‘ಮಳೆ ಬಿದ್ದರೆ ಮಾತ್ರ ಮಳೆ ಪ್ರಮಾಣಕ್ಕೆ ತಕ್ಕಂತೆ, CWMC ಆದೇಶದ ಪ್ರಕಾರ ಪೂರ್ತಿ ನೀರು ಹರಿಸಬಹುದು. ಇಲ್ಲದಿದ್ದರೆ ಕೇವಲ 8 ಸಾವಿರ ಕ್ಯೂಸೆಕ್ಸ್ ನೀರು ಬಿಡಬೇಕಾಗುತ್ತದೆ ಇದರ ಜೊತೆಗೆ ಮೇಲ್ಮನವಿ ಹಾಕೋಣ. ನಾವು ಮೊಂಡಾಟ ಆಡ್ತೀವಿ ಎಂದು CWMC ಗೆ ಅನ್ನಿಸಬಾರದು ಎನ್ನುವ ಸಲಹೆ ಬಂದಿದೆ’ ಎಂದಿದ್ದಾರೆ, ಸರ್ವಪಕ್ಷ ಸಭೆಯ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯನವರು.
ಜು. 11ರಂದು ನಡೆದ ಕಾವೇರಿ ನೀರು ನಿಯಂತ್ರಣ ಸಮಿತಿಯ 3 ನೇ ಸಭೆಯಲ್ಲಿ, ಜು. 12ರಿಂದ ಈ ತಿಂಗಳ ಕೊನೆಯವರೆಗೆ ಪ್ರತಿದಿನ 1 ಟಿಎಂಸಿ ನೀರಿನಂತೆ ಒಟ್ಟು 20 ಟಿಎಂಸಿ ನೀರು ಬಿಡಲು ಆದೇಶಿಸಲಾಗಿತ್ತು.
ಕಾವೇರಿ ನೀರು ನಿಯಂತ್ರಣ ಸಮಿತಿಯ ಈ ಆದೇಶವನ್ನು ಪಾಲಿಸುವ ಸ್ಥಿತಿಯಲ್ಲಿ ಸದ್ಯ ಕರ್ನಾಟಕ ರಾಜ್ಯ ಇಲ್ಲದಿರುವ ಕಾರಣ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸರ್ವಪಕ್ಷ ಸಭೆ ಕರೆದು, ಪ್ರತಿದಿನ 8 ಸಾವಿರ ಕ್ಯೂಸೆಕ್ ನೀರು ಬಿಡಲು, ಹಾಗೆಯೇ ಮೇಲ್ಮನವಿ ಸಲ್ಲಿಸಲು ಸರ್ವಸಮ್ಮತ ತೀರ್ಮಾನಕ್ಕೆ ಬಂದಿರುವುದು ಸೂಕ್ತ ನಡೆಯಾಗಿದೆ.
ಸಾಮಾನ್ಯವಾಗಿ ಮುಂಗಾರು ಋತುವಿನ ಜೂನ್ ತಿಂಗಳಲ್ಲಿ 9.4 ಮತ್ತು ಜುಲೈನಲ್ಲಿ 31.24 ಟಿಎಂಸಿ, ಅಂದರೆ 40.43 ಟಿಎಂಸಿ ನೀರನ್ನು ಒಪ್ಪಂದದಂತೆ ತಮಿಳುನಾಡಿಗೆ ಹರಿಸಬೇಕಾಗಿರುತ್ತದೆ. ಆದರೆ ಇಲ್ಲಿಯವರೆಗೆ ಹರಿದುಹೋಗಿರುವ ನೀರು ಕೇವಲ 5 ಟಿಎಂಸಿ ಮಾತ್ರ. ಪರಿಸ್ಥಿತಿ ಹೀಗಿರುವಾಗ, ದಿನಕ್ಕೆ 8 ಸಾವಿರ ಕ್ಯೂಸೆಕ್ ನೀರು ಹರಿಸುವುದು, ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ತಾತ್ಕಾಲಿಕ ತಂತ್ರದಂತೆ ಕಾಣುತ್ತಿದೆ.
ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ಮಳೆ ಪರಿಸ್ಥಿತಿ ಉತ್ತಮವಾಗಿಯೇ ಇದೆ. ಕೆಆರ್‍ಎಸ್ ನ ಇಂದಿನ ನೀರಿನ ಮಟ್ಟ 104.65 ಅಡಿ ಇದೆ. ಇದು ಕಾವೇರಿ ಸಮಿತಿಗೂ ಪ್ರಾಧಿಕಾರಕ್ಕೂ ತಿಳಿಯದ ವಿಷಯವೇನಲ್ಲ. ಹಾಗಾಗಿ ಮಳೆ ಆಗುತ್ತಿರುವ ದಿನಗಳಲ್ಲಿಯೇ ಪ್ರತಿದಿನ 8 ಸಾವಿರ ಕ್ಯೂಸೆಕ್ ಬಿಡುವ ತೀರ್ಮಾನ- ಕಾವೇರಿ ಸಮಿತಿಗೂ, ಪ್ರಾಧಿಕಾರಕ್ಕೂ ಮತ್ತು ತಮಿಳುನಾಡಿಗೂ- ಆದೇಶ ಪಾಲಿಸಿದಂತೆಯೂ, ರಾಜ್ಯ ಮುಂದೆ ತಳೆಯಬಹುದಾದ ತೀರ್ಮಾನವನ್ನು ಈ ಮೂವರು ಪಾಲಿಸುವಂತೆಯೂ ನಿರೀಕ್ಷಣಾ ಜಾಮೀನು ಪಡೆದಂತಿದೆ.
ಜೊತೆಗೆ ತಮಿಳುನಾಡಿನಲ್ಲಿ ಕಾಂಗ್ರೆಸ್ನ ಮಿತ್ರಪಕ್ಷವಾಗಿರುವ ಡಿಎಂಕೆ ಆಡಳಿತದಲ್ಲಿರುವುದರಿಂದ ಅದರ ಹಿತಾಸಕ್ತಿಗಾಗಿ ರಾಜ್ಯದ ರೈತರ ಹಿತಾಸಕ್ತಿಯನ್ನು ಬಲಿ ಕೊಟ್ಟು ನೀರು ಬಿಡಲಾಗುತ್ತಿದೆ ಎಂಬ ಆರೋಪದಿಂದಲೂ ಕಾಂಗ್ರೆಸ್ ಸರ್ಕಾರ ಮುಕ್ತವಾಗಲಿದೆ. ಇದೀಗ ಮಂಡ್ಯ ಜಿಲ್ಲೆಯ ರೈತರು ಸಿಡಿದೆದ್ದು ಪ್ರತಿಭಟನೆ ನಡೆಸದಂತೆ ಹಾಗೂ ಆ ಪ್ರತಿಭಟನೆಗೆ ರಾಜಕೀಯ ಸೋಂಕದಂತೆ ನೋಡಿಕೊಳ್ಳುವ ಅಗತ್ಯವಿದೆ.
ತಮಿಳುನಾಡಿನಲ್ಲಿ ಯಾವುದೇ ಪಕ್ಷ ಆಡಳಿತಕ್ಕೆ ಬಂದರೂ, ಆಡಳಿತಗಾರರು ತಮ್ಮ ಹಕ್ಕೊತ್ತಾಯವನ್ನು ಸಮರ್ಥವಾಗಿ ಮಂಡಿಸುವುದಕ್ಕೆ ಹೆಸರಾಗಿದ್ದಾರೆ. ಅದಕ್ಕೆ ತಕ್ಕಂತೆ ವೃತ್ತಿಪರ ನ್ಯಾಯವಾದಿಗಳು, ರಾಜ್ಯವನ್ನು ಪ್ರತಿನಿಧಿಸುವ ಉನ್ನತ ಅಧಿಕಾರಿಗಳು, ರಾಜಕಾರಣಿಗಳು- ಕಾವೇರಿ ನಮ್ಮದು ಎಂಬಂತೆ ವಿಶ್ವಾಸವಿಟ್ಟು ಹೋರಾಡುತ್ತಾರೆ. ಆದರೆ ಕರ್ನಾಟಕದ ವಿಷಯಕ್ಕೆ ಬಂದಾಗ, ನೀರು ಬಿಡುವ ವಿಚಾರದಲ್ಲಿ ನದಿಯ ಮೇಲ್ಭಾಗದ ರಾಜ್ಯದವರಾದ ಕಾರಣ ನಾವು ಖಳನಾಯಕರಾಗಿ ಕಾಣಿಸುವುದು ಸಹಜ. ಜೊತೆಗೆ ಕಾವೇರಿ ನೀರಿಗಾಗಿ ಹಕ್ಕು ಮಂಡಿಸುವ ವಕೀಲರು, ಅಧಿಕಾರಿಗಳು ಮತ್ತು ರಾಜಕಾರಣಿಗಳು ಕೂಡ, ಇದು ನಮ್ಮ ಕಾವೇರಿ ಎಂಬ ಬದ್ಧತೆಯಿಂದ ಹೋರಾಡಿರುವುದು, ಇಚ್ಛಾಶಕ್ತಿ ಪ್ರದರ್ಶಿಸಿರುವುದು ಬಹಳ ಕಡಿಮೆ. ಈ ಬಾರಿಯಾದರೂ ರಾಜ್ಯ ಸರ್ಕಾರ ತನ್ನ ಪರಿಸ್ಥಿತಿ ಹಾಗೂ ನಿಲುವನ್ನು ಇನ್ನಷ್ಟು ಬಲವಾಗಿ ಪ್ರತಿಪಾದಿಸುವ ಅಗತ್ಯವಿದೆ.
