ಪೋಷಕರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಜೋಡಿಯು ಮನನೊಂದು ಕೃಷಿ ಹೊಂಡಕ್ಕೆ ಹಾರಿ, ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಎಂ.ಮುದ್ದಲಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದಿದೆ.
ಚಿಂತಾಮಣಿ ತಾಲೂಕಿನ ಕಾಚಹಳ್ಳಿ ಗ್ರಾಮದ ವಿವಾಹಿತ ಯುವತಿ ಅನುಷಾ(19) ಮತ್ತು ಎಂ.ಮುದ್ದಲಹಳ್ಳಿ ಗ್ರಾಮದ ವೇಣು(21) ಮೃತ ಪ್ರೇಮಿಗಳು.
ಚೇಳೂರು ತಾಲೂಕು ಮಾಡಪಲ್ಲಿ ಗ್ರಾಮದ ಅನುಷಾ ಮತ್ತು ಚಿಂತಾಮಣಿ ತಾಲೂಕಿನ ಎಂ.ಮುದ್ದಲಹಳ್ಳಿ ಗ್ರಾಮದ ವೇಣು ಪರಸ್ಪರ ಪ್ರೀತಿಯಲ್ಲಿ ಬಿದ್ದು, ಮದುವೆಯಾಗುವ ಕನಸು ಕಂಡಿದ್ದರು. ಆದರೆ ಪೋಷಕರು ಒಪ್ಪಿರಲಿಲ್ಲ. ಯುವತಿ ಅನುಷಾಳನ್ನು ಕಳೆದ ಮೇ ತಿಂಗಳಲ್ಲಿ ಕಾಚಹಳ್ಳಿಯ ಯುವಕನಿಗೆ ಕೊಟ್ಟು ಮದುವೆ ಮಾಡಿದ್ದರು. ದಾಬಸ್ ಪೇಟೆಯಲ್ಲಿ ಗಂಡ ಹೆಂಡತಿ ವಾಸವಿದ್ದರು. ಆಷಾಡ ಮಾಸಕ್ಕೆಂದು ಅನುಷಾಳ ಗಂಡ ಚೌಡರೆಡ್ಡಿ ಚೇಳೂರು ತಾಲೂಕು ಮಾಡಪಲ್ಲಿಯ ತವರು ಮನೆಗೆ ಬಿಟ್ಟು ಬಂದಿದ್ದರು.
ಮದುವೆ ನಂತರವೂ ಪ್ರೀತಿ ಮುಂದುವರಿದಿತ್ತು. ಗಂಡನಿಗೆ ಎಟಿಎಮ್ ಮಾಡಿಸಬೇಕು ಎಂದು ನೆಪ ಹೇಳಿ ಶುಕ್ರವಾರ ಮನೆಯಿಂದ ಹೊರಹೋಗಿದ್ದ ಅನುಷಾ, ತನ್ನ ಪ್ರಿಯಕರನನ್ನು ಭೇಟಿಯಾಗಲು ಎಂ.ಮುದ್ದಲಹಳ್ಳಿಗೆ ಬಂದಿದ್ದಳು. ಆನಂತರ ಊರಿನ ಸಮೀಪದ ತೋಟಕ್ಕೆ ಹೋಗಿ ಸಾಯುವ ನಿರ್ಧಾರ ಮಾಡಿದ್ದಾರೆ. ಮೊಬೈಲ್, ಪರ್ಸ್ ಬಿಟ್ಟು ಅಲ್ಲೇ ಬಿಟ್ಟು, ಇಬ್ಬರು ದುಪ್ಪಟ್ಟ ಕಟ್ಟಿಕೊಂಡು ತೋಟದಲ್ಲಿದ್ದ ಕೃಷಿ ಹೊಂಡಕ್ಕೆ ಹಾರಿ ಜೀವ ಬಿಟ್ಟಿದ್ದಾರೆ.
ಇದನ್ನು ಓದಿದ್ದೀರಾ? ಚುನಾವಣಾ ಪ್ರಚಾರದ ವೇಳೆ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ: ಕಿವಿಗೆ ಗಾಯ
ಕರೆ ಸ್ವೀಕರಿಸದ ಹಿನ್ನೆಲೆ ಅನುಷಾ ಗಂಡ ಕೆಂಚಾರ್ಲ ಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಶನಿವಾರ ಕೃಷಿ ಹೊಂಡದ ಮಾಲೀಕ ಚಲಪತಿ ಎಂಬುವವರು ತೋಟಕ್ಕೆ ತೆರಳಿದ್ದ ವೇಳೆ ಕೃಷಿ ಹೊಂದ ಸಮೀಪ ಮೊಬೈಲ್, ಪರ್ಸ್ ಇರುವುದನ್ನು ಗಮನಿಸಿದ್ದಾರೆ. ಆ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಕೃಷಿ ಹೊಂಡದಲ್ಲಿದ್ದ ಶವಗಳನ್ನು ಪತ್ತೆ ಹಚ್ಚಿದ್ದು, ಮರಣೋತ್ತರ ಪರೀಕ್ಷೆಗೆ ನಗರದ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ.
