ಸರಕಾರಿ ನೌಕರರ ಏಳನೇ ವೇತನ ಆಯೋಗ ಜಾರಿ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ತಾಲೂಕು ಸರಕಾರಿ ನೌಕರರ ಸಂಘ ಒತ್ತಾಯಿಸಿದೆ.
ಭಾಲ್ಕಿ ಪಟ್ಟಣದ ತಹಸೀಲ್ ಕಚೇರಿಯಲ್ಲಿ ಶುಕ್ರವಾರ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ರಾಜಪ್ಪ ಪಾಟೀಲ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿಗಳಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ತಹಸೀಲ್ದಾರ್ ಅವರಿಗೆ ಸಲ್ಲಿಸಿದರು.
ʼಆರನೇ ವೇತನ ಆಯೋಗ ಜಾರಿಗೊಂಡು 2022ಕ್ಕೆ ಐದು ವರ್ಷ ಪೂರ್ಣಗೊಂಡಿವೆ. ಆದರೆ ಇದುವರೆಗೂ ವೇತನ, ಭತ್ಯೆ ಪರಿಷ್ಕರಣೆಗೊಂಡಿಲ್ಲ. ಹೀಗಾಗಿ ಕೂಡಲೇ ಏಳನೇ ವೇತನ ಆಯೋಗ ಜಾರಿಗೊಳಿಸಬೇಕು.
ಜತೆಗೆ ನೂತನ ಪಿಂಚಣಿ ಯೋಜನೆ ರದ್ದುಪಡಿಸುವಂತೆ ಹೋರಾಟ ಮಾಡಿಕೊಂಡು ಬರಲಾಗುತ್ತಿದೆ’ ಎಂದರು.
ʼಕಾಂಗ್ರೆಸ್ ಪಕ್ಷ ಚುನಾವಣೆ ಪ್ರಣಾಳಿಕೆಯಲ್ಲಿ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸುವ ಭರವಸೆ ನೀಡಿತು. ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ವರ್ಷ ಕಳೆದರೂ ಕೂಡ ನೂತನ ಪಿಂಚಣಿ ಯೋಜನೆ ರದ್ದು ಪಡಿಸಿಲ್ಲ. ಜತೆಗೆ ಆರೋಗ್ಯ ಸಂಜೀವಿನಿ ಯೋಜನೆ ಕೂಡ ಅನುಷ್ಠಾನಗೊಂಡಿಲ್ಲ. ಕೂಡಲೇ ಸರಕಾರ ಸರಕಾರಿ ನೌಕರರ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕುʼ ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಗದಗ | ಮೂಲಭೂತ ಸೌಕರ್ಯಗಳಿಲ್ಲದೆ ಸೊರಗುತ್ತಿವೆ ಅಂಗನವಾಡಿಗಳು; ಮುಕ್ತಿ ಯಾವಾಗ?
ಈ ಸಂದರ್ಭದಲ್ಲಿ ತಾಲೂಕು ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸೂರ್ಯಕಾಂತ ಸುಂಟೆ, ಪ್ರಮುಖರಾದ ದತ್ತು ಕಾಟಕರ್, ಬಸವರಾಜ ಮರೆ, ನಾಗಭೂಷಣ ಮಾಮಡಿ, ಕುಪೇಂದ್ರ ಜಗಶೆಟ್ಟೆ, ಪ್ರಕಾಶ ಮಹಾಗಾಂವೆ, ವಿಶ್ವನಾಥ, ಸಹಾದೇವ, ಶಿವಕುಮಾರ, ಅರವಿಂದ ಪಾಟೀಲ್, ಅಶೋಕ ಕುಂಬಾರ, ತಾನಾಜಿ, ರವಿ, ಉತ್ತಮ, ಅಶೋಕ ಬಿರಾದಾರ್, ಅಶೋಕ ತಾಂಬೂಳೆ ಸೇರಿದಂತೆ ಹಲವರು ಇದ್ದರು.