ವೈಎಸ್‌ಆರ್‌ಸಿಪಿಯ ಯುವ ಮುಖಂಡನೊಬ್ಬನನ್ನು ಜನನಿಬಿಡ ರಸ್ತೆಯಲ್ಲೇ ಮಾರಕಾಸ್ತ್ರದಿಂದ ಕಡಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಆಂಧ್ರಪ್ರದೇಶದ ಪಲ್ನಾಡು ಜಿಲ್ಲೆಯ ವಿನುಕೊಂಡ ಪಟ್ಟಣದ ಮುಖ್ಯ ರಸ್ತೆಯಲ್ಲಿ ನಡೆದಿದೆ.
ಮೃತ ಯುವಕನನ್ನು 27 ವರ್ಷದ ಶೇಖ್ ರಶೀದ್ ಎಂದು ಗುರುತಿಸಲಾಗಿದ್ದು ರಶೀದ್ ಪಲ್ನಾಡು ಜಿಲ್ಲೆಯ ವೈಎಸ್‌ಆರ್‌ಸಿಪಿಯ ಯುವ ಘಟಕದ ಕಾರ್ಯದರ್ಶಿಯಾಗಿದ್ದರು.
ಪೊಲೀಸರ ಪ್ರಕಾರ, ಬುಧವಾರ ರಾತ್ರಿ ಶೇಖ್ ರಶೀದ್ ಮೇಲೆ ಶೇಖ್ ಜಿಲಾನಿ ಎಂಬಾತ ಕುಡುಗೋಲಿನಿಂದ ಹಲ್ಲೆ ನಡೆಸಿದ್ದಾನೆ. ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಸಂಬಂಧಿಸಿದ ವಿವಾದದಿಂದ ಈ ಕೊಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪರಾರಿಯಾಗಿರುವ ಆರೋಪಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಪ್ರಸ್ತುತ ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮಂಡ್ಲಮಂಡಿ ಬಸ್ ನಿಲ್ದಾಣದ ಜನನಿಬಿಡ ರಸ್ತೆಯಲ್ಲಿ ಹತ್ತಾರು ಜನರ ಎದುರಲ್ಲೇ ಸುಮಾರು ಐದು ನಿಮಿಷಗಳ ಕಾಲ ಹಲ್ಲೆ ನಡೆಸಲಾಗಿದೆ. ಕುಡಿದ ಅಮಲಿನಲ್ಲಿದ್ದ ಜಿಲಾನಿ, ಅರೆಪ್ರಜ್ಞಾವಸ್ಥೆಯಲ್ಲಿ ಶೇಖ್ ರಶೀದ್ ನೆಲಕ್ಕೆ ಬಿದ್ದ ಬಳಿಕವೂ ಮಾರಕಾಸ್ತ್ರದಿಂದ ಹಲ್ಲೆ ನಡೆಸಿರುವುದು ಕಂಡು ಬಂದಿದೆ.
ಇದನ್ನು ಓದಿದ್ದೀರಾ? ತಮಿಳುನಾಡು ಬಿಎಸ್‌ಪಿ ಮುಖ್ಯಸ್ಥ ಆರ್ಮ್‌ಸ್ಟ್ರಾಂಗ್ ಹತ್ಯೆ ಆರೋಪಿ ಎನ್‌ಕೌಂಟರ್‌ಗೆ ಬಲಿ
ಇನ್ನು ಸ್ಥಳಕ್ಕೆ ಪೊಲೀಸರು ತಲುಪುವಷ್ಟರಲ್ಲಿ ಆರೋಪಿ ಪರಾರಿಯಾಗಿದ್ದು ರಶೀದ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಪೊಲೀಸರು ರಶೀದ್ ಸಾವನ್ನಪ್ಪಿರುವುದಾಗಿ ಘೋಷಿಸಿದ್ದಾರೆ.
“ಆರೋಪಿ ಜಿಲಾನಿ ಆಡಳಿತಾರೂಢ ತೆಲುಗು ದೇಶಂ ಪಕ್ಷದ (ಟಿಡಿಪಿ) ಸದಸ್ಯನಾಗಿದ್ದು, ರಾಜಕೀಯ ವೈಷಮ್ಯದ ಕಾರಣ ಕೊಲೆ ನಡೆದಿದೆ” ಎಂದು ವೈಎಸ್‌ಆರ್‌ಸಿಪಿ ನಾಯಕ ಸಜ್ಜಲ ಭಾರ್ಘವ ರೆಡ್ಡಿ ಆರೋಪಿಸಿದ್ದಾರೆ. ಆದರೆ, ಪಲ್ನಾಡು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಕೆ ಶ್ರೀನಿವಾಸ ರಾವ್ ಈ ಕೊಲೆಯಲ್ಲಿ ರಾಜಕೀಯ ನಂಟನ್ನು ಅಲ್ಲಗಳೆದಿದ್ದಾರೆ.
“ಇಬ್ಬರಿಗೂ ಪರಸ್ಪರ ಪರಿಚಯವಿತ್ತು. ಕೆಲವು ವೈಯಕ್ತಿಕ ವಿಷಯಗಳಿಂದ ಇಬ್ಬರ ನಡುವೆ ವೈಮನ್ಸಸಿತ್ತು. ನಾವು ಕೂಲಂಕುಷವಾಗಿ ತನಿಖೆ ಆರಂಭಿಸಿದ್ದೇವೆ” ಎಂದು ತಿಳಿಸಿದ್ದಾರೆ. ಇನ್ನು ರಿಯಲ್ ಎಸ್ಟೇಟ್ ಒಪ್ಪಂದವು ವಿಫಲವಾಗಿ ಇಬ್ಬರ ನಡುವೆ ಜಗಳ ನಡೆದು ಕೊಲೆಯಲ್ಲಿ ಮುಕ್ತಾಯವಾಗಿದೆ ಎಂದು ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿರುವುದಾಗಿ ವರದಿಯಾಗಿದೆ.
ಸದ್ಯ ವಿನುಕೊಂಡ ಪಟ್ಟಣದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಪೊಲೀಸರು ಭದ್ರತೆಯನ್ನು ಹೆಚ್ಚಿಸಿದ್ದಾರೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಚುನಾವಣೋತ್ತರ ಹಿಂಸಾಚಾರ ನಡೆದಿದ್ದು, ಟಿಡಿಪಿ ಮತ್ತು ವೈಎಸ್‌ಆರ್‌ಸಿಪಿ ಕಾರ್ಯಕರ್ತರು ಪರಸ್ಪರ ಹಲ್ಲೆ ನಡೆಸಿದ್ದರು.