ಅಮೆರಿಕ ಅಧ್ಯಕ್ಷೀಯ ಚುನಾವಣಾ ಪ್ರಚಾರದ ವೇಳೆ ಗುಂಡಿನ ದಾಳಿ ನಡೆಸಿ, ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಕೂದಲೆಳೆಯ ಅಂತರದಲ್ಲಿ ಡೊನಾಲ್ಡ್ ಟ್ರಂಪ್ ಅವರು ಬಚಾವ್ ಆಗಿದ್ದಾರೆ.
ಶನಿವಾರ ಪೆನ್‌ಸಿಲ್ವೇನಿಯಾದ ಬಟ್ಲರ್ ಎಂಬಲ್ಲಿ ಡೊನಾಲ್ಡ್ ಟ್ರಂಪ್ ಅವರ ಚುನಾವಣಾ ರ‍್ಯಾಲಿ ನಡೆಯುತ್ತಿದ್ದಾಗ ಈ ದಾಳಿ ನಡೆದಿದೆ.
BREAKING: 🇺🇸 Former President Donald Trump shot at rally. pic.twitter.com/SnQe62Vu4d
— Watcher.Guru (@WatcherGuru) July 13, 2024
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪೆನ್ಸಿಲ್ವೇನಿಯಾದ ಬಟ್ಲರ್‌ನಲ್ಲಿ ನಡೆದ ರ‍್ಯಾಲಿಯಲ್ಲಿ ಗುಂಡಿನ ದಾಳಿ ನಡೆಯಿತು. ಮನೆಯೊಂದರ ರೂಫ್ ಟಾಪ್ ಮೇಲೆ ಮಲಗಿ, ಬಂದೂಕುಧಾರಿ ಈ ದಾಳಿ ನಡೆಸಿರುವುದು ತಿಳಿದು ಬಂದಿದೆ. ಬಂಧೂಕುಧಾರಿಯನ್ನು ಕೂಡಲೇ ಭದ್ರತಾ ಸಿಬ್ಬಂದಿ ದಾಳಿ ನಡೆಸಿ, ಹತ್ಯೆಗೈದಿದ್ದಾರೆ.
ಈ ಘಟನೆಯಲ್ಲಿ ಬಂದೂಕುಧಾರಿ ಮತ್ತು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪ್ರೇಕ್ಷಕರೊಬ್ಬರು ಮೃತಪಟ್ಟಿರುವುದಾಗಿ ವರದಿಯಾಗಿದೆ. ಮತ್ತೊಬ್ಬ ಪ್ರೇಕ್ಷಕನ ಸ್ಥಿತಿ ಗಂಭೀರವಾಗಿದೆ. ಟ್ರಂಪ್ ಅವರ ಮುಖ ಹಾಗೂ ಕಿವಿಯ ಭಾಗಕ್ಕೆ ಗಾಯವಾಗಿದೆ.
ಈ ಗುಂಡಿನ ದಾಳಿಯನ್ನು ಹತ್ಯೆ ಯತ್ನ ಎಂದು ಹೇಳಿರುವ ಅಲ್ಲಿನ ಕಾನೂನು ಜಾರಿ ಅಧಿಕಾರಿಗಳು, ತನಿಖೆ ನಡೆಸುತ್ತಿದ್ದಾರೆ.
ಘಟನೆಯ ವಿಡಿಯೋ ವೈರಲಾಗಿದ್ದು, ಗುಂಡಿನ ದಾಳಿ ನಡೆದ ಕೂಡಲೇ ವೇದಿಕೆಯಲ್ಲಿದ್ದ ಭದ್ರತಾ ಸಿಬ್ಬಂದಿ ಅವರನ್ನು ಬಚಾವ್ ಮಾಡಿದ್ದಾರೆ. ಬಳಿಕ ರಕ್ತಸಿಕ್ತ ಕಿವಿಯನ್ನು ಹಿಡಿದುಕೊಂಡ ಡೊನಾಲ್ಡ್ ಟ್ರಂಪ್, ಮತ್ತೊಮ್ಮೆ ಜನರತ್ತ ಕೈಬೀಸುವ ಮೂಲಕ ತಾನು ಪ್ರಾಣಾಪಾಯದಿಂದ ಪಾರಾಗಿರುವುದನ್ನು ತಿಳಿಸಿದರು.
