ನಮ್ಮೆಲ್ಲರ ನಿರಾಸಕ್ತಿ, ಅನ್ಯ ಭಾಷೆಯ ವ್ಯಾಮೋಹದಿಂದ ನಮ್ಮ ಕನ್ನಡ ಭಾಷೆ ಸೊರಗುತ್ತಿದೆ. ಹೀಗಾದರೆ ಮುಂದಿನ ದಿನಗಳಲ್ಲಿ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆಯನ್ನೇ ಕಳೆದುಕೊಳ್ಳುವ ಪರಿಸ್ಥಿತಿ ಬರುತ್ತದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಆತಂಕ ವ್ಯಕ್ತಪಡಿಸಿದರು.
ಭಾಲ್ಕಿ ಪಟ್ಟಣದ ಹಿರೇಮಠ ಸಂಸ್ಥಾನದ ಗುರುಪ್ರಸಾದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗೆ ಶನಿವಾರ ಭೇಟಿ ನೀಡಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ʼಹಿಂದಿ, ಮರಾಠಿ, ತಮಿಳು ಸೇರಿ ವಿವಿಧ ಪ್ರಾದೇಶಿಕ ಭಾಷೆಗಳು ಗಟ್ಟಿಯಾಗಿ ಬೆಳೆಯುತ್ತಿವೆ. ಅನ್ಯ ಭಾಷೆ ಕಲಿಕೆಗೆ ನಮ್ಮ ವಿರೋಧವಿಲ್ಲ. ಆದರೆ, ಕನ್ನಡವನ್ನು ಮಾತೃ ಭಾಷೆಯನ್ನಾಗಿ ಸ್ವೀಕರಿಸಿ ನಮ್ಮ ಭಾಷಾ ಶ್ರೀಮಂತಿಕೆ ಹೆಚ್ಚಿಸುವ ಕೆಲಸ ಮಾಡಬೇಕುʼ ಎಂದು ಸಲಹೆ ನೀಡಿದರು.
ʼಚನ್ನಬಸವ ಪಟ್ಟದ್ದೇವರ ಕನ್ನಡದ ಮೇಲಿನ ಪ್ರೀತಿ ನನಗೆ ಸದಾಕಾಲ ಪ್ರೇರಕ ಶಕ್ತಿಯಾಗಿ ನಿಲ್ಲುತ್ತದೆ. ಈ ಕಾರಣಕ್ಕಾಗಿಯೇ ಪ್ರಾಧಿಕಾರದ ಅಧ್ಯಕ್ಷರಾಗಿ ಅಧಿಕಾರ ವಹಿಸುತ್ತಲೇ ಮೊದಲಿಗೆ ಗಡಿ ಭಾಗದ ಕನ್ನಡದ ಶ್ರೀಮಠಕ್ಕೆ ಭೇಟಿ ನೀಡಿ ಕನ್ನಡದ ಚಟುವಟಿಕೆಗಳನ್ನು ಪ್ರಾರಂಭಿಸುತ್ತಿದ್ದೇನೆ. ವಿದ್ಯಾರ್ಥಿಗಳು, ಯುವ ಪೀಳಿಗೆ ಯಾವುದೇ ಕಾರಣಕ್ಕೂ ಕನ್ನಡವನ್ನು ಮರೆಯಬಾರದು. ಸಮಾಜದಲ್ಲಿ ಎಷ್ಟೇ ಉನ್ನತ ಸ್ಥಾನ ಪಡೆದರೂ ಕೂಡ ನಮ್ಮತನ ಮರೆಯಬಾರದು. ಕನ್ನಡ ಭಾಷೆಯ ಮಹತ್ವವನ್ನು ಎತ್ತಿ ಹಿಡಿಯುವ ಕೆಲಸ ಮಾಡಬೇಕುʼ ಎಂದು ಕಿವಿಮಾತು ಹೇಳಿದರು.
ʼಬಸವಾದಿ ಶರಣರು ದೇವರಿಗೂ ಕನ್ನಡ ಕಲಿಸಿದರು. ಈ ಭಾಗದಲ್ಲಿ ಶತಾಯಿಷಿ ಡಾ.ಚನ್ನಬಸವ ಪಟ್ಟದ್ದೇವರು ಹೊರಗಡೆ ಉರ್ದು ನಾಮಫಲಕ ಹಾಕಿ ಕನ್ನಡ ಕಲಿಸಿ ಎಲ್ಲರಿಗೂ ಪ್ರೇರಣೆಯಾಗಿದ್ದರು. ಆದರೆ, ರಾಜ್ಯದಲ್ಲಿಂದು ಕನ್ನಡ ನಾಮಫಲಕ ಅಳವಡಿಸಿ ಇಂಗ್ಲಿಷ್ ಕಲಿಸುತ್ತಿರುವುದು ಆತಂಕ ತರಿಸಿದೆ. ಕನ್ನಡ ಭಾಷೆ ಉಳಿಸಲು ಎಲ್ಲರೂ ಕಂಕಣ ಬದ್ಧರಾಗಬೇಕುʼ ಎಂದು ನುಡಿದರು.
ಸಾನ್ನಿಧ್ಯ ವಹಿಸಿದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, ʼಶ್ರೀಮಠದ ಹಿರಿಮೆ, ಗರಿಮೆ ಹೆಚ್ಚಿಸಿದ ಕೀರ್ತಿ ಡಾ.ಚನ್ನಬಸವ ಪಟ್ಟದ್ದೇವರು, ಡಾ.ಬಸವಲಿಂಗ ಪಟ್ಟದ್ದೇವರಿಗೆ ಸಲ್ಲುತ್ತದೆ. ಗಡಿಭಾಗವನ್ನು ಕನ್ನಡ ನೆಲದಲ್ಲಿ ಉಳಿಸುವಲ್ಲಿ ಭಾಷೆ ರಕ್ಷಣೆಯಲ್ಲಿ ಪೂಜ್ಯರ ಕೊಡುಗೆ ಶ್ರೇಷ್ಠವೆನಸಿದೆʼ ಎಂದು ತಿಳಿಸಿದರು.
ʼಡಾ.ಪುರುಷೋತ್ತಮ ಬಿಳಿಮಲೆ ಅವರು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾಗಿ ನೇಮಕ ಆಗಿರುವುದು ನಮಗೆ ಅತ್ಯಂತ ಖುಷಿ ತಂದು ಕೊಟ್ಟಿದೆ. ಅವರು ಪ್ರಾಧ್ಯಾಪಕರಾಗಿ, ಜಾನಪದ ಸಾಹಿತ್ಯ ಸೇರಿ ವಿವಿಧ ಕ್ಷೇತ್ರಗಳಲ್ಲಿ ಅದ್ಭುತ ಕೊಡುಗೆ ನೀಡಿದ್ದಾರೆ. ಅವರಲ್ಲಿ ತಮ್ಮದೇ ಯೋಚನೆ, ಯೋಜನೆ ಇದ್ದು, ಅವರ ಅವಧಿಯಲ್ಲಿ ಕನ್ನಡ ಭಾಷೆ ಬೆಳವಣಿಗೆಯಾಗಲಿದೆʼ ಎಂದು ಆಶಯ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಈ ಬಾರಿಯ ಅಧಿವೇಶನದಲ್ಲಾದರೂ ಜನಪರ ಚರ್ಚೆ-ವಾಗ್ವಾದ ನಡೆಯಬಹುದೇ?
ಕಾರ್ಯಕ್ರಮದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಸಂತೋಷ ಹಾನಗಲ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಲೀಂ ಪಾಶಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ, ಕ್ಷೇತ್ರ ಶಿಕ್ಷಣಾಧಿಕಾರಿ ಮನೋಹರ ಹೋಳ್ಕರ್, ಸಹಾದೇವ, ನೀಲಕಂಠ, ಮುಖ್ಯಗುರುಗಳಾದ ಬಾಬು ಬೆಲ್ದಾಳ, ಸವಿತಾ ಭೂರೆ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.