- ಸುಳ್ಳು ಹೇಳಿ, ದಲಿತರ ಮತ ಕೇಳುತ್ತಿರುವ ಬಿಜೆಪಿ
- ಸಂವಿಧಾನ ಗೆಲ್ಲಿಸಿ, ಮನುವಾದ ಸೋಲಿಸುವಂತೆ ಕರೆ
ಮುಂಬರುವ ಚುನಾವಣೆಯಲ್ಲಿ ಸಂವಿಧಾನ ಗೆಲ್ಲಬೇಕು, ಮನುವಾದ ಸೋಲಬೇಕು ಇದಕ್ಕಾಗಿ ‘ದಲಿತ ಐಕ್ಯತಾ ಹೋರಾಟ ಚಾಲನೆ ಸಮಿತಿ’ಯು ಸಂವಿಧಾನ ಪರವಾಗಿ ಕಾಂಗ್ರೆಸ್ ಬೆಂಬಲಿಸಲು ನಿರ್ಧರಿಸಿದೆ.
ಗದಗ ಪಟ್ಟಣದಲ್ಲಿ ದಲಿತ ಸಂಘಟನೆಗಳ ಮುಖಂಡರು ಪತ್ರಿಕಾಗೋಷ್ಠಿ ಏರ್ಪಡಿಸಿದ್ದರು. ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಬಾಲರಾಜ್ ಅರಬರ್ ಮಾತನಾಡಿ, “ರಾಜ್ಯದಲ್ಲಿ ಬೆಲೆ ಏರಿಕೆ, ಸಂವಿಧಾನ ತಿದ್ದುಪಡಿ ಪ್ರಸ್ತಾಪ, ಖಾಸಗಿಕರಣ, ನಿರುದ್ಯೋಗ ಸಮಸ್ಯೆ, ಕೋಮುಗಲಭೆ, ಗಂಭೀರ ಸಮಸ್ಯೆಗಳ ಬಗ್ಗೆ ನಾವೆಲ್ಲರೂ ಬೀದಿಗಿಳಿದು ಸರ್ಕಾರದ ವಿರುದ್ಧ ಹೋರಾಟ ಮಾಡುವ ಪರಿಸ್ಥಿತಿ ಬಂದೊದಗಿದೆ” ಎಂದು ಹೇಳಿದರು.
ದಲಿತ ಮುಖಂಡ ರಮೇಶ್ ಬಾಳಮ್ಮ ಮಾತನಾಡಿ, “ಸದಾಶಿವ ಆಯೋಗ ಸಂಪೂರ್ಣ ಜಾರಿಯಾಗದೆ ಇದ್ದರೂ, ಜಾರಿ ಮಾಡಿದ್ದೇವೆಂದು ಬಿಜೆಪಿಯವರು ಸುಳ್ಳ ಅಪಪ್ರಚಾರ ಮಾಡುತ್ತಿದ್ದಾರೆ. ದಲಿತರಿಗೆ ಶೋಷಿತ ಜನಾಂಗದವರಿಗೆ ಮೋಸ ಮಾಡುತ್ತಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದಸಂಸ ಮುಖಂಡ ವೆಂಕಟೇಶಯ್ಯ ಮಾತನಾಡಿ, “ಬಿಜೆಪಿ ನೇತೃತ್ವದ ಸರ್ಕಾರಗಳು ದಲಿತರ ಅಭಿವೃದ್ದಿ ಮಾಡಿದ್ದೇವೆ ಎಂದು ಸುಳ್ಳು ಸುದ್ದಿಗಳನ್ನು ಹಬ್ಬಿಸಿ ದಲಿತರ ಓಟು ಪಡೆಯುವಂತ ಹುನ್ನಾರ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ದಲಿತರು, ಶೋಷಿತರು, ಅಲ್ಪಸಂಖ್ಯಾತರು ಬಿಜೆಪಿಯ ಪಕ್ಷಕ್ಕೆ ಮತ ನೀಡಕೂಡದು. ದಲಿತರಿಗೆ ಅಲ್ಪಸಂಖ್ಯಾತರಿಗೆ ಶೋಷಿತ ಜನಾಂಗದವರಿಗೆ ಅಪಾಯ ಕಟ್ಟಿಟ್ಟ ಬುತ್ತಿ. ಸಂವಿಧಾನ ಪಾಲನೆಗಾಗಿ ಸಂವಿಧಾನ ಉಳಿಸುವುದಕ್ಕಾಗಿ ಸಂವಿಧಾನವನ್ನು ಅಪ್ಪಿಕೊಳ್ಳುವ ಪಕ್ಷ ಕಾಂಗ್ರೆಸ್ ಬೆಂಬಲಿಸೋಣ” ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ದಲಿತ ಸಂಘರ್ಷ ಸಮಿತಿ ರಾಜ್ಯ ಮುಖಂಡ ಎಫ್ ವೈ ದೊಡ್ಮನಿ, ಪ್ರಕಾಶ್ ಕೆಲೂರು, ನಾಗರಾಜ್ ಗೋಕಾವಿ, ಮಾರುತಿ ಅಂಗಡಿ, ಹನುಮಂತ್ ದೊಡ್ಮನಿ, ಬಿಕೆ ಪೂಜಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು