ರಾಜ್ಯ ಸರ್ಕಾರ ನೇಮಕಾತಿ ಆದೇಶ ಪತ್ರ ಕೊಡದ ಹಿನ್ನೆಲೆಯಲ್ಲಿ ಬೇಸತ್ತ ಸಹಾಯಕ ಪ್ರಾಧ್ಯಾಪಕ ಅಭ್ಯರ್ಥಿಗಳು, ದಯಾಮರಣ ಕೋರಿ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸಿಎಂ, ಡಿಸಿಎಂ, ಉನ್ನತ ಶಿಕ್ಷಣ ಸಚಿವರ ಹೆಸರನ್ನು ಟ್ಯಾಗ್ ಮಾಡಿದ್ದು, ಶೀಘ್ರವೇ ನೇಮಕಾತಿ ಆದೇಶ ಪತ್ರ ನೀಡಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
2021ರಲ್ಲಿ ಆಯ್ಕೆಯಾದ 1,208 ಮಂದಿ ಸಹಾಯಕ ಪಾಧ್ಯಾಪಕ ಅಭ್ಯರ್ಥಿಗಳಿಗೆ ಮೂರು ವರ್ಷ ಕಳೆದರೂ ನೇಮಕಾತಿ ಆದೇಶ ಪತ್ರ ಸಿಕ್ಕಿಲ್ಲ. ಹೀಗಾಗಿ ಮಾನಸಿಕವಾಗಿ ಕುಗ್ಗಿ ಹೋಗಿರುವ ಅಭ್ಯರ್ಥಿಗಳು ದಯಾಮರಣಕ್ಕೆ ಅನುಮತಿ ನೀಡುವಂತೆ ಸಾಮೂಹಿಕವಾಗಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಪತ್ರ ಬರೆದು ದಯಾಮರಣ ಕೋರಿದ್ದಾರೆ.
“2021ರ ಸೆಪ್ಟೆಂಬರ್ 30ರಂದು ಆರಂಭವಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯ ಅಂತಿಮ ಆಯ್ಕೆಪಟ್ಟಿಯು 2023ರ ನವೆಂಬರ್ 4ರಂದು ವಿಶೇಷ ರಾಜ್ಯಪತ್ರದಲ್ಲಿ ಅಧಿಕೃತವಾಗಿ ಪ್ರಕಟವಾಗಿತ್ತು. ನೇಮಕಾತಿ ಪ್ರಕ್ರಿಯೆ ಆರಂಭವಾಗಿ ಈಗಾಗಲೇ ಮೂರು ವರ್ಷಗಳಾಗಿದ್ದು, ನೇಮಕಾತಿ ಆದೇಶದ ವಿಳಂಬದಿಂದಾಗಿ ಮತ್ತು ಸ್ಥಳನಿಯುಕ್ತಿ ಸಿಗದ ಕಾರಣವಾಗಿ ಮಾನಸಿಕವಾಗಿ ಕುಗ್ಗಿಹೋಗಿದ್ದು, ಪ್ರತಿಕ್ಷಣವೂ ಮಾನಸಿಕ ಹಿಂಸೆಯನ್ನು ಅನುಭವಿಸುತ್ತಿದ್ದೇವೆ. ಜತೆಗೆ ಯಾವುದೇ ಉದ್ಯೋಗವಿಲ್ಲದೆ, ನಮ್ಮ ಕುಟುಂಬಗಳು ಜೀವನ ಸಾಗಿಸುವುದು ದುಸ್ತರವಾಗಿದೆ” ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
“ಎಲ್ಲ ಪದವಿಗಳನ್ನು ಹೊಂದಿದ್ದರೂ ಸರ್ಕಾರದಿಂದ ಆದೇಶ ಪ್ರತಿ ಸಿಗದಿರುವುದು ಮತ್ತಷ್ಟು ಅತಂತ್ರಗೊಳಿಸಿದೆ. ಕಷ್ಟಪಟ್ಟು ಓದಿ, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಆಯ್ಕೆಯಾಗಿ, ಅರ್ಹನಾದರೂ ಸರ್ಕಾರದ ವಿಳಂಬ ಧೋರಣೆಯಿಂದ ಬೇಸತ್ತು ಹೋಗಿದ್ದೇವೆ. ಆತ್ಮಹತ್ಯೆ ಮಾಡಿಕೊಂಡು ಮನೆಯವರಿಗೆ, ಸಂಬಂಧಿಕರಿಗೆ, ನಂಬಿಕೊಂಡವರಿಗೆ ಅವಮಾನ ಮಾಡುವ ಬದಲು ಮತ್ತು ಸರ್ಕಾರದಿಂದ ದಿನಂಪ್ರತಿ ಒಂದೊಂದು ಕಾರಣವನ್ನು ಕೇಳುತ್ತಾ ಕೊರಗಿ ಉಸಿರುಬಿಡುವುದಕ್ಕಿಂತ ಮೊದಲು ದಯಾಳುಗಳಾದ ತಾವುಗಳು ದಯಾಮರಣವನ್ನು ಕರುಣಿಸಬೇಕೆಂದು ಕೋರುತ್ತೇವೆ” ಎಂದು ಅಭ್ಯರ್ಥಿಗಳು ಮನವಿ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚಿಕ್ಕಬಳ್ಳಾಪುರ | ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯನವರ ಪಾತ್ರವೂ ಹೊರಬರಲಿ: ನಟ ಚೇತನ್
“ನೇಮಕಾತಿ ಆದೇಶ ಪತ್ರ ಶೀಘ್ರ ನೀಡುವಂತೆ ಒತ್ತಾಯಿಸಿರುವ ಅಭ್ಯರ್ಥಿಗಳು, ನಿರುದ್ಯೋಗಿಗಳಿಗೆ ಉದ್ಯೋಗ ಕೊಡಿ ಎಂದು ಕೇಂದ್ರ ಸರ್ಕಾರವನ್ನು ಕೇಳುವ ನೀವು, ಅಭ್ಯರ್ಥಿಗಳ ಆಯ್ಕೆ ಅಂತಿಮಗೊಂಡಿದ್ದರೂ ನೇಮಕಾತಿ ಆದೇಶ ಪತ್ರ ನೀಡಲು ವಿಳಂಬ ಮಾಡುತ್ತಿರುವುದೇಕೆ?, ದಯವಿಟ್ಟು ನೇಮಕಾತಿ ಪತ್ರ ನೀಡಿ, ಇಲ್ಲವೇ ದಯಾಮರಣಕ್ಕೆ ಅವಕಾಶ ಕೊಡಿ” ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
