ಕಳೆದ ವರ್ಷ ನಮ್ಮ ಮೆಟ್ರೋದಲ್ಲಿ ಟಿಕೆಟ್ ತೆಗೆಯದೆ ಉಚಿತವಾಗಿ ಪ್ರಯಾಣಿಸಿ ಸುದ್ದಿಯಾಗಿದ್ದ 24 ವರ್ಷದ ಯೂಟ್ಯೂಬರ್ ಫಿಡಿಯಾಸ್ ಪನಯೋಟೌ ಈಗ ರಾಜಕೀಯ ಜೀವನಕ್ಕೆ ಎಂಟ್ರಿ ನೀಡಿದ್ದಾರೆ. ತನ್ನ ಕುಚೇಷ್ಟೆಯ ವಿಡಿಯೋಗಳ ಮೂಲಕವೇ ಸದ್ದು ಮಾಡಿದ್ದ ಯೂಟ್ಯೂಬರ್ ಈಗ ಯುರೋಪಿಯನ್ ಸಂಸತ್ತಿನ ಸದಸ್ಯರಾಗಿದ್ದಾರೆ.
ಈ ಹಿಂದೆ ಯಾವುದೇ ರಾಜಕೀಯ ಅನುಭವವನ್ನು ಅಥವಾ ಯಾವುದೇ ಪಕ್ಷದೊಂದಿಗೆ ಸಂಬಂಧವನ್ನು ಹೊಂದಿರದ ಫಿಡಿಯಾಸ್ ಪನಯೋಟೌ ಇತ್ತೀಚಿನ ಸೈಪ್ರಿಯೋಟ್ ಚುನಾವಣೆಯಲ್ಲಿ ವಿಜಯಶಾಲಿಯಾಗಿ ಹೊರಹೊಮ್ಮಿದ್ದಾರೆ. ಇನ್ನು ಈ ಹಿಂದೆ ಎಂದಿಗೂ ತಾನು ಕೂಡಾ ಮತ ಚಲಾಯಿಸಿಲ್ಲ ಎಂದು ಫಿಡಿಯಾಸ್ ಹೇಳಿಕೊಂಡಿದ್ದಾರೆ.
ಸುಮಾರು ಐದನೇ ಒಂದು ಭಾಗದಷ್ಟು ಮತಗಳನ್ನು ಪಡೆದುಕೊಂಡ ಯೂಟ್ಯೂಬರ್ ಫಿಡಿಯಾಸ್ ಡಿಐಎಸ್‌ವೈ ಪಕ್ಷ ಮತ್ತು ಎಡ ಪಕ್ಷ ಎಕೆಇಎಲ್‌ಗಿಂತ ಮೂರನೇ ಸ್ಥಾನದಲ್ಲಿದ್ದಾರೆ. ಸಾಮಾಜಿಕ ಮಾಧ್ಯಮದ ಪೋಸ್ಟ್‌ಗಳ ಮೂಲಕ ಜನಪ್ರಿಯತೆ ಪಡೆದಿರುವ ಫಿಡಿಯಾಸ್ ಈಗ ರಾಜಕೀಯವಾಗಿಯೂ ತೊಡಗಿಕೊಂಡಿದ್ದಾರೆ.
ಯೂಟ್ಯೂಬರ್ ಫಿಡಿಯಾಸ್ ಯಾರು?
24 ವರ್ಷದ ಯೂಟ್ಯೂಬರ್ ಫಿಡಿಯಾಸ್ ತನ್ನನ್ನು ತಾನು ‘ವೃತ್ತಿಪರ ತಪ್ಪು ಮಾಡುವವ’ (professional mistake maker) ಎಂದು ಕರೆದುಕೊಂಡಿದ್ದು, ಯೂಟ್ಯೂಬ್‌ನಲ್ಲಿ 2.6 ಮಿಲಿಯನ್‌ಗಿಂತಲೂ ಹೆಚ್ಚು ಚಂದಾದಾರರನ್ನು ಮತ್ತು ಟಿಕ್‌ಟಾಕ್‌ನಲ್ಲಿ ಅದಕ್ಕಿಂತಲೂ ಅಧಿಕ ಚಂದಾದಾರರನ್ನು ಹೊಂದಿದ್ದಾರೆ.
ಇದನ್ನು ಓದಿದ್ದೀರಾ? ವಿಡಿಯೋಗಾಗಿ ಟಿಕೆಟ್ ಇಲ್ಲದೆ ಮೆಟ್ರೋದಲ್ಲಿ ಪ್ರಯಾಣಿಸಿದ ಖ್ಯಾತ ಯೂಟ್ಯೂಬರ್; ಕ್ರಮಕ್ಕೆ ಮುಂದಾದ ಮೆಟ್ರೋ
ಎಲಾನ್ ಮಸ್ಕ್ ಸೇರಿದಂತೆ ಹಲವಾರು ಸೆಲೆಬ್ರೆಟಿಗಳನ್ನು ತಬ್ಬಿಕೊಳ್ಳುವ ಯತ್ನ ಮಾಡುವುದು ಮತ್ತು ಶವಪೆಟ್ಟಿಗೆಯಲ್ಲಿ ಒಂದು ವಾರ ಕಳೆಯುವಂತಹ ವಿಡಿಯೋಗಳು ವೈರಲ್ ಆಗಿದೆ. ನಮ್ಮ ಮೆಟ್ರೋದಲ್ಲಿ ಟಿಕೆಟ್ ಖರೀದಿಸದೆಯೇ ಪ್ರಯಾಣ ಮಾಡಿ ನೆಟ್ಟಿಗರ ಟೀಕೆಗೆ ಗುರಿಯಾಗಿದ್ದರು.