ಪ್ರಕೃತಿಯ ಅನುಗ್ರಹದಿಂದ ನಮ್ಮ ನಾಡಿನಲ್ಲಿ ಸಮೃದ್ಧಿಯಾಗಿ ಮಳೆಯಾದಾಗ ನೀರಿನ ಕೊರತೆಯ ಪ್ರಶ್ನೆ ನಮ್ಮನ್ನು ಕಾಡುವುದಿಲ್ಲ. ಇಂತಹ ಸಂದರ್ಭಗಳಲ್ಲಿ ನಾವೂ ಉಪಯೋಗಿಸಿ, ಬೇರೆಯವರೊಂದಿಗೂ ಹಂಚಿಕೊಳ್ಳಬಹುದು. ಆದರೆ ಇತ್ತೀಚಿನ ವರ್ಷಗಳಲ್ಲಿ ಮುಂಗಾರು ಮಳೆಯಲ್ಲಾದ ಬದಲಾವಣೆಗಳು, ಅದರಲ್ಲೂ ಕಳೆದ ವರ್ಷ ಎದುರಾದ ಮಳೆ ಕೊರತೆ ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ. ಸತತವಾಗಿ ಮೂರು ನಾಲ್ಕು ವರ್ಷಗಳ ಮಳೆಯ ಕೊರತೆಯಿಂದಾಗಿ ಕ್ಷಾಮದಂತಹ ಭೀಕರ ಪರಿಸ್ಥಿತಿಯನ್ನು ಎದುರಿಸಬೇಕಾಗಿದೆ.
ಇಂತಹ ಸಂದರ್ಭದಲ್ಲಿ ರಾಜ್ಯಗಳು ಮಳೆಯ ಕೊರತೆಗೆ ಅನುಗುಣವಾಗಿ ನೀರನ್ನು ಹಂಚಿಕೊಳ್ಳಬೇಕು ಎಂಬುದಾಗಿ ಕಾವೇರಿ ನ್ಯಾಯ ಮಂಡಲಿ ಹಾಗೂ ಸುಪ್ರೀಂ ಕೋರ್ಟ್ ಆದೇಶಿಸಿವೆ. ಇದು ಸರಳವಾಗಿ ಕಂಡರೂ, ರಾಜ್ಯಗಳಿಗೆ ಸಮಾಧಾನಕರವಾಗಿರುವ ಸಂಕಷ್ಟ ಸೂತ್ರವನ್ನು ರಚಿಸಿಕೊಳ್ಳಲು ಇದುವರೆಗೂ ಸಾಧ್ಯವಾಗಿಲ್ಲ.
ಈ ನಿಟ್ಟಿನಲ್ಲಿ ಕರ್ನಾಟಕದ ಸಮಸ್ಯೆ ವಿಶಿಷ್ಟವಾದುದು. ಏಕೆಂದರೆ ಈ ಕರ್ನಾಟಕಕ್ಕೆ ನೀರಿನ ಲಭ್ಯತೆ ಇರುವುದು ಜೂನ್ನಿಂದ ಸೆಪ್ಟೆಂಬರ್ ವರೆಗೆ ಉಂಟಾಗುವ ಮುಂಗಾರು ಮಳೆಯಿಂದ ಮಾತ್ರ. ಆದ್ದರಿಂದ ಸಂಕಷ್ಟ ಪರಿಸ್ಥಿತಿ ಉಂಟಾಗುವುದು ಯಾವ ಹಂತದಲ್ಲಿ ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕಿದೆ. ಅದನ್ನು ಕಾವೇರಿ ಸಮಿತಿ, ಪ್ರಾಧಿಕಾರದ ಮುಂದೆ ಸಮರ್ಥವಾಗಿ ಮಂಡಿಸಿ, ತಮಿಳುನಾಡಿನವರ ಮನವೊಲಿಸುವ ಅನಿವಾರ್ಯತೆ ಇದೆ. ಆ ನಿಟ್ಟಿನಲ್ಲಿ ಕಾವೇರಿ ಸಮಸ್ಯೆ ಬಗೆಹರಿಯಬಹುದೆನ್ನುವ ಆಶಾಭಾವನೆ ಇದೆ.