ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಗ್ರಾಮೀಣ ಭಾಗದ ಹಳ್ಳಿಗಳಲ್ಲಿ ಜೆಜೆಎಂ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿರುವುದನ್ನು ಖಂಡಿಸಿ ಉನ್ನತ ಮಟ್ಟದ ತನಿಖೆ ನಡೆಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಭೀಮವಾದ) ತಾಲೂಕು ಸಮಿತಿಯಿಂದ ಯಾದಗಿರಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.
ತಾಲೂಕು ಪ್ರಧಾನ ಸಂಚಾಲಕ ಚಂದ್ರಕಾಂತ ಬಜೇರಿ ಮನವಿ ಸಲ್ಲಿಸಿ ಮಾತನಾಡಿ, “ಶಹಾಪುರ ತಾಲೂಕಿನ ಬೇವಿನಹಳ್ಳಿ, ಅಣಬಿ, ಬೊಮ್ಮನಹಳ್ಳಿ, ಬಿದರಾಣಿ, ಮರ್ಕಲ್ ಕೊಳ್ಳೂರು ಸೇರಿದಂತೆ ಇನ್ನೂ ಬಹುತೇಕ ಗ್ರಾಮಗಳಲ್ಲಿ ಜೆಜೆಎಂ ಕಾಮಗಾರಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದರಲ್ಲಿ ಅವ್ಯವಹಾರ ನಡೆದಿದ್ದು, ಜೆಜೆಎಂ ಕಾಮಗಾರಿಯು ಸಂಪೂರ್ಣ ಅವ್ಯವಸ್ಥೆಯಿಂದ ಕೂಡಿದೆ. ಯಾವುದೇ ಕಾಮಗಾರಿಯು ಪೂರ್ಣಗೊಳ್ಳದೆ ಅರ್ಧಕ್ಕೆ ಸ್ಥಗಿತಗೊಂಡಿದೆ. ಈ ಹಳ್ಳಿಯಲ್ಲಿ ಇನ್ನೂ ಕೂಡ ಸಿಸಿ ರಸ್ತೆಗಳಿಲ್ಲ. ಇದರಿಂದ ಗ್ರಾಮೀಣ ಭಾಗದ ಊರಿನ ಒಳಗಿನ ರಸ್ತೆಗಳು ಸಂಪೂರ್ಣ ಹಾಳಾಗಿದ್ದು ತಗ್ಗು ಗುಂಡಿಗಳು ಬಿದ್ದಿವೆ” ಎಂದರು.
“ಈಗ ಮಳೆಗಾಲ ಆರಂಭವಾಗಿರುವುದರಿಂದ ರಸ್ತೆ ಗುಂಡಿಗಳಲ್ಲಿ ಮಳೆ ನೀರು ಸಂಗ್ರಹಗೊಂಡು ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಅದರಿಂದ ರೋಗ ರುಜಿನಿಗಳಿಗೆ ದಾರಿ ಮಾಡಿಕೊಟ್ಟಂತಾಗಿದೆ. ಇದರಿಂದ ಗ್ರಾಮೀಣ ಜನರು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಿದ್ದಾರೆ ಮತ್ತು ಈ ಕಾಮಗಾರಿಗಳಿಗೆ ಗುತ್ತಿಗೆದಾರರು ಈಗಾಗಲೇ ಪ್ರತಿಶತ ಶೇ.80ರಷ್ಟು ಬಿಲ್ಲುಗಳನ್ನು ಪಡೆದಿದ್ದಾರೆ. ಹಾಗಾಗಿ ಬೇರೆ ಗುತ್ತಿಗೆದಾರರು ಕೆಲಸ ಮಾಡಲು ಮುಂದೆಬರುತ್ತಿಲ್ಲ” ಎಂದು ಆರೋಪಿಸಿದರು.
