ಕೊಡಗು ಜಿಲ್ಲೆಯ ಹಲವು ಭಾಗಗಳಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು, ಜಿಲ್ಲೆಯ ಕೆಲವು ಭಾಗಗಳಲ್ಲಿ ಮನೆಗಳು ಕುಸಿದು ಬಿದ್ದಿರುವ ಬಗ್ಗೆ ವರದಿಯಾಗಿದೆ.
ಮಡಿಕೇರಿ ತಾಲೂಕು ಸಂಪಾಜೆ ಹೋಬಳಿ ಮೇಕೇರಿ ಗ್ರಾಮದ ಆಯಿಷಾ ಎಂಬುವವರ ಮನೆಯ ಗೋಡೆಯ ಮಳೆಯಿಂದಾಗಿ ಕುಸಿದು ಬಿದ್ದಿದೆ. ಉಳಿದ ಭಾಗಗಳು ಬಿರುಕು ಬಿಟ್ಟಿದ್ದು, ಸದ್ಯದ ಮಟ್ಟಿಗೆ ಕುಟುಂಬದವರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ.
ಶನಿವಾರಸಂತೆ ಹೋಬಳಿಯ ಗೌಡಳ್ಳಿ ಗ್ರಾಮ ಪಂಚಾಯತಿಗೆ ಸೇರಿದ ಚನ್ನಾಪುರ ಗ್ರಾಮದ ಲಕ್ಷ್ಮೀ ಎಂಬುವವರ ವಾಸದ ಮನೆ, ಶನಿವಾರ ರಾತ್ರಿ ಸುರಿದ ಮಳೆಯಿಂದಾಗಿ ಭಾಗಶಃ ಹಾನಿಯಾಗಿದೆ.
ಶನಿವಾರ ಸಂಜೆ ಸುರಿದ ಮಳೆಯಿಂದಾಗಿ ಅತ್ತೂರು ಗ್ರಾಮದ ನಿವಾಸಿ ಜನಾರ್ದನ ಬಿನ್. ಅಚ್ಚಯ್ಯ ಎಂಬವರ ವಾಸದ ಮನೆಯ ಮೇಲ್ಛಾವಣಿ ಹಾಗೂ ಗೋಡೆಗೆ ಹಾನಿಯಾಗಿರುವುದಾಗಿ ವರದಿಯಾಗಿದೆ. ಮನೆ ಬಿದ್ದಿರುವ ಗ್ರಮಗಳಿಗೆ ತಹಶೀಲ್ದಾರ್ ಭೇಟಿ ನೀಡಿ, ಪರಿಶೀಲನೆ ಮಾಡಿದರು.
ಭಾರೀ ಗಾಳಿ ಮಳೆಯಿಂದಾಗಿ ಬೃಹತ್ ಗಾತ್ರದ ಮರ ಮತ್ತು ವಿದ್ಯುತ್ ಟ್ರಾನ್ಸ್‌ಫಾರ್ಮರ್ ಕೂಡ ರಸ್ತೆಗೆ ಬಿದ್ದಿದೆ. ಮಡಿಕೇರಿಯ ಕ್ಲಬ್ ಮಹೀಂದ್ರ ಸಮೀಪ ಭಾರೀ ಗಾಳಿ-ಮಳೆಯಿಂದಾಗಿ ಬೃಹತ್ ಗಾತ್ರದ ಮರ ಹಾಗೂ ವಿದ್ಯುತ್ ಟ್ರಾನ್ಸ್‌ಫಾರ್ಮರ್ ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಇದರಿಂದಾಗಿ ತಾತ್ಕಾಲಿಕವಾಗಿ ರಸ್ತೆ ಸಂಚಾರ ಬಂದ್ ಮಾಡಲಾಗಿತ್ತು. ಆ ಬಳಿಕ ಅರಣ್ಯ ಇಲಾಖೆ ಮತ್ತು ಚೆಸ್ಕಾಂ ಸಿಬ್ಬಂದಿಗಳು ತೆರವು ಕಾರ್ಯ ನಡೆಸಿದರು.
ಶಾಲಾ ಕಾಲೇಜುಗಳಿಗೆ ರಜೆ ನೀಡಲು ಪೋಷಕರ ಆಗ್ರಹ
ಮಡಿಕೇರಿ ಸುತ್ತಮುತ್ತ ಮಳೆಯ ತೀವ್ರತೆ ಹೆಚ್ಚಾಗಿದೆ. ಕುಂಭದ್ರೋಣ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಜಿಲ್ಲಾಡಳಿತವು ಶಾಲೆ- ಕಾಲೇಜುಗಳಿಗೆ ರಜೆ ಘೋಷಣೆ ಮಾಡುವಂತೆ ಪೋಷಕರು ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.