ಕಳೆದ ವರ್ಷ ನಮ್ಮ ಮೆಟ್ರೋದಲ್ಲಿ ಉಚಿತವಾಗಿ ಪ್ರಯಾಣಿಸುತ್ತಿರುವ ತನ್ನ ವಿಡಿಯೋವನ್ನು ಪೋಸ್ಟ್ ಮಾಡಿದ್ದರು. “ಭಾರತದಲ್ಲಿ ಮೆಟ್ರೋದಲ್ಲಿ ಹೇಗೆ ಉಚಿತವಾಗಿ ಪ್ರಯಾಣಿಸುವುದು ಎಂದು ನಾನು ನಿಮಗೆ ಕಲಿಸುತ್ತೇನೆ” ಎಂದು ಯೂಟ್ಯೂಬರ್ ಈ ವಿಡಿಯೋದಲ್ಲಿ ಆರಂಭದಲ್ಲಿ ಹೇಳಿದ್ದಾರೆ. ಹಾಗೆಯೇ ಆರಂಭದಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸಲು ಸಾಧ್ಯವೇ ಎಂದು ಒಂದೆರಡು ಪ್ರಯಾಣಿಕರಲ್ಲಿ ಕೇಳಿದ್ದರು.
2023ರಲ್ಲಿ, ರೈಲು ಟಿಕೆಟ್ ಮತ್ತು ಫೈವ್ ಸ್ಟಾರ್ ಹೋಟೆಲ್‌ನಲ್ಲಿ ಉಪಹಾರ ಸೇವಿಸಿ ಬಿಲ್ ನೀಡದಿರುವುದರ ವಿಡಿಯೋ ಮಾಡಿ ಜಪಾನ್‌ನಲ್ಲಿ ಆಕ್ರೋಶಕ್ಕೆ ಗುರಿಯಾಗಿದ್ದರು, ಬಳಿಕ ಕ್ಷಮೆಯಾಚಿಸಿದ್ದರು. ಜಪಾನ್ ಬುಲೆಟ್ ರೈಲಿನಲ್ಲಿ ಶೌಚಾಲಯಗಳಲ್ಲಿ ಅಡಗಿಕೊಂಡು ಮತ್ತು ಅನಾರೋಗ್ಯದ ನೆಪ ಹೇಳಿ ಟಿಕೆಟ್ ಇಲ್ಲದೆಯೇ ಪ್ರಯಾಣಿಸಿದ್ದರು.
View this post on Instagram
ಏಪ್ರಿಲ್‌ನಲ್ಲಿ ಫಿಡಿಯಾಸ್ ನಾಮಪತ್ರವನ್ನು ಸಲ್ಲಿಸುವಾಗ “ನನ್ನ ಗುರಿ ಗೆಲುವು ಸಾಧಿಸುವುದಲ್ಲ. ಬದಲಾಗಿ ರಾಜಕೀಯದಲ್ಲಿ ತೊಡಗಿಕೊಳ್ಳಲು ಯುವಜನರನ್ನು ಪ್ರೇರೇಪಿಸುವುದು” ಎಂದು ಹೇಳಿಕೊಂಡಿದ್ದರು. ಈಗ ಈ ಹಿಂದೆ ಎಂದಿಗೂ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗಿಯಾಗದ ಫಿಡಿಯಾಸ್ ಸಂಸದರಾಗಿದ್ದಾರೆ.
ಸೈಪ್ರಸ್‌ನಲ್ಲಿ ಕೇವಲ ಶೇಕಡ 59ಕ್ಕಿಂತ ಕಡಿಮೆ ಮತದಾನ ನಡೆದಿದೆ. ಆದರೆ 2019ರ ಚುನಾವಣೆಯಲ್ಲಿ ಚಲಾಯಿಸಲಾದ ಶೇಕಡ 45ಕ್ಕಿಂತ ಅಧಿಕ ಮತದಾನವಿದೆ. ಮತದಾನ ಪ್ರಮಾಣ ಹೆಚ್ಚಳಕ್ಕೆ ಫಿಡಿಯಾಸ್ ಚುನಾವಣೆ ಕಣದಲ್ಲಿರುವುದು ಕೂಡಾ ಒಂದು ಕಾರಣ ಎಂದು ವಿಶ್ಲೇಷಕರು ಹೇಳಿದ್ದಾರೆ. ಫಿಡಿಯಾಸ್ ಹೆಚ್ಚಾಗಿ ಯುವಕರ ಮತವನ್ನು ಪಡೆದಿದ್ದಾರೆ ಎಂದು ವರದಿಯೊಂದು ಉಲ್ಲೇಖಿಸಿದೆ.