ ಮಧುಚಂದ್ರ ಇನ್ನಿತರರಿದ್ದರು.