“ಜೆಜೆಎಂ ಕಾಮಗಾರಿಯ ಗ್ರಾಮದ ನಲ್ಲಿಗಳಿಗೆ ನೀರು ಪೂರೈಸುವ ಮೋಟಾರುಗಳಿಗೆ ಸರಬರಾಜು ಮಾಡಲು ವಿದ್ಯುತ್ ಸಂಪರ್ಕ ಕಲ್ಪಿಸಲು ಪ್ರತಿಯೊಂದಕ್ಕೂ ಪ್ರತ್ಯೇಕ ಅಂದಾಜು ಪಟ್ಟಿ ತಯಾರಿಸಿರುತ್ತಾರೆ. ಆದರೆ ವಾಸುದೇವ ಎಲೆಕ್ಟ್ರಾನಿಕ್ಸ್ ಎಂಬ ಒಂದೇ ಏಜೆನ್ಸಿಯವರಿಗೆ ಸುಮಾರು ₹50 ಲಕ್ಷಕ್ಕೂ ಅಧಿಕ ಮೊತ್ತದ ಗುತ್ತಿಗೆ ಕೊಟ್ಟಿದ್ದಾರೆ. ಆದರೆ ಗುತ್ತಿಗೆದಾರರು ಊರಲ್ಲೇ ಇರುವ ಹಳೆಯ ಟಿಸಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ಮತ್ತು ಕಳಪೆ ಗುಣಮಟ್ಟದ ಕೆಲಸ ಮಾಡಿ ಬಿಲ್ ಪಡೆದಿದ್ದಾರೆ. ಇದರಲ್ಲಿಯೂ ಕೂಡ ದೊಡ್ಡ ಮೊತ್ತದ ಹಗರಣ ನಡೆದಿರುವುದು ಕಂಡುಬರುತ್ತದೆ” ಎಂದು ಆರೋಪಿಸಿದರು.
“ಈ ಕಾಮಗಾರಿಯಲ್ಲಿ ಭಾಗಿಯಾದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಸರ್ಕಾರಕ್ಕೆ ಶಿಫಾರಸು ಮಾಡಬೇಕು. ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಜತೆಗೆ ಈ ಹಗರಣದಲ್ಲಿ ಶ್ಯಾಮಿಲಾಗಿರುವ ಜೆಇ, ಎಇಇ ಹಾಗೂ ಇಇಗಳಂತಹ ಬಲಿಷ್ಠ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು. ಈ ಅವ್ಯವಹಾರ ಕುರಿತು ಬೇರೆ ಇಲಾಖೆಯಿಂದ ಉನ್ನತ ಮಟ್ಟದ ತನಿಖೆ ಮಾಡಿಸಬೇಕು” ಎಂದು ಆಗ್ರಹಿಸಿದರು.
“ತನಿಖೆ ಕೈಗೊಳ್ಳುವಲ್ಲಿ ಒಂದು ವೇಳೆ ತಾವುಗಳು ವಿಳಂಬ ಮಾಡಿದರೆ ಮುಂದಿನ ದಿನಗಳಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ತೀವ್ರ ಹೋರಾಟ ಮಾಡಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಹೊಸ ಕುಂದವಾಡ ಗ್ರಾಮದಲ್ಲಿ ಒಂದೇ ದಿನ ಏಳು ಸಾವು; ಶವಸಂಸ್ಕಾರಕ್ಕೆ ಪರದಾಟ!
ಈ ಸಂದರ್ಭದಲ್ಲಿ ರಾಜ್ಯ ಉಪ ಪ್ರ. ಸಂಚಾಲಕ ನಾಗಣ್ಣ ಬಡಿಗೇರ, ಖಜಾಂಚಿ ಪರಶುರಾಮ ರೋಜಾ, ತಾ.ಸಂ.ಸಂಚಾಲಕ ಮಾನಪ್ಪ ಮುದಕನ್ನೋರ, ತಾಲೂಕಾ ಪ್ರಧಾನ ಸಂಚಾಲಕ ಚಂದ್ರಕಾಂತ ಬಜೇರಿ, ದಸಂಸ ಮುಖಂಡ ಹಯ್ಯಾಳಪ್ಪ ದೇವಕರ್ ಸೇರಿದಂತೆ ಇತರರು ಇದ್ದರು.